‘ನಾನಿನ್ನೂ ಯಂಗ್‌’

7

‘ನಾನಿನ್ನೂ ಯಂಗ್‌’

Published:
Updated:
‘ನಾನಿನ್ನೂ ಯಂಗ್‌’

* ಸಂಯೋಜನೆಯಲ್ಲಿ ನಿಮ್ಮನ್ನು ಪ್ರಭಾವಿಸುವ ಅಂಶ ಏನು?

ನೃತ್ಯ ಮತ್ತು ಸಂಗೀತ. ಸಿನಿಮಾಗಳಲ್ಲಿ ನಟಿಮಣಿಯರ ನೃತ್ಯಗಳನ್ನು ನೋಡಿ ನೃತ್ಯ ಕಲಿಯಬೇಕೆಂದು ಆಸೆ ಪಟ್ಟೆ. ಬಳಿಕ ಸೋಹನ್‌ಲಾಲ್‌ ನೃತ್ಯ ನೋಡಿ ಅದರ ಕಡೆಗೆ ಆಕರ್ಷಿತಳಾದೆ. ಅದದ ಬಳಿಕ ನನ್ನೊಳಗಿನ ನೃತ್ಯದ ಕಡೆಗಿನ ಒಲವು ಅರ್ಥವಾಯಿತು. ಪಾಶ್ಚಾತ್ಯ ಸಂಗೀತ ಆಗಿರಲಿ, ಸಾಂಪ್ರದಾಯಿಕ ನೃತ್ಯ ಆಗಿರಲಿ ಎಲ್ಲವೂ ನನ್ನನ್ನು ಪ್ರಭಾವಿಸುತ್ತವೆ.

* 80ರ ದಶಕಕ್ಕೂ, ಈಗಿನ ನೃತ್ಯ ಸಂಯೋಜನೆಗೂ ಏನು ವ್ಯತ್ಯಾಸ?

ಮೊದಲು ನೃತ್ಯ ಅಂದಾಗ ದೇಶದ ಆಚಾರ, ಸಂಸ್ಕೃತಿ ವಿಚಾರಗಳನ್ನು ನೃತ್ಯದಲ್ಲೂ ತರಲು ಪ್ರಯತ್ನಿಸುತ್ತಿದ್ದೆವು. ಆದರೆ ಈಗ ಬರೀ ಪಾಶ್ಚಾತ್ಯ ನೃತ್ಯಗಳೇ ತುಂಬಿವೆ. ಸಾಂಪ್ರದಾಯಿಕ ನೃತ್ಯ ಪ್ರಕಾರಗಳಿಗೆ ಮೌಲ್ಯ ಕಡಿಮೆಯಾಗುತ್ತಿದೆ. ಮುಂಚೆ ಕೊರಿಯೋಗ್ರಫಿ ಅಂದ್ರೆ ಅದರಲ್ಲಿ ಅದ್ಭುತ ನೃತ್ಯಗಾರರು ಇರುತ್ತಿದ್ದರು. ಒಂದು ಹಾಡಿನ ಪ್ರತಿ ಕ್ಷಣವನ್ನು ನಾವು ಅನುಭವಿಸುತ್ತಾ ನೃತ್ಯ ಮಾಡುತ್ತಿದ್ದೆವು. ಆದರೆ ಈಗ ನೃತ್ಯ ಸರ್ಕಸ್‌ ಆಗಿದೆ.

* ಬಾಲಿವುಡ್‌ನಲ್ಲಿ ಈಚೆಗೆ ನೀವು ನೃತ್ಯ ಸಂಯೋಜನೆ ಮಾಡಿದ ಚಿತ್ರ?

ನಾನು ಮಾಡಿದ ಕೆಲಸ ನನಗೆ ನೆನಪಿರುವುದಿಲ್ಲ. ಈಚೆಗೆ ಸಂಜಯ್‌ ದತ್‌ ಅವರ ಸಿನಿಮಾ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದೇನೆ. ಹೆಸರು ನೆನಪಿಲ್ಲ.

* ನೆಚ್ಚಿನ ನಟ, ನಟಿಯರು ಯಾರು?

ಶ್ರೀದೇವಿ, ಮಾಧುರಿ ದೀಕ್ಷಿತ್‌ ನನಗಿಷ್ಟ. ತುಂಬ ಆರಾಮವಾಗಿ ಅವರ ಜೊತೆ ನೃತ್ಯ ಮಾಡಬಹುದು. ನನಗೆ ನೃತ್ಯ ಸಂಯೋಜನೆಗೆ ಹಾಡು ಮುಖ್ಯ. ನಿರ್ದೇಶಕರಿಗೆ, ಸಿನಿಮಾ ಕತೆಗೆ ತಕ್ಕಂತೆ ನೃತ್ಯ ಸಂಯೋಜನೆ ಮಾಡುತ್ತೇನೆ. ಹಾಗಾಗಿ ಎಲ್ಲರೂ ನನ್ನ ನೆಚ್ಚಿನವರೇ.

* ನೃತ್ಯ ಸಂಯೋಜಕನ ಸವಾಲು ಏನು?

ಸಿನಿಮಾದಲ್ಲಿ ಕೊರಿಯೋಗ್ರಾಫರ್‌ ಇಲ್ಲದೇ ನೃತ್ಯ ಮಾಡಲು ಸಾಧ್ಯವಿಲ್ಲ. ಅವರು ಮಾತಿನ ಸಹಾಯ ಇಲ್ಲದೇ ಆಂಗಿಕ ಅಭಿನಯ, ನೃತ್ಯದ ಮೂಲಕವೇ ಜನರಿಗೆ ಮಾತುಗಳನ್ನು ಮುಟ್ಟಿಸಬೇಕು. ಅದಕ್ಕೆ ಜನರು ಪ್ರತಿಕ್ರಿಯಿಸುವಂತಿರಬೇಕು. ನಿರ್ದೇಶಕರು ಹಾಡಿನ ಮೂಲಕ ನೀಡುವ ಸಂದೇಶವನ್ನು ಪ್ರೇಕ್ಷಕರಿಗೆ ದಾಟಿಸುವ ಕೆಲಸ ನೃತ್ಯ ಸಂಯೋಜಕನದ್ದು. ಅದರಲ್ಲಿ ಯಶಸ್ವಿಯಾಗುವುದೇ ಸವಾಲು.

* ನೃತ್ಯಗಾರರಿಗೆ ಡಾನ್ಸ್‌ ರಿಯಾಲಿಟಿ ಷೋಗಳು ಎಷ್ಟು ಸಹಾಯಕ?

ಆರಂಭದಲ್ಲಿ ರಿಯಾಲಿಟಿ ಷೋಗಳು ಅನನ್ಯತೆಯಿಂದ ಕೂಡಿತ್ತು. ಹೊಸ ಪ್ರತಿಭೆಗಳಿಗೆ ವೇದಿಕೆಯಾಗಿತ್ತು. ಕೆಲ ವರ್ಷಗಳಲ್ಲೇ ಅವುಗಳು ವ್ಯಾಪಾರ ಮಾರ್ಗಗಳಾದವು. ಈಗ ಮಕ್ಕಳ ಅಥವಾ ಬೇರೆ ಯಾವುದೇ ರಿಯಾಲಿಟಿ ಷೋ ಎಂದಾಗ ಅವುಗಳು ದುಡ್ಡು ಮಾಡುವ ಮಾರ್ಗ ಎಂಬಂತಾಗಿದೆ.  ರಿಯಾಲಿಟಿ ಷೋಗಳಲ್ಲೂ ವೈವಿಧ್ಯತೆಯೇ ಇಲ್ಲ

* ‘ಗರ’ ಸಿನಿಮಾ ನೃತ್ಯ ಸಂಯೋಜನೆ ಬಗ್ಗೆ ಹೇಳಿ

‘ಗರ’ ಸಿನಿಮಾದ ಕತೆ ತುಂಬ ಚೆನ್ನಾಗಿದೆ. ಹೀಗಾಗಿ ಕೇಳಿದ ಕೂಡಲೇ ನಾನು ಒಪ್ಪಿಕೊಂಡೆ. ಚಿತ್ರ ಬಿಡುಗಡೆಯಾದ ಬಳಿಕ ಚಿತ್ರ ನೋಡಿ ನನ್ನ ಕೊರಿಯೊಗ್ರಫಿ ಹೇಗಿದೆ ಎಂಬುದನ್ನು ನೀವೇ ನಿರ್ಧರಿಸಬೇಕು.

* ನಿಮ್ಮ ವಯಸ್ಸು 69. ನಿಮ್ಮ ಲವಲವಿಕೆಯ ರಹಸ್ಯ?

ನನ್ನ ಕೆಲಸಗಳ ಬಗ್ಗೆ ನನಗೆ ನೆನಪೇ ಇರುವುದಿಲ್ಲ. ಹಾಗಾಗಿ ಹೊಸ ಹಾಡಿನ ನೃತ್ಯ ಸಂಯೋಜನೆ ಅವಕಾಶ ಸಿಕ್ಕಿದಾಗ ನಾನು ಯಾವಾಗಲೂ ಹೊಸದರಂತೆ ಫೀಲ್‌ ಮಾಡುತ್ತೇನೆ. ನನ್ನನ್ನು ನಾನು ಯಾವಾಗಲೂ ಯಂಗ್‌ ಎಂದೇ ಭಾವಿಸುತ್ತನೆ. ಇದೇ ಉತ್ಸಾಹದ ರಹಸ್ಯ.

**

ಸರೋಜ್‌ ಖಾನ್‌ ಬಗ್ಗೆ

1950ರಲ್ಲಿ ಬಾಲಿವುಡ್‌ನ ಪ್ರಸಿದ್ಧ ನೃತ್ಯ ಸಂಯೋಜಕ ಬಿ. ಸೋಹನ್‌ಲಾಲ್‌ (ಗುರು, ಪತಿ) ಅವರ ಸಹಾಯಕಿಯಾಗಿ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ಸರೋಜ್‌ ಖಾನ್‌ರ ನಿಜ ಹೆಸರು ನಿರ್ಮಲಾ ನಾಗ್ಪಲ್‌. ಇವರು ಮೊದಲು ಸ್ವತಂತ್ರವಾಗಿ ಕೊರಿಯೊಗ್ರಫಿ ಮಾಡಿದ ಚಿತ್ರ ‘ಗೀತಾ ಮೇರಾ ನಾಮ್‌’ (1974). ಇವರ ವೃತ್ತಿ ಜೀವನಕ್ಕೆ ತಿರುವು ನೀಡಿದ ಹಾಡು ಶ್ರೀದೇವಿ ಅಭಿನಯದ ಹವಾ ಹವಾಯಿ (ಮಿಸ್ಟರ್‌ ಇಂಡಿಯಾ– 1987).  ಶ್ರೀದೇವಿ ಅವರಿಗೆ ನಾಗಿಣಿ, ಚಾಂದಿನಿ, ಮಾಧುರಿ ದೀಕ್ಷಿತ್‌ ಅವರಿಗೆ ತೇಜಾಬ್‌, ಬೇಟಾ, ಗುಲಾಬ್‌ ಗ್ಯಾಂಗ್‌ ಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಬಾಲಿವುಡ್‌ನಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿರುವ ಸರೋಜ್‌ 69ನೇ ವಯಸ್ಸಿನಲ್ಲೂ ಸಕ್ರಿಯರಾಗಿದ್ದಾರೆ. ಕಿರುತೆರೆಯಲ್ಲೂ ಕಾಣಿಸಿಕೊಂಡಿರುವ ಅವರು, ನಚ್‌ ಬಲಿಯೇ, ಝಲಕ್‌ ದಿಕ್‌ ಲಾಜಾ ಷೋ ಸೇರಿದಂತೆ ಅನೇಕ ಷೋಗಳಲ್ಲಿ ತೀರ್ಪುಗಾರರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry