ಸದ್ಭಾವನೆಗೆ ಸರ್ವಧರ್ಮ ಸಮನ್ವಯ ರಥ

7
ಅನ್ನ, ಅಕ್ಷರ ದಾಸೋಹದಿಂದ ಹೆಸರಾದ ಕೊಟ್ಟೂರು ಸ್ವಾಮಿ ಸಂಸ್ಥಾನಮಠದ ವಿನೂತನ ಕಾರ್ಯ

ಸದ್ಭಾವನೆಗೆ ಸರ್ವಧರ್ಮ ಸಮನ್ವಯ ರಥ

Published:
Updated:
ಸದ್ಭಾವನೆಗೆ ಸರ್ವಧರ್ಮ ಸಮನ್ವಯ ರಥ

ಹೊಸಪೇಟೆ: ಅನ್ನ, ಅಕ್ಷರ ದಾಸೋಹದಿಂದ ನಾಡಿನ ಮನೆ ಮಾತಾಗಿರುವ ಇಲ್ಲಿನ ಕೊಟ್ಟೂರುಸ್ವಾಮಿ ಸಂಸ್ಥಾನ ಮಠ ಈಗ ಹೊಸದೊಂದು ಕಾರ್ಯಕ್ಕೆ ಮುಂದಾಗಿದೆ.

ಎಲ್ಲ ಧರ್ಮಗಳ ಅನುಯಾಯಿಗಳಲ್ಲಿ ಸಾಮರಸ್ಯ ಹಾಗೂ ಸದ್ಭಾವನೆ ಮೂಡಿಸಲು ಶುಕ್ರವಾರ ಸರ್ವಧರ್ಮ ಸಮನ್ವಯ ರಥೋತ್ಸವಕ್ಕೆ ಚಾಲನೆ ಕೊಡಲು ಮುಂದಾಗಿದೆ. ಈ ರಥೋತ್ಸವದಿಂದ ಭಾವೈಕ್ಯ, ಸೌಹಾರ್ದ ಹಾಗೂ ಭ್ರಾತೃತ್ವದ ಭಾವನೆ ಮೂಡಿಸುವುದು ಅದರ ಆಶಯ. ಅಲ್ಲಲ್ಲಿ ಆಯಾ ದೇವರುಗಳ ಉತ್ಸವಮೂರ್ತಿಯನ್ನು ತೇರಿನಲ್ಲಿ ಇಟ್ಟು, ಎಳೆಯುವುದು ಸಾಮಾನ್ಯ ಸಂಗತಿ. ಆದರೆ, ಇದು ಸಂಪೂರ್ಣ ಭಿನ್ನವಾಗಿರಲಿದೆ. ಈ ತೇರಿನಲ್ಲಿ ದೇವರ ಬದಲಾಗಿ ಧರ್ಮಗ್ರಂಥಗಳು ಇರಲಿವೆ. ಅದು ಕೂಡ ಯಾವುದೋ ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿದ ಗ್ರಂಥವಲ್ಲ. ದೇಶದ ಎಲ್ಲ ಧರ್ಮಗ್ರಂಥಗಳು ಅದರಲ್ಲಿ ಇರಲಿವೆ. ಅಷ್ಟೇ ಅಲ್ಲ, ಬಸವಾದಿ ಶರಣರಿಂದ ರಚನೆಯಾದ ವಚನ ಸಾಹಿತ್ಯ ಕೂಡ ಅದರಲ್ಲಿ ಇರುವುದು ವಿಶೇಷ.

ಎಲ್ಲ ಧರ್ಮಗ್ರಂಥಗಳನ್ನು ತೇರಿನಲ್ಲಿ ಇರಿಸಿ, ಪೂಜೆ ಸಲ್ಲಿಸಲಾಗುತ್ತದೆ. ಅನಂತರ ಸರ್ವಧರ್ಮೀಯರು ಸೇರಿಕೊಂಡು ತೇರನ್ನೆಳೆಯುವರು. ಮಠದ ಎದುರಿನ ಮುಖ್ಯರಸ್ತೆಯಿಂದ ಮಹಾತ್ಮ ಗಾಂಧೀಜಿ ವೃತ್ತದ ವರೆಗೆ ತೇರು ಚಲಿಸಲಿದೆ. ಈ ಅಪರೂಪದ ಕ್ಷಣವನ್ನು ಕಣ್ತುಂಬಿಕೊಳ್ಳಲು ಜನ ಕಾತುರರಾಗಿದ್ದಾರೆ.

ಅಂದಹಾಗೆ, ಈ ಹೊಸ ಪರಿಕಲ್ಪನೆಯ ರೂವಾರಿ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಪೀಠಾಧಿಪತಿ ಸಂಗನಬಸವ ಸ್ವಾಮೀಜಿಯವರು. ‘ದಿನಬೆಳಗಾದರೆ ಪತ್ರಿಕೆಗಳಲ್ಲಿ ಬರುವ ಕೋಮುಗಲಭೆಗಳ ಸುದ್ದಿ ನೋಡಿ ಬೇಸರವಾಗುತ್ತಿದೆ. ಎಲ್ಲ ಧರ್ಮೀಯರನ್ನು ಒಂದೆಡೆ ಸೇರಿಸಿ, ಮನುಷ್ಯತ್ವ, ಮಾನವೀಯತೆಯ ಬಗ್ಗೆ ತಿಳಿ ಹೇಳಿ ಎಲ್ಲರೂ ಸಾಮರಸ್ಯದಿಂದ ಬದುಕುವಂತಹ ವಾತಾವರಣ ಸೃಷ್ಟಿಸಬೇಕು. ಆ ಕಾರ್ಯ ನಮ್ಮ ಮಠದಿಂದ ಆರಂಭವಾಗಿ ಇತರರಿಗೆ ಮಾದರಿಯಾಗಲಿ ಎಂಬ ಸದುದ್ದೇಶದಿಂದ ರಥೋತ್ಸವ ನಡೆಸುತ್ತಿದ್ದೇವೆ’ ಎಂದು ಸ್ವಾಮೀಜಿ ಹೇಳಿದರು.

ಕೊಟ್ಟೂರು ಸ್ವಾಮಿ ಸಂಸ್ಥಾನ ಮಠವು ಮೊದಲಿನಿಂದಲೂ ಸಾಮರಸ್ಯಕ್ಕಾಗಿ ಕೆಲಸ ಮಾಡುತ್ತಿದೆ. ಯಾವುದೇ ಜಾತಿ, ಭೇದವಿಲ್ಲದೇ ಎಲ್ಲರಿಗೂ ಅಕ್ಷರ, ಅನ್ನ ದಾಸೋಹ ನೀಡುತ್ತ ಬಂದಿದೆ. ತುಳಿತಕ್ಕೊಳಗಾದವರಿಗೆ ಧಾರ್ಮಿಕ ಸಂಸ್ಕಾರ, ಅಕ್ಷರ ಜ್ಞಾನ ಕೊಟ್ಟು ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಈಗಲೂ ಮಾಡುತ್ತಿದೆ. ಮಠದ ಅಡಿಯಲ್ಲಿ 12 ಶಿಕ್ಷಣ ಸಂಸ್ಥೆಗಳು ನಡೆಯುತ್ತಿವೆ. ಅದರಲ್ಲೂ ಆಂಧ್ರ ಪ್ರದೇಶದ ಗಡಿಯಲ್ಲಿರುವ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಹೊನ್ನರಹಳ್ಳಿಯಲ್ಲಿ ಕಳೆದ 18 ವರ್ಷಗಳಿಂದ ಉಚಿತ ವಸತಿಯುತ ಶಾಲೆ ನಡೆಯುತ್ತಿದೆ.

ಬೇರೆ ಬೇರೆ ಜಾತಿಯ 450 ಮಕ್ಕಳು ಅಲ್ಲಿ ಓದುತ್ತಿದ್ದಾರೆ. ಇದರ ಜತೆಗೆ ಬಸವಾದಿ ಶರಣರ ಚಿಂತನೆಗಳನ್ನು

ನಾಡಿನ ಮೂಲೆ ಮೂಲೆಯ ಜನರಿಗೂ ತಿಳಿಸುವ ಕೆಲಸ ಮಾಡುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry