ಕಲಬುರ್ಗಿ ಹತ್ಯೆ ತನಿಖೆ ಎನ್‌ಐಎ ವ್ಯಾಪ್ತಿಯಲ್ಲಿಲ್ಲ: ಕೇಂದ್ರ

7

ಕಲಬುರ್ಗಿ ಹತ್ಯೆ ತನಿಖೆ ಎನ್‌ಐಎ ವ್ಯಾಪ್ತಿಯಲ್ಲಿಲ್ಲ: ಕೇಂದ್ರ

Published:
Updated:
ಕಲಬುರ್ಗಿ ಹತ್ಯೆ ತನಿಖೆ ಎನ್‌ಐಎ ವ್ಯಾಪ್ತಿಯಲ್ಲಿಲ್ಲ: ಕೇಂದ್ರ

ನವದೆಹಲಿ: ಹಿರಿಯ ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಅವರ ಹತ್ಯೆ ಪ್ರಕರಣವು ಪಟ್ಟಿ ಮಾಡಿದ ಅಪರಾಧಗಳಲ್ಲಿ ಇಲ್ಲದ್ದರಿಂದ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ವಹಿಸಲು ಬರುವುದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

‘ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ವಿಶೇಷ ತನಿಖಾ ತಂಡಕ್ಕೆ ಹತ್ಯೆ ಪ್ರಕರಣದ ತನಿಖೆಯ ಹೊಣೆಯನ್ನು ವಹಿಸಬೇಕು’ ಎಂದು ಕೋರಿ ಡಾ.ಕಲಬುರ್ಗಿ ಅವರ ಪತ್ನಿ ಉಮಾದೇವಿ ಸಲ್ಲಿಸಿರುವ ರಿಟ್‌ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠವು, ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಎನ್‌ಐಎ, ಕೇಂದ್ರ, ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರಗಳಿಗೆ ಸೂಚಿಸಿತು.

ಭಯೋತ್ಪಾದನೆ ಮತ್ತು ದೇಶ ವಿರೋಧಿ ಚಟುವಟಿಕೆಗಳ ತನಿಖೆಯನ್ನು ಎನ್‌ಐಎ ಕಾಯ್ದೆ– 2008ರ ಪ್ರಕಾರ ನಡೆಸಬಹುದಾಗಿದೆ. ಆದರೆ, ಈ ಹತ್ಯಾ ಪ್ರಕರಣವು ಪಟ್ಟಿ ಮಾಡಿದ ಅಪರಾಧಗಳಲ್ಲಿ ಇಲ್ಲ. ಅಲ್ಲದೆ, ಕೊಲೆಯಂತಹ ಪ್ರಕರಣಗಳು ಎನ್‌ಐಎ ತನಿಖೆಯ ಪಟ್ಟಿಯಲ್ಲಿಲ್ಲ ಎಂದು ಎನ್‌ಐಎ ಹಾಗೂ ಕೇಂದ್ರ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್‌ ಪಿಂಕಿ ಆನಂದ್‌ ತಿಳಿಸಿದರು.

2009ರಲ್ಲಿ ಗೋವಾದಲ್ಲಿ ನಡೆದಿದ್ದ ಬಾಂಬ್‌ ಸ್ಫೋಟ ಪ್ರಕರಣದ ತನಿಖೆಯನ್ನು ಎನ್‌ಐಎ ನಡೆಸಿದೆ. ಇದೇ ಪ್ರಕರಣದಲ್ಲಿ ಭಾಗಿಯಾದವರೇ ಮಹಾರಾಷ್ಟ್ರದ ವಿಚಾರವಾದಿಗಳಾದ ನರೇಂದ್ರ ಧಾಬೋಲ್ಕರ್‌ ಹಾಗೂ ಗೋವಿಂದ್‌ರಾವ್‌ ಪಾನ್ಸರೆ ಹತ್ಯೆ ಪ್ರಕರಣದಲ್ಲಿ ಭಾಗಿ ಆಗಿರಬಹುದು ಎಂಬ ಶಂಕೆ ಇದೆ ಎಂದು ಉಮಾದೇವಿ ಪರ ವಕೀಲ ಅಭಯ್‌ ನೇವಗಿ ತಿಳಿಸಿದರು.

ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರಗಳ ಪರ ವಕೀಲರು ವಿಚಾರಣೆ ವೇಳೆ ಹಾಜರಾಗದ್ದರಿಂದ ಪ್ರಕರಣದ ವಿಚಾರಣೆಯನ್ನು ಜುಲೈ ಮೊದಲ ವಾರಕ್ಕೆ ಮುಂದೂಡಿದ ನ್ಯಾಯಪೀಠವು ಅಷ್ಟರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿತು.

‘ಧಾಬೋಲ್ಕರ್‌ ಹಾಗೂ ಪಾನ್ಸರೆ ಹತ್ಯೆ ಪ್ರಕರಣಗಳಿಗೂ, ಡಾ.ಕಲಬುರ್ಗಿ ಹತ್ಯೆ ಪ್ರಕರಣಕ್ಕೂ ಸಾಮ್ಯತೆ ಇದೆ. 2015ರ ಆಗಸ್ಟ್‌ 30ರಂದು ಬೆಳಿಗ್ಗೆ ಧಾರವಾಡದಲ್ಲಿನ ಮನೆಯೆದುರೇ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿರುವ ಡಾ.ಕಲಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆಯಲ್ಲಿ ಇದುವರೆಗೆ ಯಾವುದೇ ರೀತಿಯ ಬೆಳವಣಿಗೆಗಳು ಕಂಡುಬಂದಿಲ್ಲ. ನಿವೃತ್ತ ನ್ಯಾಯಮೂರ್ತಿಗಳ ಮೇಲುಸ್ತುವಾರಿಯ ವಿಶೇಷ ತನಿಖಾ ದಳದಿಂದ ತನಿಖೆ ನಡೆಸಿದಲ್ಲಿ ಪ್ರಕರಣ ತಾರ್ಕಿಕ ಅಂತ್ಯ ಕಾಣಬಹುದು ಎಂದು ಉಮಾದೇವಿ ಅವರು ಕಳೆದ ಜನವರಿ 10ರಂದು ಸಲ್ಲಿಸಿದ್ದ ಅರ್ಜಿಯಲ್ಲಿ ತಿಳಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry