ಆಂಧ್ರ–ಕರ್ನಾಟಕದ ಅನುಮಾನಾಸ್ಪದ ಮೌನ

7
ಇತ್ಯರ್ಥವಾಗದ ಗಣಿ ಗಡಿ ವಿವಾದ: ಗಣಿ ಉದ್ಯಮಿ ಟಪಾಲ್‌ ಗಣೇಶ್‌ ಆಕ್ರೋಶ

ಆಂಧ್ರ–ಕರ್ನಾಟಕದ ಅನುಮಾನಾಸ್ಪದ ಮೌನ

Published:
Updated:
ಆಂಧ್ರ–ಕರ್ನಾಟಕದ ಅನುಮಾನಾಸ್ಪದ ಮೌನ

ಬಳ್ಳಾರಿ: ‘ಅಕ್ರಮ ಗಣಿಗಾರಿಕೆ ಸಂಬಂಧ ಆಂಧ್ರ ಮತ್ತು ಕರ್ನಾಟಕದ ಗಡಿ ಗುರುತನ್ನು ಪತ್ತೆ ಮಾಡುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿ ಐದು ವರ್ಷವಾದರೂ ಎರಡೂ ರಾಜ್ಯ ಸರ್ಕಾರಗಳು ಮೌನ ವಹಿಸಿ, ಗಡಿ ಧ್ವಂಸಗೊಳಿಸಿರುವವರ ಪರವಾಗಿರುವಂತೆ ತೋರುತ್ತಿದೆ’ ಎಂದು ಗಣಿ ಉದ್ಯಮಿ ಟಪಾಲ್‌ ಗಣೇಶ್‌ ದೂರಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ‘2017ರ ಡಿ. 7ರಂದು ಸರ್ವೇ ಆಫ್‌ ಇಂಡಿಯಾಗೆ (ಎಸ್‌ಒಐ) ಸೂಚನೆ ನೀಡಿದ್ದ ಸುಪ್ರೀಂ ಕೋರ್ಟ್‌ 12 ವಾರದೊಳಗೆ ಎರಡೂ ರಾಜ್ಯ ಸರ್ಕಾರಗಳ ಜೊತೆಗೆ ಸಮನ್ವಯ ಸಾಧಿಸಿ ಗಡಿ ಗುರುತು ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಹೇಳಿತ್ತು. ಆದರೆ ಗಡಿ ಧ್ವಂಸವಾಗಿರುವ ಪ್ರದೇಶಗಳ ಭೂಪಟದ ವ್ಯತ್ಯಾಸವನ್ನು ಮುಂದೊಡ್ಡಿ ಎಸ್ಓಐ ಮತ್ತೆ ಎರಡೂ ರಾಜ್ಯ ಸರ್ಕಾರಗಳ ಸಭೆ ನಡೆಸುವುದು ಅತ್ಯವಶ್ಯ ಎನ್ನುವ ಮೂಲಕ ವಿಳಂಬ ನೀತಿಯನ್ನು ಅನುಸರಿಸಿದೆ’ ಎಂದು ದೂರಿದರು.

‘1896ರ ಬಳ್ಳಾರಿ ಮೀಸಲು ಅರಣ್ಯದ ಭೂಪಟ, 1928ರ ಎಸ್ಓಐ ಭೂಪಟ, ಎರಡೂ ರಾಜ್ಯಗಳ ಕಂದಾಯ ಇಲಾಖೆಯ ಭೂಪಟಗಳ ನಡುವೆ ಇರುವ ವ್ಯತ್ಯಾಸಗಳ ಕುರಿತು ಎರಡೂ ರಾಜ್ಯಗಳು ಸ್ಪಷ್ಟ ನಿಲುವನ್ನು ವ್ಯಕ್ತಪಡಿಸುವವರೆಗೂ ಗಡಿ ವಿವಾದವನ್ನು ಅಂತ್ಯಗೊಳಿಸಲು ಆಗುವುದಿಲ್ಲ ಎಂದು ಎಸ್ಓಐ ಟಿಪ್ಪಣಿ ಸಿದ್ಧಪಡಿಸಿದ್ದು, ಮತ್ತೆ ಸಭೆಯನ್ನು ಮಾರ್ಚ್ 26 ಮತ್ತು 27ರಂದು ಡೆಹರಾಡೂನ್‌ನಲ್ಲಿ ನಡೆಸಲು ನಿರ್ಧರಿಸಿದೆ’ ಎಂದರು.

‘ಅಕ್ರಮ ಗಣಿಗಾರಿಕೆ ವಿರುದ್ಧ ದೂರು ನೀಡಿ ಮನಶಾಂತಿ ಕಳೆದುಕೊಂಡೆ, ಹಲ್ಲೆಗೂ ಈಡಾದೆ. ಈಗ ಗಡಿ ಗುರುತಿಸಲು ಆಗ್ರಹಿಸಿ ಹೋರಾಟ ನಡೆಸುತ್ತಿದ್ದೇನೆ. ಎರಡೂ ರಾಜ್ಯ ಸರ್ಕಾರಗಳು ಸ್ಪಂದಿಸದೇ ಇರುವುದು, ಈ ಸಂಬಂಧ ದನಿ ಎತ್ತಿದ್ದ ಜನಸಂಗ್ರಾಮ ಪರಿಷತ್ತಿನ ಮುಖಂಡ ಎಸ್‌.ಆರ್‌.ಹಿರೇಮಠ ಅವರೂ ಮೌನ ವಹಿಸಿರುವುದು ಅನುಮಾನ ಮೂಡಿಸಿದೆ’ ಎಂದರು.

‘ಮುಖ್ಯಮಂತ್ರಿಗಳಾದ ಆಂಧ್ರದ ಚಂದ್ರಬಾಬು ನಾಯ್ಡು ಮತ್ತು ಕರ್ನಾಟಕ ಸಿದ್ದರಾಮಯ್ಯ ಅಕ್ರಮ ಗಣಿಗಾರಿಕೆ ಮತ್ತು ಗಡಿ ಗುರುತು ಧ್ವಂಸದ ಕುರಿತು ಮಾತನಾಡುತ್ತಿಲ್ಲ. ಇವರು ಧ್ವಂಸ ಆರೋಪಿ ಜಿ.ಜನಾರ್ದನರೆಡ್ಡಿ ಅವರ ಕುರಿತು ಮೃದುಧೋರಣೆ ತಾಳಿದ್ದಾರೆ’ ಎಂದು ಆರೋಪಿಸಿದರು.

ಸಿಇಸಿ ಧೋರಣೆ: ‘ಗಡಿ ಗುರುತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಬೇಕಾಗಿದ್ದ ಕೇಂದ್ರ ಉನ್ನತಾಧಿಕಾರ ಸಮಿತಿಯು, ಇದೇ 8ರಂದು ಎಸ್ಓಐ ಗೆ ಪತ್ರ ಬರೆದಿರುವುದನ್ನು ಬಿಟ್ಟರೆ ಹೆಚ್ಚಿನ ಪ್ರಯತ್ನವನ್ನು ಮಾಡಿಲ್ಲ. ಇದು ಕೂಡ ಅನುಮಾನ ಮೂಡಿಸುತ್ತದೆ’ ಎಂದು ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry