ಚನ್ನಪಟ್ಟಣದಲ್ಲೂ ಸ್ಪರ್ಧೆ: ಎಚ್‌.ಡಿ.ಕುಮಾರಸ್ವಾಮಿ

7
ರಾಮನಗರ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಘೋಷಣೆ; ಅಭಿಮಾನಿಗಳ ವಿರೋಧ, ವಾಗ್ವಾದ

ಚನ್ನಪಟ್ಟಣದಲ್ಲೂ ಸ್ಪರ್ಧೆ: ಎಚ್‌.ಡಿ.ಕುಮಾರಸ್ವಾಮಿ

Published:
Updated:

ರಾಮನಗರ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಮನಗರದ ಜೊತೆ ಚನ್ನಪಟ್ಟಣದಿಂದಲೂ ತಾವೇ ಅಭ್ಯರ್ಥಿಯಾಗುವುದಾಗಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಬುಧವಾರ ಇಲ್ಲಿ ಕಾರ್ಯಕರ್ತರ ಎದುರು ಘೋಷಣೆ ಮಾಡಿದರು. ಇದಕ್ಕೆ ಕಾರ್ಯಕರ್ತರಿಂದ ವಿರೋಧವೂ ವ್ಯಕ್ತವಾಯಿತು.

ನಗರದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಬುಧವಾರ ಮಧ್ಯಾಹ್ನ ನಡೆದ ವಿಕಾಸ ಪರ್ವ ಸಮಾವೇಶ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಭಾವುಕ

ರಾಗಿ ಮಾತನಾಡಿದ ಎಚ್‌ಡಿಕೆ, ಆಗಾಗ್ಗೆ ಕಣ್ಣೀರು ಹಾಕುತ್ತಲೇ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ವಿಷಯವನ್ನು ಕಾರ್ಯಕರ್ತರ ಮುಂದೆ ಇಟ್ಟರು.

‘ನಮ್ಮ ಕುಟುಂಬದಿಂದ ಇಬ್ಬರೇ ನಿಲ್ಲುವುದು ಖಾತ್ರಿಯಾಗಿದೆ. ಹೀಗಾಗಿ ಚನ್ನಪಟ್ಟಣದಿಂದ ಅನಿತಾ ಸ್ಪರ್ಧಿಸುವುದಿಲ್ಲ. ಮತ್ತೊಂದೆಡೆ, ಕುಮಾರಸ್ವಾಮಿಗೆ ₹30 ಕೋಟಿ ಕೊಟ್ಟು ದುರ್ಬಲ ಅಭ್ಯರ್ಥಿ ಹಾಕಿಸಿಕೊಳ್ಳುತ್ತಿದ್ದೇನೆ ಎಂದೆಲ್ಲ ಸಿ.ಪಿ. ಯೋಗೇಶ್ವರ್‌ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಅವರ ದುರಂಹಕಾರ ಮಿತಿ ಮೀರಿದೆ. ತಕ್ಕ ಪಾಠ ಕಲಿಸಲಾದರೂ ನಾನು ಅಲ್ಲಿ ಚುನಾವಣೆಗೆ ನಿಲ್ಲಬೇಕಿದೆ. ನೀವೇ ಸ್ಪರ್ಧಿಸಿ ಎಂದು ಕಾರ್ಯಕರ್ತರೂ ಒತ್ತಡ ಹಾಕುತ್ತಿದ್ದಾರೆ’ ಎಂದರು.

ವಿರೋಧ: ಇದಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿದ ರಾಮನಗರ ಕಾರ್ಯಕರ್ತರು ‘ಇಲ್ಲಿ ನೀವು ಅರ್ಜಿ ಸಲ್ಲಿಸಿ ಹೋಗಿ. ನಿಮ್ಮನ್ನು ಗೆಲ್ಲಿಸುವುದು ನಮ್ಮ ಕರ್ತವ್ಯ. ಬೇಕಾದರೆ ಚನ್ನಪಟ್ಟಣದಲ್ಲಿ ಅನಿತಾ ಅವರನ್ನು ಕಣಕ್ಕಿಳಿಸಿ’ ಎಂದರು.

ಈ ಸಂದರ್ಭ ಸ್ಥಳದಲ್ಲೇ ಇದ್ದ ಚನ್ನಪಟ್ಟಣ ಕಾರ್ಯಕರ್ತರು ಹಾಗೂ ರಾಮನಗರ ಕಾರ್ಯಕರ್ತರ ನಡುವೆ ಮಾತಿನ ಚಕಮಕಿಯೂ ನಡೆಯಿತು.

‘ಹಿಂದೊಮ್ಮೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಅನುಮತಿ ನೀಡಿದ್ದೆವು. ಗೆಲುವು ಸಾಧಿಸಿದ ನಂತರ ಇಲ್ಲಿಗೆ ರಾಜೀನಾಮೆ ನೀಡಿ, ಕೆ.ರಾಜು ಅವರನ್ನು ಶಾಸಕರನ್ನಾಗಿ ಮಾಡಿದೆವು. ಆದರೆ, ಅವರೂ ಕೂಡ ಕೈಕೊಟ್ಟು ಹೋದರು. ಒಂದು ವೇಳೆ ಎರಡೂ ಕ್ಷೇತ್ರಗಳಲ್ಲಿ ಗೆಲವು ಸಾಧಿಸಿದರೆ ಯಾವುದಕ್ಕೆ ರಾಜೀನಾಮೆ ನೀಡುತ್ತೀರಿ ಎಂಬುದನ್ನು ಸ್ಪಷ್ಟಪಡಿಸಿ’ ಎಂದು ಪಟ್ಟು ಹಿಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ‘ಇನ್ನೂ ಎರಡು ದಿನ ಯೋಚಿಸಿ ಒಂದು ತೀರ್ಮಾನಕ್ಕೆ ಬನ್ನಿ’ ಎಂದು ಚರ್ಚೆಗೆ ತೆರೆ ಎಳೆದರು.

ಇತಿಹಾಸದ ಮೆಲುಕು: ರಾಜಕೀಯ ಪುನರ್ಜನ್ಮ ನೀಡಿದ ರಾಮನಗರದೊಂದಿನ ತಮ್ಮ ನಂಟನ್ನು ಎಚ್‌ಡಿಕೆ ತಮ್ಮ ಭಾಷಣದ ಉದ್ದಕ್ಕೂ ನೆನೆದರು.

‘ನಾನು ಮುಖ್ಯಮಂತ್ರಿ ಆಗಿದ್ದು ಈ ಮಣ್ಣಿನ ಶಕ್ತಿಯಿಂದ. ಅನುಭವ ಇಲ್ಲದಿದ್ದರೂ ಕೂಡ 20 ತಿಂಗಳು ಉತ್ತಮ ಆಡಳಿತ ನಡೆಸಿದ್ದೇನೆ. ಸದ್ಯ

ರಾಜ್ಯದಾದ್ಯಂತ ಜೆಡಿಎಸ್ ಪರ ಪ್ರಚಾರ ಕೈಗೊಂಡಿದ್ದು, ಭಾರಿ ಜನಬೆಂಬಲ ದೊರೆಯುತ್ತಿದೆ. 113 ಸ್ಥಾನ ಗಳಿಸಿಯೇ ತೀರುತ್ತೇನೆ’ ಎಂದರು.

‘ದೇವರಹಿಪ್ಪರಗಿ, ಕೆಸ್ತೂರು ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಅಲ್ಲಿನ ಜನ ಒತ್ತಡ ಹೇರಿದ್ದರು. ಆದರೆ ಇಲ್ಲಿನ ಜನರ ಒಪ್ಪಿಗೆಯಿಲ್ಲದೆ ನಾನು ಎಲ್ಲೂ ಹೋಗುವುದಿಲ್ಲ, ಇಲ್ಲಿಯೇ ಸ್ಪರ್ಧಿಸುತ್ತೇನೆ’ ಎಂದು ಸ್ಪಷ್ಟಪಡಿಸಿದರು.

ಬಾಲಕೃಷ್ಣಗೆ ತಿರುಗೇಟು; ‘ನಮ್ಮಿಂದ ಬೆಳೆದ ವ್ಯಕ್ತಿ ಅಧಿಕಾರದ ಮದದಿಂದ ಇಂದು ನಮ್ಮ ವಿರುದ್ಧವೇ ಮಾತಾಡುತ್ತಾನೆ. ದೇವೇಗೌಡ ಮಕ್ಕಳೇ ರಾಜಕಾರಣ ಮಾಡ್ಬೇಕೆ ಎಂದು ದುರಹಂಕಾರದಿಂದ ಹೇಳ್ತಾನೆ. ಜೆಡಿಎಸ್ ಎಲ್ಲಿದೆ ಎನ್ನುವ ಅವನ ಪ್ರಶ್ನೆಗೆ ಈ ಚುನಾವಣೆ ನಂತರ ಉತ್ತರ ನೀಡುತ್ತೇನೆ’ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಇದೇ 25ರಂದು ಮಾಗಡಿಯಲ್ಲಿ ವಿಕಾಸಪರ್ವ ಸಮಾ

ವೇಶ ನಡೆಯಲಿದ್ದು, 50 ಸಾವಿರಕಾರ್ಯ ಕರ್ತರು ಪಾಲ್ಗೊಳ್ಳುವುದಾಗಿ ಹೇಳಿದರು.

ಹಿರಿಯ ವಕೀಲ ಸುಬ್ಬಾಶಾಸ್ತ್ರಿ, ಮುಖಂಡರಾದ ಮರಿಲಿಂಗೇಗೌಡ, ನಾಗಮಂಗಲ ಶಿವರಾಮೇಗೌಡ ಮಾತನಾಡಿದರು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್‌ಕುಮಾರ್, ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್, ಮಾಗಡಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ.ಮಂಜು, ಅಶ್ವಥ್‌, ಉಮೇಶ್‌, ಪ್ರಾಣೇಶ್‌, ಶಿವಪ್ರಸಾದ್, ಎಚ್‌.ಸಿ. ರಾಜಣ್ಣ, ನಡಕವಾಗಿಲು ರಾಮಣ್ಣ, ಪುಟ್ಟರಾಮಯ್ಯ, ಶಕೀಲ್‌, ರಾಜಶೇಖರ್, ಜಯಕುಮಾರ್, ಅಜಯ್‌, ಕೃಷ್ಣ ವೇದಿಕೆಯಲ್ಲಿ ಇದ್ದರು.

**

ಡಿ.ಕೆ. ಸುರೇಶ್‌ ವಿರುದ್ಧ ವಾಗ್ದಾಳಿ

‘ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದಾಗಿ ಹಗಲು ಕನಸು ಕಾಣುತ್ತಿದ್ದಾರೆ ಎಂದು ಕೆಲವರು ಟೀಕೆ ಮಾಡುತ್ತಾರೆ. ನಾನಾಗಲೇ ಒಮ್ಮೆ ಮುಖ್ಯಮಂತ್ರಿ ಆಗಿದ್ದೇನೆ. ಆದರೆ ಅವರಂತೆ ಬಂಡೆ ಒಡೆದು, ಪ್ರಕೃತಿ ಸಂಪತ್ತನ್ನು ಲೂಟಿ ಮಾಡಿ, ಇನ್ನೊಬ್ಬರ ಆಸ್ತಿ ಕಬಳಿಸಿ ಶ್ರೀಮಂತನಾಗಿಲ್ಲ. ದಶಕಗಳ ಹಿಂದೆ ₹4.5 ಲಕ್ಷಕ್ಕೆ ಕೇತಗಾನಹಳ್ಳಿಯಲ್ಲಿ ಜಮೀನು ಖರೀದಿಸಿದ್ದು, ಅದನ್ನು ಬಿಟ್ಟರೆ ಜಿಲ್ಲೆಯಲ್ಲಿ ಯಾವುದೇ ಆಸ್ತಿ ಮಾಡಿಲ್ಲ’ ಎಂದು ತಿರುಗೇಟು ನೀಡಿದರು. ರಾಮನಗರ–ಚನ್ನಪಟ್ಟಣವನ್ನು ಅವಳಿ ನಗರವನ್ನಾಗಿ ಅಭಿವೃದ್ಧಿ ಮಾಡುವ ಕನಸು ಹೊಂದಿರುವುದಾಗಿ ಹೇಳಿದರು.

**

ಕಾಂಗ್ರೆಸ್‌ನಿಂದ ಹಣ ಹಂಚಿಕೆ

‘ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಲು ಹೊರಟಿರುವ ವ್ಯಕ್ತಿಯೊಬ್ಬರು ಹಣದ ಹೊಳೆ ಹರಿಸುತ್ತಿದ್ದಾರೆ.

ಅಕ್ರಮ ಗ್ರಾನೈಟ್‌ ದಂಧೆ ನಡೆಸಿ ಪ್ರಕೃತಿ ಸಂಪತ್ತನ್ನು ಲೂಟಿ ಮಾಡಿದ ಹಣವನ್ನು ತಂದು ಇಲ್ಲಿ ವ್ಯಯಿಸುತ್ತಿದ್ದಾರೆ. ಆದರೆ ಇಲ್ಲಿನ ಜನರು ಹಣಕ್ಕೆ ಮರುಳಾಗುವವರಲ್ಲ’ ಎಂದು ಎಚ್‌ಡಿಕೆ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry