ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪನ್ಮೂಲ ಕ್ರೋಡೀಕರಣಕ್ಕೆ ತಜ್ಞರ ಸಮಿತಿಯ ನೆರವು

ಪೆರಿಫೆರಲ್‌ ವರ್ತುಲ ರಸ್ತೆ ಯೋಜನೆಗೆ ಮರುಜೀವ ನೀಡಲಿರುವ ಬಿಡಿಎ
Last Updated 23 ಮಾರ್ಚ್ 2018, 19:27 IST
ಅಕ್ಷರ ಗಾತ್ರ

ಬೆಂಗಳೂರು: ನನೆಗುದಿಗೆ ಬಿದ್ದಿದ್ದ ಪೆರಿಫೆರಲ್‌ ವರ್ತುಲ ರಸ್ತೆ ಯೋಜನೆಗೆ (ಪಿಆರ್‌ಆರ್‌) ಮರುಜೀವ ನೀಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮುಂದಾಗಿದೆ. ಈ ಯೋಜನೆಗೆ ಸಂಪನ್ಮೂಲ ಕ್ರೋಡೀಕರಣಕ್ಕೆ ಸಹಾಯ ಮಾಡಲು ತಜ್ಞರ ಸಮಿತಿಯ ನೆರವನ್ನು ಪಡೆಯಲಿದೆ.

ಸಲಹೆಗಾರರ ನೇಮಕ ಸಂಬಂಧ ಟೆಂಡರ್‌ ಕರೆಯಲಾಗಿದೆ. ಒಂದು ವರ್ಷದ ಅವಧಿಗೆ ತಜ್ಞರ ಸೇವೆ ಪಡೆಯಲು ಪ್ರಾಧಿಕಾರ ಯೋಜಿಸಿದೆ.

‘ಸಂಪನ್ಮೂಲ ಕ್ರೋಡೀಕರಣಕ್ಕಾಗಿ ನಾವು ಬ್ಯಾಂಕ್‌ಗಳು, ಕಂಪನಿಗಳು ಹಾಗೂ ಹಣಕಾಸು ಸಂಸ್ಥೆಗಳಿಗೆ ಸುತ್ತಾಡುವುದು ಕಷ್ಟದ ಕೆಲಸ. ಈ ಸಂಬಂಧ ನಾವು ಹಲವು ಸಂಸ್ಥೆಗಳ ಜತೆಗೆ ಮಾತುಕತೆ ನಡೆಸಿದ್ದೆವು. ಆದರೆ, ನೆರವು ಸಿಕ್ಕಿಲ್ಲ. ಈಗಾಗಲೇ ಸಾಕಷ್ಟು ಸಮಯ ವ್ಯರ್ಥವಾಗಿದೆ. ಜತೆಗೆ ಈ ಕೆಲಸಕ್ಕೆ ಅರ್ಹ ಸಿಬ್ಬಂದಿಯ ಕೊರತೆಯೂ ಇದೆ. ಹೀಗಾಗಿ ತಜ್ಞರ ನೆರವು ಪಡೆಯುವುದು ಅನಿವಾರ್ಯ’ ಎಂದು ಹೆಸರು ಹೇಳಲು ಇಚ್ಛಿಸದ ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

100 ಮೀಟರ್‌ ಅಗಲದ ಪಿಆರ್‌ಆರ್‌ ನಿರ್ಮಾಣಕ್ಕೆ 2006ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. 65 ಕಿ.ಮೀ. ಉದ್ದದ ರಸ್ತೆಗೆ 1810 ಎಕರೆ 19 ಗುಂಟೆ ಭೂಸ್ವಾಧೀನ ಮಾಡಬೇಕಿದೆ. ಯೋಜನೆಯ ಅಂದಾಜು ವೆಚ್ಚ ಆರಂಭದಲ್ಲಿ ₹ 500 ಕೋಟಿ ಇತ್ತು. 2013ರಲ್ಲಿ ಇದು ₹ 5,000 ಕೋಟಿಗೆ ಹೆಚ್ಚಿತ್ತು. ಪರಿಷ್ಕೃತ ಅಂದಾಜಿನ ಪ್ರಕಾರ ಈ ಯೋಜನೆಗೆ ₹11,950 ಕೋಟಿ ಬೇಕಾಗುತ್ತದೆ. ಈ ಪೈಕಿ ಭೂಸ್ವಾಧೀನ ಪ್ರಕ್ರಿಯೆಗೆ ₹8,100 ಕೋಟಿ ಅಗತ್ಯವಿದೆ.

ಹೊಸ ಭೂಸ್ವಾಧೀನ ಕಾಯ್ದೆ ಜಾರಿಯಾದ ಬಳಿಕ ರೈತರಿಗೆ ಅವರ ಜಮೀನಿನ ಮೌಲ್ಯದ ನಾಲ್ಕು ಪಟ್ಟು ಹೆಚ್ಚು ಮೊತ್ತವನ್ನು ಪರಿಹಾರವಾಗಿ ನೀಡಬೇಕಾಗಿತ್ತು. ಇದು ಹೊರೆಯಾಗುವ ಕಾರಣ ಅವರಿಗೆ ನಗದು ರೂಪದಲ್ಲಿ ಪರಿಹಾರ ನೀಡುವ ಬದಲು ಅಭಿವೃದ್ಧಿಪಡಿಸಿದ ಜಾಗವನ್ನು ಬಿಟ್ಟುಕೊಡಲು ಬಿಡಿಎ ಪ್ರಸ್ತಾವ ಸಿದ್ಧಪಡಿಸಿತ್ತು. ಈ ಸಲುವಾಗಿ ಆರಂಭಿಕ ಯೋಜನೆಯಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಿತ್ತು.

100 ಮೀಟರ್‌ ಅಗಲದ ರಸ್ತೆ ನಿರ್ಮಿಸುವ ಬದಲು 75 ಮೀಟರ್‌ ಅಗಲದಲ್ಲಿ ರಸ್ತೆ ನಿರ್ಮಿಸಲು ನಿರ್ಧರಿಸಿತ್ತು. ಇನ್ನುಳಿದ 25 ಮೀಟರ್‌ ಅಗಲದ ಜಾಗವನ್ನು ಅಭಿವೃದ್ಧಿಪಡಿಸಿ, ಭೂಮಿ ನೀಡಿದ ರೈತರಿಗೆ ಅದನ್ನು ಹಂಚಿಕೆ ಮಾಡುವ ಪ್ರಸ್ತಾವಕ್ಕೆ ಸಚಿವ ಸಂಪುಟ 2016ರ ಜೂನ್‌ನಲ್ಲಿ ತಾತ್ವಿಕ ಒಪ್ಪಿಗೆ ನೀಡಿತ್ತು. ಆದರೆ, ಇದಕ್ಕೆ ರೈತರಿಂದ ವಿರೋಧ ವ್ಯಕ್ತವಾಗಿದ್ದರಿಂದ ಯೋಜನೆ ಮತ್ತೆ ನನೆಗುದಿಗೆ ಬಿದ್ದಿತ್ತು.

‘ರಸ್ತೆ ನಿರ್ಮಾಣಕ್ಕೆ ತಗಲುವ ₹ 3,850 ಕೋಟಿ ಮೊತ್ತವನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡಲು ಜೈಕಾ ಸಿದ್ಧವಿದೆ. ಆದರೆ, ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಪೂರ್ಣಗೊಳ್ಳದ ಕಾರಣ ನಾವು ಕಂತುಗಳಲ್ಲಿ ಹಣ ಬಿಡುಗಡೆ ಮಾಡುವಂತೆ ಕೋರಲಿದ್ದೇವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪೆರಿಫೆರಲ್‌ ವರ್ತುಲ ರಸ್ತೆಯನ್ನು ಸಂಧಿಸುವ ಪ್ರಮುಖ ರಸ್ತೆಗಳು: ತುಮಕೂರು ರಸ್ತೆ, ಬಳ್ಳಾರಿ ರಸ್ತೆ,  ಹಳೆ ಮದ್ರಾಸ್‌ ರಸ್ತೆ,  ಹೊಸೂರು ರಸ್ತೆ, ದೊಡ್ಡಬಳ್ಳಾಪುರ ರಸ್ತೆ, ಹೆಣ್ಣೂರು ರಸ್ತೆ,  ಹೆಸರಘಟ್ಟ ರಸ್ತೆ, ಹೊಸಕೋಟೆ– ಆನೇಕಲ್‌ ರಸ್ತೆ, ವೈಟ್‌ಫೀಲ್ಡ್‌ ರಸ್ತೆ, ಸರ್ಜಾಪುರ ರಸ್ತೆ

**

ಅಂಕಿ ಅಂಶ

65 ಕಿ.ಮೀ: ಪಿಆರ್‌ಆರ್ ಒಟ್ಟು ಉದ್ದ

1810 ಎಕರೆ 19 ಗುಂಟೆ: ಯೋಜನೆಗೆ ಸ್ವಾಧೀನಪಡಿಸಿಕೊಳ್ಳಬೇಕಾದ ಭೂಮಿ

₹ 8,100 ಕೋಟಿ: ಭೂಸ್ವಾಧೀನಕ್ಕೆ ತಗಲುವ ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT