ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಅಪ್ರೆಂಟಿಸ್‌ಗಳ ನೇಮಕಕ್ಕೆ ಆಗ್ರಹ

Last Updated 19 ಮಾರ್ಚ್ 2018, 19:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನೈರುತ್ಯ ರೈಲ್ವೆಯ 2,283 ಹಾಗೂ ರೈಲ್ವೆ ಗಾಲಿ ಕಾರ್ಖಾನೆಯ 480 ಅಪ್ರೆಂಟಿಸ್‌ಗಳನ್ನು ನೇಮಕ ಮಾಡಿಕೊಂಡು, ಅವರಿಗೆ ‘ಡಿ’ ಗ್ರೂಪ್‌ ನೌಕರರೆಂದು ಪರಿಗಣಿಸಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ರೈಲ್ವೆ ಆ್ಯಕ್ಟ್‌ ಅಪ್ರೆಂಟಿಸ್‌ ಅಸೋಸಿಯೇಷನ್‌ ನೇತೃತ್ವದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಸಾವಿರಾರು ಅಪ್ರೆಂಟಿಸ್‌ಗಳು ಸೋಮವಾರದಿಂದ ಅನಿರ್ದಿಷ್ಟಾವಧಿ ಉಪವಾಸ ಆರಂಭಿಸಿದರು.

ಇಲ್ಲಿನ ಕೇಶ್ವಾಪುರದ ನೈರುತ್ಯ ರೈಲ್ವೆ ಹುಬ್ಬಳ್ಳಿ ವಲಯದ ವ್ಯವಸ್ಥಾಪಕರ ಕಚೇರಿ ಎದುರು ಪ್ರತಿಭಟನೆ ನಡೆಸಿ, ವಿವಿಧ ಬೇಡಿಕೆಗಳ ಮನವಿ ಸಲ್ಲಿಸಿದರು. ಬಳಿಕ ಗದಗ ರಸ್ತೆಯಲ್ಲಿರುವ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರ ಕಚೇರಿವರೆಗೆ ಪ್ರತಿಭಟನಾ ಜಾಥಾ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಪಿಯೂಷ್‌ ಗೋಯಲ್‌, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌, ಸಂಸದ ಪ್ರಹ್ಲಾದ ಜೋಶಿ ಸೇರಿದಂತೆ ರಾಜ್ಯದ ಸಂಸದರ ವಿರುದ್ಧ ಧಿಕ್ಕಾರ ಕೂಗಿದರು. ಕೇಂದ್ರ ರೈಲ್ವೆ ಸಚಿವರ ಪ್ರತಿಕೃತಿ ದಹಿಸಿ, ಆಕ್ರೋಶ ವ್ಯಕ್ತಪಡಿಸಿದರು.

ಮಾತುಕತೆ ವಿಫಲ:

ರೈಲ್ವೆ ಪ್ರಧಾನ ವ್ಯವಸ್ಥಾಪಕರು ಪ್ರತಿಭಟನಾಕಾರರೊಂದಿಗೆ ಸಂಜೆ ನಡೆಸಿದ ಮಾತುಕತೆ ವಿಫಲವಾಗಿದೆ. ‘ಬೇಡಿಕೆ ಈಡೇರುವವರೆಗೆ  ಧರಣಿ ಮುಂದುವರಿಸುತ್ತೇವೆ. ಯಾರಿಗಾದರೂ ತೊಂದರೆಯಾದರೆ ಅದರ ಹೊಣೆಯನ್ನು ರೈಲ್ವೆ ಅಧಿಕಾರಿಗಳೇ ಹೊರಬೇಕಾಗುತ್ತದೆ’ ಎಂದು ಸಂಘದ ಉಪಾಧ್ಯಕ್ಷ ರವಿ ಗಾಣಿಗೇರ ಎಚ್ಚರಿಕೆ ನೀಡಿದರು.

‘2010ರಿಂದ 2017ರವರೆಗೆ ಸಬ್‌ಸ್ಟಿಟ್ಯೂಟ್‌ ಮುಖಾಂತರ 4,786 ಅಪ್ರೆಂಟಿಸ್‌ಗಳನ್ನು ಸರ್ಕಾರಿ ನೌಕರರೆಂದು ಮಹಾರಾಷ್ಟ್ರ ಕೇಂದ್ರೀಯ ರೈಲ್ವೆ ವಲಯದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಅದೇ ಮಾದರಿಯನ್ನು ರಾಜ್ಯದಲ್ಲೂ ಅನುಸರಿಸಬೇಕು’ ಎಂದು ಅವರು ಆಗ್ರಹಿಸಿದರು.

‘ಡಿ’ ಗ್ರೂಪ್‌ ನೌಕರರ ನೇಮಕಾತಿ ವೇಳೆ ಅಪ್ರೆಂಟಿಸ್‌ಗಳಿಗೆ ಶೇ 20ರಷ್ಟು ಮೀಸಲಾತಿ ನಿಗದಿ ಮಾಡಲಾಗಿದೆ. ಇದರಿಂದ ಹೆಚ್ಚು ಪ್ರಯೋಜನವಾಗುತ್ತಿಲ್ಲ. ಹೀಗಾಗಿ, ಎಲ್ಲ ಅಪ್ರೆಂಟಿಸ್‌ಗಳನ್ನು ನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರಮುಖ ಬೇಡಿಕೆಗಳು:

25 ಸಾವಿರ ಅಪ್ರೆಂಟಿಸ್‌ಗಳನ್ನು ನೇಮಕ ಮಾಡಿಕೊಳ್ಳಬೇಕು, ಖಾಲಿ ಇರುವ 5 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಬೇಕು, ಆತ್ಮಹತ್ಯೆ ಮಾಡಿಕೊಂಡ ಅಪ್ರೆಂಟಿಸ್‌ಗಳ ಕುಟುಂಬ ಸದಸ್ಯರೊಬ್ಬರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT