ಆರಂಭವಾಗದ ಇಂದಿರಾ ಕ್ಯಾಂಟಿನ್

7
ಇನ್ನೂ ದೊರೆಯದ ರಿಯಾಯಿತಿ ದರದ ಉಪಾಹಾರ ಭಾಗ್ಯ

ಆರಂಭವಾಗದ ಇಂದಿರಾ ಕ್ಯಾಂಟಿನ್

Published:
Updated:
ಆರಂಭವಾಗದ ಇಂದಿರಾ ಕ್ಯಾಂಟಿನ್

ಬಾಗಲಕೋಟೆ: ಇಂದಿರಾ ಕ್ಯಾಂಟಿನ್‌ನಲ್ಲಿ ಫೆಬ್ರುವರಿ ಮೊದಲ ವಾರದಿಂದಲೇ ರಿಯಾಯಿತಿ ದರದಲ್ಲಿ ಉಪಹಾರ ಸೇವಿಸುವ ಜಿಲ್ಲೆಯ ಜನರ ಕನಸು ಇನ್ನೂ ನನಸಾಗಿಲ್ಲ. ರಾಜ್ಯ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆ ಕೇಂದ್ರೀಕೃತ ಟೆಂಡರ್ ಪದ್ಧತಿ ಪರಿಣಾಮವಾಗಿ ಜಿಲ್ಲೆಯಲ್ಲಿ ಇನ್ನೂ ಕಾರ್ಯಾರಂಭ ಮಾಡಿಲ್ಲ. ಚುನಾವಣೆ ನೀತಿ–ಸಂಹಿತೆ ಆರಂಭವಾದಲ್ಲಿ ಕಾರ್ಯಾರಂಭ ಸಾಧ್ಯವಿಲ್ಲ. ಹಾಗಾಗಿ ಈ ಸರ್ಕಾರದ ಅವಧಿಯಲ್ಲಿಯೇ ಕ್ಯಾಂಟಿನ್ ಆರಂಭವಾಗಲಿದೆಯೇ ಎಂದು ಸ್ಥಳೀಯರು ಪ್ರಶ್ನಿಸುತ್ತಾರೆ.

ರಾಜಧಾನಿ ಬೆಂಗಳೂರಿನಲ್ಲಿ ವಾರ್ಡ್‌ಗೆ ಒಂದರಂತೆ ಆರಂಭವಾಗಿರುವ ಇಂದಿರಾ ಕ್ಯಾಂಟಿನ್‌ಗಳು ಎಲ್ಲ ವರ್ಗದ ಜನರ ಮನ್ನಣೆಗಳಿದ್ದವು. ಇದರಿಂದ ಪ್ರೇರಣೆಗೊಂಡ ಸರ್ಕಾರ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ಮುಂದಾಗಿತ್ತು. ಅದರಂತೆ ಬಾಗಲಕೋಟೆಯಲ್ಲಿ ಎರಡು ಕಡೆ ಸೇರಿದಂತೆ ಜಿಲ್ಲೆಯ ಏಳು ಕಡೆ ಕ್ಯಾಂಟಿನ್‌ ಆರಂಭಿಸಲು ತೀರ್ಮಾನಿಸಲಾಗಿತ್ತು. ಆದರೆ ಈವರೆಗೂ ಒಂದು ಕಡೆಯೂ ಕ್ಯಾಂಟಿನ್ ಆರಂಭವಾಗಿಲ್ಲ.

ಜಾಗ ಗುರುತಿಸಲಾಗಿದೆ: ಬಾಗಲಕೋಟೆ ನಗರದಲ್ಲಿ ಎರಡು ಕಡೆ (ಹಳೇಬಾಗಲಕೋಟೆ ಬಸ್ ನಿಲ್ದಾಣ ಹಾಗೂ ನವನಗರದ ಹೊಸ ಬಸ್ ನಿಲ್ದಾಣ), ಬಾದಾಮಿ, ಮುಧೋಳ, ಜಮಖಂಡಿ, ಬೀಳಗಿ ಹಾಗೂ ಹುನಗುಂದ ತಾಲ್ಲೂಕಿನಲ್ಲಿ ಕ್ಯಾಂಟಿನ್ ಆರಂಭಿಸಲು ಜಿಲ್ಲಾಡಳಿತ ಮತ್ತು ನಗರ ಅಭಿವೃದ್ಧಿ ಕೋಶದ ಅಧಿಕಾರಿಗಳು ಈಗಾಗಲೇ ಜಾಗ ಗುರುತಿಸಿದ್ದಾರೆ. ಆದರೆ ಕಾಮಗಾರಿ ಮಾತ್ರ ಇನ್ನೂ ಆರಂಭವಾಗಿಲ್ಲ.

‘ಕ್ಯಾಂಟಿನ್ ಕಟ್ಟಡ ನಿರ್ಮಾಣಕ್ಕೆ ಸಿದ್ಧ ಮಾದರಿಗಳನ್ನು ಬಳಕೆ ಮಾಡಲಾಗುತ್ತಿದೆ. ಅವುಬೆಂಗಳೂರಿನಿಂದ ಬರಬೇಕಿದೆ. ಆದರೆ ಬಂದಿಲ್ಲ. ಹಾಗಾಗಿ ವಿಳಂಬವಾಗಿದೆ. ಈಗ ಗುರುತಿಸಲಾಗಿರುವ ಸ್ಥಳದಲ್ಲಿಯೇ ಕ್ಯಾಂಟಿನ್ ಕಾರ್ಯಾರಂಭ ಮಾಡಲಿವೆ’ ಎಂದು ನಗರಸಭೆಯ ಸಹಾಯಕ ಎಂಜಿನಿಯರ್ ಎನ್.ಎಂ.ಸಾರವಾನ ‘ಪ್ರಜಾವಾಣಿ’ಗೆ ತಿಳಿಸಿದರು.

5ಕ್ಕೆ ಉಪಾಹಾರ, ₹10ಕ್ಕೆ ಊಟ..

‘ಕ್ಯಾಂಟೀನ್‌ನಲ್ಲಿ ಬೆಳಗಿನ ಉಪಹಾರ ₨5ಗೆ, ಮಧ್ಯಾಹ್ನ ಹಾಗೂ ರಾತ್ರಿ ಊಟ ₨10ಗೆ ದೊರೆಯಲಿದೆ. ಬೆಳಿಗ್ಗೆ 7.30ರಿಂದ 9.30ರ ವರೆಗೆ ಉಪಾಹಾರ, ಮಧ್ಯಾಹ್ನ 12.30ರಿಂದ 2.30, ಹಾಗೂ ಸಂಜೆ 7.30ರಿಂದ ರಾತ್ರಿ 8.30ರ ವರೆಗೆ ಊಟ ದೊರೆಯಲಿದೆ. ಒಂದು ಬಾರಿಗೆ 500 ಜನ ಆಹಾರ ಸೇವಿಸಬಹುದು. ಕ್ಯಾಂಟಿನ್‌ನಲ್ಲಿ ಒಂದು ದಿನ 1,500 ಮಂದಿ ಆಹಾರ ಸೇವಿಸಬಹುದು’ ಎಂದು ಸಾರವಾನ ಹೇಳಿದರು.

–ಮಹಾಂತೇಶ ಮಸಾಲಿ

*

ಇಂದಿರಾ ಕ್ಯಾಂಟಿನ್‌ಗಳ ನಿರ್ವಹಣೆ ಟೆಂಡರ್‌ ಅನ್ನು ಸರ್ಕಾರ ಒಬ್ಬರಿಗೆ ಮಾತ್ರ ನೀಡಿದೆ. ಹಾಗಾಗಿ, ವಿಳಂಬವಾಗಿದೆ. ಕ್ಯಾಂಟಿನ್ ಆರಂಭಕ್ಕೆ ಎಲ್ಲ ರೀತಿಯ ಸಿದ್ಧತೆ ನಡೆದಿದೆ.

–ಡಾ.ಔದ್ರಾಮ್, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ

*

ಕ್ಯಾಂಟಿನ್ ಆರಂಭವಾದರೆ ಎಲ್ಲ ವರ್ಗದವರಿಗೂ ಕಡಿಮೆ ಹಣದಲ್ಲಿ ಉಪಹಾರ ಹಾಗೂ ಊಟ ಸಿಗುತ್ತದೆ. ಸಂಬಂಧಪಟ್ಟವರು ಕೂಡಲೇ ಈ ಬಗ್ಗೆ ಗಮನ ಹರಿಸಬೇಕು.

–ರವಿ ಬಾದಾಮಿ, ಮಂಜುನಾಥ ಸ್ಥಳೀಯರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry