ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣಕ್ಕಾಗಿ ಧರ್ಮ ಒಡೆಯುತ್ತಿರುವ ಸಿ.ಎಂ.

ತರಬೇತಿ ಕಾರ್ಯಾಗಾರದಲ್ಲಿ ಬಿಜೆಪಿ ಮಾಧ್ಯಮ ರಾಜ್ಯ ಸಹ ವಕ್ತಾರ ಅನ್ವರ್ ಮಾಣಿಪ್ಪಾಡಿ ಆರೋಪ
Last Updated 21 ಮಾರ್ಚ್ 2018, 8:56 IST
ಅಕ್ಷರ ಗಾತ್ರ

ಚಿತ್ರದುರ್ಗ: ಮತ ಬ್ಯಾಂಕ್ ರಾಜ ಕಾರಣಕ್ಕಾಗಿ ಧರ್ಮ ಒಡೆಯುವಂಥ ಕೆಲಸವನ್ನು ಈವರೆಗೂ ರಾಜ್ಯದ ಯಾವ ಮುಖ್ಯಮಂತ್ರಿಯೂ ಮಾಡಿಲ್ಲ ಎಂದು ಬಿಜೆಪಿ ಮಾಧ್ಯಮ ರಾಜ್ಯ ಸಹ ವಕ್ತಾರ ಅನ್ವರ್ ಮಾಣಿಪ್ಪಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಚಿತ್ರದುರ್ಗ– ದಾವಣಗೆರೆ ವಿಭಾಗದ ಬಿಜೆಪಿಯ ಮಾಧ್ಯಮ ಪ್ರಮುಖರಿಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಧರ್ಮ ಸ್ಥಾಪನೆ ಮತ್ತು ವಿಂಗಡನೆ ಸರ್ಕಾರದ ಕೆಲಸವಲ್ಲ. ಅದನ್ನು ಆಯಾ ಧರ್ಮದ ಗುರುಗಳು, ಮಠಗಳ ಸ್ವಾಮೀಜಿಗಳು ಮಾಡುತ್ತಾರೆ. ಆದರೆ, ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯಬೇಕಾದ ಸರ್ಕಾರ ಧರ್ಮ ವಿಂಗಡನೆ ಮಾಡುತ್ತಿದೆ. ಇದರ ಪರಿಣಾಮದ ಬಗ್ಗೆ
ಬಹುಶಃ ಸರ್ಕಾರ ನಡೆಸುವವರಿಗೆ ಅರಿವಿದ್ದಂತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

’ಬ್ರಿಟಿಷರು ದೇಶವನ್ನು ಒಡೆದು ಆಳಿದ ರೀತಿಯಲ್ಲಿ ಸಿದ್ದರಾಮಯ್ಯ ಲಿಂಗಾಯತರು–ವೀರಶೈವರನ್ನು ಪ್ರತ್ಯೇಕ ಎಂದು ಹೇಳುತ್ತ ಗೊಂದಲ ಸೃಷ್ಟಿಸುತ್ತಿದ್ದಾರೆ. ಸಿದ್ದಗಂಗಾ ಮಠದ ಸ್ವಾಮೀಜಿಗಳೇ ಧರ್ಮ ವಿಂಗಡನೆಯಾಗಬಾರದು ಎಂದು ಹೇಳಿದ್ದಾರೆ. ಅವರ ಮಾತಿಗೂ ಮನ್ನಣೆ ಕೊಡದೇ ಒಡೆದು ಆಳುವ ಕೆಲಸ ಮಾಡುತ್ತಿದ್ದಾರೆ. ‘ಲಿಂಗಾಯತರೆಲ್ಲ ಬಿಜೆಪಿಗೆ ಮತ ಹಾಕುತ್ತಾರೆ, ಚುನಾವಣೆಯಲ್ಲಿ ಸೋಲುತ್ತೇವೆ’ ಎಂಬ ಭಯದಿಂದ ಹೀಗೆ ಮಾಡುತ್ತಿದ್ದಾರೆ’ ಎಂದು ದೂರಿದರು.

‘ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ಕೇಂದ್ರಕ್ಕೆ ಶಿಫಾರಸು ಮಾಡಲು ಹೊರಟಿರುವುದಕ್ಕೆ ಲಿಂಗಾಯತ-ವೀರಶೈವರಲ್ಲಿಯೇ ವಿರೋಧವಿದೆ. ಕೆಲವು ನಾಯಕರು ಅಧಿಕಾರದ ಆಸೆಗಾಗಿ ಇಂಥ ಕುತಂತ್ರ ಮಾಡುತ್ತಿದ್ದಾರೆ. ಇಂಥ ಬೆಳವಣಿಗೆಯಿಂದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂಪ್ಪ 150 ಸೀಟು ಗೆಲ್ಲುವುದಾಗಿ ಹೇಳಿದ್ದರು. ಈ ಘಟನೆಯ ನಂತರ ಬಿಜೆಪಿ 170 ಸ್ಥಾನಗಳನ್ನು ಗೆಲ್ಲಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಧ್ಯಮ ಕಾರ್ಯಾಗಾರ: ‘ಪಕ್ಷದ ಉದ್ದೇಶಗಳನ್ನು ಮತದಾರರಿಗೆ, ಮತದಾರರ ಸಮಸ್ಯೆಗಳನ್ನು ಪಕ್ಷಕ್ಕೆ ಪರಿಣಾಮಕಾರಿಯಾಗಿ ತಲುಪಿಸುವುದು, ಚುನಾವಣೆ ಸಮಯದಲ್ಲಿ ಮಾಧ್ಯಮದೊಂದಿಗೆ ಉತ್ತಮ ಬಾಂಧವ್ಯ ಬೆಳೆಸುವುದರ ಕುರಿತು ಮಾಧ್ಯಮ ವಿಭಾಗದ ಪ್ರಮುಖರಿಗೆ ತರಬೇತಿ ನೀಡಲು ಈ ಕಾರ್ಯಾಗಾರವನ್ನು ಆಯೋಜಿಸಿದ್ದೇವೆ. ರಾಜ್ಯದಲ್ಲಿ 9 ವಲಯಗಳನ್ನು ಮಾಡಲಾಗಿದೆ. ಚಿತ್ರದುರ್ಗ-ದಾವಣಗೆರೆ ಸೇರಿ ಒಂದು ವಲಯವಾಗಿದೆ. ಮಾಧ್ಯಮ ಪ್ರಮುಖರು ಯಾವುದೋ ಗೊಂದಲಗಳಾಗದಂತೆ ಪಕ್ಷ ಮತ್ತು ಜನರ ನಡುವೆ ಸಂವಹನ ಸಾಧಿಸಬೇಕು’ ಎಂದು ಮನವಿ ಮಾಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ನವೀನ್ ಮಾತನಾಡಿ,  ‘ಜನಸಂಘದಿಂದಲೂ ಮಾಧ್ಯಮಕ್ಕೆ ಪ್ರಾತಿನಿಧ್ಯ ಕೊಡುವ ರಾಜಕೀಯ ಪಕ್ಷ ನಮ್ಮದು. ಈ ಕಾರ್ಯಾಗಾರದಿಂದ ಒಂದು ರೀತಿ ವ್ಯಕ್ತಿತ್ವ ವಿಕಸನವಾಗುತ್ತದೆ’ ಎಂದರು.

‘ಚುನಾವಣೆ ವೇಳೆ ದೃಶ್ಯ ಹಾಗೂ ಮುದ್ರಣ ಮಾಧ್ಯಮವನ್ನು ಹೇಗೆ ಬಳಸಿಕೊಳ್ಳಬೇಕು ಎಂದು ಬಿಜೆಪಿ ಮಾಧ್ಯಮ ಕಾರ್ಯಕರ್ತರಿಗೆ ತಿಳಿಸುವುದು ಈ ಕಾರ್ಯಾಗಾರದ ಉದ್ದೇಶ. ಈಗಾಗಲೇ ಮಾಧ್ಯಮದ ಮೂಲಕವೇ ದೇಶದ 21 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಈಗ ಬರುವ ಚುನಾವಣೆಯಲ್ಲೂ ಪರಿಣಾಮಕಾರಿಯಾಗಿ ಮಾಹಿತಿ ವಿನಿಮಯ ಮಾಡಿಕೊಳ್ಳುವ ವಿಧಾನ ತಿಳಿಸಲು ಈ ಕಾರ್ಯಾಗಾರ ಆಯೋಜಿಸಲಾಗಿದೆ’ ಎಂದರು.

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಸಹ ಪ್ರಭಾರ ಜಿ.ಎಂ.ಸುರೇಶ್, ಮಾಧ್ಯಮ ವಕ್ತಾರರಾದ ದಗ್ಗೆ ಶಿವಪ್ರಕಾಶ್, ನಾಗರಾಜ ಬೇಂದ್ರೆ, ದಾವಣಗೆರೆಯ ಮಾಧ್ಯಮ ವಕ್ತಾರ ಕೊಂಡಜ್ಜಿ ಜಯಪ್ರಕಾಶ್, ನಗರ ಮಂಡಲ ಅಧ್ಯಕ್ಷ ಪಿ.ಲೀಲಾಧರ ಠಾಕೂರ್ ವೇದಿಕೆಯಲ್ಲಿದ್ದರು. ದಾವಣಗೆರೆಯ ಮಾಧ್ಯಮ ವಕ್ತಾರ ಧನುಷ್‌ ರೆಡ್ಡಿ, ಪ್ರಧಾನ ಕಾರ್ಯದರ್ಶಿಗಳಾದ ರತ್ನಮ್ಮ, ಮಲ್ಲಿಕಾರ್ಜುನ್, ಸಹ ವಕ್ತಾರ ಗೌತಮ್‌ ಜೈನ್, ಡಿ.ಎಂ.ತಿಪ್ಪೇಸ್ವಾಮಿ, ಕೇಶವಮೂರ್ತಿ, ದಿನೇಶ್‌ರೆಡ್ಡಿ, ನಾಗೇಶ್, ಚಿತ್ರರವಿ, ಬಿ.ಜಿ.ಗಿರೀಶ್‌ಕುಮಾರ್, ದಿಲೀಪ್‌ಕುಮಾರ್, ಶಂಭು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT