ಭುವನೇಶ್ವರಿ ಅಮ್ಮನ ಸಂಭ್ರಮದ ರಥೋತ್ಸವ

7
ಜಾತ್ರೆಗೆ ಮೆರುಗು ನೀಡಿದ ವಿವಿಧ ಜನಪದ ಕಲಾ ತಂಡಗಳು

ಭುವನೇಶ್ವರಿ ಅಮ್ಮನ ಸಂಭ್ರಮದ ರಥೋತ್ಸವ

Published:
Updated:

ಚಿಂತಾಮಣಿ: ತಾಲ್ಲೂಕಿನ ಕಸಬಾ ಹೋಬಳಿಯ ಕುರುಬೂರಿನಲ್ಲಿ ಅನಾದಿ ಕಾಲದಿಂದ ನೆಲೆಸಿರುವ ಭುವನೇಶ್ವರಿ ಅಮ್ಮನವರ ರಥೋತ್ಸವವು ಅಪಾರ ಭಕ್ತರ ಸಮ್ಮುಖದಲ್ಲಿ ಸೋಮವಾರ ಸಡಗರ ಸಂಭ್ರಮದಿಂದ ನಡೆಯಿತು.

ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಆರಾಧ್ಯ ದೈವ ಎಂದು ಪ್ರಸಿದ್ಧಿಯಾಗಿರುವ ಭುವನೇಶ್ವರಿ ಅಮ್ಮನವರಿಗೆ ವಿಶೇಷ ಹೂವಿನ ಅಲಂಕಾರ, ಪೂಜೆ, ಅಭಿಷೇಕ, ಹೋಮ, ಹವನ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ನೆರವೇರಿದವು.

ದೇವಾಲಯದಲ್ಲಿ ಎಲ್ಲ ಪೂಜಾ ವಿದಿ ವಿಧಾನಗಳನ್ನು ಪೂರೈಸಿದ ನಂತರ ಅಮ್ಮನವರ ಉತ್ಸವ ಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ತೆಗೆದು

ಕೊಂಡು ಬಂದು ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ರಥದಲ್ಲಿ ಅರ್ಚಕರು ಮತ್ತೊಮ್ಮೆ ಅಲಂಕಾರ, ಪೂಜೆ ನೆರವೇರಿಸಿದರು. ಮುಖಂಡರು ಮಧ್ಯಾಹ್ನ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

ಸಾವಿರಾರು ಭಕ್ತರು ತೇರನ್ನು ಎಳೆದು ಪುನೀತರಾದರು. ತೇರಿಗೆ ಬಾಳೆಹಣ್ಣು, ದವನವನ್ನು ಅರ್ಪಿಸಿದರು. ದೇವಾಲಯದ ಸುತ್ತ, ಹಾಗೂ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ತೇರು ಸಂಚರಿಸಿತು. ಭಕ್ತರು ತೇರಿನಲ್ಲಿರುವ ಅಮ್ಮನವರಿಗೆ ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಮೆರವಣಿಗೆಯಲ್ಲಿ ವಿವಿಧ ಜನಪದ ಕಲಾ ತಂಡಗಳು ಭಾಗವಹಿಸಿದ್ದು, ಜಾತ್ರೆಗೆ ಮೆರುಗು ನೀಡಿದವು. ಭಕ್ತರಿಗೆ ಬಿಸಿಲಿನ ದಗೆಯನ್ನು ತಣಿಸಲು ಸುತ್ತಮುತ್ತಲಿನ ಗ್ರಾಮಗಳ ಜನರು ಪಾನಕ, ಮಜ್ಜಿಗೆ, ಕೋಸುಂಬರಿ ವಿತರಿಸಿದರು. ಭಕ್ತರಿಗೆ ಅನ್ನದಾಸೋಹವನ್ನು ಏರ್ಪಡಿಸಲಾಗಿತ್ತು.

ಸಾವಿರಾರು ಜನರು ಭಾಗವಹಿಸಿದ್ದರಿಂದ ಮಕ್ಕಳ ಆಟಿಕೆಗಳ ಹಾಗೂ ಬರುಗು–ಬತ್ತಾಸು ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ ನಡೆಯಿತು. ರಥೋತ್ಸವದ ಧಾರ್ಮಿಕ ಕಾರ್ಯಕ್ರಮಗಳು 21ರಂದು ಕೊನೆಗೊಳ್ಳುತ್ತವೆ. ಪ್ರತಿನಿತ್ಯ ಒಂದೊಂದು ವಿಶೇಷ ಉತ್ಸವ ನಡೆಯುತ್ತಿದೆ. ಕೊನೆಯ ದಿನ ಬೆಟ್ಟದ ಮೇಲೆ ಅಮ್ಮನವರಿಗೆ ಆರತಿ ಮತ್ತು ದೀಪೋತ್ಸವದೊಂದಿಗೆ ರಥೋತ್ಸವ ಕಾರ್ಯಕ್ರಮದೊಂದಿಗೆ ಮುಕ್ತಾಯವಾಗುತ್ತವೆ ಎಂದು ಅರ್ಚಕರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry