ಪ್ಯಾನ್‌, ಆಧಾರ್‌ ಜೋಡಣೆ ಗಡುವು ಜೂನ್‌ 30ಕ್ಕೆ ವಿಸ್ತರಣೆ

7

ಪ್ಯಾನ್‌, ಆಧಾರ್‌ ಜೋಡಣೆ ಗಡುವು ಜೂನ್‌ 30ಕ್ಕೆ ವಿಸ್ತರಣೆ

Published:
Updated:
ಪ್ಯಾನ್‌, ಆಧಾರ್‌ ಜೋಡಣೆ ಗಡುವು ಜೂನ್‌ 30ಕ್ಕೆ ವಿಸ್ತರಣೆ

ನವದೆಹಲಿ: ಆಧಾರ್‌ಗೆ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್‌) ಜೋಡಣೆಯ ಗಡುವನ್ನು ಜೂನ್‌ ಅಂತ್ಯದವರೆಗೆ ವಿಸ್ತರಿಸಲಾಗಿದೆ.

ಇದೇ 31ಕ್ಕೆ ಕೊನೆಗೊಳ್ಳಲಿದ್ದ ಗಡುವನ್ನು ತೆರಿಗೆ ಇಲಾಖೆಯ ನೀತಿ ನಿರ್ಧಾರಕ ಮಂಡಳಿಯಾಗಿರುವ ನೇರ ತೆರಿಗೆಯ ಕೇಂದ್ರೀಯ ಮಂಡಳಿಯು (ಸಿಬಿಡಿಟಿ) ವಿಸ್ತರಿಸಿದೆ.

ಸರ್ಕಾರದ ವಿವಿಧ ಕಲ್ಯಾಣ ಕಾರ್ಯಕ್ರಮಗಳ ಪ್ರಯೋಜನ ಪಡೆಯಲು ಮಾರ್ಚ್‌ 31ರ ಒಳಗೆ ಕಡ್ಡಾಯವಾಗಿ ಆಧಾರ್‌ ಜೋಡಣೆ ಮಾಡುವ ಗಡುವನ್ನು ಸುಪ್ರೀಂಕೋರ್ಟ್‌ ವಿಸ್ತರಣೆ ಮಾಡಿರುವ ಕಾರಣಕ್ಕೆ ‘ಸಿಬಿಡಿಟಿ’ ಈ ನಿರ್ಧಾರ ಕೈಗೊಂಡಿದೆ.

ಸಂವಿಧಾನ ಪೀಠವು, ಆಧಾರ್‌ ಕ್ರಮಬದ್ಧತೆ ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ಅಂತಿಮ ತೀರ್ಪು ನೀಡುವವರೆಗೆ ಗಡುವನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸಲಾಗಿದೆ.

ಪ್ಯಾನ್‌ ಮತ್ತು ಆಧಾರ್‌ ಸಂಪರ್ಕಿಸಲು ಸರ್ಕಾರ ಇದುವರೆಗೆ ನಾಲ್ಕು ಬಾರಿ ಗಡುವು ವಿಸ್ತರಿಸಿದೆ.

ಆದಾಯ ತೆರಿಗೆ ಲೆಕ್ಕಪತ್ರ ವಿವರ ಸಲ್ಲಿಕೆಗೆ (ಐ.ಟಿ ರಿಟರ್ನ್‌)  ಮತ್ತು ಪ್ಯಾನ್‌ ಪಡೆಯಲು ಆಧಾರ್‌ ಸಂಖ್ಯೆ ಉಲ್ಲೇಖಿಸುವುದನ್ನು ಸರ್ಕಾರ ಈಗ ಕಡ್ಡಾಯ ಮಾಡಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 139 ಎಎ (2) ಪ್ರಕಾರ,  2017ರ ಜುಲೈ 1ರಂದು ಪ್ಯಾನ್‌ ಹೊಂದಿದವರು ಮತ್ತು ಆಧಾರ್‌ ಪಡೆಯಲು ಅರ್ಹರಾಗಿದ್ದರೆ, ತಮ್ಮ ಆಧಾರ್‌ ಸಂಖ್ಯೆಯನ್ನು ಆದಾಯ ತೆರಿಗೆ ಇಲಾಖೆಗೆ ಕಡ್ಡಾಯವಾಗಿ ನೀಡಬೇಕಾಗುತ್ತದೆ.

ಮಾರ್ಚ್‌ 5ರವರೆಗಿನ ಮಾಹಿತಿ ಪ್ರಕಾರ, ವಿತರಣೆಯಾಗಿರುವ ಒಟ್ಟು 33 ಕೋಟಿ ಪ್ಯಾನ್‌ ಕಾರ್ಡ್‌ಗಳ ಪೈಕಿ, 16.65 ಕೋಟಿ ಪ್ಯಾನ್‌ಗಳನ್ನು ಆಧಾರ್‌ ಜತೆ ಜೋಡಿಸಲಾಗಿದೆ.

ವಿಸ್ತರಣೆ ಇಲ್ಲ

ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳಿಗೆ ಆಧಾರ್‌ ಜೋಡಿಸಲು ಮಾರ್ಚ್‌ 31ಕ್ಕೆ ಕೊನೆಗೊಳ್ಳುತ್ತಿದ್ದ ಗಡುವನ್ನು ವಿಸ್ತರಿಸುವ ಮಧ್ಯಂತರ ಆದೇಶ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ಬ್ಯಾಂಕ್‌ ಖಾತೆ ಮತ್ತು ಮೊಬೈಲ್‌ ಸಂಖ್ಯೆಗಳನ್ನು ಆಧಾರ್‌ಗೆ ಜೋಡಣೆ ಮಾಡುವುದನ್ನು ಅನಿರ್ದಿಷ್ಟ ಕಾಲಾವಧಿಗೆ ಸುಪ್ರೀಂಕೋರ್ಟ್‌ ಇದೇ 13 ರಂದು ವಿಸ್ತರಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry