ಬೆಂಗಳೂರಿನಿಂದ ಮಂಗಳೂರಿಗೆ ಸ್ಥಳಾಂತರಿಸುವುದಕ್ಕೆ ವಿರೋಧ

7

ಬೆಂಗಳೂರಿನಿಂದ ಮಂಗಳೂರಿಗೆ ಸ್ಥಳಾಂತರಿಸುವುದಕ್ಕೆ ವಿರೋಧ

Published:
Updated:
ಬೆಂಗಳೂರಿನಿಂದ ಮಂಗಳೂರಿಗೆ ಸ್ಥಳಾಂತರಿಸುವುದಕ್ಕೆ ವಿರೋಧ

ಶಿರಸಿ: ನೂತನವಾಗಿ ರಚನೆಯಾಗಿರುವ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಕಚೇರಿಯನ್ನು ಬೆಂಗಳೂರಿನಿಂದ ಮಂಗಳೂರಿಗೆ ಸ್ಥಳಾಂತರಿಸುವಂತೆ ರಾಜ್ಯಸರ್ಕಾರ ಆದೇಶ ಹೊರಡಿಸಿದ್ದು, ಇದಕ್ಕೆ ಮಲೆನಾಡಿನ ಭಾಗದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಮೌಖಿಕ ಆದೇಶದನ್ವಯ, ಸಿಬ್ಬಂದಿ ಸಹಿತ ಕಚೇರಿಯನ್ನು ಮಂಗಳೂರಿಗೆ ಸ್ಥಳಾಂತರಿಸಲು ಮಾರ್ಚ್‌ 23ರಂದು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಯಕ್ಷಗಾನ ಕಲಾವಿದ ಶಿವಮೊಗ್ಗದ ದತ್ತಮೂರ್ತಿ ಭಟ್ಟ ಅವರು, ‘ಯಕ್ಷಗಾನಕ್ಕೆ ಕರ್ನಾಟಕದ ಎಲ್ಲರ ಕೊಡುಗೆಯಿದೆ. ನಿರ್ದಿಷ್ಟ ಪ್ರದೇಶಕ್ಕೆ ಸೀಮಿತಗೊಳಿಸಿ ಇಂತಹ ನಿರ್ಣಯ ಕೈಗೊಳ್ಳಬಾರದು. ಅಕಾಡೆಮಿಯ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ಬೆಂಗಳೂರಿನಲ್ಲಿಯೇ ಕಚೇರಿ ಇರುವುದು ಸೂಕ್ತ’ ಎಂದಿದ್ದಾರೆ.

‘ಅಕಾಡೆಮಿಯ ಕಚೇರಿಯನ್ನು ಮಂಗಳೂರಿಗೆ ಸ್ಥಳಾಂತರಿಸಿದರೆ, ಯಕ್ಷಗಾನ ಕರಾವಳಿಗೆ ಸೀಮಿತ ಎನ್ನುವ ಭಾವನೆ ಬರುತ್ತದೆ. ಬೆಂಗಳೂರು ಒಳಗೊಂಡಂತೆ ಇಡೀ ಕರ್ನಾಟಕದಲ್ಲಿ ಯಕ್ಷಗಾನ ಕಲೆಯಿದೆ. ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಪಡುವಲಪಾಯ ಯಕ್ಷಗಾನ ಪ್ರಚಲಿತದಲ್ಲಿದ್ದರೆ, ಚಿತ್ರದುರ್ಗ, ತುಮಕೂರು, ತಿಪಟೂರು ಭಾಗದಲ್ಲಿ ಮೂಡಲಪಾಯ ಯಕ್ಷಗಾನ ಚಾಲ್ತಿಯಲ್ಲಿದೆ.

ಮರೆಯಾಗುತ್ತಿರುವ ಮೂಡಲಪಾಯ ಯಕ್ಷಗಾನವನ್ನು ಉಳಿಸಿಕೊಳ್ಳಲು ಅಕಾಡೆಮಿಯ ಕಚೇರಿ ಬೆಂಗಳೂರಿನಲ್ಲಿಯೇ ಉಳಿಯಬೇಕು. ಅಕಾಡೆಮಿಯ ಕಚೇರಿ ಮಂಗಳೂರಿಗೆ ಸ್ಥಳಾಂತರಗೊಂಡರೆ, ಸಂಪರ್ಕದ ಸಮಸ್ಯೆಯಿಂದ ಈ ಕಲೆ ಬದಿಗೆ ಸರಿದುಹೋಗಬಹುದು. ಯಕ್ಷಗಾನ ಕಲಾವಿದರು, ಅಕಾಡೆಮಿ ಸದಸ್ಯರನ್ನು ಸಂಪರ್ಕಿಸಿಯೇ ಸರ್ಕಾರ ಅಂತಿಮ ನಿರ್ಣಯ ಕೈಗೊಳ್ಳಬೇಕು’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಕಲಾವಿದರೊಬ್ಬರು ಹೇಳಿದರು.

‘ಸರ್ಕಾರ ಹೊರಡಿಸಿರುವ ಆದೇಶದ ಪ್ರತಿ ನನಗೆ ಲಭ್ಯವಾಗಿಲ್ಲ. ಅದು ದೊರೆತ ಮೇಲೆ ನನ್ನ ಪ್ರತಿಕ್ರಿಯೆ ತಿಳಿಸುತ್ತೇನೆ’ ಎಂದು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಸೋಮವಾರ ಅಧಿಕಾರ ಸ್ವೀಕರಿಸಿರುವ ಪ್ರೊ.ಎಂ.ಎ.ಹೆಗಡೆ ದಂಟ್ಕಲ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry