67 ಕೋಟಿ ವೆಚ್ಚದಲ್ಲಿ ಅಣೆಕಟ್ಟೆ ಅಭಿವೃದ್ಧಿ

7
ತಲಕಾಡಿನಲ್ಲಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರಿಂದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ

67 ಕೋಟಿ ವೆಚ್ಚದಲ್ಲಿ ಅಣೆಕಟ್ಟೆ ಅಭಿವೃದ್ಧಿ

Published:
Updated:

ಮೈಸೂರು: ಗಂಗರ ಕಾಲದ ಅರಸ ಮಾಧವ ಮಂತ್ರಿಯವರು 1140ರಲ್ಲಿ ತಲಕಾಡಿನ ಬಳಿ ಕಾವೇರಿ ನದಿಗೆ ಅಡ್ಡಲಾಗಿ 5 ಸಾವಿರ ಎಕರೆ ಭೂ ಪ್ರದೇಶಗಳಿಗೆ ನೀರಾವರಿಗೆ ಅನುಕೂಲವಾಗುವಂತೆ ಅಣೆಕಟ್ಟೆಯನ್ನು ನಿರ್ಮಿಸಿದ್ದರು. ಈ ಅಣೆಕಟ್ಟೆ ಮುಂದಿನ ದಿನಗಳಲ್ಲಿ ಉಪಯುಕ್ತವಾಗಲಿ ಎಂಬ ಉದ್ದೇಶದಿಂದ ₹ 67 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು.

ತಲಕಾಡಿನಲ್ಲಿ ಮಂಗಳವಾರ ಮಾಧವಮಂತ್ರಿ ಅಣೆಕಟ್ಟೆಗೆ ಅಭಿವೃದ್ಧಿ ಕಾಮಗಾರಿ ಶಿಲಾನ್ಯಾಸ, ಕಾವೇರಿಪುರದ ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಉದ್ಘಾಟನೆ, ತಲಕಾಡು –ಮಾಲಂಗಿ ಗ್ರಾಮದ ಮಧ್ಯೆ ಕಾವೇರಿ ನದಿಗೆ ಅಡ್ಡಲಾಗಿ ಪಾದಚಾರಿ ಮೇಲ್ಸೆತುವೆ ಶಂಕುಸ್ಥಾಪನೆ ಹಾಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

2013ರಲ್ಲಿ ಅಣೆಕಟ್ಟೆಗೆ 4 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬಂದಿತ್ತು. ಇದರಿಂದ ಅಣೆಕಟ್ಟೆ ಬಿರುಕು ಬಿಟ್ಟು ಶಿಥಿಲಗೊಂಡಿತ್ತು. ಇದಕ್ಕಾಗಿ ಅಭಿವೃದ್ಧಿ ಕೈಗೊಳ್ಳಲಾಗಿದೆ ಎಂದರು.

ಕಾವೇರಿಪುರದ ಬಳಿ ಕಾವೇರಿ ನದಿಗೆ ಅಡ್ಡಲಾಗಿ ₹ 50 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸಿದ್ದೇವೆ. ತಲಕಾಡು–ಮಾಲಂಗಿ ಗ್ರಾಮದ ಮಧ್ಯೆ ಕಾವೇರಿ ನದಿಗೆ ಅಡ್ಡಲಾಗಿ ಪಾದಚಾರಿ ಮೇಲ್ಸೆತುವೆ ನಿರ್ಮಾಣಕ್ಕೆ ₹ 38 ಕೋಟಿ, 30 ಹಾಸಿಗೆಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ನಿರ್ಮಾಣಕ್ಕೆ ₹ 8 ಕೋಟಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ತಲಕಾಡಿನಲ್ಲಿ ಐಟಿಐ, ಪದವಿ ಕಾಲೇಜು, ಮೊರಾರ್ಜಿ ದೇಸಾಯಿ ವಸತಿಶಾಲೆ, ಕೇಂದ್ರೀಯ ವಿದ್ಯಾಲಯ, ಹಾಸ್ಟೆಲು ಮಂಜೂರು ಮಾಡಲಾಗಿದೆ. ಮಹಿಳೆಯರಿಗೆ ಹಾಗೂ ರೈತರಿಗೆ ನೆರವಾಗಲು ಎಂಡಿಸಿಸಿ ಬ್ಯಾಂಕ್ ಶಾಖೆ ತೆರೆಯಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಯೀಮಾ ಸುಲ್ತಾನ, ಸದಸ್ಯ ಮಂಜುನಾಥ್, ತಿ.ನರಸೀಪುರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಆರ್.ಚೆಲುವರಾಜು, ತಿ.ನರಸೀಪುರ ಪುರಸಭೆ ಅಧ್ಯಕ್ಷ ಉಮೇಶ್, ತಿ.ನರಸೀಪುರ ವಸತಿ ಮತ್ತು ಜಾಗೃತಿ ಸಮಿತಿ ಅಧ್ಯಕ್ಷ ಸುನೀಲ್ ಬೋಸ್, ತಲಕಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಿ.ಎಚ್.ಕವಿತಾ, ವಿಜಯಕುಮಾರ್ ನಾಯಕ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry