2025ಕ್ಕೆ ಪ್ರಯೋಗಾಲಯದಲ್ಲಿ ತಯಾರಿಸಿದ ಮಾಂಸ ಮಾರಾಟ

7

2025ಕ್ಕೆ ಪ್ರಯೋಗಾಲಯದಲ್ಲಿ ತಯಾರಿಸಿದ ಮಾಂಸ ಮಾರಾಟ

Published:
Updated:
2025ಕ್ಕೆ ಪ್ರಯೋಗಾಲಯದಲ್ಲಿ ತಯಾರಿಸಿದ ಮಾಂಸ ಮಾರಾಟ

ಹೈದರಾಬಾದ್: ಪ್ರಯೋಗಾಲಯದಲ್ಲಿ ತಯಾರಿಸಿದ ಶುದ್ಧ ಮಾಂಸವು 2025ರ ವೇಳೆಗೆ ಭಾರತದ ಮಾರುಕಟ್ಟೆಯಲ್ಲಿ ದೊರೆಯಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಪ್ರಾಣಿ ಕಲ್ಯಾಣ ಸಂಘಟನೆ,‘ಹ್ಯುಮೇನ್‌ ಸೊಸೈಟಿ ಇಂಟರ್‌ನ್ಯಾಷನಲ್‌’ (ಎಚ್‌ಎಸ್‌ಐ) ಮತ್ತು ಹೈದರಾಬಾದ್‌ನ ಸೆಂಟರ್ ಫಾರ್ ಸೆಲ್ಯುಲರ್ ಅಂಡ್ ಮಾಲಿಕ್ಯುಲರ್‌ ಬಯಾಲಜಿ (ಸಿಸಿಎಂಬಿ) ಸಂಸ್ಥೆಗಳು ಶುದ್ಧ ಮಾಂಸ ತಯಾರಿಕಾ ವಿಧಾನ ಅಭಿವೃದ್ಧಿಪಡಿಸಲು ಕೈಜೋಡಿಸಿವೆ.

ಈ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಇನ್ನಷ್ಟು ನವೋದ್ಯಮಗಳು ಮತ್ತು ನಿಯಂತ್ರಕರನ್ನು ಒಂದೇ ವೇದಿಕೆಯಡಿ ತರಲು ಯೋಜನೆ ರೂಪಿಸಿವೆ.

‘2018ರ ಅಂತ್ಯಕ್ಕೆ ಶುದ್ಧ ಮಾಂಸವು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆ ಇದೆ. ಭಾರತದಲ್ಲಿ ಇದು ದೊರಕಲು 2025ರವರೆಗೂ ಕಾಯಬೇಕಾಗುತ್ತದೆ’ ಎಂದು ಎಚ್‌ಎಸ್‌ಐ ಇಂಡಿಯಾದ ಉಪನಿರ್ದೇಶಕಿ ಅಲೋಕ್‌ಪರ್ಣ ಸೇನ್‌ಗುಪ್ತಾ ತಿಳಿಸಿದ್ದಾರೆ.

ಪ್ರಾಣಿಗಳ ಸಾಕಾಣಿಕೆ ಉದ್ಯಮದಲ್ಲಿ ಮಾಂಸ ತಯಾರಿಕೆಗೆ ಸುಸ್ಥಿರವಲ್ಲದ ವಿಧಾನ ಅನುಸರಿಸುತ್ತಿರುವುದು ಪರಿಸರ ಮತ್ತು ಆಹಾರ ಭದ್ರತೆಗೆ ಹಾನಿ ಉಂಟು ಮಾಡುತ್ತಿದೆ. ಇದು ಶುದ್ಧ ಮಾಂಸ ಅಭಿವೃದ್ಧಿಪಡಿಸಲು ಕಾರಣವಾಗಿದೆ.

2013ರಲ್ಲಿ ಪ್ರಯೋಗಾಲಯದಲ್ಲಿ ಶುದ್ಧ ಮಾಂಸ ಅಭಿವೃದ್ಧಿಪಡಿಸಿ, ಬೀಫ್‌ ಬರ್ಗರ್ ಎಂಬ ಆಹಾರ ತಯಾರಿಸಲಾಗಿತ್ತು.

‘ಕಳೆದ ಐದು ವರ್ಷಗಳಲ್ಲಿ ಭಾರತ ಮೂಲದ ಹೃದಯರೋಗ ತಜ್ಞೆ ಡಾ. ಉಮಾ ವಲೇಟಿ ಅವರ ‘ಮೆಂಫಿಸ್ ಮೀಟ್’ ಸಂಸ್ಥೆ ಮಾಂಸದ ಉಂಡೆಗಳನ್ನು ತಯಾರಿಸಲಾರಂಭಿಸಿದೆ. ಪ್ರತಿ ಮಾಂಸದ ಉಂಡೆಯ ಬೆಲೆ ₹85 ಸಾವಿರ ಇದೆ. ಇನ್ನೊಂದು ಕಂಪನಿ ‘ಮೋಸಾ ಮೀಟ್‌’ ತಯಾರಿಸಿದ ಹಂದಿ ಮಾಂಸದ ಪ್ರತಿ ತುಂಡಿನ ಬೆಲೆ ₹1,950 ಇದೆ’ ಎಂದು ಸೇನ್‌ಗುಪ್ತಾ ವಿವರಿಸಿದ್ದಾರೆ.

‘ಸದ್ಯದ ಮಾರುಕಟ್ಟೆ ಬೆಲೆ ಅತ್ಯಂತ ಹೆಚ್ಚಿದ್ದು, ಕಡಿಮೆ ಬೆಲೆಗೆ ದೊರೆಯುವಂತೆ ಮಾಡಲು ಹಲವು ಕಂಪನಿಗಳು ಸಂಶೋಧನೆ ನಡೆಸಲು ಮುಂದಾಗಿವೆ. ಅಲ್ಲದೆ, ತಯಾರಿಕೆ ಪ್ರಮಾಣವನ್ನೂ ಹೆಚ್ಚಿಸಲು ಯೋಜಿಸುತ್ತಿವೆ’ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry