ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಮೆಂಟ್‌ ದರ ಮನಬಂದಂತೆ ಹೆಚ್ಚಿಸಬೇಡಿ

Last Updated 24 ಮಾರ್ಚ್ 2018, 19:38 IST
ಅಕ್ಷರ ಗಾತ್ರ

ಬೆಂಗಳೂರು: ಸಿಮೆಂಟ್‌ ಬೆಲೆಯನ್ನು ಮನಬಂದಂತೆ ಏರಿಕೆ ಮಾಡಿದರೆ ಅದನ್ನು ಅಗತ್ಯ ವಸ್ತುಗಳ ಪಟ್ಟಿಗೆ ಸೇರಿಸಬೇಕಾಗುತ್ತದೆ ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಎಚ್ಚರಿಸಿದರು.

ಕಾನ್ಫೆಡರೇಷನ್‌ ಆಫ್‌ ಇಂಡಿಯನ್‌ ಇಂಡಸ್ಟ್ರಿ (ಸಿಐಐ) ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಇಂಡಸ್ಟ್ರಿ ನೆಕ್ಸ್ಟ್‌ ಸಮ್ಮಿಟ್‌’ನಲ್ಲಿ ಅವರು ಮಾತನಾಡಿದರು.

ಯಾವುದೇ ವಸ್ತುವಾಗಲಿ ಲಾಭಾಂಶ ಇಟ್ಟುಕೊಂಡು ಮಾರಾಟ ಮಾಡುವುದು ಸಹಜ. ಆದರೆ, ಅತ್ಯಧಿಕ ಬೆಲೆಗೆ ಮಾರಾಟ ಮಾಡುವುದು ಸರಿಯಲ್ಲ. ಹೀಗಾಗಿ, ದರಗಳ ಮೇಲೆ ನಿಯಂತ್ರಣ ಹೇರಬೇಕಾಗುತ್ತದೆ ಎಂದರು.

‘ಹೆದ್ದಾರಿಗಳ ನಿರ್ಮಾಣದಲ್ಲಿ ಶೇ 40ರಷ್ಟು ಸಿಮೆಂಟ್‌ ಬಳಕೆ ಮಾಡಲಾಗುತ್ತಿದೆ. ಸಿಮೆಂಟ್‌ ಬೆಲೆ ಕಡಿಮೆಯಾದರೆ ನಿರ್ಮಾಣ ವೆಚ್ಚವೂ ಇಳಿಕೆಯಾಗುತ್ತದೆ. ಸಾರಿಗೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ದೇಶೀಯ ಹೂಡಿಕೆದಾರರು ಹಾಗೂ ಗುತ್ತಿಗೆದಾರರಿಗೆ ಆದ್ಯತೆ ನೀಡುತ್ತಿದ್ದೇವೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

₹60 ಸಾವಿರ ಕೋಟಿ ವೆಚ್ಚದ ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ ಕಾರಿಡಾರ್‌ಗೆ ಮಾರ್ಚ್‌ ಅಥವಾ ಏಪ್ರಿಲ್‌ನಲ್ಲಿ ಟೆಂಡರ್‌ ಕರೆಯಲಾಗುತ್ತದೆ. ಈ ವರ್ಷದೊಳಗೆ ಕಾಮಗಾರಿ ಆರಂಭವಾಗಲಿದೆ. ಇದರಿಂದ ಬೆಂಗಳೂರು ಹಾಗೂ ಚೆನ್ನೈ ಭಾಗದವರಿಗೆ ಅನುಕೂಲವಾಗಲಿದೆ. ವಾಹನ ದಟ್ಟಣೆ ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗಲಿದೆ ಎಂದು ಹೇಳಿದರು.

ನಗರ ಹೊರವರ್ತುಲ ರಸ್ತೆಯನ್ನು ₹10 ಸಾವಿರ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ ಎಂದರು.

ದೇಶದಲ್ಲಿ ಸರಕು ಸಾಗಣೆ ವೆಚ್ಚ ಹೆಚ್ಚಾಗಿದೆ. ಚೀನಾದಲ್ಲಿ ಶೇ 8ರಿಂದ 10, ಯುರೋಪ್‌ ರಾಷ್ಟ್ರಗಳಲ್ಲಿ ಶೇ 12ರಿಂದ 13ರಷ್ಟು ಇದ್ದರೆ, ಭಾರತದಲ್ಲಿ ಶೇ 16ರಿಂದ 18ರಷ್ಟು ಇದೆ. ಈ ವೆಚ್ಚವನ್ನು ಕಡಿಮೆ ಮಾಡಬೇಕಿದೆ. ದೇಶದ ರಸ್ತೆಗಳಲ್ಲಿ ಒಂದು ಟ್ರಕ್‌ ಪ್ರತಿದಿನ ಸರಾಸರಿ 250 ಕಿ.ಮೀ. ಓಡಾಡಬಹುದು. ಆದರೆ, ವಿದೇಶಗಳಲ್ಲಿ ಸರಾಸರಿ 700 ಕಿ.ಮೀ. ಓಡಾಡುವ ವ್ಯವಸ್ಥೆ ಇದೆ. ದೇಶದಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಪ್ರತಿದಿನ 400 ಕಿ.ಮೀ. ಓಡಾಟಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ನ (ಎಚ್‌ಎಎಲ್‌) ಅಧ್ಯಕ್ಷ ಟಿ.ಸುವರ್ಣ ರಾಜು, ‘ನಾಗರಿಕ ವಿಮಾನಯಾನ ಮಾರುಕಟ್ಟೆಯಲ್ಲಿ ಭಾರತವು 9ನೇ ಸ್ಥಾನದಲ್ಲಿದೆ. 2020ರ ವೇಳೆಗೆ ಮೂರನೇ ಸ್ಥಾನಕ್ಕೇರಲಿದೆ. ದೇಶದ ವಿಮಾನ ನಿಲ್ದಾಣಗಳಲ್ಲಿ ಹೊಸ ರನ್‌ವೇ, ಟರ್ಮಿನಲ್‌ಗಳ ನಿರ್ಮಾಣ, ಪಾರ್ಕಿಂಗ್‌ ಸೌಲಭ್ಯ ಸೇರಿದಂತೆ ಮೂಲಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ’ ಎಂದರು.

* ಗೋದಾವರಿ ನದಿಯ ಹೆಚ್ಚುವರಿ ನೀರನ್ನು ಕಾವೇರಿಗೆ ಹರಿಸುವ ಯೋಜನೆಯ ಡಿಪಿಆರ್‌ ಸಿದ್ಧವಾಗಿದೆ.

–ನಿತಿನ್‌ ಗಡ್ಕರಿ, ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT