ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 30ರಷ್ಟು ‘ಜಿಇಆರ್’ ಹೆಚ್ಚಳ ಗುರಿ

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಚ್.ಎಂ.ಮಹೇಶ್ವರಯ್ಯ
Last Updated 20 ಮಾರ್ಚ್ 2018, 9:59 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್‌ಆರ್‌ಡಿ)ವು 2020ರ ವೇಳೆಗೆ ನಿವ್ವಳ ದಾಖಲಾತಿ ಅನುಪಾತ (ಜಿಇಆರ್)ವನ್ನು ಶೇ 30ರಷ್ಟು ಹೆಚ್ಚಿಸುವ ಗುರಿ ಹೊಂದಿದೆ’ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಚ್.ಎಂ.ಮಹೇಶ್ವರಯ್ಯ ಹೇಳಿದರು.

ನಗರದ ರೇಷ್ಮಿ ಸ್ನಾತಕ ಮತ್ತು ಸ್ನಾತಕೋತ್ತರ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ‘ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಹೆಚ್ಚಳ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದಲ್ಲಿ ಉನ್ನತ ಶಿಕ್ಷಣದಲ್ಲಿ ನಿವ್ವಳ ದಾಖಲಾತಿ ಅನುಪಾತ (ಜಿಇಆರ್) ಸದ್ಯ 24.5ರಷ್ಟಿದೆ. ಗ್ರಾಮೀಣ ಪದವೀಧರರು ಶೇ 4.5ರಷ್ಟಿದ್ದರೆ, ನಗರ ಪ್ರದೇಶದ ಪದವೀಧರರು ಶೇ 17ರಷ್ಟು ಇದ್ದಾರೆ. ನಗರ ಪ್ರದೇಶದಲ್ಲಿ ಮಹಿಳಾ ಪದವೀಧರರ ಸಂಖ್ಯೆ ಶೇ 2.2ರಷ್ಟು ಮಾತ್ರ ಇದೆ. ಹೀಗಾಗಿ ಜಿಇಆರ್‌ ಹೆಚ್ಚಳವನ್ನು ಎಂಎಚ್‌ಆರ್‌ಡಿ ಗಂಭೀರವಾಗಿ ಪರಿಗಣಿಸಿದೆ’ ಎಂದು ತಿಳಿಸಿದರು.

‘ಉನ್ನತ ಶಿಕ್ಷಣದಲ್ಲಿ ಬಹಳಷ್ಟು ಬದಲಾವಣೆಗಳು ಆಗುತ್ತಿವೆ. ಜಾಗತಿಕ ಸ್ಪರ್ಧೆಗೆ ನಾವು ಅಣಿಯಾಗಬೇಕಿದೆ. ಉನ್ನತ ಶಿಕ್ಷಣದಲ್ಲಿ ಪ್ರವೇಶಾತಿ ಹೆಚ್ಚಳ ಜತೆಗೆ ಗುಣಮಟ್ಟಕ್ಕೂ ಆದ್ಯತೆ ನೀಡಬೇಕಾಗಿದೆ. ಈ ಕಾರಣಕ್ಕಾಗಿಯೇ ರಾಷ್ಟ್ರೀಯ ಶೈಕ್ಷಣಿಕ ಮೌಲ್ಯಮಾಪನ ಮತ್ತು ಗುಣಮಟ್ಟ ವರ್ಧನ ಮಂಡಳಿ (ನ್ಯಾಕ್‌)ಯು ವಿಶ್ವವಿದ್ಯಾಲಯಗಳಿಗೆ ರಾಷ್ಟ್ರೀಯ ರ್‍ಯಾಂಕಿಂಗ್ ಜತೆಗೆ ಅಂತರರಾಷ್ಟ್ರೀಯ ರ್‍ಯಾಂಕಿಂಗ್ ನೀಡುತ್ತಿದೆ. ದುರ್ದೈವದ ಸಂಗತಿ ಎಂದರೆ ನಮ್ಮ ಯಾವ ಉನ್ನತ ಶಿಕ್ಷಣ ಸಂಸ್ಥೆಗಳೂ ದೇಶದ ಮೊದಲ 100 ಅತ್ಯುತ್ತಮ ಸಂಸ್ಥೆಗಳ ಸಾಲಿನಲ್ಲಿ ರ್‍ಯಾಂಕ್ ಪಡೆದಿಲ್ಲ’ ಎಂದರು.

‘ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ)ದಲ್ಲಿ ₹12ಕೋಟಿ ವೆಚ್ಚದಲ್ಲಿ ಡಿಜಿಟಲ್ ಕ್ಯಾಂಪಸ್ ಸೌಲಭ್ಯ ಕಲ್ಪಿಸಲಾಗಿದೆ. ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯ (ಎನ್‌ಡಿಎಲ್‌)ದ ಮೂಲಕ ವಿದ್ಯಾರ್ಥಿಗಳು 72 ಲಕ್ಷ ಗ್ರಂಥಗಳನ್ನು ಓದಬಹುದಾಗಿದೆ. ಇದಲ್ಲದೆ 15ಸಾವಿರ ಇ–ಪುಸ್ತಕಗಳೂ ಲಭ್ಯ ಇವೆ. ಕೇಂದ್ರೀಯ ಸಲಕರಣೆ ಕೇಂದ್ರ (ಸಿಐಸಿ) ಸ್ಥಾಪಿಸುವ ಗುರಿ ಹೊಂದಲಾಗಿತ್ತು. ಆದರೆ ಎಂಎಚ್‌ಆರ್‌ಡಿ ವಾಸ್ತವ ಗ್ರಂಥಾಲಯ (ವರ್ಚುಯಲ್ ಲೈಬ್ರರಿ) ಮೂಲಕ ಎಲ್ಲ ಸೇವೆಗಳನ್ನು ಒದಗಿಸಲು ಯೋಜನೆ ರೂಪಿಸಿದೆ’ ಎಂದು ತಿಳಿಸಿದರು.

‘ಕೇಂದ್ರ ಸರ್ಕಾರ ಇ–ವಿದ್ವಾನ್, ಇ–ಶೋಧ ಸಿಂಧು ಮತ್ತು ಸ್ವಯಂ–ಪೋರ್ಟಲ್‌ಗಳನ್ನು ಸಿದ್ಧಪಡಿಸಿದೆ. ದೇಶದ ಎಲ್ಲ ಕಾಲೇಜುಗಳು, ವಿಶ್ವವಿದ್ಯಾಲಯಗಳ ಬೋಧಕರು, ಸಂಶೋಧನಾರ್ಥಿಗಳು ಮತ್ತು ವಿದ್ಯಾರ್ಥಿಗಳು ಇ– ಸೇವೆಯನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಹೇಳಿದರು.

ಮುಂಬಯಿನ ಎಸ್‌ಎನ್‌ಡಿಟಿ ಮಹಿಳಾ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ. ಮಾಧವಿ ಧರಣಕರ್ ಮಾತನಾಡಿದರು.

ರೇಷ್ಮಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಡಾ. ಭಾರತಿ ಎನ್.ರೇಷ್ಮಿ, ಆಡಳಿತಾಧಿಕಾರಿ ಪ್ರೊ.ಎಸ್.ಆರ್.ಹತ್ತಿ, ಪ್ರಾಂಶುಪಾಲ ಡಾ. ಸಂಗಶೆಟ್ಟಿ ಬಿ.ಕಲ್ಯಾಣೆ, ಪ್ರಾಧ್ಯಾಪಕ ಡಾ. ವಿ.ಪಿ.ರಾಠೋಡ, ನ್ಯಾಕ್ ಸಂಯೋಜಕ ಡಾ.ಓಂಪ್ರಕಾಶ್ ಎಚ್.ಎಂ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT