ಖುಷಿಯ ದಾರಿಗೆ ವಿವೇಕದ ದೀಪ

6

ಖುಷಿಯ ದಾರಿಗೆ ವಿವೇಕದ ದೀಪ

Published:
Updated:
ಖುಷಿಯ ದಾರಿಗೆ  ವಿವೇಕದ ದೀಪ

ರಸ್ತೆಯೂ ಅಲ್ಲದ, ಇತ್ತ ಕಾಲುಹಾದಿ ಎನ್ನಲೂ ಆಗದ ಮಣ್ಣಿನ ದಾರಿಯ ಎರಡೂ ಭುಜಗಳಲ್ಲಿ ಹೆಂಚು ಹೊದೆಸಿದ ಮನೆಗಳು, ಅವುಗಳ ಎದುರಿನ ಗುಡಿಸಲಿನಂಥ ಕೊಟ್ಟಿಗೆಯಲ್ಲಿ ಹುಲ್ಲು ಮೆಲುಕು ಹಾಕುತ್ತಿರುವ ದನ–ಕರುಗಳು, ಮಾಡು ಹತ್ತಿ ಕುಳಿತಿದ್ದ ಹುಂಜ, ಅಲ್ಲೇ ಆಚೆ ಕೇಕೆ ಹಾಕಿ ಕುಣಿಯುತ್ತಿದ್ದ ಚಿಣ್ಣರು, ಮೊಮ್ಮಗನಿಗೆ ಕತೆ ಹೇಳುತ್ತಿದ್ದ ಅಜ್ಜಿ, ಮಾಸಲು ಅಂಗಿ ತೊಟ್ಟು ಗದ್ದೆಗೆ ಹೊರಟಿದ್ದ ಅಜ್ಜ, ನೀರ ಬಿಂದಿಗೆಯ ಭಾರ ಮರೆತು ಹೆಜ್ಜೆ ಹಾಕುತ್ತಿದ್ದ ಹೆಂಗಸರು, ಕವಳ ಮೆಲ್ಲುತ್ತ ಕೆಲಸಕ್ಕೆ ಹೊರಟಿದ್ದ ಗಂಡಸರು... ಇವರೆಲ್ಲರ ಮೊಗದಲ್ಲೂ ಕಂಡಿದ್ದು ನಿಸ್ಪೃಹ ಖುಷಿಯೊಂದೇ. ಕಾಡ ದನಿಗೆ ಕಿವಿಯಾಗಿರುವ ಈ ಊರಿಗೆ ‘ಖುಷಿ’ಯೇ ಆಭರಣ.

ಇಲ್ಲಿ ಪ್ರತಿ ವಾರ ಊರಜಾತ್ರೆ ನಡೆಯುತ್ತದೆ. ಆದರೆ, ಅದು ಬಯಲು ಜಾತ್ರೆಯಲ್ಲ, ಬದಲಾಗಿ ಜಗುಲಿ ಜಾತ್ರೆ. ನೂರಾರು ಜನರು ಸೇರಿ ಮಾಡುವ ಜೀವನ ಸಾಕ್ಷಾತ್ಕಾರದ ಜಾತ್ರೆ. ಹಂಡೆಯಲ್ಲಿ ಕಾದ ಬಿಸಿ ನೀರಿನಲ್ಲಿ ಮಿಂದು, ಹಗಲಿಡೀ ದುಡಿಸಿದ ದೇಹದ ದಣಿವನ್ನು ಕಳಚಿಕೊಳ್ಳುತ್ತ ಮುಸ್ಸಂಜೆಯ ಜಾತ್ರೆಗೆ ಅಣಿಯಾಗುತ್ತಾರೆ ಇವರು.

‘ನಮ್ಮೂರ ಸಂಭ್ರಮ ನೋಡಬೇಕ್ ಅಂದ್ರೆ ಸೋಮವಾರ ಬರ್‍ರಿ, ಹೆಂಗಸ್ರು–ಗಂಡಸ್ರು, ಮಕ್ಳು–ಮರಿ ಎಲ್ಲ ಸೇರ್ತಾರೆ’ ಎಂದು ಮುಖವರಳಿಸಿ ಹೇಳಿದರು ಮಾದೇವಿ.

ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಒಳ ಹಳ್ಳಿ ದೊಡ್ಡಬೈಲು. ಶಿರಸಿ–ಯಲ್ಲಾಪುರ ರಸ್ತೆಯಲ್ಲಿ ಗಡಿಗೆಹೊಳೆ ಕತ್ರಿಯಿಂದ ಒಂದೂವರೆ ಕಿ.ಮೀ ಡಾಂಬರು ರಸ್ತೆ, ಅರ್ಧ ಕಿ.ಮೀ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋದರೆ, ಸಮತಟ್ಟಾಗಿ ಕಟ್ಟೆ ಕಟ್ಟಿದ ವೇದಿಕೆಯೊಂದು ದೊಡ್ಡಬೈಲ್‌ಗೆ ಸ್ವಾಗತಿಸುತ್ತದೆ. ನಾಲ್ಕು ಹೆಜ್ಜೆ ಮುಂದೆ ಹೋದರೆ, ಸಾಲು ತಪ್ಪಿದ ಮನೆಗಳು ಅಲ್ಲೊಂದು, ಇಲ್ಲೊಂದು ಕಾಣುತ್ತವೆ.

ಕವಳದ ಬಾಯಲ್ಲಿದ್ದ ಗಣಪತಿ ಮರಾಠಿ ‘ನಮಸ್ಕಾರ, ಬರ್‍ರಾ ಬರ್‍ರಾ’ ಎನ್ನುತ್ತ ಸ್ವಾಗತಿಸಿ, ಮಹಾಬಲೇಶ್ವರ ಮರಾಠಿ ಮನೆಗೆ ಕರೆದುಕೊಂಡು ಹೋದರು. ನಾವು ಹೋಗಿ ಕುಳಿತಿದ್ದೆವಷ್ಟೇ, ಹಿರಿಯಜ್ಜಿಯೊಬ್ಬರು ಕೈಯಲ್ಲಿ ಹಿಡಿದು ತಂದ ನೀರ ತಂಬಿಗೆ ಯನ್ನು ನಮ್ಮೆಲ್ಲರ ಕೈಯಲ್ಲಿ ಹಿಡಿಸುತ್ತ ನಮಸ್ಕರಿಸಿದರು. ಊರಿಗೆ ಬಂದ ಅತಿಥಿಗಳಿಗೆ ದೊಡ್ಡಬೈಲಿಗರು ತೋರುವ ಗೌರವವಂತೆ ಅದು. ಇದು ಕುಂಬ್ರಿ ಮರಾಠಿಗರ ಪುಟ್ಟ ಸಾಮ್ರಾಜ್ಯ. 26 ಮನೆಗಳಿವೆ ಇಲ್ಲಿ, ಸುಮಾರು 200ರಷ್ಟು ಜನಸಂಖ್ಯೆಯಿದೆ.

ಭಜನೆ ತಂದ ಪರಿವರ್ತನೆ: ‘ಹನ್ನೆರಡು ವರ್ಷಗಳ ಹಿಂದೆ ನಾವು ಹೀಗಿರಲಿಲ್ಲ. ಸಂಜೆ ಮನೆಯಲ್ಲಿ ಗಂಡಸರ ಆರ್ಭಟ, ಹಗಲಲ್ಲಿ ಹೆಂಗಸರ ಕಚ್ಚಾಟ, ನೆಮ್ಮದಿ ನಮ್ಮೂರನ್ನು ಬಿಟ್ಟು ಓಡಿತ್ತು. ತಿಳಿವಳಿಕೆಯುಳ್ಳ ಕೆಲವರು ಊರಿನಲ್ಲೊಂದು ಸಂಘ ಪ್ರಾರಂಭಿಸುವ ಉತ್ಸಾಹ ತೋರಿದರು. ಅದೇ ಹೊತ್ತಿಗೆ ಗುರುಟೀಕ್ ಸಂಸ್ಥೆ ಬಂದು ಮನೆಗೊಬ್ಬರನ್ನು ಸದಸ್ಯರನ್ನಾಗಿ ಮಾಡಿ, ಹಣ ತುಂಬಿಸಿಕೊಂಡು ಓಡಿಹೋಯಿತು. ಕೈಸುಟ್ಟು ಕೊಂಡು ತೆಪ್ಪಗಾದ ನಾವು, ಎಂದಿನಂತೆ ಕೂಲಿ ಕೆಲಸಕ್ಕೆ ಸೀಮಿತರಾದೆವು. ಮತ್ತೆ ನಾಲ್ಕು ವರ್ಷ ಕಳೆದ ಮೇಲೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದವರು ದೊಡ್ಡಬೈಲಿಗೆ ಬಂದರು. ಈ ಹಿಂದೆ ಕಹಿ ಅನುಭವಿಸಿದ್ದ ನಾವು, ಧರ್ಮಸ್ಥಳ ಸಂಘದವರನ್ನೂ ಮೊದಲು ನಂಬಲಿಲ್ಲ. ಕೃಷಿಗೆ ಸಾಲ ನೀಡುವ ಅವರ ಭರವಸೆ ನಮ್ಮನ್ನು ಮೆತ್ತಗೆ ಮಾಡಿತು. ಸಂಘ ಕಟ್ಟಲು ಮುಂದಾದೆವು’ ಎಂದು ಗಣಪತಿ ಮರಾಠಿ ಕಥೆ ಹೇಳುತ್ತಿದ್ದರು.

ನಡುವೆ ಬಂದ ಗಣೇಶ ಮರಾಠಿ, ‘ಸಂಘದ ಸಾಲ ಕುಡಿತಕ್ಕೆ ಖಾಲಿಯಾಗಬಾರದು, ವಾರಕ್ಕೆ ₹ 10 ಉಳಿತಾಯ ಮಾಡಲೇ ಬೇಕು, ಸಾಲಗಾರ ವಾರದ ಸಭೆಯಲ್ಲಿ ಕಡ್ಡಾಯವಾಗಿ ಕಂತು ತುಂಬಬೇಕೆಂದು ಕಟ್ಟುನಿಟ್ಟಿನ ಸೂಚನೆಯಾಗಿತ್ತು. ಇದರಿಂದ, ಕೆಲಸವಿಲ್ಲದೇ ಪಂಚಾಯ್ತಿ ಕಟ್ಟೆಯ ಮೇಲೆ ದಿನಕಳೆಯುತ್ತಿದ್ದ ಕೆಲವರು ಉದ್ಯೋಗ ಹುಡುಕಲಾರಂಭಿಸಿದರು. ಸೋಮಾರಿತನ ದೂರವಾಗಿ, ದುಡಿಯುವ ಪ್ರವೃತ್ತಿ ಬೆಳೆಸಲು ಸಂಘ ದಾರಿದೀವಿಗೆಯಾಯಿತು’ ಎಂದು ಯುವಕರು ದುಡಿಮೆಗೆ ಒಗ್ಗಿಕೊಂಡ ಸಂದರ್ಭವನ್ನು ನೆನಪಿಸಿಕೊಂಡರು.

‘ಧರ್ಮಸ್ಥಳದಲ್ಲಿ ಭಜನಾ ಕಮ್ಮಟವಿದೆ, ನಿಮ್ಮ ಊರಿನಿಂದ ಇಬ್ಬರು ಬನ್ನಿ ಎಂದು ಸಂಘದವರು ಕರೆ ಕಳುಹಿಸಿದರು. ನಮ್ಮ ಕೇರಿಯ ಇಬ್ಬರು ಯುವಕರು ಹೋಗಿ ಕಮ್ಮಟದಲ್ಲಿ ಭಜನೆ ಕಲಿತು ಬಂದರು. ಪ್ರತಿ ವಾರ ಊರಿನಲ್ಲಿ ಭಜನೆಯ ಸಂಭ್ರಮ ಪ್ರಾರಂಭವಾಯಿತು. ಭಜನೆಯೆಂಬ ಮಾಂತ್ರಿಕ ಶಕ್ತಿ, ಮನೆ–ಮನಸ್ಸುಗಳ ನಡುವೆ ಸಂಬಂಧ ಬೆಸೆಯಬಹುದೆಂದು ಆಗ ನಾವು ಯೋಚಿಸಿರಲಿಲ್ಲ. ಏಳು ವರ್ಷಗಳ ಭಜನೆಯ ಸಾಂಗತ್ಯ ಊರಿನಲ್ಲಿ 70 ವರ್ಷಗಳ ಪರಿವರ್ತನೆ ತಂದಿದೆ. ಭಜನೆ ಶುರುವಾದ ಮೇಲೆ ಊರಿನಲ್ಲಿ ದೊಡ್ಡ ಜಗಳವಾಗಿದ್ದೇ ಇಲ್ಲ’ ಎಂದು ಗಣಪತಿ ಮಾತು ಮುಂದುವರಿಸಿದರು.

ಲೌಕಿಕದೊಳಗಿನ ಅಲೌಕಿಕ: ಲೌಕಿಕದೊಳಗಿನ ಅಲೌಕಿಕ ಪ್ರಪಂಚ ಈ ಕುಂಬ್ರಿ ಮರಾಠಿಗರದ್ದು. ಹಿರಿಯ ತಲೆಮಾರಿ ನವರು ಸಹಿ ಹಾಕಲಷ್ಟೇ ಕಲಿತವರು. ಓದಿ ಜ್ಞಾನ ಬೆಳೆಸಿಕೊಂಡ ವರಲ್ಲ. ಆದರೆ, ಭಜನೆಯೆಂಬ ದಿವ್ಯ ಅನುಭೂತಿ ಅವರಲ್ಲಿ ಅಧ್ಯಾತ್ಮವನ್ನು, ಅಂತಃಸತ್ವವನ್ನು ಹರಿಸಿದೆ. ಕೂಡಿಟ್ಟ ಹಣ ವನ್ನು ಪೂಜೆ–ಪುನಸ್ಕಾರ, ದೇವಾಲಯದ ಕಟ್ಟಡ, ಊರ ಶ್ರೇಯೋಭಿವೃದ್ಧಿಗೆ ಬಳಸುವ ಉದಾರ ಗುಣವನ್ನು ಬೆಳೆಸಿದೆ.

‘ಪ್ರತಿ ಸೋಮವಾರ ಸಂಜೆ ಯಾವುದಾದರೊಂದು ಮನೆಯ ಜಗಲಿಯ ಮೇಲೆ ಎಲ್ಲರೂ ಸೇರುತ್ತಾರೆ. 7.30ರಿಂದ 8 ಗಂಟೆ ಭಗವದ್ಗೀತೆ ಪಠಣ, 8ರಿಂದ 9 ಭಜನೆಗೆ ಮೀಸಲು. ನಂತರದ ಅರ್ಧ ಗಂಟೆ ‘ಅನಿಸಿಕೆ’ ಎಂಬ ಆತ್ಮಾವಲೋಕನದ ಕಾರ್ಯಕ್ರಮ. ಪ್ರತಿ ವಾರ ಒಬ್ಬೊಬ್ಬರ ಮನೆಯಲ್ಲಿ ಭಜನೆ. ಹೀಗೆ ಎಲ್ಲ 26 ಮನೆಗಳಲ್ಲೂ ಇದು ನಡೆಯುತ್ತದೆ. ಭಜನೆ ಹಮ್ಮಿಕೊಂಡ ಯಜಮಾನ 200 ರೂಪಾಯಿ ತೆಗೆದಿಡಲೇಬೇಕು. ಇನ್ನುಳಿದವರು ಶಕ್ತ್ಯಾನುಸಾರ ಡಬ್ಬಿಗೆ ಕಾಣಿಕೆ ಹಾಕುತ್ತಾರೆ. ಮನೆಗೆ ಬಂದ ನೆಂಟರೂ ಇದಕ್ಕೆ ಹೊರತಲ್ಲ. ವರ್ಷಕ್ಕೊಮ್ಮೆ ನಡೆಸುವ ಸತ್ಯನಾರಾಯಣ ಕಥೆಗೆ ಈ ಡಬ್ಬಿ ತೆರೆದರೆ 50ಸಾವಿರ ರೂಪಾಯಿಯಷ್ಟಾದರೂ ಸಿಗುತ್ತದೆ. ಇನ್ನಷ್ಟೇ ಮೊತ್ತವನ್ನು ನಾವು ಭರಿಸಿಕೊಂಡು ಈ ವಾರ್ಷಿಕ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಿ, ಎಲ್ಲರಿಗೂ ಊಟ ಹಾಕುತ್ತೇವೆ, ಜೊತೆಗೆ ಮಕ್ಕಳ ಮನರಂಜನೆ’ ಎಂದು ಗಣೇಶ ಕಾಣಿಕೆ ಡಬ್ಬಿಯ ವಿಶೇಷ ತಿಳಿಸಿದರು.

‘ಅನಿಸಿಕೆ ಕಾರ್ಯಕ್ರಮದಲ್ಲಿ ಮಕ್ಕಳೇ ನಮ್ಮ ಪ್ರಧಾನ ವಿಷಯ. ಅವರ ಶಿಕ್ಷಣ, ಕಲಿಕೆಯ ಮಟ್ಟ, ಶಾಲೆಯ ಸಮಸ್ಯೆಗಳನ್ನು ಚರ್ಚಿಸುತ್ತೇವೆ. ಊರಿನಲ್ಲಿ ಏನಾಗಬೇಕು, ಪಂಚಾಯ್ತಿ ಮುಂದೆ ಯಾವ ಬೇಡಿಕೆ ಇಡಬೇಕು, ಇವೆಲ್ಲವೂ ಅಲ್ಲಿ ನಿರ್ಧರಿತವಾಗುತ್ತವೆ. ಸಣ್ಣಪುಟ್ಟ ಮನಸ್ತಾಪಗಳೂ ಅಲ್ಲಿಯೇ ಬಗೆಹರಿದುಹೋಗುತ್ತವೆ’ ಎಂದು ಗೀತಾ ಮರಾಠಿ ಹೇಳುವಾಗ ಇನ್ನುಳಿದ ಹೆಂಗಸರೂ ದನಿಗೂಡಿಸಿದರು.

‘ಭಜನೆ ನಮಗೆ ಬದುಕು ಕೊಟ್ಟಿದೆ. ಕಷ್ಟ–ಸುಖ ಎಲ್ಲಕ್ಕೂ ಭಜನೆಯೇ ಬಂಧು. ಕಷ್ಟ ಬಂದಾಗ ಭಜನೆ ಮೂಲಕವೇ ನಾವು ದೇವರಿಗೆ ಮೊರೆ ಹೋಗುವುದು. ಸುತ್ತಮುತ್ತಲಿನ ಊರವರು ಈಗ ನಮ್ಮನ್ನು ಭಜನೆ ಕರೆಯುತ್ತಾರೆ’ ಎಂದು ಮಂಜುನಾಥೇಶ್ವರ ಭಜನಾ ಮಂಡಳಿಯ ಸಂಚಾರದ ಬಗ್ಗೆ ಅವರು ಹೇಳಿಕೊಂಡರು.

ಒಂದು ರೂಪಾಯಿ ಕಾಂತ್ರಿ: ‘ಮನೆಯಲ್ಲಿ ತಲೆಗೊಂದು ರೂಪಾಯಿಯಂತೆ ಪ್ರತಿದಿನ ಉಳಿತಾಯ ಮಾಡುವ ಹೊಸ ಯೋಜನೆ ಆರಂಭಿಸಿದ್ದೇವೆ. ಈ ಉಳಿತಾಯದ ಹಣವನ್ನು ಹೆಣ್ಣು ಮಕ್ಕಳ ಮದುವೆ, ಶಿಕ್ಷಣಕ್ಕೆ ಸಾಲ, ಅನಾರೋಗ್ಯದ ಸಮಸ್ಯೆ ಎದುರಾದಾಗ ಮಾತ್ರ ಬಳಕೆ ಮಾಡಲು ನಿರ್ಧರಿಸಿದ್ದೇವೆ. ಸ್ವಾವಲಂಬಿ ಜೀವನವೇ ನಮ್ಮ ಕನಸು’ ಎಂದು ‘ಅನಿಸಿಕೆ’ಯಲ್ಲಿ ಹೊರಹೊಮ್ಮಿದ ಒಂದು ರೂಪಾಯಿ ಕ್ರಾಂತಿಯನ್ನು ಗಣಪತಿ ಕುತೂಹಲಕಾರಿಯಾಗಿ ಬಿಚ್ಚಿಟ್ಟರು.

‘ಇವರೆಲ್ಲರೂ ಬಹುತೇಕ 4–5 ಗುಂಟೆ ಜಮೀನು ಹೊಂದಿದ ವರು. ಕೂಲಿ ಕೆಲಸ, ಉಳಿತಾಯ, ಭಜನೆ, ಪರಸ್ಪರ ಪ್ರೀತಿ, ಸಹಬಾಳ್ವೆಯಲ್ಲಿ ಖುಷಿ ಕಂಡುಕೊಂಡವರು. ಅವರಿಗರಿವಿಲ್ಲದ ಅಧ್ಯಾತ್ಮದಲ್ಲಿ ಬದುಕಿನ ಸಂತೃಪ್ತಿ ಅನುಭವಿಸುತ್ತಿರುವವರು’ ಎಂದು ಮರಾಠಿಗರಿಗೆ ಮಾರ್ಗದರ್ಶಕರಾಗಿರುವ ಸುರೇಶ್ಚಂದ್ರ ಹೆಗಡೆ ಹೇಳಿದಾಗ, ನಿಜಕ್ಕೂ ಇದು ಸತ್ಯವೆನಿಸಿತು.

‘ನಮ್ಮ ಮಾವನ ಅಜ್ಜನಿಗೆ ಎಂಟು ಗಂಡು ಮಕ್ಕಳಿದ್ದ ರಂತೆ. ಆಲದ ಮರದಂತೆ ಅವರ ಕುಟುಂಬವೇ ಇಲ್ಲಿ ಮೈಚಾಚಿ ಕೊಂಡಿದೆ. ನಾವೆಲ್ಲ ಒಂದೇ ಕುಟುಂಬದವರು’ ಎಂದು ಗಂಗಜ್ಜಿ ಕೊನೆಯಲ್ಲಿ ಹೇಳಿದಾಗ, ದ.ರಾ.ಬೇಂದ್ರೆಯವರ, ‘ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು ಬಳಸಿಕೊಂಡೆವದನೆ ನಾವು ಅದಕು ಇದಕು ಎದಕು...’ ಹಾಡು ಮನದಲ್ಲಿ ಹಾದುಹೋಯಿತು.

ಬ್ಯಾನರ್ ಇಲ್ಲದ ಸ್ವಚ್ಛ ಭಾರತ್

ಏಳು ವರ್ಷಗಳಿಂದ ದೊಡ್ಡಬೈಲಿನಲ್ಲಿ ಅಕ್ಟೋಬರ್ 2, ಗಾಂಧಿ ಜಯಂತಿಯ ದಿನ ಸ್ವಚ್ಛತಾ ಕಾರ್ಯಕ್ರಮ ನಡೆಯುತ್ತದೆ. ರಸ್ತೆ ಸಮತಟ್ಟು, ಕಾಲುಸಂಕ ದುರಸ್ತಿ, ಗಿಡಗಂಟಿ ಕಟಾವನ್ನು ಪುರುಷರು ಮಾಡಿದರೆ, ಅದನ್ನು ಸ್ವಚ್ಛಗೊಳಿಸಿ, ಊರಿನ ಒಪ್ಪ ಓರಣ ಮಾಡುವ ಕೆಲಸವನ್ನು ಮಹಿಳೆಯರು ಮಾಡುತ್ತಾರೆ. ಬೆಳಿಗ್ಗೆ ಶುರುವಾಗುವ ಕೆಲಸಕ್ಕೆ ಸಂಜೆಯೇ ಸಮಾರೋಪ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry