‘ಅಭಿವೃದ್ಧಿ’ ಒರೆಗೆ ಹಚ್ಚಲು ಮತದಾರ ಸಜ್ಜು

7

‘ಅಭಿವೃದ್ಧಿ’ ಒರೆಗೆ ಹಚ್ಚಲು ಮತದಾರ ಸಜ್ಜು

Published:
Updated:
‘ಅಭಿವೃದ್ಧಿ’ ಒರೆಗೆ ಹಚ್ಚಲು ಮತದಾರ ಸಜ್ಜು

ಬೆಂಗಳೂರು: ನಗರದ ಪೂರ್ವದ ಹೆಬ್ಬಾಗಿಲಿನಂತಿದೆ ಕೆ.ಆರ್‌.ಪುರ ಕ್ಷೇತ್ರ. ಬಿಬಿಎಂಪಿ ವ್ಯಾಪ್ತಿಗೆ ಹೊಸತಾಗಿ ಸೇರ್ಪಡೆಗೊಂಡ 110 ಹಳ್ಳಿಗಳ ಪೈಕಿ 11 ಹಳ್ಳಿಗಳು ಇಲ್ಲಿವೆ. ಹಾಗಾಗಿ ಸಹಜವಾಗಿ ಹೆಚ್ಚಿನ ಮೂಲಸೌಕರ್ಯ ಬಯಸುವ ಈ ಕ್ಷೇತ್ರದಲ್ಲಿ ‘ಅಭಿವೃದ್ಧಿ’ಯನ್ನೇ ಪಣಕ್ಕಿಟ್ಟುಕೊಂಡು ಚುನಾವಣೆ ಎದುರಿಸಲು ಪ್ರಮುಖ ರಾಜಕೀಯ ಪಕ್ಷಗಳು ಸಜ್ಜಾಗಿವೆ.

ಪುನರ್ವಿಂಗಡಣೆ ಬಳಿಕ ಒಮ್ಮೆ ಬಿಜೆಪಿ ಹಾಗೂ ಮತ್ತೊಮ್ಮೆ ಕಾಂಗ್ರೆಸ್‌ ಶಾಸಕರು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಈ ಎರಡು ಅವಧಿಗಳಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿಗಳನ್ನು ಅಳೆದು ತೂಗಿ ಮುಂದಿನ ಅವಧಿಗೆ ಜನಪ್ರತಿನಿಧಿಯನ್ನು ಆರಿಸಿ ಕಳುಹಿಸಲು ಮತದಾರರು ಸಜ್ಜಾಗಿದ್ದಾರೆ.

ಬೈರತಿ ಎ.ಬಸವರಾಜು ಅವರು ಈ ಕ್ಷೇತ್ರದ ಶಾಸಕ. ಈ ಹಿಂದೆ ಪಾಲಿಕೆ ಸದಸ್ಯರಾಗಿದ್ದ ಅವರು 2013ರ ಚುನಾವಣೆಯಲ್ಲಿ ಬಿಜೆಪಿಯ ಎನ್‌.ಎಸ್‌.ನಂದೀಶ್‌ ರೆಡ್ಡಿ ಅವರನ್ನು 24,001 ಮತಗಳ ಅಂತರದಿಂದ ಸೋಲಿಸಿದ್ದರು. ಹಾಲಿ ಶಾಸಕರಿಗೆ ಟಿಕೆಟ್‌ ನೀಡಲು ಕಾಂಗ್ರೆಸ್‌ ನಿರ್ಧರಿಸಿರುವುದರಿಂದ ಅವರೇ ಈ ಬಾರಿಯೂ ಪಕ್ಷದ ಅಭ್ಯರ್ಥಿಯಾಗುವುದು ಬಹುತೇಕ ನಿಚ್ಚಳ.

ದೇವಸ್ಥಾನಗಳಿಗೆ ದೇಣಿಗೆ ನೀಡುವುದು, ಬಡ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು ಒದಗಿಸುವುದು, ಸಂಘ ಸಂಸ್ಥೆಗಳಿಗೆ ನೆರವಾಗುವ ಮೂಲಕ ಚುನಾವಣೆ ಘೋಷಣೆಗೂ ಮುನ್ನವೇ ಬೈರತಿ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದಾರೆ.

ಬಿಜೆಪಿ ಯುವಮೋರ್ಚಾ ಕ್ಷೇತ್ರದ ಘಟಕದ ಅಧ್ಯಕ್ಷರಾಗಿದ್ದ ನಂದೀಶ್‌ ರೆಡ್ಡಿ 2008ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಾಜಿ ಸಚಿವ ಎ.ಕೃಷ್ಣಪ್ಪ ಅವರನ್ನು 9,770 ಮತಗಳ ಅಂತರದಿಂದ ಸೋಲಿಸಿದ್ದರು. ಎರಡನೇ ಬಾರಿ ವಿಧಾನಸಭೆ ಪ್ರವೇಶಿಸುವ ಅವರ ಕನಸಿಗೆ ಬೈರತಿ ತಣ್ಣೀರೆರಚಿದ್ದರು. ರೆಡ್ಡಿ ಈ ಬಾರಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾರೆ.

2013ರಲ್ಲಿ ಟಿಕೆಟ್‌ ಸಿಗದ ಕಾರಣ ಬೇಸರಗೊಂಡಿದ್ದ ಎ.ಕೃಷ್ಣಪ್ಪ ಜೆಡಿಎಸ್‌ ಸೇರಿದ್ದರು. ಅವರ ಅಕಾಲಿಕ ಮರಣ ನಂತರ ಮಗಳು ಕೆ.ಪೂರ್ಣಿಮಾ ಬಿಜೆಪಿಗೆ ಸೇರಿ ಕೆ.ಆರ್‌.ಪುರ ವಾರ್ಡ್‌ನ ಪಾಲಿಕೆ ಸದಸ್ಯೆಯಾಗಿದ್ದಾರೆ. ಅವರೂ ಈ ಕ್ಷೇತ್ರದ ಆಕಾಂಕ್ಷಿ ಎಂಬ ವದಂತಿ ಇತ್ತು. ಆದರೆ, ಅವರು ಅದನ್ನು ಅಲ್ಲಗಳೆದಿದ್ದಾರೆ. ‘ನಾನು ಇಲ್ಲಿಂದ ಟಿಕೆಟ್‌ ಕೇಳಿಲ್ಲ. ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಟಿಕೆಟ್‌ ಆಕಾಂಕ್ಷಿ’ ಎಂದು ಪೂರ್ಣಿಮಾ ‘ಪ್ರಜಾವಾಣಿ’ಗೆ ತಿಳಿಸಿದರು.

ಹಾಗಾಗಿ, ಈ ಬಾರಿಯೂ ನಂದೀಶ್‌ ರೆಡ್ಡಿ ಅವರೇ ಇಲ್ಲಿ ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚು. ಸೋತ ಬಳಿಕ ರಾಜಕೀಯ ಚಟುವಟಿಕೆಯಿಂದ ದೂರ ಇದ್ದ ಅವರು ಕಳೆದೊಂದು ವರ್ಷದಿಂದ ಮತ್ತೆ ಸಕ್ರಿಯರಾಗಿದ್ದಾರೆ.

ಕಾಂಗ್ರೆಸ್‌ ಮುಖಂಡ ನಾರಾಯಣಸ್ವಾಮಿ ಅವರು ಬಿಬಿಎಂಪಿಯ ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ನುಗ್ಗಿ ‘ಪೆಟ್ರೋಲ್‌’ ಸುರಿದು ಬೆಂಕಿ ಇಡುವುದಾಗಿ ಹೇಳಿ ರಾದ್ಧಾಂತ ಮಾಡಿರುವ ಪ್ರಕರಣವನ್ನೂ ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳಲು ಮುಂದಾಗಿದೆ.

‘ಇಲ್ಲಿ ಶಾಸಕರ ಬೆಂಬಲಿಗರ ದಬ್ಬಾಳಿಕೆ ಒಂದೆರಡಲ್ಲ. ಪೆಟ್ರೋಲ್‌ ಸುರಿಯುವ ಬೆದರಿಕೆ ಪ್ರಕರಣ ಮಾಧ್ಯಮಗಳಲ್ಲಿ ಹೆಚ್ಚಾಗಿ ಸುದ್ದಿಯಾಯಿತು. ಇಂತಹ ಘಟನೆಗಳು ಇಲ್ಲಿ ಮಾಮೂಲಿ. ಜನ ಇದರಿಂದ ರೋಸಿ ಹೋಗಿದ್ದಾರೆ’ ಎನ್ನುತ್ತಾರೆ ನಂದೀಶ್‌ ರೆಡ್ಡಿ.

‘ನಗರದಲ್ಲಿ ಅತೀ ಹೆಚ್ಚು ಅಪಘಾತಗಳು ಸಂಭವಿಸುವುದು ಇಲ್ಲಿಯೇ. ಕೊಲೆ, ಹಲ್ಲೆ, ಕಳವಿನಂತಹ ಅಪರಾಧ ಕೃತ್ಯಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುವುದು ಇಲ್ಲೇ. ಕೆ.ಆರ್‌.ಪುರ, ಬಸವನಪುರ ವಾರ್ಡ್‌ಗಳಲ್ಲೇ ನಾಗರಿಕರೇ ರಾತ್ರಿ ವೇಳೆ ಗಸ್ತು ತಿರುಗಬೇಕಾದ ಪರಿಸ್ಥಿತಿ ಇದೆ’ ಎಂದು ಅವರು ದೂರಿದರು.

ಇದನ್ನು ಕಾಂಗ್ರೆಸ್‌ನವರು ಒಪ್ಪುವುದಿಲ್ಲ. ‘ಕೊಲೆ, ಸುಲಿಗೆ, ಕಳವು ಕೃತ್ಯಗಳಿಗೂ ಶಾಸಕರೇ ಹೊಣೆ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಬಿಜೆಪಿಯವರಿಗೆ ಚುನಾವಣಾ ಪ್ರಚಾರಕ್ಕೆ ಬೇರೆ ವಿಷಯಗಳು ಸಿಕ್ಕಿಲ್ಲ. ಹಾಗಾಗಿ ಇಂತಹ ಕ್ಷುಲ್ಲಕ ವಿಚಾರಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ’ ಎಂದು ಪಾಲಿಕೆಯ ಸದಸ್ಯ ಎಸ್‌.ಜಿ.ನಾಗರಾಜ್‌ ಹೇಳಿದರು.

ಎ.ಕೃಷ್ಣಪ್ಪ ಅವರ ಸಹೋದರ ಡಿ.ಎ.ಗೋಪಾಲ್‌ ಅವರನ್ನು ಕಣಕ್ಕಿಳಿಸಲು ಜೆಡಿಎಸ್‌ ನಿರ್ಧರಿಸಿದೆ. ಅಣ್ಣನ ರಾಜಕೀಯ ಚಟುವಟಿಕೆಗೆ ಬೆನ್ನೆಲುಬಾಗಿದ್ದ ಅವರು ಈ ಕ್ಷೇತ್ರದ ಉದ್ದಗಲವನ್ನು ಚೆನ್ನಾಗಿ ಬಲ್ಲರು. ಸದ್ಯ ಇಲ್ಲಿನ ಒಂದು ವಾರ್ಡ್‌ನಲ್ಲೂ ಜೆಡಿಎಸ್‌ ಸದಸ್ಯರಿಲ್ಲ. ಗೋಪಾಲ್‌ ಸ್ಪರ್ಧೆಯಿಂದ ಇಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸಲು ಸಾಧ್ಯವಾಗಲಿದೆ ಎಂಬ ಲೆಕ್ಕಾಚಾರ ಪಕ್ಷದ ವರಿಷ್ಠರದು.

ವಿರೋಧ ಪಕ್ಷಗಳ ಟೀಕೆಗೆ ತಲೆಕೆಡಿಸಿಕೊಳ್ಳದೇ, ಅಭಿವೃದ್ಧಿಯನ್ನೇ ಮುಂದಿಟ್ಟುಕೊಂಡು ಮತ ಯಾಚಿಸಲು ಕಾಂಗ್ರೆಸ್‌ ಮುಂದಾಗಿದೆ.

‘ನಗರದ ಕ್ಷೇತ್ರಗಳ ಪೈಕಿ ಅತ್ಯಂತ ಹೆಚ್ಚು ಅನುದಾನ ಮಂಜೂರು ಮಾಡಿಸಿಕೊಂಡ ಮೂವರು ಶಾಸಕರ ಪೈಕಿ ಬೈರತಿ ಅವರೂ ಒಬ್ಬರು ಎಂದು ವಿರೋಧ ಪಕ್ಷದವರೇ ಹೇಳುತ್ತಿದ್ದಾರೆ. ಇಲ್ಲಿ ನಡೆದಿರುವ ಕಾಮಗಾರಿಗಳು ಇಲ್ಲಿನ ಅಭಿವೃದ್ಧಿಯ ಕತೆಯನ್ನು ಹೇಳುತ್ತವೆ. ಅದನ್ನೇ ಮುಂದಿಟ್ಟುಕೊಂಡು ಮತಯಾಚಿಸುತ್ತೇವೆ’ ಎಂದು ಹೇಳಿಕೊಳ್ಳುತ್ತಾರೆ ಕಾಂಗ್ರೆಸ್‌ ಮುಖಂಡರು.

‘ಇಲ್ಲಿನ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಒಳಚರಂಡಿ ಕಾಮಗಾರಿ ಪ್ರಗತಿಯಲ್ಲಿದೆ. ರಾಮಮೂರ್ತಿನಗರದ ಬಳಿಯ ಮೇಲ್ಸೇತುವೆ ಲೋಕಾರ್ಪಣೆಗೊಂಡಿದೆ. ಬಾಬುಸಪಾಳ್ಯ, ಕೆ.ಆರ್.ಪುರ ವಿನಾಯಕ ದೇವಸ್ಥಾನ ಹಾಗೂ ಕಸ್ತೂರಿ ನಗರ ಮುಖ್ಯರಸ್ತೆಗಳ ಬಳಿ ಸ್ಕೈವಾಕ್‌ ನಿರ್ಮಿಸಲಾಗಿದೆ. 600 ಫಲಾನುಭವಿಗಳಿಗೆ ಮನೆಯ ಹಕ್ಕುಪತ್ರ ವಿತರಿಸಲಾಗಿದೆ’ ಎಂದು ಅಭಿವೃದ್ಧಿ ಕಾಮಗಾರಿಗಳ ಪಟ್ಟಿಯನ್ನೇ ಅವರು ಮುಂದಿಡುತ್ತಾರೆ.

ಬಸವನಪುರ, ಹೊರಮಾವು, ಅಗರ, ವಿಭೂತಿಪುರ, ಬೆನ್ನಿಗಾನಹಳ್ಳಿ, ಗಂಗಶೆಟ್ಟಿಹಳ್ಳಿ, ಚಿಕ್ಕದೇವಸಂದ್ರ, ಕೌದೇನಹಳ್ಳಿ ಕೆರೆಗಳ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಕೆ.ಆರ್‌.ಪುರ ಸರ್ಕಾರಿ ಕಾಲೇಜು ಹಾಗೂ ಸಾರ್ವಜನಿಕ ಆಸ್ಪತ್ರೆಗಳನ್ನೂ ಅಭಿವೃದ್ಧಿಪಡಿಸಲಾಗಿದೆ.

‘ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ನಾವು ಕಾಮಗಾರಿಗಳ ಗುಣಮಟ್ಟವನ್ನೂ ನೋಡಬೇಕಾಗುತ್ತದಲ್ಲವೇ’ ಎಂದು ಪ್ರಶ್ನೆಯನ್ನು ಮುಂದಿಡುತ್ತಾರೆ ಇಲ್ಲಿನ ಸಾರ್ವಜನಿಕರು.

ಹೊರಮಾವು ಬಳಿ ನಿರ್ಮಿಸಿರುವ ಕೆಳಸೇತುವೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಉದ್ಘಾಟಿಸಿದ್ದರು. ಅದಿನ್ನೂ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿಲ್ಲ ಎಂದು ಕೆ.ಆರ್‌.ಪುರ ನಿವಾಸಿ ಚನ್ನಕೇಶವ ದೂರಿದರು.

ಚೆನ್ನೈಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ, ನಗರವನ್ನು ಸೇರಿಕೊಳ್ಳುವುದು ಇಲ್ಲಿಯೇ. ಟಿನ್‌ಫ್ಯಾಕ್ಟರಿ ಬಳಿ ಹಾಗೂ ಹೊರವರ್ತುಲ ರಸ್ತೆಯಲ್ಲಿನ ಸಂಚಾರ ದಟ್ಟಣೆ ಸಮಸ್ಯೆ ಇಲ್ಲಿನ ಪ್ರಯಾಣಿಕರು ಹೈರಾಣಾಗುವಂತೆ ಮಾಡುತ್ತಿದೆ. ಬೆನ್ನಿಗಾನಹಳ್ಳಿಯಿಂದ ಮೇಡಹಳ್ಳಿವರೆಗೆ ಮೇಲ್ಸೇತುವೆ ನಿರ್ಮಿಸಬೇಕೆಂಬ ಒತ್ತಾಯವೂ ಇದೆ.

‘ನಾನು ಮಹದೇವಪುರ ಬಳಿ ಕಚೇರಿಯೊಂದರಲ್ಲಿ ಕೆಲಸಕ್ಕಿದ್ದೇವೆ. ಟಿನ್‌ಫ್ಯಾಕ್ಟರಿ ದಾಟಿ ಕಚೇರಿ ತಲುಪುವಷ್ಟರಲ್ಲಿ ಅರ್ಧಜೀವ ಹೋಗುತ್ತದೆ’ ಎಂದು ರಾಘವೇಂದ್ರ ತಿಳಿಸಿದರು.

ಬೇಸಿಗೆ ದಾಂಗುಡಿ ಇಡುತ್ತಲೇ ಇಲ್ಲಿ ಕೊಳವೆಬಾವಿಗಳೂ ಬತ್ತಿವೆ. ಇನ್ನೇನು ಚುನಾವಣೆ ಬಂತು ಎನ್ನುವಾಗ ಇಲ್ಲಿನ ಹಳ್ಳಿಗಳಿಗೆ ಕಾವೇರಿ ನೀರು ಪೂರೈಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಅದಿನ್ನೂ ಪೂರ್ಣಗೊಂಡಿಲ್ಲ. ನೀರಿನ ತೀವ್ರ ಸಮಸ್ಯೆ ಇರುವಾಗಲೇ ಮತ ಕೇಳಬೇಕಾದ ಪರಿಸ್ಥಿತಿ ಎದುರಾಗಿರುವುದು ಪಕ್ಷಗಳ ಕಾರ್ಯಕರ್ತರಿಗೆ ತಲೆನೋವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry