ಈಶಾನ್ಯ, ದಕ್ಷಿಣ ಭಾರತೀಯ ಲೇಖಕಿಯರ ಸಂಗಮ

7
ಹತ್ತು ಭಾಷೆಗಳ ಸಾಹಿತ್ಯ ಅನಾವರಣ

ಈಶಾನ್ಯ, ದಕ್ಷಿಣ ಭಾರತೀಯ ಲೇಖಕಿಯರ ಸಂಗಮ

Published:
Updated:
ಈಶಾನ್ಯ, ದಕ್ಷಿಣ ಭಾರತೀಯ ಲೇಖಕಿಯರ ಸಂಗಮ

ಬೆಂಗಳೂರು: ಈಶಾನ್ಯ ಹಾಗೂ ದಕ್ಷಿಣ ಭಾರತದ ಏಳು ರಾಜ್ಯಗಳ ಲೇಖಕಿಯರ ಸಂಗಮ ಅಲ್ಲಿ ಏರ್ಪಟ್ಟಿತ್ತು. ಲೇಖಕಿಯರ ಪರಸ್ಪರ ಪರಿಚಯ ಹಾಗೂ ಸಾಹಿತ್ಯ ಕೃಷಿಯ ವಿನಿಮಯವೂ ನಡೆಯಿತು. ಆಯಾ ಭಾಷೆಯ ಸಾಹಿತ್ಯ ಮತ್ತು ಸಂಸ್ಕೃತಿಯ ಅನನ್ಯತೆ ಅನಾವರಣಗೊಂಡಿತು.

ಸಾಹಿತ್ಯ ಅಕಾಡೆಮಿಯು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಈಶಾನ್ಯ ಹಾಗೂ ದಕ್ಷಿಣ ಭಾರತೀಯ ಲೇಖಕಿಯರ ಸಮ್ಮೇಳನ’ದಲ್ಲಿ ಕಂಡುಬಂದ ದೃಶ್ಯಗಳಿವು.

ಸಮ್ಮೇಳನದಲ್ಲಿ 45 ಲೇಖಕಿಯರು ಪಾಲ್ಗೊಂಡಿದ್ದರು. ಬಹುಭಾಷಾ ಕವಿತಾ ವಾಚನದಲ್ಲಿ ಕನ್ನಡ, ಕೊಡವ, ತೆಲುಗು, ತಮಿಳು, ಮಲಯಾಳಂ, ಅಸ್ಸಾಮಿ, ಬೋಡೊ, ಮಣಿಪುರಿ, ನೇಪಾಳಿ ಹಾಗೂ ಬಂಜಾರಾ ಭಾಷೆಯ ಲೇಖಕಿಯರು ಸ್ವರಚಿತ ಕವಿತೆ ಜತೆಗೆ ಅದರ ಇಂಗ್ಲಿಷ್‌ ಅಥವಾ ಹಿಂದಿ ಅನುವಾದವನ್ನೂ ವಾಚಿಸಿದರು.

ತೆಲುಗು ಲೇಖಕಿ ಸುಜಾತಾ ಪಟ್ವಾರಿ ಕವನ ವಾಚಿಸಿದರು. ಅವರು ಕನ್ನಡ ಭಾಷೆಯನ್ನು ಚೆನ್ನಾಗಿ ಬಲ್ಲರು. ಯು.ಆರ್‌.ಅನಂತಮೂರ್ತಿ ಅವರ ‘ಸಂಸ್ಕಾರ’ ಕಾದಂಬರಿಯನ್ನು ತೆಲುಗಿಗೆ ಅನುವಾದ ಮಾಡಿದ್ದಾರೆ. ಈ ಕೃತಿಗೆ ಪೊಟ್ಟಿ ಶ್ರೀರಾಮುಲು ತೆಲುಗು ವಿಶ್ವವಿದ್ಯಾಲಯದಿಂದ ‘ಸಾಹಿತ್ಯ ಪುರಸ್ಕಾರ’ ದೊರೆತಿದೆ. ಅಕ್ಕಮಹಾದೇವಿ ಸೇರಿದಂತೆ ವಚನಕಾರರ ಕೆಲ ವಚನಗಳನ್ನು ಬ್ಯಾಲಿ ಭಾಷೆಗೆ ಅನುವಾದ ಮಾಡಿದ್ದಾರೆ.

‘ಕುವೆಂಪು, ತ್ರಿವೇಣಿ, ಯು.ಆರ್‌.ಅನಂತಮೂರ್ತಿ, ಎಸ್‌.ಎಲ್.ಭೈರಪ್ಪ, ಪ್ರೊ.ಚಂದ್ರಶೇಖರ ಕಂಬಾರ, ವಸುಧೇಂದ್ರ ಅವರ ಸಾಹಿತ್ಯವನ್ನು ಓದಿದ್ದೇನೆ. ವಚನ ಸಾಹಿತ್ಯವೂ ನನಗೆ ಅಚ್ಚುಮೆಚ್ಚು’ ಎಂದು ಸುಜಾತಾ ಹೇಳಿದರು.

‘ಮಹಿಳಾ ಕಾವ್ಯ– ಪ್ರಸ್ತುತ ಭಾರತೀಯ ಸಂದರ್ಭ’ ಕುರಿತ ಗೋಷ್ಠಿಯಲ್ಲಿ ಅಸ್ಸಾಮಿ ಲೇಖಕಿ ಮೈನಿ ಮಹಾಂತ ಪ್ರಬಂಧ ಮಂಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಲೇಖಕಿ ಕಮಲಾ ಹಂಪನಾ, ‘ಸಾಹಿತ್ಯದಲ್ಲಿ ಮಹಿಳೆಯರು, ಪುರುಷರು ಎಂಬ ತಾರತಮ್ಯ ಮಾಡುವುದು ಆರೋಗ್ಯಕರ ಲಕ್ಷಣವಲ್ಲ. ಹಾಗೆಂದು ಮಹಿಳೆಯರ ಬರವಣಿಗೆಯನ್ನು ಕಡೆಗಣಿಸಬಾರದು. ಅವರ ಬರವಣಿಗೆಗೆ ಸೂಕ್ತ ಸ್ಥಾನ ನೀಡಿ, ಚರ್ಚೆ ನಡೆಸಬೇಕು. ಹೆಣ್ಣು ಮಕ್ಕಳು ಮಾತ್ರ ಬರೆಯಬಹುದಾದ ಕೆಲ ವಿಷಯಗಳು ಇರುತ್ತವೆ. ಅವುಗಳ ಬಗ್ಗೆ ಚರ್ಚೆ ನಡೆಸಲು ಇಂತಹ ಸಮ್ಮೇಳನ ಸಹಕಾರಿ’ ಎಂದರು.

ಅಕಾಡೆಮಿಯ ಅಧ್ಯಕ್ಷ ಪ್ರೊ.ಚಂದ್ರಶೇಖರ ಕಂಬಾರ, ‘ನನ್ನ ಸಾಹಿತ್ಯದ ಕೇಂದ್ರ ವಸ್ತುವೇ ಮಹಿಳೆ. ಕಾದಂಬರಿಗಳ ಹೃದಯ ಭಾಗವೇ ತಾಯಿ ಆಗಿರುತ್ತಾಳೆ. ಇಡೀ ಸಮುದಾಯವನ್ನು ಒಟ್ಟಿಗೆ ಕೊಂಡೊಯ್ಯುವ ಶಕ್ತಿ ತಾಯಿಗೆ ಇದೆ’ ಎಂದರು.

**

ಪ್ರಾದೇಶಿಕ ಕಚೇರಿಗೆ 1 ಎಕರೆ ಜಾಗ

ಸಾಹಿತ್ಯ ಅಕಾಡೆಮಿಯ ಪ್ರಾದೇಶಿಕ ಕಚೇರಿಗೆ ಜ್ಞಾನಭಾರತಿ ಆವರಣದಲ್ಲಿ 1 ಎಕರೆ ಜಾಗ ಸಿಕ್ಕಿದೆ. ಅಲ್ಲಿ ಸುಸಜ್ಜಿತ ಕಟ್ಟಡ ಹಾಗೂ ಪುಸ್ತಕ ಮಳಿಗೆಯನ್ನು ಸ್ಥಾಪಿಸಲಾಗುತ್ತದೆ ಎಂದು ಅಕಾಡೆಮಿಯ ಸಲಹಾ ಸಮಿತಿಯ ಸಂಯೋಜಕ ಡಾ.ಸಿದ್ಧಲಿಂಗಯ್ಯ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry