ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಡೂರಿನಲ್ಲಿ ಬಿರುಸುಗೊಂಡ ಹುಣಸೆ ಕೃಷಿ

ಸಗಟು ಮಾರಾಟದಲ್ಲಿ ಬೆಲೆ ಕಳೆದುಕೊಂಡ ಹಣ್ಣು; ಗ್ರಾಮೀಣ ಭಾಗದಲ್ಲಿ ಹಲವರಿಗೆ ಉದ್ಯೋಗ ನೀಡಿದ ಹಣಿಸೆ
Last Updated 24 ಮಾರ್ಚ್ 2018, 9:19 IST
ಅಕ್ಷರ ಗಾತ್ರ

ಸಂಡೂರು: ತಾಲ್ಲೂಕಿನಲ್ಲಿ ಹುಣಸೆ ಕೃಷಿ ಬಿರುಸುಗೊಂಡಿದ್ದು, ಪೂರೈಕೆಗೆ ತಕ್ಕಂತೆ ಬೆಲೆ ದೊರಕದೇ ಇರುವುದು ಬೆಳೆಗಾರರನ್ನು ಚಿಂತೆಗೆ ದೂಡಿದೆ.

ಹೊಸ ಹುಣಸೆ ಹಣ್ಣನ್ನು ಗ್ರಾಹಕರು ಖರೀದಿಸಿ ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದಾರೆ. ಹೊಸ ಹುಣಸೆ ಹಣ್ಣಿನ ವ್ಯಾಪಾರ ಗ್ರಾಮಾಂತರ ಪ್ರದೇಶದಲ್ಲಿ ಜೋರಾಗಿ ನಡೆದಿದೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಹುಣಸೆ ಹಣ್ಣಿನ ಚಿಲ್ಲರೆ ಮಾರಾಟದ ದರ ಹೆಚ್ಚಾಗಿದೆ. ಹಿಂದಿನ ವರ್ಷ ಪ್ರತಿ ಕೆ.ಜಿ ಹುಣಸೆ ದರ ₹60–₹70 ಇತ್ತು. ಈ ಬಾರಿ ₹120ರಿಂದ ₹150ಕ್ಕೆ ಹೆಚ್ಚಿದೆ. ಆದರೆ ಸಗಟು ಮಾರಾಟ ದರದಲ್ಲಿ ಕುಸಿತ ಕಂಡಿದೆ.

‘ಜನವರಿಯಲ್ಲಿ ಪ್ರತಿ ಕ್ವಿಂಟಾಲ್ ಹುಣಸೆ ಹಣ್ಣಿನ ಬೆಲೆ ₹14 ಸಾವಿರ ಇತ್ತು. ಫೆಬ್ರುವರಿ ಹೊತ್ತಿಗೆ ₹ 8 ಸಾವಿರಕ್ಕೆ ಕುಸಿಯಿತು’ ಎನ್ನುತ್ತಾರೆ ಹುಣಸೆಯನ್ನು ಸಂಸ್ಕರಿಸಿ ಮಾರಾಟ ಮಾಡುವ ಲಕ್ಷ್ಮೀಪುರದ ಕೆ. ಶಿವಕುಮಾರ್.

‘ಅಡಕೆ ಕುಚ್ಚಲು, ದ್ರವರೂಪದ ಅಂಟು ತಯಾರಿಕೆಗೆ ಹುಣಸೆ ಬೀಜವನ್ನು ಕ್ವಿಂಟಲ್‌ಗೆ ₹1,700 ರಂತೆ ಹಾಗೂ ಪ್ರತಿ ಚೀಲ ಗೊಳ್ಳೆಯನ್ನು (ಹಣ್ಣಿನ ಮೇಲಿನ ಸಿಪ್ಪೆ) ₹120ರಿಂದ ₹130ಕ್ಕೆ ಮಾರಾಟ ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಹೊಸ ಹುಣಸೆ ಹಣ್ಣು ಮಾರುಕಟ್ಟೆಗೆ ಬರುತ್ತಿರುವುದರಿಂದ, ಹಲವು ಗ್ರಾಹಕರು ಇದನ್ನು ಖರೀದಿಸಿ ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ
ಹೊಸ ಹುಣಸೆ ಹಣ್ಣಿನ ವ್ಯಾಪಾರ ಗ್ರಾಮಾಂತರ ಪ್ರದೇಶದಲ್ಲಿ ಜೋರಾಗಿ ನಡೆದಿದೆ.

ಬಹೂಪಯೋಗಿ: ಹುಣಸೆ ಬಹು ಉಪಯುಕ್ತತೆಯಿಂದಾಗಿಯೇ ಗಮನ ಸೆಳೆವ ಹಣ್ಣು. ಅಡುಗೆಯಲ್ಲಿ ಹುಳಿಗಾಗಿ ಅದನ್ನು ಬಳಸುವುದು ಲೋಕರೂಢಿ. ಹಣ್ಣಿನ ಸಿಪ್ಪೆಯನ್ನು ಇಟ್ಟಿಗೆ ಭಟ್ಟಿಯವರು ಖರೀದಿಸುತ್ತಾರೆ. ಬೀಜಗಳನ್ನು ಖರೀದಿಸುವವರೂ ಇದ್ದಾರೆ. ಹಲವರು ಸುಗ್ಗಿಯ ಕಾಲದಲ್ಲಿ ವರ್ಷಕ್ಕೆ ಬೇಕಾಗುವಷ್ಟು ಹುಣಸೆ ಹಣ್ಣನ್ನು ಒಂದೇ ಬಾರಿಗೆ ಖರೀದಿಸಿ ಸಂಗ್ರಹಿಸಿ ಇಟ್ಟುಕೊಳ್ಳುತ್ತಾರೆ. ಕಾಯಿ ಹಣ್ಣಾಗುವ ಹಂತದಲ್ಲಿದ್ದಾಗ, ಅದರಿಂದ ಚಟ್ನಿಯನ್ನು ತಯಾರಿಸಿ ಸಂಗ್ರಹಿಸಿಡಲಾಗುತ್ತದೆ.

**
ಹಲವರಿಗೆ ಉದ್ಯೋಗ

ಬೇಸಿಗೆ ಆರಂಭದ ಹೊತ್ತಿಗೆ ಹಣ್ಣಾಗುವ ಹುಣಸೆಯನ್ನು ಮರದಿಂದ ಕೆಡಹುವ, ಸಿಪ್ಪೆ, ನಾರು, ಬೀಜಗಳನ್ನು ಬೇರ್ಪಡಿಸುವ ಕಾರ್ಯ ಗ್ರಾಮೀಣ ಭಾಗದಲ್ಲಿ ಆರಂಭವಾಗಿದೆ. ನೂರಾರು ಮಂದಿಗೆ ಉದ್ಯೋಗವನ್ನೂ ನೀಡಿದೆ.

ಮರದಿಂದ ಕೆಡವಲು ದಿನದ ಕೂಲಿ ಒಬ್ಬರಿಗೆ ₹300. ಕೆಳಗೆ ಬಿದ್ದ ಹುಣಸೆ ಹಣ್ಣನ್ನು ಆರಿಸಿ ಚೀಲಕ್ಕೆ ತುಂಬಲು ₹150. ಹಣ್ಣನ್ನು ಒಡೆದು, ಬೀಜ ಮತ್ತು ನಾರಿನಿಂದ ಬೇರ್ಪಡಿಸಿ ಕೊಡಲು ಒಂದು ಪುಟ್ಟಿಗೆ ₹50 ರಿಂದ ₹100ರ ಕೂಲಿ ಇದೆ. ಈ ದರ ಹಣ್ಣು ತುಂಬುವ ಪುಟ್ಟಿಯ ಗಾತ್ರವನ್ನು ಆಧರಿಸಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT