7
ಬಳ್ಳಾರಿ ಜಿಲ್ಲೆಯಲ್ಲಿ ಮೂರು ತಿಂಗಳಿಂದ ಜನರ ಪರದಾಟ; ಅಸಹಾಯಕತೆ ವ್ಯಕ್ತಪಡಿಸುವ ಅಧಿಕಾರಿಗಳಿಂದ

ಎಟಿಎಂಗಳಲ್ಲಿ ಹಣದ ಕೊರತೆ ಇನ್ನೆಷ್ಟು ದಿನ?

Published:
Updated:

ಬಳ್ಳಾರಿ: ಹಲವು ದಿನಗಳಿಂದ ನಗರದ ಬಹುತೇಕ ಎಟಿಎಂಗಳಲ್ಲಿ ಹಣದ ಕೊರತೆ ಉಂಟಾಗಿರುವುದು ಬಳಕೆದಾರರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಎಟಿಎಂಗಳ ಮುಂದೆ ‘ನೋ ಮನಿ’, ‘ಹಣವಿಲ್ಲ’ ಫಲಕಗಳು ನಿತ್ಯದ ದೃಶ್ಯಗಳಾಗಿವೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ ಮೊದಲಿನಂತೆ ಹಣ ಪೂರೈಸುತ್ತಿಲ್ಲ ಮತ್ತು ಬ್ಯಾಂಕ್‌ ಹಾಗೂ ಎಟಿಎಂಗಳಿಂದ ಹಣ ಪಡೆದ ಗ್ರಾಹಕರು ಮರುಪಾವತಿ ಮಾಡುತ್ತಿಲ್ಲ ಎಂಬ ಅಭಿಪ್ರಾಯವನ್ನು ಬ್ಯಾಂಕ್‌ ಅಧಿಕಾರಿಗಳು ವ್ಯಕ್ತಪಡಿಸುತ್ತಿದ್ದಾರೆ.

ಬ್ಯಾಂಕ್‌ ಜೊತೆಗೆ ಒಪ್ಪಂದ ಮಾಡಿಕೊಂಡಿರುವ ಎಟಿಎಂ ಯಂತ್ರದ ಮಾಲೀಕರು ಸಲ್ಲಿಸುವ ಬೇಡಿಕೆಗೆ ತಕ್ಕಂತೆ ಹಣ ಪೂರೈಸಲು ಆಗದ ಸನ್ನಿವೇಶ ನಿರ್ಮಾಣವಾಗಿದೆ. ಜನ ಹೆಚ್ಚು ಬಳಸುವ ಎಟಿಎಂಗಳಿಗೆ ಹೆಚ್ಚು ಹಣವನ್ನು ಭರ್ತಿ ಮಾಡಬೇಕಾಗುತ್ತದೆ. ಆದರೆ ಈ ಸರಳ ನಿಯಮವನ್ನು ಆಧರಿಸಿದ ಬೇಡಿಕೆಗೂ ಈಗ ಸ್ಪಂದಿಸದ ಸ್ಥಿತಿಯಲ್ಲಿ ಬ್ಯಾಂಕ್‌ಗಳು ಇವೆ.

ಎಟಿಎಂ ಯಂತ್ರಗಳ ಮಾಲೀಕರು ಮತ್ತು ಬ್ಯಾಂಕ್‌ ನಡುವೆ ಕೊಂಡಿಯಂತೆ ಕಾರ್ಯನಿರ್ವಹಿಸುವ ಗುತ್ತಿಗೆ ಸೇವಾ ಸಂಸ್ಥೆಗಳು ಇದೇ ಕಾರಣಕ್ಕೆ ಕೆಲಸವಿಲ್ಲದೆ ಸುಮ್ಮನೆ ಕುಳಿತುಕೊಳ್ಳುವಂತಾಗಿದೆ. ಮಾಲೀಕರು ನಿರ್ದಿಷ್ಟ ಎಟಿಎಂಗಳಲ್ಲಿ ನಿರ್ದಿಷ್ಟ ಮೊತ್ತದ ಹಣವನ್ನು ಭರ್ತಿ ಮಾಡಿ ಎಂದು ಏಕಕಾಲಕ್ಕೆ ಸಂಸ್ಥೆ ಹಾಗೂ ಬ್ಯಾಂಕ್‌ಗೆ ಬೇಡಿಕೆ ಸಲ್ಲಿಸುತ್ತಾರೆ. ಬೇಡಿಕೆ ಪಟ್ಟಿಯನ್ನು ಹಿಡಿದು ಬರುವ ಸಂಸ್ಥೆಯ ಪ್ರತಿನಿಧಿಗಳಿಗೆ ಬ್ಯಾಂಕ್‌ ಅಧಿಕಾರಿಗಳ ಅಸಹಾಯಕತೆಯೇ ಉತ್ತರವಾಗಿದೆ.

ಮರುಪಾವತಿ ಆಗುತ್ತಿಲ್ಲ:

ಈ ಬಗ್ಗೆ ಪ್ರತಿಕ್ರಿಯಿಸಿದ ಭಾರತೀಯ ಸ್ಟೇಟ್‌ ಬ್ಯಾಂಕಿನ ದಾವಣಗೆರೆ ಆಡಳಿತ ಕಚೇರಿಯ ಉಪಪ್ರಧಾನ ವ್ಯವಸ್ಥಾಪಕ ಮಧುಸೂದನ ರೆಡ್ಡಿ, ‘ಬೇಡಿಕೆಗೆ ತಕ್ಕಷ್ಟು ಹಣವನ್ನು ಪೂರೈಸಬೇಕಾದ ಭಾರತೀಯ ರಿಸರ್ವ್‌ ಬ್ಯಾಂಕ್‌ ತನ್ನ ಕೈ ಬಿಗಿ ಮಾಡಿದೆ. ಅದರ ಜೊತೆಗೆ, ಬ್ಯಾಂಕ್‌ ಮತ್ತು ಎಟಿಎಂಗಳಿಂದ ಹಣ ಪಡೆದ ಗ್ರಾಹಕರು ಮರುಪಾವತಿ ಮಾಡದೇ ಇರುವುದು ಕೂಡ ಸಮಸ್ಯೆ ಬಿಗಡಾಯಿಸಲು ಕಾರಣ’ ಎಂದರು.

‘ಕರ್ನಾಟಕದಲ್ಲಿ ಹಣದ ಕೊರತೆಯ ಸಮಸ್ಯೆಯು ಆಂಧ್ರಪ್ರದೇಶಕ್ಕೆ ಹೋಲಿಸಿದರೆ ತೀವ್ರವಾಗೇನೂ ಇಲ್ಲ. ಇಲ್ಲಿ ಕೆಲವು ದಿನ ಕಾದರೆ ಹಣ ದೊರಕುತ್ತದೆ. ಅಲ್ಲಿ ಹಲವು ದಿನ ಕಾದರೂ ಹಣ ದೊರಕದ ಸನ್ನಿವೇಶ ನಿರ್ಮಾಣವಾಗಿದೆ’ ಎಂದು ಹೇಳಿದರು.

ಜನರ ಪರದಾಟ: ಹಣದ ಕೊರತೆಯ ಕುರಿತು ಸ್ಪಷ್ಟ ಕಾರಣ ಎಲ್ಲೂ ದೊರಕದೇ ಇರುವುದರಿಂದ ಗ್ರಾಹಕರು ಎಟಿಎಂ ಸಿಬ್ಬಂದಿಗಳ ಮೇಲೂ ರೇಗಾಡುವ ಸನ್ನಿವೇಶಗಳು ಕಂಡುಬರುತ್ತಿವೆ.  ‘ದುಡ್ಡಿಲ್ಲದಿದ್ದರೆ ನಾವೇನೂ ಮಾಡಲು ಸಾಧ್ಯ. ಆದರೆ ಗ್ರಾಹಕರು ಮಾತ್ರ ನಮ್ಮನ್ನು ದೂರುತ್ತಾರೆ’ ಎಂದು ಎಟಿಎಂ ಸಿಬ್ಬಂದಿ ಅಳಲುತೋಡಿಕೊಂಡರು.

ಜನವರಿ 4ರಿಂದಲೂ ಕೊರತೆ...

‘ಜಿಲ್ಲೆಯ ಎಟಿಎಂಗಳಲ್ಲಿ ಹಣದ ಕೊರತೆ ಜ.4ರಿಂದ ಏರ್ಪಟ್ಟಿದೆ. ಬ್ಯಾಂಕುಗಳು ಅಂದಿನಿಂದ ಎಟಿಎಂಗಳಿಗೆ ಭರ್ತಿ ಮಾಡಲು ಗುತ್ತಿಗೆ ಸಂಸ್ಥೆಗಳಿಗೆ ಹಣವನ್ನು ನಿಯಮಿತವಾಗಿ ಮತ್ತು ಮುಂಚಿನ ರೀತಿಯಲ್ಲಿ ಪೂರೈಸುತ್ತಿಲ್ಲ’ ಎನ್ನುತ್ತಾರೆ ಸಂಸ್ಥೆಯೊಂದರ ವ್ಯವಸ್ಥಾಪಕರು.

‘ಜಿಲ್ಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಬ್ಯಾಂಕ್‌ಗಳಿಂದ ಹಣ ಪಡೆದು ಎಟಿಎಂಗಳಿಗೆ ಭರ್ತಿ ಮಾಡುವ ಹತ್ತು ಸಂಸ್ಥೆಗಳಿವೆ. ಲಾಜಿ ಕ್ಯಾಶ್‌, ಸೆಕ್ಯೂರ್‌ ವ್ಯಾಲ್ಯು ಮತ್ತು, ಬ್ರಿಂಗ್ಸ್‌, ರೈಟರ್ಸ್‌, ಸಿಎಂಎಸ್‌ ಇನ್‌ಫೋ ಸಿಸ್ಟಮ್ಸ್ ಸೇರಿದಂತೆ ಸಂಸ್ಥೆಗಳಿಗೆ ಬ್ಯಾಂಕ್‌ಗಳ ಅಧಿಕಾರಿಗಳು ಶಾಖೆಯಲ್ಲಿ ಸದ್ಯಕ್ಕೆ ಹಣ ಇಲ್ಲ ಎಂದಷ್ಟೇ ಹೇಳಿ ವಾಪಸ್‌ ಕಳಿಸುತ್ತಿದ್ದಾರೆ’ ಎಂದರು.

ಅಲೆದಾಡಿ ಹಣ ಪಡೆಯಬೇಕೇ?

‘ತುರ್ತಾಗಿ ಹತ್ತು ಸಾವಿರ ರೂಪಾಯಿ ಬೇಕಾಗಿತ್ತು. ನಗರದಲ್ಲಿ ಸುಮಾರು ಅರ್ಧ ಗಂಟೆ ಕಾಲ ಐದಕ್ಕೂ ಹೆಚ್ಚು ಎಟಿಎಂಗಳಿಗೆ ಭೇಟಿ ನೀಡಿದ್ದೆ. ಎಲ್ಲಿಯೂ ಹಣವಿರಲಿಲ್ಲ. ಯಾರೋ ಪುಣ್ಯಾತ್ಮರು ಎಚ್‌ಡಿಎಫ್‌ಸಿ ಎಟಿಎಂನಲ್ಲಿ ಇದೆ ಎಂದರು. ಅಲ್ಲಿಗೆ ಧಾವಿಸಿದರೆ ದೊಡ್ಡ ಸಾಲು ಇತ್ತು. ಕೊನೆಗೂ ಹಣ ಸಿಕ್ಕಿತು. ಆದರೆ ಇಂಥ ಪರದಾಟ ನಮಗೇಕೆ?’ ಎಂದು ನಗರದ ಖಾಸಗಿ ಸಂಸ್ಥೆಯೊಂದರ ಉದ್ಯೋಗಿ ಪ್ರವೀಣ್‌ಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದರು.

**

ಬ್ಯಾಂಕ್‌, ಎಟಿಎಂಗಳಲ್ಲಿ ಹಣ ಪಡೆದ ಗ್ರಾಹಕರು ಅದೇಕೋ ಮರುಪಾವತಿ ಮಾಡುತ್ತಿಲ್ಲ. ಅದೂ ಕೂಡ ಹಣದ ಕೊರತೆಗೆ ಕಾರಣ

– ಮಧುಸೂದನ ರೆಡ್ಡಿ, ಎಸ್‌ಬಿಐ ದಾವಣಗೆರೆ ಆಡಳಿತ ಕಚೇರಿಯ ಉಪಪ್ರಧಾನ ವ್ಯವಸ್ಥಾಪಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry