2035ಕ್ಕೆ ಬೆಂಗಳೂರಿಗೆ ಶರಾವತಿ ನೀರು ಬೇಕು

7

2035ಕ್ಕೆ ಬೆಂಗಳೂರಿಗೆ ಶರಾವತಿ ನೀರು ಬೇಕು

Published:
Updated:
2035ಕ್ಕೆ ಬೆಂಗಳೂರಿಗೆ ಶರಾವತಿ ನೀರು ಬೇಕು

ಬೆಂಗಳೂರು: ನಗರ ಇದೇ ಪ್ರಮಾಣದಲ್ಲಿ ಬೆಳೆಯುತ್ತಿದ್ದರೆ 2035ರ ನಂತರ ಬೆಂಗಳೂರಿಗೆ ಶರಾವತಿಯಿಂದ ನೀರು ಪಡೆಯಬೇಕಾಗುತ್ತದೆ ಎಂದು ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌ ತಿಳಿಸಿದರು.

ಜಲಮಂಡಳಿ ಮತ್ತು ಎಂಜಿನಿಯರ್‌ ಸಂಘ ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ವಿಶ್ವ ಜಲ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.

ಮಳೆ ನೀರನ್ನು ಕೆರೆಗಳಲ್ಲಿ ಸಂಗ್ರಹಿಸಿ ಬಳಸಲು ಯೋಜಿಸಿದ್ದು, 2023–2024ರೊಳಗೆ ಇದು ಕಾರ್ಯರೂಪಕ್ಕೆ ಬರಲಿದೆ. ನಗರದಲ್ಲಿ ಎಲ್ಲ ತ್ಯಾಜ್ಯ ಸಂಸ್ಕರಣಾ ಘಟಕಗಳ (ಎಸ್‌ಟಿಪಿ) ನಿರ್ಮಾಣ 2020ರೊಳಗೆ ಪೂರ್ಣವಾಗಲಿದೆ. ಆನಂತರ ಯಾವುದೇ ಕೆರೆಗೆ ಕೊಳಚೆ ನೀರು ಸೇರುವುದಿಲ್ಲ ಎಂದರು.

2030–2035ರ ಅವಧಿವರೆಗೆ ನಗರಕ್ಕೆ ನೀರಿನ ಸಮಸ್ಯೆ ಎದುರಾಗುವುದಿಲ್ಲ. ಈ ವೇಳೆಗೆ ನಗರದ ಜನಸಂಖ್ಯೆ 2 ಕೋಟಿಗೆ ತಲುಪಿದರೂ ಸಮರ್ಪಕ ನೀರು ಪೂರೈಸಬಹುದು. ಎತ್ತಿನಹೊಳೆ ಯೋಜನೆಯಿಂದಲೂ ನಗರಕ್ಕೆ 2.50 ಟಿಎಂಸಿ ಅಡಿ ನೀರು ಲಭಿಸಲಿದೆ. ಈ ನೀರಿನ ಬಳಕೆಗೂ ಯೋಜನೆ ರೂಪಿಸಲಾಗಿದೆ ಎಂದರು.

ಬೇಸಿಗೆಗೆ ಸಮಸ್ಯೆ ಇಲ್ಲ:  ‘ಈ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಕಳೆದ ವರ್ಷ ನೀರಿಗೆ ಕಷ್ಟದ ಪರಿಸ್ಥಿತಿ ಇತ್ತು. ಆದರೂ ನಿತ್ಯ 135 ಕೋಟಿ ಲೀಟರ್‌ ಕಾವೇರಿ ನೀರು ಪೂರೈಸಿದ್ದೆವು. ಈಗ 138 ಕೋಟಿ ಲೀಟರ್‌ ನೀರು ಪೂರೈಸುತ್ತಿದ್ದೇವೆ’ ಎಂದರು.

ಏಪ್ರಿಲ್‌, ಮೇ ತಿಂಗಳಲ್ಲಿ ಬೇಸಿಗೆಯ ತೀವ್ರತೆ ಹೆಚ್ಚುತ್ತದೆ. ನೀರಿನ ಬೇಡಿಕೆ 140 ಕೋಟಿ ಲೀಟರ್‌ಗೆ ತಲುಪಬಹುದು. 146 ಕೋಟಿ ಲೀಟರ್‌ ನೀರು ಸರಬರಾಜು ಸಾಮರ್ಥ್ಯವನ್ನು ಜಲಮಂಡಳಿ ಹೊಂದಿದೆ ಎಂದರು.

‘ರಾಜ್ಯ ಸರ್ಕಾರ 2014–2015ರಲ್ಲಿ ನಗರಕ್ಕೆ ಮತ್ತೆ 10 ಟಿಎಂಸಿ ಅಡಿ ನೀರು ಬಳಕೆಗೆ ಅನುಮತಿ ಕೊಟ್ಟಿದೆ. ಈ ನೀರಿನ ಬಳಕೆಗಾಗಿ ಕಾವೇರಿ 5ನೇ ಹಂತದ ಯೋಜನೆ ಕೈಗೊಂಡಿದ್ದೇವೆ. 146 ಕೋಟಿ ಲೀಟರ್‌ ನೀರು ಪೂರೈಸಿದರೆ 19 ಟಿಎಂಸಿ ಅಡಿ ನೀರಿನ ಮಿತಿಯನ್ನು ಸಂಪೂರ್ಣ ಬಳಸಿದಂತಾಗುತ್ತದೆ. ಹೆಚ್ಚುವರಿ 10 ಟಿಎಂಸಿ ಅಡಿ ನೀರಿನಲ್ಲಿ 110 ಹಳ್ಳಿಗಳಿಗೂ ಕೊಡಬಹುದು’ ಎಂದರು.

ನೀರಿನ ಸೋರಿಕೆ ತಡೆಗಟ್ಟುತ್ತೇವೆ: ನೀರಿನ ಸೋರಿಕೆ ಶೇ 49 ಇತ್ತು. 15 ತಿಂಗಳಲ್ಲಿ ಅದನ್ನು ಶೇ 39ಕ್ಕೆ ಇಳಿಸಲಾಗಿದೆ. ನೀರಿನ ಭೌತಿಕ ಸೋರಿಕೆ ಶೇ 10ರಿಂದ 15 ಇರಬಹುದು. ಲೆಕ್ಕ ಸಿಗದ ನೀರಿನ ಸೋರಿಕೆ ಮತ್ತು ಭೌತಿಕ ಸೋರಿಕೆಯನ್ನು ಈ ವರ್ಷ ಶೇ 2ರಿಂದ 3ರಷ್ಟು ಕಡಿಮೆ ಮಾಡಲಾಗುತ್ತದೆ ಎಂದರು.

‘ಶುದ್ಧ ಕುಡಿಯುವ ನೀರು ಸೀಮಿತವಾದುದು. ಇದರ ಬಳಕೆ ಹಿತಮಿತವಾಗಿರಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಕಷ್ಟದ ದಿನಗಳು ಎದುರಾಗಲಿವೆ. ನೀರಿನ ಮಿತ ಬಳಕೆ ಸಾಧಿಸದೆ ಏನೇ ಯೋಜನೆ, ಎಷ್ಟೇ ಪ್ರಯತ್ನ ಮಾಡಿದರೂ ಅದು ಯಶಸ್ವಿಯಾಗುವುದಿಲ್ಲ’ ಎಂದರು.

‘ನೀರಿನ ಸಮಸ್ಯೆ ಎದುರಿಸುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಇದೆ ಎನ್ನುವ ಸಮೀಕ್ಷಾ ವರದಿಯನ್ನು ಪತ್ರಿಕೆಯಲ್ಲಿ ಗಮನಿಸಿದ್ದೇನೆ. ಜಲ

ಮಂಡಳಿ ಕೈಗೊಂಡಿರುವ ಕ್ರಮ, ಯೋಜನೆಗಳ ಬಗ್ಗೆ ಸಮೀಕ್ಷೆ ನಡೆಸಿದವರಿಗೆ ಮನವರಿಕೆಯಾದರೆ ಅವರ ಅಭಿಪ್ರಾಯ ಖಂಡಿತಾ ಬದಲಾಗುತ್ತದೆ’ ಎಂದರು.

ನೀರಿನ ಸಂರಕ್ಷಣೆಗೆ ಬೇಕು ಆದ್ಯತೆ

ನೀರಿನ ಸಂರಕ್ಷಣೆಗೆ ಪರಿಸರಸ್ನೇಹಿ ಪರಿಹಾರೋಪಾಯ ಕಂಡುಕೊಳ್ಳಬೇಕು ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ನಿರ್ದೇಶಕ ಪ್ರೊ.ಅನುರಾಗ್‌ ಕುಮಾರ್‌ ಸಲಹೆ ನೀಡಿದರು.

‘ವಿಶ್ವ ಜಲ’ ದಿನ ಉದ್ಘಾಟಿಸಿ ಮಾತನಾಡಿದ ಅವರು, ‘ಕ್ಯಾಲಿಪೋರ್ನಿಯಾ, ಕೇಪ್‌ಟೌನ್‌ನಂತಹ ಅಭಿವೃದ್ಧಿ ಹೊಂದಿದ ನಗರಗಳಲ್ಲಿ ಕುಡಿಯುವ ನೀರಿನ ಅಭಾವ ತಲೆದೋರಿದೆ. ಬೆಂಗಳೂರು ನಗರದಲ್ಲೂ ಅಂತರ್ಜಲಮಟ್ಟ ವರ್ಷದಿಂದ ವರ್ಷಕ್ಕೆ ತೀವ್ರವಾಗಿ ಕುಸಿಯುತ್ತಿದೆ. ಮಳೆ ನೀರು ಸಂಗ್ರಹ, ಕೆರೆಗಳ ಪುನಶ್ಚೇತನ ಹಾಗೂ ಕೆರೆ ಅಚ್ಚುಕಟ್ಟು ಪ್ರದೇಶಗಳ ರಕ್ಷಣೆಗೆ ಆದ್ಯತೆ ನೀಡಬೇಕಿದೆ’ ಎಂದರು.

90ರ ದಶಕದಲ್ಲಿ ನಗರದ ನೀರಿನ ಬೇಡಿಕೆಯ ಬಹುಪಾಲನ್ನು ತಿಪ್ಪಗೊಂಡನಹಳ್ಳಿ ಜಲಾಶಯ ಮತ್ತು ಹೆಸರಘಟ್ಟ ಕೆರೆ ಪೂರೈಸುತ್ತಿದ್ದವು. ಆದರೆ, ಇವುಗಳಿಗೆ ಕೊಳಚೆ ನೀರು ಹರಿಯಬಿಟ್ಟು, ಇವು ಉಪಯೋಗಕ್ಕೆ ಇಲ್ಲದಂತಾಗಿವೆ ಎಂದರು.

ಕೇಪ್‌ಟೌನ್‌ ಸ್ಥಿತಿ ಬಾರದು: ಕೆಂಪರಾಮಯ್ಯ

ನಗರಕ್ಕೆ ಮೇ–ಜೂನ್‌ವರೆಗೆ 8ರಿಂದ 9 ಟಿಎಂಸಿ ಅಡಿ ನೀರಿನ ಅಗತ್ಯವಿದೆ. ನಾಲ್ಕು ಜಲಾಶಯಗಳಲ್ಲಿ 11 ಟಿಎಂಸಿ ಅಡಿ ನೀರು ಲಭ್ಯವಿದೆ. ಕೇಪ್‌ಟೌನ್‌ ಸ್ಥಿತಿ ಬೆಂಗಳೂರಿಗೆ ಎದುರಾಗುವುದಿಲ್ಲ ಎಂದು ಜಲಮಂಡಳಿಯ ಪ್ರಧಾನ ಮುಖ್ಯ ಎಂಜಿನಿಯರ್‌ ಕೆಂಪರಾಮಯ್ಯ ತಿಳಿಸಿದರು.

ಜಲಮಂಡಳಿ ಸ್ಥಾಪನೆಯಾದಾಗಿನಿಂದ ಪ್ರತಿ 10 ವರ್ಷಗಳಿಗೊಂದು ಯೋಜನೆ ಅನುಷ್ಠಾನಗೊಳಿಸುತ್ತಿದೆ. ನೀರಿನ ಸಮಸ್ಯೆ ತಲೆದೋರದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದರು.

ಅಂಕಿ ಅಂಶ

140 ಕೋಟಿ ಲೀಟರ್‌

ಜಲಮಂಡಳಿ ನಗರಕ್ಕೆ ನಿತ್ಯ ಪೂರೈಸುತ್ತಿರುವ ಅಂದಾಜು ನೀರು

1.57 ಟಿಎಂಸಿ ಅಡಿ

ನಗರಕ್ಕೆ ಪ್ರತಿತಿಂಗಳು ಕಾವೇರಿ ನೀರು ಪೂರೈಕೆ

ಶೇ 80

ನಿತ್ಯ ಬಳಸುತ್ತಿರುವ ನೀರಿನಲ್ಲಿ ಕೊಳಚೆ ನೀರಾಗಿ ಹೊರಹೋಗುತ್ತಿದೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry