ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತರು ಧಾರ್ಮಿಕ ಅಲ್ಪಸಂಖ್ಯಾತರು– ಅಧಿಸೂಚನೆ

‘ಬಸವತತ್ವ ಒಪ್ಪುವವರು’ ಷರತ್ತು ವಿರೋಧಿಸಿದ ಮಹಾಸಭಾ
Last Updated 23 ಮಾರ್ಚ್ 2018, 19:44 IST
ಅಕ್ಷರ ಗಾತ್ರ

ಬೆಂಗಳೂರು: ಅಖಿಲ ಭಾರತ ವೀರಶೈವ ಮಹಾಸಭಾದ ವಿರೋಧದ ನಡುವೆಯೂ ಲಿಂಗಾಯತರು ಹಾಗೂ ವೀರಶೈವ ಲಿಂಗಾಯತರು (ಬಸವತತ್ವ ಒಪ್ಪುವವರು) ಧಾರ್ಮಿಕ ಅಲ್ಪಸಂಖ್ಯಾತರು ಎಂದು ಮಾನ್ಯಮಾಡಿ ರಾಜ್ಯ ಸರ್ಕಾರ ಶುಕ್ರವಾರ ಅಧಿಸೂಚನೆ ಹೊರಡಿಸಿದೆ.

ಇದರ ಬೆನ್ನಲ್ಲೇ, ಅಖಿಲ ಭಾರತ ವೀರಶೈವ ಮಹಾಸಭಾ, ‘ರಾಜ್ಯ ಸರ್ಕಾರ ವೀರಶೈವರ ಮೇಲೆ ಒತ್ತಾಯ ಪೂರ್ವಕವಾಗಿ ಬಸವ ತತ್ವ ಹೇರಲು ಮುಂದಾಗಿದ್ದು ಇದರಿಂದ ಕೂಡಲೇ ಹಿಂದೆ ಸರಿಯಬೇಕು’ ಎಂದು ಒತ್ತಾಯಿಸಿದೆ.

‌**

ಅಧಿಸೂಚನೆ ಪ್ರಕಟ

‘ಲಿಂಗಾಯತ ಹಾಗೂ ಬಸವತತ್ವಗಳನ್ನು ನಂಬುವ ವೀರಶೈವ ಲಿಂಗಾಯತ ಸಮುದಾಯನ್ನು ಧಾರ್ಮಿಕ ಅಲ್ಪಸಂಖ್ಯಾತರು’ ಎಂದು ಮಾನ್ಯ ಮಾಡಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಸೂಚನೆ ಹೊರಡಿಸಿದೆ.

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ಕಾಯ್ದೆ–1994ರ (1994ರ ಕರ್ನಾಟಕ ಕಾಯ್ದೆ 31) ಪ್ರಕರಣ 10ರ ಅನ್ವಯ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗವು ರಾಜ್ಯ ಸರ್ಕಾರಕ್ಕೆ ಮಾಡಿರುವ ಶಿಫಾರಸನ್ನು ಪರಿಗಣಿಸಲಾಗಿದೆ.

ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಕಾಯ್ದೆ– 1992ರ ಅಡಿ ಲಿಂಗಾಯತ ಹಾಗೂ ಬಸವ ತತ್ವಗಳನ್ನು ನಂಬುವ ವೀರಶೈವ ಲಿಂಗಾಯತರು ಅಲ್ಪಸಂಖ್ಯಾತರು ಎಂದು 2018ರ ಮಾರ್ಚ್‌ 22ರಿಂದ ಜಾರಿಗೆ ಬರುವಂತೆ ಮಾನ್ಯತೆ ನೀಡಲಾಗಿದೆ.

**

ನಮಗೂ ವೀರಶೈವ ಮಹಾಸಭಾಕ್ಕೂ ಸಂಬಂಧವಿಲ್ಲ: ಎಂ.ಬಿ.ಪಾಟೀಲ

‘ಇನ್ನು ಮುಂದೆ ವೀರಶೈವ ಮಹಾಸಭಾಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಸ್ಪಷ್ಟಪಡಿಸಿದ್ದಾರೆ.

ಈ ಕುರಿತಂತೆ ಶುಕ್ರವಾರ ‘ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದ ಅವರು, ‘ಬಸವ ತತ್ವ ಒಪ್ಪುವ ವೀರಶೈವರು ಈಗಾಗಲೇ ನಮ್ಮ ಜೊತೆ ಇದ್ದಾರೆ. ಹೀಗಿರುವಾಗ ಅಖಿಲ ಭಾರತ ವೀರಶೈವ ಮಹಾಸಭಾ ಬಸವತತ್ವ ವಿರೋಧಿಸುವುದನ್ನು ಜಾಗತಿಕ ಲಿಂಗಾಯತ ಮಹಾಸಭಾ ಉಗ್ರವಾಗಿ ಖಂಡಿಸುತ್ತದೆ’ ಎಂದು ಹೇಳಿದ್ದಾರೆ.‌

‘ವೀರಶೈವ ಮಹಾಸಭಾ ಬಸವಣ್ಣನ ವಿರೋಧಿ ಸಂಘಟನೆ ಎಂಬುದನ್ನು ಕಡೆಗೂ ಸಾಬೀತು ಮಾಡಿದೆ. ವಚನಗಳು, ಇಷ್ಟಲಿಂಗವನ್ನು ಧಿಕ್ಕರಿಸಿರುವ ಅವರು ಯಾವತ್ತಿದ್ದರೂ ಲಿಂಗಾಯತ ವಿರೋಧಿಗಳೇ’ ಎಂದು ಕಿಡಿ ಕಾರಿದ್ದಾರೆ. ‘ಇನ್ನು ಮುಂದೆ ಲಿಂಗಾಯತ ಹಾಗೂ ವೀರಶೈವರು ಇಬ್ಬರೂ ಪ್ರತ್ಯೇಕ. ಇವರಿಬ್ಬರನ್ನೂ ಮಿಶ್ರಣ ಮಾಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದನ್ನು ಅಖಿಲ ಭಾರತ ವೀರಶೈವ ಮಹಾಸಭಾ ನಿಲ್ಲಿಸಬೇಕು’ ಎಂದಿದ್ದಾರೆ.

**

ಶಿಫಾರಸನ್ನು ಈಗಾಗಲೇ ಕೇಂದ್ರಕ್ಕೆ ಕಳುಹಿಸಲಾಗಿದೆ. ವೀರಶೈವ ಮಹಾಸಭಾದ ನಿಲುವಿನ ಬಗ್ಗೆ ನಾನು ಮಾತನಾಡುವುದಿಲ್ಲ.
–ಸಿದ್ದರಾಮಯ್ಯ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT