ನಾನೇ ಮೊಕದ್ದಮೆ ಹೂಡುತ್ತೇನೆ: ಟಿ.ಜೆ. ಅಬ್ರಹಾಂ ಎಚ್ಚರಿಕೆ

7

ನಾನೇ ಮೊಕದ್ದಮೆ ಹೂಡುತ್ತೇನೆ: ಟಿ.ಜೆ. ಅಬ್ರಹಾಂ ಎಚ್ಚರಿಕೆ

Published:
Updated:

ಉಡುಪಿ: ‘ಮೂವತ್ತು ದಿನಗಳ ಒಳಗೆ ಸಚಿವ ಪ್ರಮೋದ್ ಮಧ್ವರಾಜ್ ಅವರು ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಬೇಕು, ಇಲ್ಲವಾದರೆ ನಾನೇ ಅವರ ವಿರುದ್ಧ ಪ್ರಕರಣ ದಾಖಲಿಸುತ್ತೇನೆ’ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಹೇಳಿದರು.

ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘₹1.1 ಕೋಟಿ ಆಸ್ತಿ ಭದ್ರತೆ ನೀಡಿ ₹193 ಕೋಟಿ ಸಾಲ ಪಡೆದಿರುವ ಬಗ್ಗೆ ಮಾಡಿದ ಆರೋಪದಿಂದ ಮಾನನಷ್ಟ ಎಂದು ಅವರು ಹೇಳಿ ವಕೀಲರ ಮೂಲಕ ನೋಟಿಸ್ ನೀಡಿದ್ದಾರೆ. ಅವರ ಈ ನಡೆ ಸ್ವಾಗತಿಸುತ್ತೇನೆ. ಭೂಮಿ ದಾಖಲೆಗಳ ಆಧಾರದಲ್ಲಿಯೇ ನಾನು ಆರೋಪ ಮಾಡಿದ್ದೇನೆ. ಅಲ್ಲದೆ ಲೋಕಾಯುಕ್ತಕ್ಕೆ ಅವರು ಸಲ್ಲಿಸಿರುವ ಅವರ ಹಾಗೂ ಕುಟುಂಬದವರ ಆಸ್ತಿ– ಋಣಭಾರ ಮಾಹಿತಿಯಲ್ಲಿ ನಮೂದಿಸಿರುವ ಆಸ್ತಿಯ ಮೌಲ್ಯ ₹40.27 ಕೋಟಿ ಮಾತ್ರ’ ಎಂದು ಮಾಹಿತಿ ನೀಡಿದರು.

‘ಪ್ರಮೋದ್ ಅವರು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ ನಂತರ ಆರೋಪ ಸುಳ್ಳೆಂದು ಸಾಬೀತು ಮಾಡಲು ಎಲ್ಲ ದಾಖಲೆಗಳನ್ನು ಅವರೇ ನೀಡಬೇಕಾಗುತ್ತದೆ. ಒಂದು ವೇಳೆ ಹಾಗೆ ಮಾಡದಿದ್ದರೂ ಅದು ಅವರಿಗೆ ತಿರುಗುಬಾಣವಾಗಲಿದೆ’ ಎಂದು ಎಚ್ಚರಿಕೆ ನೀಡಿದರು.

ಎಲ್ಲ ದಾಖಲೆ ಇಟ್ಟುಕೊಂಡು ಆರೋಪ ಮಾಡದೆ, ಆರೋಪ ಮಾಡಿದ ನಂತರ ದಾಖಲೆ ನೀಡುವಂತೆ ಬ್ಯಾಂಕಿಗೆ ಅರ್ಜಿ ಸಲ್ಲಿಸಿದ್ದೀರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಅವರು ಭದ್ರತೆಯಾಗಿ ನೀಡಿರುವ, ಆನ್‌ಲೈನ್‌ನಲ್ಲಿಯೇ ಲಭ್ಯ ಇರುವ ಭೂಮಿಯ ದಾಖಲೆಯೇ ಸಾಕು’ ಎಂದರು. ‘ಯಾರ ವಿರುದ್ಧ ಆರೋಪ ಮಾಡಿದರೂ ರಾಜಕೀಯ ದುರುದ್ದೇಶದಿಂದ ಎಂದು ಹೇಳುತ್ತಾರೆ. ಉಡುಪಿ ಮಾತ್ರವಲ್ಲ, ಬೀದರ್, ಬಳ್ಳಾರಿ ಜಿಲ್ಲೆಗಳಲ್ಲೂ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದ್ದೇನೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry