ಮುದ್ರಣಾಲಯ, ತಜ್ಞರಿಬ್ಬರೂ ಹೊಣೆಗಾರರು

7

ಮುದ್ರಣಾಲಯ, ತಜ್ಞರಿಬ್ಬರೂ ಹೊಣೆಗಾರರು

Published:
Updated:

ಬೆಂಗಳೂರು: ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಇಂಗ್ಲಿಷ್‌ ಮತ್ತು ಭೌತವಿಜ್ಞಾನ ವಿಷಯದ ಪ್ರಶ್ನೆ ಪತ್ರಿಕೆಯಲ್ಲಿನ ಲೋಪಕ್ಕೆ ಮುದ್ರಣ ದೋಷದ ಜತೆಗೆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದವರ ತಪ್ಪು ಕೂಡ ಇದೆ ಎಂಬುದನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಪತ್ತೆ ಮಾಡಿದೆ.

ಪತ್ರಿಕೆ ಮುದ್ರಿಸಿದ ಹೊರ ರಾಜ್ಯದ ಮುದ್ರಣಾಲಯಕ್ಕೆ ದಂಡ ಹಾಕಲು ನಿರ್ಧರಿಸಿರುವ ಇಲಾಖೆಯು ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ ತಜ್ಞರ ವಿರುದ್ಧವೂ ಕ್ರಮ ತೆಗೆದುಕೊಳ್ಳಲು ಚಿಂತಿಸುತ್ತಿದೆ.

‘ಪ್ರಶ್ನೆ ಪತ್ರಿಕೆ ರಚನಾ ಕಾರ್ಯವನ್ನು ಗೋಪ್ಯವಾಗಿ ಇಡುವ ಸಲುವಾಗಿ ಕೈ ಬರಹದಲ್ಲಿಯೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿಕೊಡುವಂತೆ ವಿಷಯ ತಜ್ಞರಿಗೆ ಸೂಚಿಸಲಾಗುತ್ತದೆ. ಸಾಮಾನ್ಯವಾಗಿ ತಜ್ಞರ ಕೈ ಬರಹಗಳು ವಿಭಿನ್ನ ಶೈಲಿಯಲ್ಲಿ ಇರುತ್ತವೆ. ಕೆಲವರ ಕೈ ಬರಹ ಸುಲಭವಾಗಿ ಅರ್ಥವಾಗುವಂತಿದ್ದರೆ, ಮತ್ತೆ ಕೆಲವರದ್ದು ಅರ್ಥ ಮಾಡಿಕೊಳ್ಳುವುದೇ ಕಷ್ಟಸಾಧ್ಯ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಸಿ. ಶಿಖಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಬಾರಿ ಇಂಗ್ಲಿಷ್‌ ಮತ್ತು ಭೌತವಿಜ್ಞಾನ ವಿಷಯಗಳ ಪತ್ರಿಕೆಯ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಂದ ಆಕ್ಷೇಪಣೆ ಸಲ್ಲಿಕೆಯಾಗಿತ್ತು. ಹಾಗಾಗಿ ಪ್ರಶ್ನೆ ಪತ್ರಿಕೆಯ ಮೂಲ ಪ್ರತಿಗಳನ್ನು ಪರಿಶೀಲಿಸಲಾಯಿತು. ಕೆಲ ಪ್ರಶ್ನೆಗಳ ವಿಚಾರದಲ್ಲಿ ತಜ್ಞರ ಕೈಬರಹವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಪತ್ರಿಕೆ ಮುದ್ರಣವಾಗಿರುವುದು ಹಾಗೂ ಕೆಲ ಪ್ರಶ್ನೆಯ ಬರವಣಿಗೆಯಲ್ಲಿ ತಜ್ಞರಿಂದಲೂ ಲೋಪವಾಗಿರುವುದು ಗೊತ್ತಾಗಿದೆ’ ಎಂದು ಅವರು ಹೇಳಿದರು.

‘ಇಂಗ್ಲಿಷ್‌ ಪತ್ರಿಕೆಯಲ್ಲಿ ಒಂದು ಅಂಕದ ಮೂರು ಪ್ರಶ್ನೆಗಳಿಗೆ ತಲಾ ಒಂದರಂತೆ ಒಟ್ಟು ಮೂರು ಅಂಕಗಳ ಕೃಪಾಂಕ ನೀಡಲಾಗುವುದು. ಅದೇ ರೀತಿ ಭೌತವಿಜ್ಞಾನ ಪತ್ರಿಕೆಯಲ್ಲಿ ಒಂದು ಅಂಕದ ಒಂದು ಪ್ರಶ್ನೆಗೆ ಒಂದು ಅಂಕ ಹಾಗೂ ಆಯ್ಕೆ ಪ್ರಶ್ನೆಯೊಂದಕ್ಕೆ ಐದು ಅಂಕವನ್ನು ಕೃಪಾಂಕವಾಗಿ ನೀಡಲಾಗುವುದು’ ಎಂದು ಅವರು ವಿವರಿಸಿದರು.

ಪ್ರೂಫ್‌ ರೀಡಿಂಗ್‌ ಸರಿಯಲ್ಲ:  ಪ್ರಶ್ನೆ ಪತ್ರಿಕೆ ಪ್ರಕಟಣೆಗೂ ಮುನ್ನ ಮತ್ತೊಬ್ಬರಿಂದ ಕರಡನ್ನು ಓದುವುದು (ಪ್ರೂಫ್‌ ರೀಡಿಂಗ್‌) ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ ಪ್ರಶ್ನೆ ಪತ್ರಿಕೆಯನ್ನು ಗೋಪ್ಯವಾಗಿ ಇಡಬೇಕಾದ್ದರಿಂದ ಹಾಗೆ ಮಾಡುವುದು ಸರಿಯಲ್ಲ ಎನ್ನುತ್ತಾರೆ ಅವರು.

ಪ್ರಶ್ನೆ ಪತ್ರಿಕೆಯನ್ನು ಕೈಬರಹದ ಬದಲಿಗೆ ಕಂಪ್ಯೂಟರ್‌ನಲ್ಲಿಯೇ ಟೈಪ್‌ ಮಾಡಿ ಕೊಡಲು ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವವರಿಗೆ ಸೂಚಿಸಬಹುದು. ಆದರೆ ಇಲ್ಲೂ ಕೆಲ ಸಮಸ್ಯೆಗಳು ಎದುರಾಗುತ್ತವೆ. ಪತ್ರಿಕೆಯ ಪ್ರತಿ (ಸಾಫ್ಟ್‌ ಕಾಪಿ) ಯಾರಿಗೂ ದೊರೆಯದಂತೆ ನೋಡಿಕೊಳ್ಳುವುದು ದೊಡ್ಡ ಸವಾಲು. ಹಾಗಾಗಿ ಈ ಸಂಬಂಧ ಅನ್ಯ ಮಾರ್ಗಗಳ ಕುರಿತು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಅವರು ಹೇಳಿದರು

ಹೊಸ ನಿಯಮದಂತೆ ಕೃಪಾಂಕ: ರಾಜ್ಯದಲ್ಲಿ ಕೃಪಾಂಕ ನೀಡಲು ಕಳೆದ ವರ್ಷ ಪದವಿ ಪೂರ್ವ ಶಿಕ್ಷಣ ಇಲಾಖೆಯ ಪರೀಕ್ಷಾ ಕಾಯ್ದೆಗೆ ತಿದ್ದುಪಡಿ ತಂದು ಹೊಸ ನಿಯಮಗಳನ್ನು ತರಲಾಗಿದೆ. ಅದರಂತೆ ಪ್ರಶ್ನೆ ಪತ್ರಿಕೆಯಲ್ಲಿ ಪಠ್ಯೇತರ ಅಥವಾ ಅಸ್ಪಷ್ಟ ಅಥವಾ ಅಸಂಗತ ಪ್ರಶ್ನೆಗಳು ಬಂದ ಸಂದರ್ಭದಲ್ಲಿ ಕೃಪಾಂಕ ನೀಡಲು ಅವಕಾಶ ಇದೆ. ಇಲಾಖೆ ವಿಷಯ ತಜ್ಞರ ಸಮಿತಿ ಮತ್ತು ಸ್ವತಂತ್ರ ಸಂಸ್ಥೆಯ ವಿಷಯ ತಜ್ಞರ ಸಮಿತಿಯ ಶಿಫಾರಸಿನ ಆಧಾರದ ಮೇಲೆ ಕೃಪಾಂಕ ನೀಡಲಾಗುತ್ತದೆ ಎಂದು ಅವರು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry