ದೆಹಲಿ ಬಜೆಟ್‌: ಕಾಲು ಭಾಗಕ್ಕೂ ಹೆಚ್ಚು ಹಣ ಶಿಕ್ಷಣಕ್ಕೆ ಮೀಸಲು

7

ದೆಹಲಿ ಬಜೆಟ್‌: ಕಾಲು ಭಾಗಕ್ಕೂ ಹೆಚ್ಚು ಹಣ ಶಿಕ್ಷಣಕ್ಕೆ ಮೀಸಲು

Published:
Updated:

ನವದೆಹಲಿ (ಪಿಟಿಐ): ದೆಹಲಿಯ ಎಎಪಿ ಸರ್ಕಾರ ಗುರುವಾರ ಮಂಡಿಸಿದ 2018–19ರ ಸಾಲಿನ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಪಾಲು ನೀಡಲಾಗಿದೆ. ₹53 ಸಾವಿರ ಕೋಟಿ ಮೊತ್ತದ ಬಜೆಟ್‌ನಲ್ಲಿ ₹13,997 ಕೋಟಿ ಮೊತ್ತವನ್ನು ಶಿಕ್ಷಣಕ್ಕೆ ಮೀಸಲಿರಿಸಲಾಗಿದೆ. ಇದು ಒಟ್ಟು ಬಜೆಟ್‌ನ ಶೇಕಡ 26ರಷ್ಟಾಗುತ್ತದೆ. ಶಿಕ್ಷಣದ ಜತೆಗೆ ಪರಿಸರ ರಕ್ಷಣೆ, ಆರೋಗ್ಯ ಕ್ಷೇತ್ರಗಳಿಗೂ ಆದ್ಯತೆ ನೀಡಲಾಗಿದೆ.‌

2017–18ನೇ ಸಾಲಿಗೆ ಮಂಡಿಸಲಾಗಿದ್ದ ಬಜೆಟ್‌ನಲ್ಲಿ ಶೇ 23.5ರಷ್ಟು ಭಾಗವನ್ನು ಶಿಕ್ಷಣಕ್ಕೆ ಮೀಸಲು ಇರಿಸಲಾಗಿತ್ತು.

ಶಾಲಾ ಕಟ್ಟಡಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳ ಅಳವಡಿಕೆ, ವಿದ್ಯಾರ್ಥಿನಿಯರಿಗೆ ಸ್ವಯಂರಕ್ಷಣಾ ತರಬೇತಿ, ಶಾಲೆಗಳಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ, ವಿಶ್ವ ದರ್ಜೆ ಕೌಶಲ ಕೇಂದ್ರಗಳ ಸ್ಥಾಪನೆ ಸೇರಿದಂತೆ ಹಲವು ಯೋಜನೆಗಳ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.

ವಿಶ್ವದರ್ಜೆ ಕೌಶಲ ಕೇಂದ್ರಕ್ಕೆ ₹315 ಕೋಟಿ:

ಯುವಜನರಿಗೆ ಉದ್ಯೋಗ ತರಬೇತಿ ಒದಗಿಸುವ ಸಲುವಾಗಿ ₹315 ಕೋಟಿ ವೆಚ್ಚದಲ್ಲಿ ವಿಶ್ವದರ್ಜೆ ಕೌಶಲ ಕೇಂದ್ರ ಸ್ಥಾಪನೆ ಮಾಡಲಾಗುತ್ತದೆ. ಸಿ.ಸಿ.ಟಿ.ವಿ ಕ್ಯಾಮೆರಾಗಳ ಅಳವಡಿಕೆಗೆ ₹175 ಕೋಟಿ ನೀಡಲಾಗುತ್ತದೆ. ಮುಂದಿನ ವರ್ಷ ಜೂನ್ ವೇಳೆಗೆ ಒಟ್ಟು 1.2 ಲಕ್ಷ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಲಾಗುತ್ತದೆ. ಉಚಿತ ವೈ–ಫೈ ಸೇವೆಗಾಗಿ ₹ 100 ಕೋಟಿ ಇರಿಸಲಾಗಿದೆ. ವಿದ್ಯಾರ್ಥಿನಿಯರ ಸ್ವಯಂ ರಕ್ಷಣೆಗಾಗಿ ₹ 10 ಕೋಟಿ, ಕ್ರೀಡೆಗೆ ₹ 20 ಕೋಟಿ ನೀಡಲಾಗುತ್ತದೆ ಎಂದು ಬಜೆಟ್‌ ಮಂಡನೆ ವೇಳೆ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ತಿಳಿಸಿದ್ದಾರೆ.

ಆರೋಗ್ಯ ವಲಯಕ್ಕೆ ₹6,729 ಕೋಟಿ ಮೀಸಲಿರಿಸಲಾಗಿದ್ದು, ‘ಎಲ್ಲರಿಗೂ ಆರೋಗ್ಯ ವಿಮೆ’ ಯೋಜನೆಯನ್ನು ಘೋಷಿಸಲಾಗಿದೆ.

ಶೇ 50 ವಿನಾಯ್ತಿ

ಸಿಎನ್‌ಜಿ ಕಾರುಗಳ ನೋಂದಣಿಗೆ ಶೇ50 ವಿನಾಯ್ತಿ ನೀಡಲಾಗುತ್ತದೆ. 16 ಕಿ.ಮೀ. ಸೈಕಲ್ ಪಥದಲ್ಲಿ ಸೌರಫಲಕಗಳನ್ನು ಅಳವಡಿಸಲಾಗುತ್ತದೆ. ಮಾಲಿನ್ಯ ನಿಯಂತ್ರಣಕ್ಕೆ ಏಕೀಕೃತ ವ್ಯವಸ್ಥೆ ರೂಪಿಸಲು, ಸಾರಿಗೆ, ವಿದ್ಯುತ್, ಪರಿಸರ ಮತ್ತು ಲೋಕೋಪಯೋಗಿ ಸೇವೆಗಳಿಗಾಗಿ 26 ಯೋಜನೆಗಳನ್ನು ಘೋಷಿಸಲಾಗಿದೆ. ಕಾರ್ಪೊರೇಷನ್‌ಗಳ ವ್ಯಾಪ್ತಿಯಲ್ಲಿನ ಸಣ್ಣ ರಸ್ತೆಗಳ ದುರಸ್ತಿ ಮತ್ತು ನಿರ್ವಹಣೆಗೆ ₹1 ಸಾವಿರ ಕೋಟಿ ಅನುದಾದ ನೀಡುವ ಪ್ರಸ್ತಾವನೆ ಇದೆ ಎಂದು ಸಿಸೋಡಿಯಾ ಹೇಳಿದ್ದಾರೆ.

ಅಂಕಿ ಅಂಶ

₹53,000 ಕೋಟಿ

ಒಟ್ಟು ಬಜೆಟ್

₹13,997 ಕೋಟಿ

ಶಿಕ್ಷಣ ಕ್ಷೇತ್ರಕ್ಕೆ

₹6,729 ಕೋಟಿ

ಆರೋಗ್ಯ ಕ್ಷೇತ್ರಕ್ಕೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry