‘ಬೊಕ್ಕಸದ ನಷ್ಟ ತಡೆಯುವ ಉದ್ದೇಶ’

7

‘ಬೊಕ್ಕಸದ ನಷ್ಟ ತಡೆಯುವ ಉದ್ದೇಶ’

Published:
Updated:

ಬೆಂಗಳೂರು: ‘ಬೊಕ್ಕಸಕ್ಕೆ ಆಗುವ ನಷ್ಟ ತಡೆಯಲು ಎಲ್ಲ ವಿಧದ ಮದ್ಯದ ಬಾಟಲಿಗಳ ಬಿರಡೆ ಮೇಲೆ ಪಾಲಿಯೆಸ್ಟರ್‌ ಲೇಬಲ್‌ ಅಂಟಿಸುವ ಟೆಂಡರ್‌ಗೆ ಸರ್ಕಾರ ಅನುಮತಿ ನೀಡಿದೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ಟೆಂಡರ್‌ ಪ್ರಕ್ರಿಯೆ ಪ್ರಶ್ನಿಸಿ ನಗರದ ವಿದ್ಯಾರಣ್ಯಪುರ ನಿವಾಸಿ ರಾಮ್‌ ಪ್ರಸಾದ್‌ ಹಾಗೂ ‘ಸ್ವಚ್ಛ’ ಹೆಸರಿನ ಸ್ವಯಂ ಸೇವಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಿ.ಎಂ.ರಾಜೇಶ್‌ ಬಾಬು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಬಿ.ಎಂ.ಶ್ಯಾಮ ಪ್ರಸಾದ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎ.ಎಸ್‌.ಪೊನ್ನಣ್ಣ, ‘ಈ ಹಿಂದೆ ಕಾಗದದ ಲೇಬಲ್‌ ಅಂಟಿಸಲಾಗುತ್ತಿತ್ತು. ಆದರೆ, ಇದರಿಂದ ಬೊಕ್ಕಸಕ್ಕೆ ನಷ್ಟವುಂಟಾಗುತ್ತಿತ್ತು. ಇದನ್ನು ತಡೆಯಲು ಅಧ್ಯಯನ ಸಮಿತಿ ರಚಿಸಲಾಗಿತ್ತು. ಈ ಸಮಿತಿ ನೀಡಿರವ ವರದಿಯನ್ನು ಆಧರಿಸಿ ಈ ನಿರ್ಧಾರಕ್ಕೆ ಬರಲಾಗಿದೆ’ ಎಂದು ತಿಳಿಸಿದರು.

‘ಈಗಾಗಲೇ 15 ರಾಜ್ಯಗಳಲ್ಲಿ ಇಂತಹುದೇ ಮಾದರಿಯ ಲೇಬಲ್‌ ಬಳಸಲಾಗುತ್ತಿದೆ. ಅಷ್ಟಕ್ಕೂ ಈಗ ಬಳಸಲು ಉದ್ದೇಶಿಸಿರುವ ಪಾಲಿಯೆಸ್ಟರ್‌ ಲೇಬಲ್‌ಗಳಲ್ಲಿ ಪ್ಲಾಸ್ಟಿಕ್‌ 50 ಮೈಕ್ರಾನ್‌ಗಿಂತ ಹೆಚ್ಚಿರುವುದಿಲ್ಲ’ ಎಂದು ತಿಳಿಸಿದರು.

ಇದಕ್ಕೆ ಆಕ್ಷೇಪಿಸಿದ ಅರ್ಜಿದಾರರ ಪರ ಹಿರಿಯ ವಕೀಲ ಎಸ್‌.ಪಿ.ಶಂಕರ್, ‘ಪ್ರತಿ ತಿಂಗಳೂ 32 ಕೋಟಿಗೂ ಹೆಚ್ಚು ಲೇಬಲ್‌ಗಳು ತ್ಯಾಜ್ಯವಾಗಿ ಮಣ್ಣಲ್ಲಿ ಸೇರುತ್ತವೆ. ಇವು ನೆಲದಲ್ಲಿ ಕರಗುವುದಿಲ್ಲ. ಇದು ಮಾರಕ ರೋಗಗಳಿಗೆ ಕಾರಣವಾಗುತ್ತದೆ’ ಎಂದರು.

‘ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಪ್ರತ್ಯೇಕ ಪ್ರಕರಣವೊಂದರ ವಿಚಾರಣೆ ನಡೆಯುತ್ತಿದೆ. ಅದರ ಬೆಳವಣಿಗೆ ಏನೆಂದು ಕೋರ್ಟ್‌ಗೆ ತಿಳಿಸಲು ಸಮಯಾವಕಾಶ ನೀಡಬೇಕು’ ಎಂದು ಪೊನ್ನಣ್ಣ ಕೋರಿದರು.

ಇದನ್ನು ಮನ್ನಿಸಿದ ನ್ಯಾಯಪೀಠ ವಿಚಾರಣೆಯನ್ನು ಇದೇ 26ಕ್ಕೆ ಮುಂದೂಡಿದೆ.

‘ರಾಜ್ಯದಾದ್ಯಂತ ಮಾರಾಟವಾಗುವ ಎಲ್ಲ ಬಗೆಯ ಮದ್ಯದ ಬಾಟಲಿಗಳ ಮೇಲೆ ಪೇಪರ್‌ ಲೇಬಲ್‌ ಅಂಟಿಸಲಾಗುತ್ತದೆ. ಆದರೆ, ಈ ಪೇಪರ್‌ ಲೇಬಲ್‌ಗಳ ಬದಲಿಗೆ ಇನ್ನು ಮುಂದೆ ಪಾಲಿಯೆಸ್ಟರ್‌ ಆಧಾರಿತ ಉತ್ಪನ್ನಗಳಿಂದ ತಯಾರಿಸಿದ ಲೇಬಲ್‌ ಬಳಸಲು ರಾಜ್ಯ ಅಬಕಾರಿ ಇಲಾಖೆ ಟೆಂಡರ್‌ ಕರೆದಿದೆ. ಇದು ಪರಿಸರಕ್ಕೆ ಹಾನಿಕರವಾಗಿದೆ. ಆದ್ದರಿಂದ ಟೆಂಡರ್‌ಗೆ ತಡೆ ನೀಡಬೇಕು’ ಎಂಬುದು ಅರ್ಜಿದಾರ ಕೋರಿಕೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry