ಗೋಲ್ಡ್‌ಕೋಸ್ಟ್‌ನಲ್ಲಿ ‘ಕುಡ್ಲ’ದ ಹುಡುಗನ ಸವಾಲು

7
ಗುರುರಾಜ್ ಮೇಲೆ ನಿರೀಕ್ಷೆಯ ‘ಭಾರ’

ಗೋಲ್ಡ್‌ಕೋಸ್ಟ್‌ನಲ್ಲಿ ‘ಕುಡ್ಲ’ದ ಹುಡುಗನ ಸವಾಲು

Published:
Updated:
ಗೋಲ್ಡ್‌ಕೋಸ್ಟ್‌ನಲ್ಲಿ ‘ಕುಡ್ಲ’ದ ಹುಡುಗನ ಸವಾಲು

‘1999ರಲ್ಲಿ ವಿಶ್ವವಿದ್ಯಾಲಯದ ವೇಟ್‌ಲಿಫ್ಟಿಂಗ್‌ನಲ್ಲಿ ನಾನು ದಾಖಲೆ ಮಾಡಿದ್ದೆ. ಕೆಲವು ವರ್ಷಗಳ ನಂತರ ಅದನ್ನು ನನ್ನ ಶಿಷ್ಯ ಗುರುರಾಜ್ ಪೂಜಾರಿ ಮುರಿದಿದ್ದರು. 196 ಕೆ.ಜಿ ಭಾರ ಎತ್ತಿ ಕೂಟ ದಾಖಲೆ ನಿರ್ಮಿಸಿದ್ದರು. ಗುರುವಿನ ಸಾಧನೆ ಮೀರಿದ ಶಿಷ್ಯನನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ’ ಎಂದು ಉಜಿರೆ ಎಸ್‍ಡಿಎಂ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ವೇಟ್‌ಲಿಫ್ಟಿಂಗ್‌ ತರಬೇತುದಾರ ರಾಜೇಂದ್ರ ಪ್ರಸಾದ್ ಹೇಳಿದರು.

ಕೋಚ್‌ ಮಾಡಿದ ದಾಖಲೆಯನ್ನು ಮುರಿದ ಗುರುರಾಜ್ ನಂತರ ವೇಟ್‌ಲಿಫ್ಟಿಂಗ್‌ನಲ್ಲಿ ಸಾಧನೆಗಳನ್ನು ಮಾಡುತ್ತ ಸಾಗಿದ್ದಾರೆ; ದೇಶವೇ ಹೆಮ್ಮೆಪಡುವಂತೆ ಮಾಡಿದ್ದಾರೆ. ಗೋಲ್ಡ್‌ಕೋಸ್ಟ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸ್ಪರ್ಧಿಸುವ ಭಾರತದ ವೇಟ್‌ಲಿಫ್ಟಿಂಗ್ ತಂಡದಲ್ಲಿ ಸ್ಥಾನ ಗಳಿಸಿ ಈಗ ಹೆಸರು ಮಾಡಿದ್ದಾರೆ.

ಕುಂದಾಪುರ ತಾಲ್ಲೂಕಿನ ಚಿತ್ತೂರು ಸಮೀಪದ ಜೆಡ್ಡು ಕುಗ್ರಾಮದ ಗುರುರಾಜ್ ಕುಟುಂಬದಲ್ಲಿ ಯಾರೂ ಕ್ರೀಡಾಪಟುಗಳಾಗಿರಲಿಲ್ಲ. ಆಟೋ ರಿಕ್ಷಾ ಚಾಲಕ ಮಹಾಬಲ ಪೂಜಾರಿ ಮತ್ತು ಪದ್ದು ದಂಪತಿಯ ಆರು ಮಕ್ಕಳಲ್ಲಿ ಗುರು ಒಬ್ಬರು. ಆರ್ಥಿಕ ಸಂಕಷ್ಟದ ನಡುವೆಯೂ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮಹಾಬಲ ಅವರು ಹಿಂದೇಟು ಹಾಕಲಿಲ್ಲ. ಗುರುರಾಜ್ ಓದಿನ ಜೊತೆ ಕ್ರೀಡೆಯಲ್ಲೂ ಸಾಧನೆ ಮಾಡಿದರು.

ವಂಡ್ಸೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗಲೇ ಕ್ರೀಡೆಯ ಬಗ್ಗೆ ಗುರು ಅವರಿಗೆ ಆಸಕ್ತಿ ಬೆಳೆಯಿತು. ಪಿಯುಸಿಗಾಗಿ ಕೊಲ್ಲೂರಿನ ಮೂಕಾಂಬಿಕಾ ಸರ್ಕಾರಿ ಕಾಲೇಜು ಸೇರಿಕೊಂಡರು. ಅಲ್ಲಿ ಶಿಕ್ಷಕ ಸುಖೇಶ್‌ ಶೆಟ್ಟಿ ಅವರು ಗುರುರಾಜ್ ಕ್ರೀಡಾ ಆಸಕ್ತಿಗೆ ಪ್ರೋತ್ಸಾಹ ನೀಡಿದರು. ಆರಂಭಿಕ ದಿನಗಳಲ್ಲಿ ಕುಸ್ತಿ, ಪೋಲ್‌ವಾಲ್ಟ್‌ನಲ್ಲಿ ಆಸಕ್ತಿ ಬೆಳೆಸಿಕೊಡಿದ್ದರು. ಪದವಿ ಶಿಕ್ಷಣಕ್ಕೆ ಉಜಿರೆಯ ಎಸ್‌ಡಿಎಂ ಕಾಲೇಜಿಗೆ ಸೇರಿದ ನಂತರ ತರಬೇತುದಾರ ರಾಜೇಂದ್ರ ಪ್ರಸಾದ್‌ ಅವರಿಂದ ವೇಟ್‌ಲಿಫ್ಟಿಂಗ್ ತರಬೇತಿ ಪಡೆದರು. ಈಗ ಅವರು ವಾಯುಪಡೆಯಲ್ಲಿ ಸಾರ್ಜಂಟ್‌ ಹುದ್ದೆಯಲ್ಲಿದ್ದಾರೆ.

ಸಾಧನೆಯ ಮೆಟ್ಟಿಲುಗಳು

ಗುವಾಹಟಿಯಲ್ಲಿ ನಡೆದ ದಕ್ಷಿಣ ಏಷ್ಯಾ ಕ್ರೀಡಾಕೂಟದ 56 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದ ಗುರು 2016ರಲ್ಲಿ ಮಲೇಷ್ಯಾದಲ್ಲಿ ನಡೆದ  ಕಾಮನ್‌ವೆಲ್ತ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿಚಿನ್ನದ ಸಾಧನೆ ಮಾಡಿದರು. 2017ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ 56 ಕೆ.ಜಿ ವಿಭಾಗದ ಸೀನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದಿದ್ದರು.

ಗುರುರಾಜ್ ಪೂಜಾರಿ

ಪಂಜಾಬ್‌ನಲ್ಲಿ ನಡೆದ ಆಲ್‌ ಇಂಡಿಯಾ ಅಂತರ ವಿಶ್ವವಿದ್ಯಾಲಯ ವೇಟ್‌ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಚಿನ್ನ, ಜೈಪುರದಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ, ಪಟಿಯಾಲದಲ್ಲಿ ನಡೆದ ಸ್ಪರ್ಧೆಯಲ್ಲಿ ಕಂಚು, ತಮಿಳುನಾಡಿನಲ್ಲಿ ನಡೆದ ನೀನಿಯರ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದರು.

‘ಕಾಮನ್‌ವೆಲ್ತ್‌ ಗೇಮ್ಸ್‌ಗೆ ಆಯ್ಕೆ ಆಗಿದ್ದು ಖುಷಿಯ ಕ್ಷಣ. ಸದ್ಯ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿರುವೆ. ನಮ್ಮ ತಂದೆ ರಿಕ್ಷಾ ಚಾಲನೆ ಮಾಡಿ ನಮ್ಮನ್ನು ಈ ಮಟ್ಟಕ್ಕೆ ಬೆಳೆಸಿದ್ದಾರೆ. ಏಕಲವ್ಯ ಪ್ರಶಸ್ತಿಯನ್ನು ತಂದೆಗೆ ಅರ್ಪಿಸಿದ್ದೇನೆ. ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಸಾಧನೆ ಮಾಡುವ ಉತ್ಸಾಹ, ತುಡಿತ ಇದೆ. ಹೀಗಾಗಿ ಕಠಿಣ ಅಭ್ಯಾಸ ಮಾಡುತ್ತಿದ್ದೇನೆ. ನನ್ನ ಕ್ರೀಡಾ ಸಾಧನೆಯ ಹಿಂದೆ ತರಬೇತುದಾರರ ರಾಜೇಂದ್ರ ಪ್ರಸಾದ್‌ ಅವರ ಶ್ರಮವೂ ಇದೆ’ ಎಂದು ಗುರುರಾಜ ಪೂಜಾರಿ ಸ್ಮರಿಸಿದರು.

**

ಸಾಧನೆ ಖುಷಿ ತಂದಿದೆ

ಗುರುರಾಜ ಪೂಜಾರಿ ಅತ್ಯಂತ ಕಡಿಮೆ ದಿನಗಳಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಿದ ಕ್ರೀಡಾಪಟು. ಪದವಿಯಿಂದ ಆರಂಭವಾದ ಆತನ ವೇಟ್‌ಲಿಫ್ಟಿಂಗ್‌ ಕಲಿಕೆಗೆ ಒಳ್ಳೆಯ ಫಲ ಲಭಿಸಿದೆ. ಏಕಲವ್ಯ ಪ್ರಶಸ್ತಿಯೂ ಸಿಕ್ಕಿದೆ. ಈಗ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಆಯ್ಕೆ ಆಗಿದ್ದಾನೆ. ನನ್ನ ಶಿಷ್ಯ ಇಷ್ಟು ದೊಡ್ಡ ಮಟ್ಟದ ಸಾಧನೆ ಮೆರೆಯುತ್ತಿರುವುದು ಖುಷಿ ತಂದಿದೆ ಎಂದು ತರಬೇತುದಾರರ ರಾಜೇಂದ್ರ ಪ್ರಸಾದ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry