ಭೂಮಿಗೊಂದು ಕೊನೆಯಿದೆ!

7

ಭೂಮಿಗೊಂದು ಕೊನೆಯಿದೆ!

Published:
Updated:
ಭೂಮಿಗೊಂದು   ಕೊನೆಯಿದೆ!

‘ಭೂ ಮಿ ಗುಂಡಗಿದೆ’ ಎಂದು ಗ್ರೀಕ್‌ ತತ್ವಶಾಸ್ತ್ರಜ್ಞ ಘೋಷಿಸಿ ಎರಡೂವರೆ ಸಾವಿರ ವರ್ಷಗಳು ಕಳೆದರೂ ಭೂಮಿಗೊಂದು ತುದಿಯಿದೆ ಎಂದೇ ನಂಬಿದ್ದವರು ಅನೇಕ. ಸೂರ್ಯನ ಸುತ್ತ ಭೂಮಿ ಸುತ್ತುತ್ತದೆ ಎಂಬ ಸಿದ್ಧಾಂತವನ್ನು ಬೆಂಬಲಿಸಿ ಗೃಹ ಬಂಧನಕ್ಕೆ ಒಳಗಾದ ಗೆಲಿಲಿಯೊ. ಕೈತೊಳೆದು ಚಿಕಿತ್ಸೆ ನೀಡಿದರೆ ಗರ್ಭಿಣಿಯರ ಪ್ರಾಣ ಉಳಿದೀತು ಎಂದು ಸಲಹೆ ನೀಡಿದ ವೈದ್ಯ ಥಳಿತಕ್ಕೆ ಒಳಗಾದ. ಇಂಥ ಎಷ್ಟೋ ಸಂಶೋಧನೆ-ಆವಿಷ್ಕಾರಗಳನ್ನು ಹೀಯಾಳಿಸಿ, ಟೀಕಿಸಿ, ಕಡೆಗಣಿಸಿ ಇಡೀ ಮನುಕುಲದ ಅಭಿವೃದ್ಧಿಯ ಕಾಲೆಳೆದವರು ಅನ್ಯಗ್ರಹದ ಯಾವುದೋ ಜೀವಿಗಳಲ್ಲ. ಸಂಪ್ರದಾಯ, ಧಾರ್ಮಿಕ ಅಸಹಿಷ್ಣುತೆಯ ಹೆಸರಿನಲ್ಲಿ ವಿಜ್ಞಾನಿಗಳಿಗೆ ಹುಚ್ಚನೆಂಬ ಹಣೆಪಟ್ಟಿ ಕಟ್ಟಿ, ಅಪ್ಪಟ ಸತ್ಯವನ್ನು ದೇವನಿಂದನೆ ಎಂದು ಪ್ರಲಾಪಿಸಿ ಮೂರ್ಖರಾದವರು ನಾಗರಿಕರೇ.

ಪ್ರನಾಳ ಶಿಶು

ಮಕ್ಕಳಿಲ್ಲದೆ ಪರಿತಪಿಸುತ್ತಿದ್ದವರ ಪಾಲಿಗೆ ‘ಪ್ರನಾಳ ಶಿಶು’ ವಿಧಾನ ವರವಾಗಿದೆ. ಹೆಣ್ಣು-ಗಂಡಿನಿಂದ ಪಡೆದ ಅಂಡಾಣು ಮತ್ತು ವೀರ್ಯಾಣು ಸಂಗ್ರಹವನ್ನು ವೈದ್ಯಕೀಯ ವಿಜ್ಞಾನಿಗಳು ತಕ್ಕ ವಾತಾವರಣದಲ್ಲಿ ಸಂಸ್ಕರಿಸಿಟ್ಟು, ವೀರ್ಯಾಣುವನ್ನು ಅಂಡಾಣುವಿನ ಜತೆಗೆ ಸಂಧಿಸುವಂತೆ ಮಾಡಿ ಭ್ರೂಣದ ಆರಂಭದ ಅವಸ್ಥೆಯನ್ನು ಸೃಷ್ಟಿಸುತ್ತಾರೆ. ಹೀಗೆ ಪ್ರಯೋಗಾಲಯದಲ್ಲಿಯೇ ಭ್ರೂಣದ ಪ್ರಾರಂಭಿಕ ಸ್ಥಿತಿ ರೂಪುಗೊಳ್ಳುವುದರಿಂದ ಈ ಪ್ರಕ್ರಿಯೆಗೆ ಪ್ರನಾಳ ಶಿಶು ಎಂದು ಹೆಸರು. ಅಂಡಾಣುವಿ ನೊಂದಿಗೆ ವೀರ್ಯಾಣು ಕೂಡಿದ ಬಳಿಕ ಗರ್ಭಕ್ಕೆ ಇದನ್ನು ಸೇರಿಸಿ ಮುಂದಿನ ಬೆಳವಣಿಗೆ ಗಮನಿಸಲಾಗುತ್ತದೆ. ಈ ಪ್ರಕ್ರಿಯೆ ಯಶಸ್ವಿಯಾದಲ್ಲಿ ಗರ್ಭವತಿಯಾಗುವ ಮಹಿಳೆ ಎಲ್ಲರಂತೆ ಸಹಜ ಮಗುವನ್ನು ಪಡೆಯುತ್ತಾಳೆ.

ಇದರಲ್ಲಿ ಅಸಹ್ಯ, ದುರಾಲೋಚನೆ ಅಥವಾ ಸಮಾಜಘಾತುಕ ಅಂಶ ಏನಿದೆ? ಆದರೆ, ಪ್ರನಾಳ ಶಿಶು ಪ್ರಕ್ರಿಯೆಯ ಬಗ್ಗೆ ಹೆಚ್ಚಿನ ಮಾಹಿತಿ ಇರದ ಅಂದಿನ ನಮ್ಮದೇ ಸಮಾಜದಿಂದ ವಿಜ್ಞಾನಿ ಡಾ.ಸುಭಾಷ್ ಮುಖೋಪಾಧ್ಯಾಯ ತಿರಸ್ಕಾರಕ್ಕೆ ಒಳಗಾದರು. ಭಾರತದ ಮೊದಲ ಹಾಗೂ ಜಗತ್ತಿನ ಎರಡನೇ ಪ್ರನಾಳ ಶಿಶು ಸೃಷ್ಟಿಸಿದ ಡಾ.ಸುಭಾಷ್ ತನ್ನ ಸಂಶೋಧನೆಯನ್ನು ಟೋಕಿಯೋದಲ್ಲಿನ ವಿಜ್ಞಾನ ಸಭೆಯ ಮುಂದಿಡುವ ತವಕದಲ್ಲಿರುತ್ತಾರೆ. ವಿಶ್ವದ ಮೊದಲ ಪ್ರನಾಳ ಶಿಶು ‘ಲೂಯಿಸ್ ಬ್ರೌನ್’ ಜನಿಸಿದ 67 ದಿನಗಳ ಅಂತರದಲ್ಲಿ ಭಾರತದಲ್ಲಿ 1978ರ ಅ.3ರಂದು ಕೋಲ್ಕತ್ತಾದಲ್ಲಿ ‘ದುರ್ಗಾ’ ಜನನವಾಗಿರುತ್ತದೆ.

ಇಂಥದ್ದೊಂದು ಕ್ರಾಂತಿಕಾರಕ ಬೆಳವಣಿಗೆಯನ್ನು ಅರಿಯದ ಜನ-ಜನಪ್ರತಿನಿಧಿಗಳು ಡಾ.ಸುಭಾಷ್ ಅವರ ಸಂಶೋಧನೆಗೆ ವಿರೋಧ ವ್ಯಕ್ತಪಡಿಸಿದರು. ದುರ್ಗಾಳ ಮೂಲಕ ಅಪರೂಪದ ಸಂಶೋಧನೆಯನ್ನು ಜಗತ್ತಿಗೆ ಸಾರುವ ಅವಕಾಶಕ್ಕೆ ಪಶ್ಚಿಮ ಬಂಗಾಳ ಸರ್ಕಾರ ಕಡಿವಾಣ ಹಾಕಿತ್ತು.

ಈ ಎಲ್ಲ ಬೆಳವಣಿಗೆಗಳಿಂದ ಹತಾಶರಾದ ಡಾ.ಸುಭಾಷ್ 1981ರ ಜೂನ್ 19ರಂದು ಆತ್ಮಹತ್ಯೆ ಮಾಡಿಕೊಂಡರು. ಡಾ.ಆನಂದ ಕುಮಾರ್ ಅವರ ಶೋಧ ಕಾರ್ಯದ ಫಲವಾಗಿ 25 ವರ್ಷಗಳ ನಂತರ ದುರ್ಗಾ ಮೂಲಕ ಡಾ.ಸುಭಾಷ್ ಸಾಧನೆ ಮತ್ತೆ ಅನಾವರಣಗೊಂಡಿತು. ಮೊದಲ ಪ್ರನಾಳ ಶಿಶು ಲೂಯಿಸ್ ಬ್ರೌನ್ ಜನನಕ್ಕೆ ಕಾರಣರಾದ ಇಂಗ್ಲೆಂಡಿನ ವಿಜ್ಞಾನಿ ರಾಬರ್ಟ್ ಎಡ್ವರ್ಡ್ ಅವರು 2010ನೇ ಸಾಲಿನಲ್ಲಿ ವೈದ್ಯಕೀಯ ನೊಬೆಲ್ ಪ್ರಶಸ್ತಿಗೆ ಪಾತ್ರರಾದರು.

ಬ್ಯಾಕ್ಟೀರಿಯಾ ನುಂಗಿದ

ಬ್ಯಾಕ್ಟೀರಿಯಾಗಳಿಂದ ಹೊಟ್ಟೆ ಹುಣ್ಣು ಆಗುತ್ತದೆ ಎಂದು 80ರ ದಶಕದಲ್ಲಿ ಮಾರ್ಷಲ್ ಮತ್ತು ವಾರೆನ್ ಮುಂದಿಟ್ಟ ಆಲೋಚನೆಯನ್ನು ವೈಜ್ಞಾನಿಕ ಸಂಸ್ಥೆಗಳು ಅಪಹಾಸ್ಯ ಮಾಡಿದವು. ಆಮ್ಲೀಯ(ಅಸಿಡಿಕ್) ವಾತಾವರಣದಲ್ಲಿ ಬ್ಯಾಕ್ಟೀರಿಯಾಗಳು ಬದುಕಿ ಉಳಿಯುವುದು ಸಾಧ್ಯವೇ ಇಲ್ಲ ಎಂಬುದು ಆಗಿನ ನಂಬಿಕೆ. ಅತಿಯಾದ ಒತ್ತಡ ಮತ್ತು ಆಹಾರದ ಕ್ರಮದಲ್ಲಿನ ಏರುಪೇರು ಹೊಟ್ಟೆ ಹುಣ್ಣಿಗೆ ಕಾರಣ, ಹೊಟ್ಟೆಯೊಳಗಿನ ಆಮ್ಲೀಯ ವಾತಾವರಣದಲ್ಲಿ ಬ್ಯಾಕ್ಟೀರಿಯಾ ಉಳಿಯುವಿಕೆ ಅಸಾಧ್ಯ ಎಂದೇ ವಾದಿಸಲಾಯಿತು.

ತಮ್ಮ ಸಂಶೋಧನೆಯನ್ನು ಸಾಬೀತುಪಡಿಸಲು ಪ್ರಯೋಗಾಲಯದಲ್ಲಿ ಬೆಳೆಸಲಾಗಿದ್ದ ಅಪಾಯಕಾರಿ ಬ್ಯಾಕ್ಟೀರಿಯಾಗಳನ್ನು ಮಾರ್ಷಲ್ ನುಂಗಿದರು! ಇದು ವೈದ್ಯಕೀಯ ವಿಜ್ಞಾನದ ದಿಕ್ಕನ್ನೇ ಬದಲಿಸಿತು. 2005ರಲ್ಲಿ ಬ್ಯಾರಿ ಜೆ.ಮಾರ್ಷಲ್ ಮತ್ತು ಕೆ.ರಾಬಿನ್ ವಾರೆನ್‌ರ ಇದೇ ಸಂಶೋಧನೆಗೆ ನೊಬೆಲ್ ಪ್ರಶಸ್ತಿ ನೀಡಲಾಯಿತು.

ಭೂಮಿಯ ಸುತ್ತ...

ಇಡೀ ಬ್ರಹ್ಮಾಂಡದ ಮಧ್ಯದಲ್ಲಿ ಭೂಮಿಯಿದೆ. ಭೂಮಿಯ ಸುತ್ತಲು ಉಳಿದ ಆಕಾಶ ಕಾಯಗಳು ಸುತ್ತುತ್ತಿವೆ ಎಂದು ಧಾರ್ಮಿಕ ಕೇಂದ್ರಗಳು ನಂಬಿದ್ದವು. ಸೂರ್ಯ ಕೇಂದ್ರದಲ್ಲಿದ್ದು, ಭೂಮಿ ಸೂರ್ಯನನ್ನು ಸುತ್ತುತ್ತಿದೆ ಎನ್ನುವ ಕೋಪರ್ನಿಕಸ್‌ ಸಿದ್ಧಾಂತಕ್ಕೆ ವಿರೋಧ ವ್ಯಕ್ತವಾಗುವುದಷ್ಟೇ ಅಲ್ಲದೆ, ಅದನ್ನು ಬೆಂಬಲಿಸಿದವರನ್ನು ಶಿಕ್ಷಿಸಲಾಗುತ್ತಿತ್ತು. ಜಿಯೋರ್ಡನೊ ಬ್ರೂನೋನನ್ನು ಸುಡಲಾಯಿತು ಹಾಗೂ ಗೆಲಿಲಿಯೊಗೆ ಗೃಹ ಬಂಧನ ವಿಧಿಸಲಾಯಿತು.

ವಿಮಾನ: ವೈಜ್ಞಾನಿಕ ಆಟಿಕೆ

1903ರಲ್ಲಿ ರೈಟ್ ಸಹೋದರರು ಮೊದಲ ವಿಮಾನ ಹಾರಾಟ ನಡೆಸಿ ಸುದ್ದಿಯಾದರು. ವಿಮಾನ ಸುಮಾರು 12 ಸೆಕೆಂಡ್ ಹಾರಾಟ ನಡೆಸಿತ್ತು. ಇದಾಗಿ ಎಂಟು ವರ್ಷಗಳ ನಂತರವೂ ವಿಮಾನದ ಪೂರ್ಣ ಬಳಕೆ ನಿಲುಕದ ನಕ್ಷತ್ರವೆಂದೇ ಭಾವಿಸಲಾಗಿತ್ತು. ಫ್ರೆಂಚ್ ಸೇನೆಯ ದಂಡಾಧಿಕಾರಿ ಫರ್ಡಿನಂಡ್, ‘ವಿಮಾನಗಳು ಕುತೂಹಲಕಾರಿ ವೈಜ್ಞಾನಿಕ ಆಟಿಕೆಗಳು, ಅವುಗಳಿಗೆ ಸೇನೆಯಲ್ಲಿ ಪ್ರಾಮುಖ್ಯ ಇಲ್ಲ’ ಎಂದಿದ್ದರು. ಅದಾಗಿ ಕೆಲವೇ ವರ್ಷಗಳಲ್ಲಿ ವಾಯುಪಡೆಯೇ ಯುದ್ಧ ನಿರ್ಣಯಿಸುವಂತಾಯಿತು.

ಗುಂಡಗಿನ ಭೂಮಿ

ಪೈಥಾಗೊರಸ್ ಕ್ರಿ.ಪೂ. 6ನೇ ಶತಮಾನದಲ್ಲಿಯೇ ಭೂಮಿ ಗುಂಡಗಿದೆ ಎಂದು ಪ್ರಸ್ತಾಪಿಸಿದ್ದ. ಕ್ರಿ.ಪೂ. 330ರಲ್ಲಿ ಅರಿಸ್ಟಾಟಲ್ ಇದನ್ನು ಮತ್ತೊಮ್ಮೆ ವಿವರಿಸುವವರೆಗೂ ಗ್ರೀಕ್ ತತ್ವಶಾಸ್ತ್ರಜ್ಞರು ಗುಂಡಗಿನ ಭೂಮಿಯ ಕುರಿತು ಕಲ್ಪಿಸಿಕೊಳ್ಳಲು ಸಿದ್ಧರಿರಲಿಲ್ಲ. ಆದರೂ ಜಗತ್ತಿಗೆ ಒಂದು ತುದಿ ಇದೆ, ಅಲ್ಲಿಂದ ಮುಂದೆ ಸಾಗಿದರೆ ಸಾವು ಎಂಬ ಭಾವನೆ ಗಟ್ಟಿಯಾಗಿತ್ತು. ಕ್ರಿಸ್ಟೊಫರ್ ಕೊಲಂಬಸ್ (ಕ್ರಿ.ಶ.1492) ನಡೆಸಿದ ವಿಶ್ವ ಪರ್ಯಟನೆಯ ನಂತರವಷ್ಟೇ ಈ ಎಲ್ಲ ಭಾವನೆಗಳು ಬದಲಾಗಿದ್ದು.

ಎಲ್ಲ ಕಾಲ್ಪನಿಕ ಎಂದರು

ಆಶಾವಾದ, ಮರುಪ್ರಯತ್ನದ ವಿಷಯ ಎದುರಾದಾಗ ಇಂದಿಗೂ ಥಾಮಸ್ ಎಡಿಸನ್ ಅವರನ್ನು ಪ್ರೇರಕ ಶಕ್ತಿಯಾಗಿ ಉದಾಹರಿಸಲಾಗುತ್ತದೆ. ಸಾವಿರಾರು ಪ್ರಯತ್ನಗಳ ತಿಳಿವಳಿಕೆಯ ಫಲವಾಗಿ ಎಡಿಸನ್ ಬೆಳಕು ನೀಡುವ ‘ವಿದ್ಯುತ್ ಬಲ್ಬ್’ ಆವಿಷ್ಕರಿಸಿದರು. ಸಂಶೋಧನೆಗಳ ಮೂಲಕ ಅಮೆರಿಕ ಒಂದರಲ್ಲಿಯೇ 1 ಸಾವಿರಕ್ಕೂ ಹೆಚ್ಚು ಪೇಟೆಂಟ್ ತನ್ನದಾಗಿಸಿಕೊಂಡವರು ಎಡಿಸನ್. ರಾತ್ರಿಯಲ್ಲಿಯೂ ಜಗತ್ತನ್ನು ಬೆಳಕಿನಲ್ಲಿಡುವ ವಿದ್ಯುತ್ ಬಲ್ಬ್ ಆವಿಷ್ಕಾರದ ಕುರಿತು ಕೇಳಿಬಂದಿದ್ದು ಮೂದಲಿಕೆಯ ಮಾತುಗಳೇ. ಬ್ರಿಟಿಷ್ ಸಂಸತ್ ಸಮಿತಿ ‘ಇದು ವೈಜ್ಞಾನಿಕ ವ್ಯಕ್ತಿಗೆ ತಕ್ಕದಾದಲ್ಲ...’ ಎಂದರೆ, ವಿಜ್ಞಾನಿಗಳನ್ನು ಸೇರಿದಂತೆ ಹಲವರು ಇದೊಂದು ಕಲ್ಪನೆಯಷ್ಟೇ ಎಂದು ಜರಿದಿದ್ದರು.

ರೋಗ ಹರಡುವ ಕೀಟಾಣು

ಸೋಂಕಿನಿಂದಾಗಿ ಲೂಯಿಸ್ ಪ್ಯಾಶ್ಚರ್‌ನ ಮೂವರು ಮಕ್ಕಳು ಮೃತಪಟ್ಟರು. ಈ ಸರಣಿ ಸಾವಿನ ಬಳಿಕ ಲೂಯಿಸ್ ಅನೇಕ ಪರೀಕ್ಷೆಗಳ ಮೂಲಕ ಕೀಟಾಣುಗಳು ರೋಗ ಹರಡಲು ಮೂಲ ಕಾರಣ ಎಂಬ ಸಿದ್ಧಾಂತವನ್ನು ಮಂಡಿಸಿದ. 1850ರಲ್ಲಿ ಆತನ ಈ ಸಿದ್ಧಾಂತದ ವಿರುದ್ಧ ವೈದ್ಯಕೀಯ ಸಮುದಾಯವೇ ಕ್ರೂರ ಪ್ರತಿಕ್ರಿಯೆ ನೀಡಿತ್ತು.

ಕಾಲಕ್ರಮೇಣದಲ್ಲಿ ಜೀವಜಗತ್ತಿನ ಪ್ರಭೇದಗಳು ಬೆಳವಣಿಗೆ ಕಾಣುತ್ತವೆ ಎಂಬುದರ ಕುರಿತು ಡಾರ್ವಿನ್ 1838ರಲ್ಲಿ ತನ್ನ ನ್ಯಾಚುರಲ್ ಸೆಲೆಕ್ಷನ್ ಸಿದ್ಧಾಂತವನ್ನು ಪ್ರಕಟಿಸಲು ಎಂಟು ವರ್ಷ ತಡ ಮಾಡಿದ. ಸಮಾಜದಿಂದ ವಿರೋಧ ವ್ಯಕ್ತವಾಗುವ ಬೆದರಿಕೆ ಇದಕ್ಕೆ ಕಾರಣವಾಗಿತ್ತು. ಹೀಗೆ ಜಗತ್ತಿನ ಪ್ರಮುಖ ಸಂಶೋಧನೆ-ಅನ್ವೇಷಣೆಗಳು ಒಂದಿಲ್ಲೊಂದು ವಿರೋಧವನ್ನು ಎದುರಿಸಿಯೇ ಅಸ್ತಿತ್ವ ಉಳಿಸಿಕೊಂಡಿವೆ.

ಇಡೀ ಜಗತ್ತಿಗೆ ಐದು ಕಂಪ್ಯೂಟರ್ ಬಳಕೆಗೆ ಬಂದರೆ ಹೆಚ್ಚು ಎಂಬ ಊಹೆಗಳನ್ನೆಲ್ಲ ಮೀರಿ ವಿಜ್ಞಾನ-ತಂತ್ರಜ್ಞಾನ ಬೆಳವಣಿಗೆ ಕಾಣುತ್ತಿದೆ. ಇಂದಿಗೂ ಅನುಮಾನ, ಟೀಕೆ ಮುಂದುವರಿದಿದೆ. ಇದರೊಂದಿಗೆ ವಿಜ್ಞಾನವನ್ನು ದ್ವೇಷಕ್ಕೆ, ಸ್ವಾರ್ಥಕ್ಕೆ ಬಳಸಿ ಅಪಾಯದ ಸ್ಥಿತಿ ತಂದು ಕೊಂಡಿರುವುದು ಮನುಷ್ಯನದೇ ಮೂರ್ಖತನ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry