ಆನ್‌ಲೈನ್‌ನಲ್ಲೇ ಖಾತಾ ವರ್ಗಾವಣೆ ಪ್ರಶ್ನಿಸಿ ಸಲ್ಲಿಸಿದ್ದ ರಿಟ್‌ ಅರ್ಜಿ ವಜಾ

7

ಆನ್‌ಲೈನ್‌ನಲ್ಲೇ ಖಾತಾ ವರ್ಗಾವಣೆ ಪ್ರಶ್ನಿಸಿ ಸಲ್ಲಿಸಿದ್ದ ರಿಟ್‌ ಅರ್ಜಿ ವಜಾ

Published:
Updated:

ಬೆಂಗಳೂರು: ಆನ್‌ಲೈನ್‌ನಲ್ಲಿ ಖಾತಾ ವರ್ಗಾವಣೆ ಮಾಡುವ ಯೋಜನೆ ಪ್ರಶ್ನಿಸಿದ್ದ ರಿಟ್‌ ಅರ್ಜಿ ಹೈಕೋರ್ಟ್ ವಜಾಗೊಳಿಸುವ ಅಭಿಪ್ರಾಯ ವ್ಯಕ್ತಪಡಿಸಿದ ಕಾರಣ ಅರ್ಜಿದಾರರು ಅರ್ಜಿಯನ್ನು ಹಿಂದಕ್ಕೆ ಪಡೆದಿದ್ದಾರೆ.

ಈ ಕುರಿತು ಬೆಂಗಳೂರಿನ ಎಚ್‌.ಎಂ.ಟಿ ಬಡಾವಣೆಯ ಎಂ.ಎಸ್.ನಾಗರಾಜ್‌ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌.ಸುಜಾತ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ಖಾತಾ ವರ್ಗಾವಣೆ ಕೋರಿ ಸಲ್ಲಿಸುವ ಅರ್ಜಿಗಳನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಆನ್‍ಲೈನ್ ಮೂಲಕ ಸ್ವೀಕರಿಸುತ್ತದೆ. ಸಾರ್ವಜನಿಕರು ಬೆಂಗಳೂರು ಒನ್ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಿ ಆನ್‍ಲೈನ್ ಮೂಲಕವೇ ಖಾತೆ ಪಡೆದುಕೊಳ್ಳಬಹುದೆಂದು ಆದೇಶಿಸಿದೆ. ಅರ್ಜಿಯ ಜೊತೆಗೆ ಅದಕ್ಕೆ ಆಧಾರ್ ಹಾಗೂ ಮೊಬೈಲ್ ಸಂಖ್ಯೆ ನೀಡಬೇಕು ಎಂದು ಸೂಚಿಸಿದೆ’ ಎಂದರು.

ಆದರೆ, ‘ಬೆಂಗಳೂರು ಒನ್ ಕೇಂದ್ರದ ಸಿಬ್ಬಂದಿಗೆ ಕಂದಾಯ ದಾಖಲೆಗಳ ಬಗ್ಗೆ ಪ್ರಾಥಮಿಕ ಜ್ಞಾನವೇ ಇರುವುದಿಲ್ಲ. ಇದರಿಂದ ಸಾರ್ವಜನಿಕರು ತೊಂದರೆ ಎದುರಿಸಬೇಕಾದ ಪರಿಸ್ಥಿತಿ ಇದೆ’ ಎಂದು ಅವರು ಆಕ್ಷೇಪಿಸಿದರು.

‘ಈ ಕೇಂದ್ರಗಳಲ್ಲಿ ಕ್ರಯ ಪತ್ರ, (ಸೇಲ್‌ ಡೀಡ್‌), ವಿಭಾಗ ಪತ್ರ (ಪಾರ್ಟಿಷನ್ ಡೀಡ್) ಹಾಗೂ ದಾನ ಪತ್ರಗಳನ್ನು (ಗಿಫ್ಟ್ ಡೀಡ್‌) ಮಾತ್ರವೇ ಸ್ವೀಕರಿಸಲಾಗುತ್ತಿದೆ. ಒಪ್ಪಂದ ಪತ್ರ (ಸೆಟ್ಲ್‌ಮೆಂಟ್ ಡೀಡ್) ಮತ್ತು ಹಕ್ಕು ಬಿಡುಗಡೆ ಪತ್ರಗಳನ್ನು (ರಿಲೀಸ್ ಡೀಡ್‍) ಸ್ವೀರಿಸುತ್ತಿಲ್ಲ’ ಎಂದೂ ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ‘ಈ ಯೋಜನೆ ಸಾರ್ವಜನಿಕರಿಗೆ ಅನುಕೂಲಕರವಾಗಿಯೇ ಇದೆ. ಮುಂದುವರಿದ ತಂತ್ರಜ್ಞಾನ ಬೆಳವಣಿಗೆಯಲ್ಲಿ ಇಂತಹ ಯೋಜನೆಗಳು ಉಪಯುಕ್ತ. ಇದನ್ನು ಪ್ರಶ್ನಿಸಿರುವ ನಿಮ್ಮ ನಿಲುವು ಸರಿಯಿಲ್ಲ’ ಎಂಬ ಅಭಿಪ್ರಾಯದೊಂದಿಗೆ ಅರ್ಜಿ ವಜಾ ಮಾಡುವುದಾಗಿ ನ್ಯಾಯಮೂರ್ತಿಗಳು ತಿಳಿಸಿದರು. ಇದರಿಂದ ಅರ್ಜಿದಾರರು ಅರ್ಜಿ ಹಿಂಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry