ರೋಹಿತ್‌ ಪಡೆಗೆ ಪ್ರಶಸ್ತಿ ಕನಸು

7
ನಿದಾಸ್ ಕಪ್‌ ಕ್ರಿಕೆಟ್: ಭರವಸೆಯ ಅಲೆಯಲ್ಲಿ ಬಾಂಗ್ಲಾ

ರೋಹಿತ್‌ ಪಡೆಗೆ ಪ್ರಶಸ್ತಿ ಕನಸು

Published:
Updated:
ರೋಹಿತ್‌ ಪಡೆಗೆ ಪ್ರಶಸ್ತಿ ಕನಸು

ಕೊಲಂಬೊ: ರೋಹಿತ್ ಶರ್ಮಾ ನಾಯಕತ್ವದ ಭಾರತ ಕ್ರಿಕೆಟ್ ತಂಡ ತ್ರಿಕೋನ ಟ್ವೆಂಟಿ–20 ಕ್ರಿಕೆಟ್ ಸರಣಿಯ ‘ನಿದಾಸ್ ಕಪ್’ ಗೆಲ್ಲುವ ಛಲದಲ್ಲಿದೆ.

ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಬಾಂಗ್ಲಾದೇಶ ತಂಡ ರೋಹಿತ್‌ ಶರ್ಮಾ ಬಳಗದ ಎದುರಾಳಿ. ಆತಿಥೇಯ ಶ್ರೀಲಂಕಾವನ್ನು  ಲೀಗ್ ಹಂತದಲ್ಲಿ ಎರಡು ಬಾರಿ ಮಣಿಸಿದ ಬಾಂಗ್ಲಾ  ಫೈನಲ್‌ನಲ್ಲಿ ಕಣಕ್ಕೆ ಇಳಿಯಲಿದೆ.

ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಆಡುತ್ತಿರುವ ಭಾರತದ ಯುವ ಆಟಗಾರರು ಸರಣಿಯಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದಾರೆ.

ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಭಾರತ ತಂಡ ಮೊದಲ ಪಂದ್ಯದಲ್ಲಿ ಆತಿಥೇಯರ ವಿರುದ್ಧ  ಸೋತಿತ್ತು. ನಂತರದ ಮೂರು ಪಂದ್ಯಗಳಲ್ಲಿ ಸತತ ಜಯ ಗಳಿಸಿತ್ತು. ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ  ರೋಹಿತ್‌ ಕೊನೆಯ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ್ದರು.

ಈ ಎಲ್ಲ ಅಂಶಗಳು ಭಾರತದ ಭರವಸೆಯನ್ನು ಹೆಚ್ಚಿಸಿವೆ. ಫೈನಲ್‌ಗೆ ಪ್ರವೇಶಿಸಲು ಗೆಲುವು ಅನಿವಾರ್ಯವಾಗಿದ್ದ ಶನಿವಾರದ ಪಂದ್ಯದಲ್ಲಿ ಶ್ರೀಲಂಕಾವನ್ನು ಎರಡು ವಿಕೆಟ್‌ಗಳಿಂದ ಮಣಿಸಿದ ಬಾಂಗ್ಲಾದೇಶ ಈಗ ವಿಶ್ವಾಸದ ಅಲೆಯಲ್ಲಿದೆ. ಆದ್ದರಿಂದ ಫೈನಲ್‌ ಪಂದ್ಯ ರೋಚಕ ಹಣಾಹಣಿಗೆ ಸಾಕ್ಷಿಯಾಗುವ ಸಾಧ್ಯತೆ ಇದೆ.

ಶಕೀಬ್‌ ಅಲ್ ಹಸನ್‌, ಮುಷ್ಫಿಕುರ್‌ ರಹೀಮ್‌, ಮಹಮ್ಮದುಲ್ಲಾ, ತಮೀಮ್‌ ಇಕ್ಬಾಲ್‌, ಲಿಟ್ಟನ್‌ ದಾಸ್‌ ಮುಂತಾದವರು ಬಾಂಗ್ಲಾದೇಶ ತಂಡದ ಶಕ್ತಿ. ಪಂದ್ಯಕ್ಕೆ ಯಾವುದೇ ಕ್ಷಣದಲ್ಲಿ ತಿರುವು ನೀಡುವ ಸಾಮರ್ಥ್ಯ ಅವರಿಗಿದೆ. ಆದರೆ ಅವರ ಸವಾಲನ್ನು ಮೀರಿ ನಿಲ್ಲುವ ಸಾಮರ್ಥ್ಯ ಭಾರತಕ್ಕೆ ಇದೆ.

ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್‌ ನಾಲ್ಕು ಪಂದ್ಯಗಳಲ್ಲಿ ಒಟ್ಟು 200 ರನ್‌ ಗಳಿಸಿದ್ದಾರೆ. ಸುರೇಶ್ ರೈನಾ, ದಿನೇಶ್ ಕಾರ್ತಿಕ್ ಮತ್ತು ಮನೀಷ್ ಪಾಂಡೆ ತಂಡದ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಲು ಸಮರ್ಥರಾಗಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಶಾರ್ದೂಲ್ ಠಾಕೂರ್, ವಿಜಯ್‌ ಶಂಕರ್‌ ಮತ್ತು ವಾಷಿಂಗ್ಟನ್ ಸುಂದರ್‌  ಫೈನಲ್‌ನಲ್ಲೂ ಎದುರಾಳಿಗಳನ್ನು ಕಟ್ಟಿಹಾಕುವ ವಿಶ್ವಾಸದಲ್ಲಿದ್ದಾರೆ.ಪಂದ್ಯ

ಆರಂಭ: ಸಂಜೆ 7.00

ನೇರ ಪ್ರಸಾರ: ಡಿ ಸ್ಲೋರ್ಟ್‌


**

ಶಕೀಬ್‌, ನೂರುಲ್‌ಗೆ ಐಸಿಸಿ ದಂಡ‌

ಅಂಪೈರ್‌ ತೀರ್ಪಿಗೆ ಆಕ್ಷೇಪಣೆ ವ್ಯಕ್ತಪಡಿಸಿದ ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ ಮತ್ತು ನಿಯಮ ಮೀರಿ ವರ್ತಿಸಿದ ಕಾಯ್ದಿರಿಸಿದ ಆಟಗಾರ ನೂರುಲ್ ಹಸನ್‌ ಅವರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ದಂಡ ವಿಧಿಸಿದೆ.

ಶುಕ್ರವಾರ ರಾತ್ರಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಶಕೀಬ್‌ ಅಲ್ ಹಸನ್ ಅಂಪೈರ್‌ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕಾಗಿ ಅವರ ಪಂದ್ಯಶುಲ್ಕದ ಶೇ 25ರಷ್ಟನ್ನು ತಡೆಹಿಡಿಯಲಾಗಿದೆ. ನೂರುಲ್ ಹಸನ್‌ ಅವರ ಪಂದ್ಯಶುಲ್ಕದ ಶೇ 25ರಷ್ಟನ್ನು ಕೂಡ ತಡೆಹಿಡಿಯಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry