ಕುಟುಂಬ ರಾಜಕಾರಣದ ವಿರುದ್ಧ ಜಾಗೃತಿ ಆಂದೋಲನ

7
ವಿವಿಧ ಸಂಘಟನೆ ಮುಖಂಡರ ಸಭೆಯಲ್ಲಿ ತೀರ್ಮಾನ

ಕುಟುಂಬ ರಾಜಕಾರಣದ ವಿರುದ್ಧ ಜಾಗೃತಿ ಆಂದೋಲನ

Published:
Updated:

ಹಾಸನ: ರಾಜಕೀಯ ಭ್ರಷ್ಟಾಚಾರ ಹಾಗೂ ಕುಟುಂಬ ರಾಜಕಾರಣದ ವಿರುದ್ಧ ಜಾಗೃತಿ ಆಂದೋಲನ ನಡೆಸಲು ವಿವಿಧ ಸಂಘಟನೆಗಳು ನಿರ್ಧರಿಸಿವೆ.ಮತದಾರರ ವೇದಿಕೆ ಆಶ್ರಯದಲ್ಲಿ ನಗರದಲ್ಲಿ ನಡೆದ ವಿವಿಧ ಸಂಘಟನೆಗಳ ಮುಖಂಡರ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ.ಸಂಘಟನೆಗಳ ಪರವಾಗಿ ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ವಿವಿಧ ಸಂಘಟನೆಗಳ ಮುಖಂಡರು ಚಿಂತನೆ ನಡೆಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಮನುಕುಮಾರ್ ಮಾತನಾಡಿ, ಕ್ಷೇತ್ರದಲ್ಲಿ ನಿರೀಕ್ಷಿತ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಮತದಾರರಿಗೆ ಹೆಂಡ, ಹಣದ ಆಮಿಷವೊಡ್ಡಲಾಗುತ್ತಿದೆ. ಈ ಬಗ್ಗೆ ಜಾಗೃತಿ ಮೂಡಿಸಬೇಕಾದ ಅಗತ್ಯ ಇದೆ ಎಂದು ಹೇಳಿದರು.

ಆಮ್ ಆದ್ಮಿ ಪಕ್ಷದ ಅಕ್ಮಲ್ ಜಾವೀದ್ ಮಾತನಾಡಿ, ಆಕಾಂಕ್ಷಿಗಳು ಮತದಾರರನ್ನು ಭ್ರಷ್ಟಗೊಳಿಸುತ್ತಿದ್ದಾರೆ. ಇದರಿಂದ ಪ್ರಜಾಪ್ರಭುತ್ವಕ್ಕೆ ಭಾರೀ ಕಂಟಕ ಎದುರಾಗಲಿದೆ. ರಾಜಕೀಯ ಭ್ರಷ್ಟಾಚಾರದ ಬಗ್ಗೆ ಹೋರಾಟ ಅಗತ್ಯ ಎಂದು ಅಭಿಪ್ರಾಯಪಟ್ಟರು.

ವಿಶ್ವ ಮಾನವ ಒಕ್ಕೂಟದ ರವಿಕುಮಾರ್, ವಕೀಲ ಸುಜಿತ್ ಮಾತನಾಡಿ, ರಾಜಕೀಯ ಭ್ರಷ್ಟಾಚಾರ ಎದುರಿಸಲು ಒಗ್ಗಟ್ಟಾಗಿ ಕೆಲಸ ಮಾಡಬೇಕು. ವೇದಿಕೆಯಿಂದಲೇ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದು ಸಲಹೆ ನೀಡಿದರು.ಹಿರಿಯ ನಾಗರಿಕರ ವೇದಿಕೆಯ ಪುಟ್ಟಯ್ಯ, ಇದಕ್ಕೆ ಸಂಬಂಧಿಸಿದಂತೆ ಜನಾಭಿಪ್ರಾಯ ಸಂಗ್ರಹಿಸಬೇಕು. ಈಗ ರಾಜಕೀಯ ಕ್ಷೇತ್ರ ಕಲುಷಿತಗೊಂಡಿದೆ. ಹಾಗಾಗಿ ಎಲ್ಲರೂ ಸೇರಿ ಇದನ್ನು ಸರಿಪಡಿಸಬೇಕಾದ ತುರ್ತು ಅಗತ್ಯ ಇದೆ ಎಂದರು.

ಮುಖಂಡ ಆರ್.ಪಿ.ವೆಂಕಟೇಶಮೂರ್ತಿ ಮಾತನಾಡಿ, ಭ್ರಷ್ಟಾಚಾರದಿಂದ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಕುಟುಂಬ ರಾಜಕಾರಣವೇ ಹೆಚ್ಚಿದೆ. ಕೇವಲ ಕೆಲವೇ ವ್ಯಕ್ತಿಗಳಿಂದ ರಾಜಕಾರಣ ನಿಯಂತ್ರಣಗೊಳ್ಳುತ್ತಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಇದರ ವಿರುದ್ಧ ದೊಡ್ಡ ಆಂದೋಲನ ರೂಪಿಸಬೇಕು ಎಂದು ನುಡಿದರು.

ದಲಿತ ಮುಖಂಡರಾದ ಎಚ್.ಕೆ.ಸಂದೇಶ್, ನಾಗರಾಜ್ ಹೆತ್ತೂರು, ಹಿರಿಯ ವೈದ್ಯ ಡಾ. ಲಿಂಗರಾಜು, ಡಾ.ಸಾವಿತ್ರಿ, ಡಾ.ಪಾಲಾಕ್ಷ, ಕಂದಲಿಯ ತಿಮ್ಮಪ್ಪಗೌಡ, ಹಿರಿಯ ನಾಗರಿಕ ವೇದಿಕೆಯ ಎಸ್.ಎಸ್.ಪಾಷಾ, ಶಿಕ್ಷಕಿ ವನಜಾ, ರಕ್ಷಣಾ ವೇದಿಕೆ, ದಲಿತ ಸಂಘಟನೆ, ನಮ್ಮೂರ ಸೇವೆ ಸಂಘಟನೆ, ಹಿರಿಯ ನಾಗರಿಕ ವೇದಿಕೆ, ಸಾಂಸ್ಕೃತಿಕ ವೇದಿಕೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry