ಎನ್‌ಎಂಸಿ ರಚನೆ ವಿರೋಧಿಸಿ ಜಾಗೃತಿ ಜಾಥಾ

7
ಜ್ಯೋತಿ ಸ್ವೀಕರಿಸಿದ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಂ.ನಾರಾಯಣಸ್ವಾಮಿ

ಎನ್‌ಎಂಸಿ ರಚನೆ ವಿರೋಧಿಸಿ ಜಾಗೃತಿ ಜಾಥಾ

Published:
Updated:

ಕೋಲಾರ: ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ರಚನೆಗೆ ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಸದಸ್ಯರು ನಗರದಲ್ಲಿ ಸೋಮವಾರ ಜಾಥಾ ನಡೆಸಿದರು.

‘ರಾಷ್ಟ್ರೀಯ ವೈದ್ಯಕೀಯ ಮಂಡಳಿ ಬದಲಿಗೆ, ಎನ್‌ಎಂಸಿ ರಚನೆಗೆ ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಇದು ಅವೈಜ್ಞಾನಿಕ ನಿರ್ಧಾರ. ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಅದನ್ನು ಕಾನೂನುಬದ್ಧಗೊಳಿಸುವ ದುರುದ್ದೇಶದಿಂದ ಕೇಂದ್ರವು ಈ ಆಯೋಗ ರಚಿಸಲು ಮುಂದಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಶೇ 60ರಷ್ಟು ಮ್ಯಾನೇಜ್‌ಮೆಂಟ್ ಕೋಟಾ ಸೀಟುಗಳನ್ನು ಖಾಸಗಿ ವೈದ್ಯಕೀಯ, ದಂತ ವೈದ್ಯಕೀಯ ಕಾಲೇಜುಗಳು ಹಾಗೂ ಶೇ 40ರಷ್ಟು ಸೀಟುಗಳನ್ನು ಸರ್ಕಾರ ಹಂಚಿಕೆ ಮಾಡಬಹುದೆಂದು ಎನ್‌ಎಂಸಿ ಹೇಳಿದೆ. ಶೇ 60ರಷ್ಟು ಸೀಟುಗಳನ್ನು ಕಾಲೇಜುಗಳ ಆಡಳಿತ ಮಂಡಳಿಗಳಿಗೆ ಬಿಟ್ಟು ಕೊಡುವುದರಿಂದ ಸೀಟುಗಳನ್ನು ಕೋಟ್ಯಂತರ ರೂಪಾಯಿಗೆ ಮಾರುವ ಸಾಧ್ಯತೆ ಇದೆ. ಇದು ವಿದ್ಯಾರ್ಥಿಗಳಿಗೆ ಮಾರಕವಾಗಲಿದೆ’ ಎಂದು ಐಎಂಎ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಂ.ನಾರಾಯಣಸ್ವಾಮಿ ಹೇಳಿದರು.

‘ವಿದ್ಯಾರ್ಥಿಗಳು 5 ವರ್ಷಗಳ ವೈದ್ಯಕೀಯ ಕೋರ್ಸ್‌ ಪೂರ್ಣಗೊಳಿಸಿದ ನಂತರ ಮತ್ತೊಮ್ಮೆ ಪ್ರತ್ಯೇಕ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಮಾತ್ರ ಪ್ರಮಾಣಪತ್ರ ನೀಡಲು ಕೇಂದ್ರ ಸರ್ಕಾರ ಹೊಸ ನೀತಿ ಜಾರಿಗೆ ತರಲು ಮುಂದಾಗಿದೆ. ಇದರಿಂದ ವಿದ್ಯಾರ್ಥಿಗಳ ಮೇಲೆ ಮಾನಸಿಕ ಒತ್ತಡ ಹೆಚ್ಚುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಭ್ರಷ್ಟಾಚಾರಕ್ಕೆ ದಾರಿ: ‘ಆಯುರ್ವೇದ ಮತ್ತು ಹೋಮಿಯೋಪತಿ ವೈದ್ಯರಿಗೆ 5 ತಿಂಗಳು ತರಬೇತಿ ನೀಡಿ ಎಂಬಿಬಿಎಸ್ ವೈದ್ಯರಂತೆ ಸೇವೆ ಸಲ್ಲಿಕೆಗೆ ಅನುಮತಿ ನೀಡಲು ನಿರ್ಧರಿಸಲಾಗಿದೆ. ಇದರಿಂದ ವೈದ್ಯಕೀಯ ಸೇವೆಯ ಗುಣಮಟ್ಟ ಕುಸಿದು ಸಾವು ನೋವು ಸಂಭವಿಸುವ ಅಪಾಯವಿದೆ. ವೈದ್ಯಕೀಯ ಶಿಕ್ಷಣದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಹಿಡಿತ ಹೆಚ್ಚಿ ಮತ್ತಷ್ಟು ಭ್ರಷ್ಟಾಚಾರಕ್ಕೆ ದಾರಿಯಾಗುತ್ತದೆ. ವೈದ್ಯಕೀಯ ಶಿಕ್ಷಣ ದುಬಾರಿಯಾಗಲಿದೆ’ ಎಂದು ಸದಸ್ಯರು ಆತಂಕ ವ್ಯಕ್ತಪಡಿಸಿದರು.

‘ಎನ್‌ಎಂಸಿಯಲ್ಲಿ 20 ಸದಸ್ಯರು ಇರಲಿದ್ದಾರೆ. ಅವರನ್ನು ಕೇಂದ್ರವೇ ನೇಮಕ ಮಾಡುತ್ತದೆ. ರಾಜಕಾರಣಿಗಳು ಹಾಗೂ ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರನ್ನೇ ಸದಸ್ಯರಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ. ಇದರಿಂದ ಸೀಟುಗಳ ಹಂಚಿಕೆ ವೇಳೆ ಅವರ ಹಸ್ತಕ್ಷೇಪ ಹೆಚ್ಚಲಿದೆ. ಆದ ಕಾರಣ ಎನ್‌ಎಂಸಿ ರಚನೆ ಮಾಡಬಾರದು’ ಎಂದು ಒತ್ತಾಯಿಸಿದರು.

ಸಂಘದ ಕಾರ್ಯದರ್ಶಿ ಡಾ.ಎನ್.ಸಿ.ದೇವರಾಜ್, ಸದಸ್ಯರಾದ ಡಾ.ಆನಂದ್‌, ಡಾ.ಬೀರೇಗೌಡ, ಡಾ.ನರೇಂದ್ರ, ಡಾ.ವಂದನಾ, ಡಾ.ಆಶಾ, ಡಾ.ಶಂಕರ್, ಡಾ. ಬಾಲಾಜಿ, ಡಾ.ಕೃಷ್ಣಯ್ಯಶೆಟ್ಟಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry