7
ನಗರದ ಜಿಲ್ಲಾಡಳಿತ ಭವನದಲ್ಲಿ ಪೂರ್ವಭಾವಿ ಸಭೆ

ವಿವಿಧ ಮಹನೀಯರ ಜಯಂತಿ ಆಚರಣೆಗೆ ನಿರ್ಧಾರ

Published:
Updated:
ವಿವಿಧ ಮಹನೀಯರ ಜಯಂತಿ ಆಚರಣೆಗೆ ನಿರ್ಧಾರ

ಕೊಪ್ಪಳ: ‘ದೇವರದಾಸಿಮಯ್ಯ ಜಯಂತಿ, ಮಹಾವೀರ ಜಯಂತಿ ಹಾಗೂ ಅಕ್ಕಮಹಾದೇವಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು' ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿವಿಧ  ಜಯಂತಿ ಆಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

'ದೇವರ ದಾಸಿಮಯ್ಯ ಜಯಂತಿಯನ್ನು ಮಾರ್ಚ್ 22ರಂದು ಜಿಲ್ಲಾ ಕೇಂದ್ರದಲ್ಲಿ ಆಚರಿಸಲಾಗುವುದು. ಜಯಂತಿ ಅಂಗವಾಗಿ ಬೆಳಿಗ್ಗೆ 8.30ಕ್ಕೆ ದೇವರದಾಸಿಮಯ್ಯ ಅವರ ಭಾವಚಿತ್ರ ಮೆರವಣಿಗೆ ನಗರದ ಬನ್ನಿಕಟ್ಟಿ ಬಳಿಯ ಗೌರಿಶಂಕರ ದೇವಸ್ಥಾನದಿಂದ ಆರಂಭವಾಗಿ, ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಹಿತ್ಯ ಭವನ ತಲುಪಲಿದೆ.  ಬೆಳಿಗ್ಗೆ 10.30ಕ್ಕೆ ನಗರದ ಸಾಹಿತ್ಯ ಭವನದಲ್ಲಿ ವೇದಿಕೆ ಸಮಾರಂಭ ನಡೆಯಲಿದೆ. ಕಾರಟಗಿಯ ಗಂಗಮ್ಮ ಹಿರೇಮಠ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ  ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು' ಎಂದರು.

'ಮಾರ್ಚ್ 29ರಂದು ಮಹಾವೀರ ಜಯಂತಿಯನ್ನು ಆಚರಿಸಲಾಗುವುದು. ಕಾರ್ಯಕ್ರಮದ ಅಂಗವಾಗಿ ಮಹಾವೀರರ ಭಾವಚಿತ್ರದ ಮೆರವಣಿಗೆ  ಬೆಳಿಗ್ಗೆ 7.30ಕ್ಕೆ ನಗರದ ಅಶೋಕ ವೃತ್ತದಿಂದ ಆರಂಭವಾಗಿ ಜವಾಹರ ರಸ್ತೆ, ಗಡಿಯಾರ ಕಂಬ ವೃತ್ತದ ಮೂಲಕ ಗೋಶಾಲೆ ಬಳಿಯ ಮಹಾವೀರ ಜೈನಭವನ ತಲುಪಲಿದೆ. ಬೆಳಿಗ್ಗೆ 10ಕ್ಕೆ ಗೋಶಾಲೆ ಪಕ್ಕದ ಮಹಾವೀರ ಜೈನ ಭವನದಲ್ಲಿ ವೇದಿಕೆ ಸಮಾರಂಭ ನಡೆಯಲಿದೆ. ಮಹಾವೀರರ ತತ್ವ ಸಂದೇಶಗಳ ಬಗ್ಗೆ ಡಾ.ಶಂಕ್ರಯ್ಯ ಅಬ್ಬಿಗೇರಿಮಠ ವಿಶೇಷ ಉಪನ್ಯಾಸ ನೀಡುವರು' ಎಂದು ಹೇಳಿದರು.

'ಇದೇ ಮೊದಲ ಬಾರಿಗೆ ಮಾರ್ಚ್ 31ರಂದು ಅಕ್ಕಮಹಾದೇವಿ ಜಯಂತಿ ಆಚರಿಸಲಾಗುವುದು. ಜಯಂತಿ ಅಂಗವಾಗಿ ಬೆಳಿಗ್ಗೆ 10.30ಕ್ಕೆ ನಗರದ ಸಾಹಿತ್ಯ ಭವನದಲ್ಲಿ ವೇದಿಕೆ ಸಮಾರಂಭ ನಡೆಯಲಿದೆ. ವಿಶೇಷ ಉಪನ್ಯಾಸ ಹಾಗೂ ಅಕ್ಕಮಹಾದೇವಿ ಅವರ ವಚನಗಾಯನ ಆಯೋಜಿಸಲಾವುದು' ಎಂದು ಅವರು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಯು. ನಾಗರಾಜ, ಮುಖಂಡರಾದ ವಿಠ್ಠಪ್ಪ ಗೋರಂಟ್ಲಿ, ಕೆ. ಕಾಳಪ್ಪ, ನೇಮಿರಾಜ್, ಪದಮ್ ಮೆಹ್ತಾ, ಗೌತಮ್ ಝಾಂಗ್ಡಾ, ಗೌತಮ್ ಮೆಹ್ತಾ, ಮಹಾವೀರ ಮೆಹ್ತಾ, ನಾಗರಾಜ ಬಳ್ಳಾರಿ, ಡಾ.ಮಹಾಂತೇಶ ಮಲ್ಲನಗೌಡರ, ಶಿವಾನಂದ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry