ಪಾರ್ಕಿಂಗೇ ಪ್ರಾಬ್ಲಮ್ಮು

7
ಗಾಯಕಿ ಶಮಿತಾ ಮಲ್ನಾಡ್

ಪಾರ್ಕಿಂಗೇ ಪ್ರಾಬ್ಲಮ್ಮು

Published:
Updated:
ಪಾರ್ಕಿಂಗೇ ಪ್ರಾಬ್ಲಮ್ಮು

ನನಗೆ ಹತ್ತೊಂಬತ್ತು ವರ್ಷವಿದ್ದಾಗ ಮೊದಲ ಬಾರಿ ಸ್ಟೀರಿಂಗ್ ಹಿಡಿದಿದ್ದು. ಕಾರು ಕಲಿಯಲು ಡ್ರೈವಿಂಗ್‌ ಸ್ಕೂಲ್‌ಗೆ ಹೋಗಿದ್ದೆ.  ಅಷ್ಟೇ ಸಾಕಾಗಲ್ಲ ಅಂತ ಸ್ಪೆಷಲ್‌ ಕ್ಲಾಸ್‌ಗೂ ಹೋಗುತ್ತಿದ್ದೆ. ಆದರೂ ಒಬ್ಬಳೇ ಕಾರನ್ನು ರಸ್ತೆಗೆ ತರಲು ಮೂರು ತಿಂಗಳು ತೆಗೆದುಕೊಂಡಿದ್ದೇನೆ.

ಡ್ರೈವಿಂಗ್‌ ಕ್ಲಾಸಿಗೆ ಹೋಗುವುದರಿಂದ ಅಕ್ಸಲರೇಟರ್, ಬ್ರೇಕ್, ಕ್ಲಚ್, ಗಿಯರ್ ಎಲ್ಲದರ ಪರಿಚಯ ಆಗುವುದರ ಜೊತೆಗೆ ರಸ್ತೆ ನಿಯಮಗಳೂ ತಿಳಿಯುತ್ತವೆ. ಆದರೆ ನಿಯಮಗಳಷ್ಟೇ ಸಾಲುವುದಿಲ್ಲವಲ್ಲ, ಜೊತೆಗೆ ಧೈರ್ಯವೂ ಬೇಕು. ಅಲ್ಲಿ ಎಷ್ಟೇ ಕಲಿತರೂ ‌ರಸ್ತೆ ಮೇಲೆ ಕಾರು ತರಲು ಭಯ ಇದ್ದೇ ಇರುತ್ತದೆ.

ಡ್ರೈವಿಂಗ್‌ ಲೈಸೆನ್ಸೇನೋ ಸಿಕ್ಕಿತು. ಆದರೆ ಯಾವ ಗೇರ್‌ ಬಳಸಬೇಕು ಎಂಬುದೇ ನನಗೆ ಗೊಂದಲ. ಫಸ್ಟ್‌, ಸೆಕೆಂಡ್‌ ಯಾವ ಗೇರ್‌ನಲ್ಲಿ ಇದ್ದೇನೆ ಎಂಬುದೇ ತಿಳಿಯುತ್ತಿರಲಿಲ್ಲ.

ಕಾರು ಓಡಿಸಲು ಕಲಿತ ಪ್ರಾರಂಭದಲ್ಲಿ ಅಪ್ಪ, ತಮ್ಮ ಯಾರಾದರೂ ಜೊತೆಗೆ ಇರುತ್ತಿದ್ದರು. ನನ್ನ ಸಂಬಂಧಿಯೊಬ್ಬ ಬಿಡುವು ಇದ್ದಾಗ ಡ್ರೈವಿಂಗ್‌ ಹೇಳಿಕೊಡಲು ಬರುತ್ತಿದ್ದ. ಅವನಿಂದಲೇ ನಾನು ಡ್ರೈವಿಂಗ್‌ ಸರಿಯಾಗಿ ಕಲಿತಿದ್ದು. ಮುಂಜಾನೆ ಸಮಯ ಖಾಲಿ ರೋಡಿನಲ್ಲಿ ಆರಾಮಾಗಿ ಓಡಿಸುತ್ತಿದ್ದೆ. ಆದರೆ ಹೆಚ್ಚು ಜನವಿರುವ ಸ್ಥಳದಲ್ಲಿ ಕಾರು ಓಡಿಸಬೇಕು ಎಂದರೆ ಕೈಕಾಲುಗಳು ನಡುಗುತ್ತಿದ್ದವು.

ಕಾರಿನ ಪಕ್ಕದಲ್ಲಿ ಯಾವುದಾ ದರೂ ಗಾಡಿ ಇದ್ದರೂ ನನಗೆ ಧೈರ್ಯವಿರುತ್ತಿರಲಿಲ್ಲ. ಎಷ್ಟೋ ಸಮಯ ಟ್ರಾಫಿಕ್‌ನಲ್ಲಿ ನನ್ನ ಪೇಚಾಟ ಕಂಡು ನನ್ನ ಪಕ್ಕದ ಸೀಟ್‌ ನಲ್ಲಿರುವವರು, ನಾನೇ ಡ್ರೈವ್‌ ಮಾಡುತ್ತೇನೆ ಎಂದು ನನ್ನ ಸೀಟಿಗೆ ಬಂದಿದ್ದ ಸಂದರ್ಭಗಳೂ ಇವೆ.

ಸಂಗೀತ  ಕಾರ್ಯಕ್ರಮ ವೊಂದಕ್ಕೆ ಮೊದಲ ಬಾರಿ ಒಬ್ಬಳೇ ಕಾರು ತೆಗೆದುಕೊಂಡು ಹೋಗಲು ನಿರ್ಧರಿಸಿದೆ. ಸ್ಟಾರ್ಟ್ ಮಾಡಿದ ತಕ್ಷಣ ಕೈಯಲ್ಲಿ ನಡುಕ ಶುರುವಾಗಿತ್ತು. ಅಕ್ಕಪಕ್ಕದಲ್ಲಿ ಬರುವ ಗಾಡಿ ಎಲ್ಲಿ ಗುದ್ದಿ ಬಿಡುತ್ತದೆಯೋ ಎಂದು ಸ್ವಲ್ಪ ಓಲಾಡುವಂತೆಯೇ ಕಾರು ಓಡಿಸಿದೆ. ಎದೆ ಢವಢವ ಎನ್ನುತ್ತಿತ್ತು. ನಿಧಾನವಾಗಿ ಓಡಿಸಿ ಕೊಂಡು ಹೋಗುತ್ತಿದ್ದೆ. ಅಂತೂ ಇಂತೂ ಅಂದುಕೊಂಡ ಜಾಗಕ್ಕೆ ಬಂದಾಗ ಉಸ್ಸಪ್ಪ ಎಂದು ನಿಟ್ಟುಸಿರು ಬಿಟ್ಟಿದ್ದೆ. ಈ ಸಮಸ್ಯೆಯನ್ನು ಸಾಕಷ್ಟು ಬಾರಿ ಎದುರಿಸಿದ್ದೇನೆ ಬಿಡಿ.

ಕಾರು ಓಡಿಸುವುದಷ್ಟೇ ಅಲ್ಲ, ಅದನ್ನು ಪಾರ್ಕ್‌ ಮಾಡು ವುದೂ ನನಗೆ ದೊಡ್ಡ ಸಮಸ್ಯೆ. ಭಯದಲ್ಲಿಯೇ ಕಾರು ಡ್ರೈವ್‌ ಮಾಡಿಕೊಂಡು ಹೇಗೊ ಅಂದುಕೊಂಡ ಸ್ಥಳ ತಲುಪಿದ ಮೇಲೆ ಕಾರು ನಿಲ್ಲಿಸುವುದು ದೊಡ್ಡ ತಲೆನೋವಾಗುತ್ತಿತ್ತು. ತುಂಬಾ ಜಾಗ ಇದ್ದರೆ ಹೇಗೊ ಪಾರ್ಕ್‌ ಮಾಡಿಬಿಡುತ್ತಿದ್ದೆ. ಇಲ್ಲದಿದ್ದರೆ ಹಿಂದೆ, ಮುಂದೆ ಮಾಡಿ ಅದನ್ನು ನಿಲ್ಲಿಸುವಷ್ಟರಲ್ಲಿ ಸಾಕಾಗಿ ಹೋಗುತ್ತಿತ್ತು. ಅದಕ್ಕೇ ಎಷ್ಟೋ ಸಮಯ ತೆಗೆದುಕೊಳ್ಳುತ್ತಿದ್ದೆ. ಕಾರು ಕಲಿಯುವ ಪ್ರಾರಂಭದಲ್ಲಿ ಅದನ್ನು ಓಡಿಸುವುದು ಒಂದು ರೀತಿ ಮಜಾ.

ಮನಸ್ಸಿನಲ್ಲಿ ಭಯದ ಜೊತೆಗೆ ಖುಷಿಯೂ ಇರುತ್ತದೆ. ನಂತರದಲ್ಲಿ ಈ ಟ್ರಾಫಿಕ್‌ ಕಿರಿಕಿರಿಯಿಂದ ಬೋರ್‌ ಎನಿಸಲು ಶುರುವಾಯಿತು. ಮಳೆ, ಒಳ್ಳೆಯ ವಾತಾವರಣ ಇದ್ದಾಗ ಡ್ರೈವಿಂಗ್‌ ಎಂಜಾಯ್‌ ಮಾಡುತ್ತೇನೆ. ಸಂಗೀತ ಕಾರ್ಯಕ್ರಮ ನೀಡುವ ಕಾರಣಕ್ಕೆ ಊರೂರು ಸುತ್ತುವುದು ಇದ್ದೇ ಇದೆ. ಆಗೆಲ್ಲ ಡ್ರೈವಿಂಗ್‌ ಮಾಡಿಕೊಂಡು ಹೋಗುವುದು ಖುಷಿ ಎನಿಸುತ್ತದೆ. ಕಾರಿನಲ್ಲಿ ಕೂತು ಸುತ್ತಲಿನ ಪರಿಸರ ಕಣ್ತುಂಬಿಕೊಳ್ಳುವುದು ನನಗೆ ಇಷ್ಟ.

ಅಪ್ಪನ ಓಮ್ನಿಯಲ್ಲಿ ನಾನು ಡ್ರೈವಿಂಗ್‌ ಕಲಿತಿದ್ದು. ಸ್ವತಂತ್ರವಾಗಿ ಓಡಿಸುವುದನ್ನು ಕಲಿತ ಮೇಲೆ ಮಾರುತಿ 800 ತೆಗೆದುಕೊಂಡೆ. ಈಗ ಆ ಕಾರನ್ನು ಓಡಿಸಲು ಅಷ್ಟು ಕಷ್ಟಪಟ್ಟಿದ್ದನ್ನು ನೆನಪಿಸಿಕೊಂಡರೆ ನಗು ಬರುತ್ತದೆ. ಅದೇ ಕಾರನ್ನು ಈಗ ಸಲೀಸಾಗಿ ಓಡಿಸುತ್ತೇನೆ.

ನಾನು ರಸ್ತೆ ನಿಯಮವನ್ನು ಮೀರುವುದಿಲ್ಲ. ಕಾರು ಕಲಿತ ಪ್ರಾರಂಭದಲ್ಲಿ ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆ ಬಳಿ ಬಸ್‌ವೊಂದು ನನ್ನ ಕಾರಿಗೆ ಗುದ್ದಿತ್ತು. ಆ ಅಪಘಾತದಲ್ಲಿ ಆಶ್ಚರ್ಯವೆಂಬಂತೆ ಒಂದು ಚೂರೂ ಪೆಟ್ಟಾಗದೆ ಪಾರಾಗಿದ್ದೆ. ಆದರೆ ರಸ್ತೆಯಲ್ಲಿ ಹೋಗುತ್ತಿದ್ದ ಇಬ್ಬರಿಗೆ ಸ್ವಲ್ಪ ಗಾಯವಾಗಿತ್ತು. ಆ ಘಟನೆಯಲ್ಲಿ ನನ್ನ ತಪ್ಪಿರಲಿಲ್ಲ. ಆದರೆ ನಾನು ಸ್ವಲ್ಪ ಎಚ್ಚರವಹಿಸಿದರೆ ಆ ಅಪಘಾತ ತಪ್ಪಿಸಬಹುದಿತ್ತು. ನಾವು ಮಾಡುವ ತಪ್ಪಿನಿಂದ ನಮಗೆ ಮಾತ್ರವಲ್ಲದೇ ಬೇರೆಯವರಿಗೂ ತೊಂದರೆಯಾಗುತ್ತದೆ. ಹಾಗಾಗಿ ತುಂಬಾ ಹುಷಾರಾಗಿ ಗಾಡಿ ಓಡಿಸುತ್ತೇನೆ.

ಸದ್ಯ ನನ್ನ ಬಳಿ ಇನೋವಾ, ಐ20 ಕಾರುಗಳಿವೆ. ನನಗೆ ಕಾರ್‌ ಕ್ರೇಜ್‌ ಇಲ್ಲ. ಅದೊಂದು ಅಗತ್ಯ ಅಷ್ಟೆ. ಅದಕ್ಕಾಗಿ ತುಂಬ ದುಡ್ಡು ಕೊಟ್ಟು ಕೊಳ್ಳುವುದು ನನಗಿಷ್ಟವಿಲ್ಲ. ನನ್ನ ಮಗನಿಗೆ ಕಾರೆಂದರೆ ತುಂಬಾ ಇಷ್ಟ. ಅವನೇ ಈ ಕಾರು ಬೇಕು, ಆ ಕಾರು ಇಷ್ಟ ಎಂದು ಹಲವು ಕಾರುಗಳ ಹೆಸರುಗಳನ್ನು ಹೇಳುತ್ತಲೇ ಇರುತ್ತಾನೆ. ಸದ್ಯದಲ್ಲೇ ಐ20 ಕಾರು ಕೊಟ್ಟು ಹೊಸ ಕಾರು ತೆಗೆದುಕೊಳ್ಳುವ ಯೋಚನೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry