ಗೂಗಲ್ ಸ್ಟ್ರೀಟ್‌ ವ್ಯೂಗೆ ಅನುಮತಿ ಇಲ್ಲ

7

ಗೂಗಲ್ ಸ್ಟ್ರೀಟ್‌ ವ್ಯೂಗೆ ಅನುಮತಿ ಇಲ್ಲ

Published:
Updated:
ಗೂಗಲ್ ಸ್ಟ್ರೀಟ್‌ ವ್ಯೂಗೆ ಅನುಮತಿ ಇಲ್ಲ

ನವದೆಹಲಿ: ‘ದೇಶದ ಯಾವುದೇ ಪ್ರಮುಖ ಸ್ಥಳಗಳು ಮತ್ತು ಬೀದಿಗಳ 360 ಡಿಗ್ರಿ ಕೋನದ ಚಿತ್ರಗಳನ್ನು ತೋರಿಸುವ ‘ಗೂಗಲ್ ಸ್ಟ್ರೀಟ್ ವ್ಯೂ’ ಸೇವೆಯ ಜಾರಿಗೆ ಅನುಮತಿ ನೀಡಿಲ್ಲ’ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ.

‘ದೇಶದ ಕೆಲವು ನಗರಗಳಲ್ಲಿ ಇದನ್ನು ಗೂಗಲ್ ಪ್ರಾಯೋಗಿಕವಾಗಿ ಜಾರಿ ಮಾಡಿದೆ. ದೇಶದ ಎಲ್ಲ ಪ್ರದೇಶಗಳ 360 ಡಿಗ್ರಿ ಕೋನದ ಚಿತ್ರಗಳನ್ನು ಒದಗಿಸುವ ಸೇವೆ ಆರಂಭಿಸಲು ಅನುಮತಿ ನೀಡಿ ಎಂದು ಗೂಗಲ್ 2015ರಲ್ಲೇ ಪ್ರಸ್ತಾವ ಸಲ್ಲಿಸಿತ್ತು. ಬೇರೆ–ಬೇರೆ ಕಾರಣಗಳಿಂದಾಗಿ ಈ ಪ್ರಸ್ತಾವವನ್ನು ತಿರಸ್ಕರಿಸಿದ್ದೇವೆ’ ಎಂದು ಕೇಂದ್ರ ಸಚಿವ ಹಂಸರಾಜ್ ಗಂಗಾರಾಂ ಅಹಿರ್ ಲೋಕಸಭೆಗೆ ಮಾಹಿತಿ ನೀಡಿದ್ದಾರೆ. ಆದರೆ ಆ ಕಾರಣಗಳು ಯಾವುವು ಎಂಬುದನ್ನು ಅವರು ಬಹಿರಂಗಪಡಿಸಿಲ್ಲ.

ಏನಿದು ಸ್ಟ್ರೀಟ್ ವ್ಯೂ?: 360 ಡಿಗ್ರಿ ಕೋನದ ಚಿತ್ರಗಳನ್ನು ಸೆರೆಹಿಡಿಯುವ ಕ್ಯಾಮೆರಾಗಳನ್ನು ಹೊತ್ತ ವಾಹನಗಳು ಆಯ್ದ ನಗರಗಳ ಪ್ರತೀ ರಸ್ತೆಗಳಲ್ಲೂ ಸಂಚರಿಸಿ, ಅತ್ಯಂತ ಸ್ಪಷ್ಟವಾದ ಚಿತ್ರಗಳನ್ನು ಸೆರೆಹಿಡಿಯುತ್ತವೆ. ಅವನ್ನು ಗೂಗಲ್ ಮ್ಯಾಪ್, ಗೂಗಲ್ ಅರ್ಥ್ ಮತ್ತು ಗೂಗಲ್ ಸ್ಟ್ರೀಟ್ ವ್ಯೂ ಅಪ್ಲಿಕೇಷನ್‌ಗಳಿಗೆ ಅಪ್‌ಲೋಡ್ ಮಾಡಲಾಗಿರುತ್ತದೆ.

ಈ ಮೂರೂ ಅಪ್ಲಿಕೇಷನ್‌ಗಳಲ್ಲಿ ಯಾವುದೇ ಸ್ಥಳಗಳನ್ನು ಆಯ್ಕೆ ಮಾಡಿದರೆ, ಅದರ ನಕ್ಷೆಯ ಜತೆಗೆ ಚಿತ್ರಗಳ ಪಟ್ಟಿಯೂ ಗೋಚರಿಸುತ್ತದೆ. ಆ ಪಟ್ಟಿಯಲ್ಲಿ ಕೆಲವು ಪನೋರಮಾ ಚಿತ್ರಗಳೂ ಇರುತ್ತವೆ. ಆ ಚಿತ್ರಗಳ ಮೇಲೆ ಕ್ಲಿಕ್ ಮಾಡಿದರೆ ಅವು ತೆರೆದುಕೊಳ್ಳುತ್ತವೆ. ಅವುಗಳ ಮೇಲೆ ಕಂಪ್ಯೂಟರ್‌ ಮೌಸ್‌ನ ಕರ್ಜರ್ (ಸ್ಮಾರ್ಟ್‌ಫೋನ್‌ಗಳ ಪರದೆ ಮೇಲೆ ಬೆರಳು ಇಟ್ಟು) ಇಟ್ಟು ನಮಗೆ ಬೇಕಾದತ್ತ ಚಿತ್ರವನ್ನು ತಿರುಗಿಸಬಹುದು. ಆಗ ನಾವು ತಿರುಗಿಸಿದ ದಿಕ್ಕಿನಲ್ಲಿರುವ ಚಿತ್ರ ಗೋಚರಿಸುತ್ತದೆ. ನಾವು ಒಂದು ಸ್ಥಳದಲ್ಲಿ ನಿಂತು ಕತ್ತನ್ನು ತಿರುಗಿಸಿ ಹಿಂದೆ–ಮುಂದೆ, ಮೇಲೆ–ಕೆಳಗೆ ಮತ್ತು ಅಕ್ಕ–ಪಕ್ಕ ನೋಡಿದರೆ ಆಗುವಂತಹ ಅನುಭವವನ್ನೇ ಈ ಚಿತ್ರಗಳೂ ಕೊಡುತ್ತವೆ.

ನೆಲಮಟ್ಟದಲ್ಲಿ ನಿಂತು ಸೆರೆಹಿಡಿದಂತೆ ಈ ಚಿತ್ರಗಳಿರುತ್ತವೆ. ಹೀಗಾಗಿ ಇವನ್ನು ಸ್ಟ್ರೀಟ್‌ ವ್ಯೂ ಎಂದು ಕರೆಯಲಾಗುತ್ತದೆ.

ಮೈಸೂರು ಅರಮನೆಯ ಚಿತ್ರ: ಸದ್ಯ ತಾಜ್‌ಮಹಲ್, ಕುತುಬ್ ಮಿನಾರ್, ಕೆಂಪುಕೋಟೆ, ವಾರಾಣಸಿಯಲ್ಲಿ ನದಿ ದಂಡೆ, ನಳಂದಾ ವಿಶ್ವವಿದ್ಯಾಲಯ, ಮೈಸೂರು ಅರಮನೆ, ತಂಜಾವೂರಿನ ದೇವಾಲಯ ಮತ್ತು ಎಂ.ಚಿನ್ನಸ್ವಾಮಿ ಕ್ರೀಡಾಂಗಣದ 360 ಡಿಗ್ರಿ ಕೋನದ ಚಿತ್ರಗಳನ್ನು ಮಾತ್ರ ಗೂಗಲ್ ಪ್ರಾಯೋಗಿಕವಾಗಿ ಒದಗಿಸುತ್ತಿದೆ. ಉಳಿದಂತೆ ಈ ಮೂರೂ ಅಪ್ಲಿಕೇಷನ್‌ಗಳಲ್ಲಿ ಇರುವ ಬೇರೆ ಚಿತ್ರಗಳು ಬಳಕೆದಾರರು ಸೆರೆಹಿಡಿದು, ಅಪ್‌ಲೋಡ್ ಮಾಡಿದ ಚಿತ್ರಗಳಾಗಿವೆ.

ಆ್ಯಂಡ್ರಾಯ್ಡ್ ಫೋನ್‌ಗಳಲ್ಲಿ ‘ಗೂಗಲ್‌ ಸ್ಟ್ರೀಟ್ ವ್ಯೂ’ ಆ್ಯಪ್‌ ಅಳವಡಿಸಿಕೊಂಡಿರೆ, ಅಂತಹ ಚಿತ್ರಗಳನ್ನು ಅಪ್‌ಲೋಡ್ ಮಾಡಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry