ಪೋಕ್ಸೊ ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ

7

ಪೋಕ್ಸೊ ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ

Published:
Updated:

ಬೆಂಗಳೂರು: ಮೂರೂವರೆ ವರ್ಷದ ಬಾಲಕಿಯ ಕೈ–ಕಾಲು ಕಟ್ಟಿ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿ ಎಸ್‌. ಸಂಜಯ್‌ಗೆ (26), 10 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ₹50 ಸಾವಿರ ದಂಡ ವಿಧಿಸಿ ನಗರದ ಒಂದನೇ ಎಸಿಎಂಎಂ ನ್ಯಾಯಾಲಯವು ಆದೇಶ ಹೊರಡಿಸಿದೆ.

2017ರ ಫೆಬ್ರುವರಿಯಲ್ಲಿ ನಡೆದಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ತ್ವರಿತವಾಗಿ ವಿಚಾರಣೆ ಪೂರ್ಣಗೊಳಿಸಿ ಈ ಆದೇಶ ಹೊರಡಿಸಿದೆ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ ಕೆ.ಆರ್‌.ಸುಭಾಷ್ ವಾದಿಸಿದ್ದರು.

ಪ್ರಕರಣದ ವಿವರ: ಹಂಪಿನಗರ ನಿವಾಸಿ ಸಂಜಯ್, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಆತನ ತಾಯಿ, ಪ್ಲೇ ಹೋಂ ನಡೆಸುತ್ತಿದ್ದರು. ಮಧ್ಯಾಹ್ನ ಪ್ಲೇ ಹೋಂಗೆ ಹೋಗಿದ್ದ ಆತ, ಒಂಟಿಯಾಗಿ ಕುಳಿತಿದ್ದ ಮಗುವಿನ ಕೈ– ಕಾಲು ಕಟ್ಟಿ ಹಾಕಿದ್ದ. ನಂತರ ಅತ್ಯಾಚಾರ ಎಸಗಿದ್ದ.

ಸಂತ್ರಸ್ತ ಮಗುವಿನ ಅಜ್ಜ–ಅಜ್ಜಿ ಮಧ್ಯಾಹ್ನ ಪ್ಲೇ ಹೋಂಗೆ ಬಂದು ಮೊಮ್ಮಗಳನ್ನು ಮನೆಗೆ ಕರೆದುಕೊಂಡು ಹೋಗಿದ್ದರು. ರಾತ್ರಿ ಹೊಟ್ಟೆ ನೋವು ಎಂದು ಬಾಲಕಿ ಅಳಲಾರಂಭಿಸಿದ್ದಳು. ವಿಚಾರಿಸಿದಾಗ, ‘ಸಂಜಯ್ ಅಂಕಲ್ ಹಿಂಸಿಸಿದರು’ ಎಂದು ಹೇಳಿದ್ದಳು.

ನಂತರ ಮಗುವಿನ ಪೋಷಕರು ವಿಜಯನಗರ ಠಾಣೆಗೆ ದೂರು ನೀಡಿದ್ದರು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆಯಡಿ ಸಂಜಯ್‌ನನ್ನು ಬಂಧಿಸಿದ್ದ ಪೊಲೀಸರು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಕಿರುಕುಳ: 3 ವರ್ಷ ಜೈಲು ಶಿಕ್ಷೆ

ಪತ್ನಿಯ ತಂಗಿಗೆ ಲೈಂಗಿಕ ಕಿರುಕುಳ ನೀಡಿದ್ದ ಅಪರಾಧಿ ನಾಗೇಶಪ್ರಭು (26) ಎಂಬಾತನಿಗೆ 3 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ₹25 ಸಾವಿರ ದಂಡ ವಿಧಿಸಿ ನಗರದ 55ನೇ ಸಿಟಿ ಸಿವಿಲ್‌ ನ್ಯಾಯಾಲಯವು ಗುರುವಾರ ಆದೇಶ ಹೊರಡಿಸಿದೆ.

2015ರ ಮಾರ್ಚ್‌ 13ರಂದು ನಡೆದಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ವನಮಾಲಾ ಯಾದವ್‌ ಈ ಆದೇಶ ಹೊರಡಿಸಿದರು. ಪಬ್ಲಿಕ್‌ ಪ್ರಾಸಿಕ್ಯೂಟರ್‌ ಎಸ್‌.ಎನ್‌.ಹಿರೇಮನಿ ವಾದಿಸಿದ್ದರು.

ಕೋರಮಂಗಲ ನಿವಾಸಿಯಾದ 15 ವರ್ಷದ ಬಾಲಕಿಯ ‍ತಂದೆ–ತಾಯಿ ತೀರಿಕೊಂಡಿದ್ದಾರೆ. ಹಿರಿಯಕ್ಕನನ್ನು ಅಪರಾಧಿ ನಾಗೇಶಪ್ರಭು ಅಪಹರಿಸಿ ಮದುವೆಯಾಗಿದ್ದ. ಎರಡನೇ ಅಕ್ಕನನ್ನು ಸಹ ಅಪಹರಿಸಿಕೊಂಡು ಹೋಗಿ ಮನೆಯಲ್ಲಿಟ್ಟುಕೊಂಡಿದ್ದ.

ಬಾಲಕಿಯನ್ನೂ ಅಪಹರಿಸಿಕೊಂಡು ಮನೆಗೆ ಎಳೆದೊಯ್ಯಲು ಆತ ಸಂಚು ರೂಪಿಸಿದ್ದ. ಕೋರಮಂಗಲ ಸಮೀಪದ ಮೈದಾನವೊಂದರ ಬಳಿ ಬಾಲಕಿ ನಡೆದುಕೊಂಡು ಹೋಗುವಾಗ ಅಪರಾಧಿ ಜಗಳ ತೆಗೆದಿದ್ದ. ನಂತರ, ಮೈ–ಕೈ ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಆತನಿಂದ ತಪ್ಪಿಸಿಕೊಂಡಿದ್ದ ಬಾಲಕಿ ಠಾಣೆಗೆ ದೂರು ನೀಡಿದ್ದಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry