ಹುಡುಗಾಟದ ಹುಡುಗನ ಗಂಭೀರ ನಟನೆ

7

ಹುಡುಗಾಟದ ಹುಡುಗನ ಗಂಭೀರ ನಟನೆ

Published:
Updated:
ಹುಡುಗಾಟದ ಹುಡುಗನ ಗಂಭೀರ ನಟನೆ

ಖಡಕ್ ಧ್ವನಿ. ಸಣ್ಣ ದೇಹ. ಗಂಭೀರ ಮುಖ... ಇದು ಮೊದಲ ನೋಟದಲ್ಲಿ ದಕ್ಕುವ ‘ಶನಿ’ಯ ಚಹರೆ. ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ  ಪೌರಾಣಿಕ ಧಾರಾವಾಹಿ ‘ಶನಿ’ಯಲ್ಲಿ 16ರ ಹರೆಯದ ಸುನಿಲ್‌ಕುಮಾರ್‌ ‘ಶನಿ’ಯ ಪಾತ್ರಕ್ಕೆ ಜೀವ ತುಂಬಿ ನಟಿಸುತ್ತಿದ್ದಾರೆ.

ಸಾಲು ಸಾಲು ಕೌಟುಂಬಿಕ ಧಾರಾವಾಹಿಗಳ ನಡುವೆ ಈ ಪೌರಾಣಿಕ ಧಾರಾವಾಹಿ ಜನರ ಮೆಚ್ಚುಗೆ ಗಳಿಸಿದೆ. ಇದಕ್ಕೆ ಸುನಿಲ್ ಕುಮಾರ್ ಅಭಿನಯವೂ ಒಂದು ಕಾರಣ. ತಂದೆ ಸೂರ್ಯನಿಂದ ದೂರವಾಗಿದ್ದರೂ ಸತ್ಯ, ನ್ಯಾಯ ಪರಿಪಾಲನೆಯೇ ಜೀವ ಎಂದುಕೊಂಡಿರುವವನು ಶನಿ. ಇಂತಹ ಪ್ರೌಢ ಪಾತ್ರಕ್ಕೆ ಸುನಿಲ್ ಪರಕಾಯ ಪ್ರವೇಶ ಮಾಡಿ ನಟಿಸುತ್ತಿದ್ದಾರೆ.

ಸುನಿಲ್ ಅವರು ಹುಟ್ಟಿ ಬೆಳೆದಿದ್ದು ಚಾಮರಾಜನಗರದ ದೀನಬಂಧು ಆಶ್ರಮದಲ್ಲಿ‌. ಎಸ್ಸೆಸ್ಸೆಲ್ಸಿ ಮುಗಿಸಿ ಉಡುಪಿಗೆ ಯಕ್ಷಗಾನ ಕಲಿಕಾ ಕೇಂದ್ರಕ್ಕೆ ತಿಂಗಳ ತರಬೇತಿಗಾಗಿ ಹೋಗಿದ್ದರು. ಆಗ ‘ಶನಿ’ ಪಾತ್ರಧಾರಿ ಆಡಿಶನ್‌ಗೆ ಧಾರಾವಾಹಿ ತಂಡ ತೆರಳಿತ್ತು. ಅಲ್ಲಿ 64 ಮಂದಿ ವಿದ್ಯಾರ್ಥಿಗಳು ಆಡಿಶನ್‌ನಲ್ಲಿ  ಭಾಗವಹಿಸಿದ್ದರು. ಆದರೆ, ಪುಟಗಟ್ಟಲೇ ಸಂಭಾಷಣೆಯನ್ನು ಅಚ್ಚುಕಟ್ಟಾಗಿ ಒಪ್ಪಿಸಿ ಶನಿ ಪಾತ್ರಕ್ಕೆ ಆಯ್ಕೆಯಾದವರು ಸುನಿಲ್‌.

ಸುನಿಲ್‌ಕುಮಾರ್

ಈ ಪಾತ್ರಕ್ಕೆ ಆಯ್ಕೆಯಾದಾಗ ಸುನಿಲ್ ಎಸ್ಸೆಸ್ಸೆಲ್ಸಿ ಮುಗಿಸಿದ್ದಷ್ಟೇ. ‘ನಟನೆ ಅಂದ್ರೆ ಭಾರಿ ಇಷ್ಟ. ಮೊದಲ ಬಾರಿ ಕ್ಯಾಮೆರಾ ಎದುರಿಸಿದಾಗ ಭಯವಾಗಲಿಲ್ಲ. ಧಾರಾವಾಹಿ ತಂಡದವರ ಬಳಿ ಸಂಭಾಷಣೆ ಒಪ್ಪಿಸಲು ಕೊಂಚ ಮುಜುಗರ ಆಯಿತು’ ಎಂದು ನಟನೆಯ ಮೊದಲ ಅನುಭವಗಳನ್ನು ಹಂಚಿಕೊಳ್ಳುತ್ತಾರೆ.  ಸದ್ಯ ಒಂದು ವರ್ಷದಿಂದ ಧಾರಾವಾಹಿಯಲ್ಲಿ ತೊಡಗಿಸಿಕೊಂಡಿರುವುದರಿಂದ  ಸುನಿಲ್ ಕರೆಸ್ಪಾಂಡೆನ್ಸ್‌ನಲ್ಲಿ ಪಿ.ಯು.ಸಿ. ಓದುತ್ತಿದ್ದಾರೆ.

‘ಸಣ್ಣ ವಯಸ್ಸಿನಿಂದಲೂ ನಾಟಕ, ನೃತ್ಯ ಕ್ರೀಡೆ ಇಷ್ಟ. ನನಗೂ ನಟ ಆಗಬೇಕು ಎಂದು ಆಸೆ ಇತ್ತು. ಶನಿ ಪಾತ್ರಕ್ಕೆ ಆಯ್ಕೆಯಾದಾಗ ತುಂಬಾ ಖುಷಿಯಾಗಿತ್ತು’  ಎಂದು ಸಂತೋಷ ಹಂಚಿಕೊಳ್ಳುತ್ತಾರೆ ಅವರು.

ಧಾರಾವಾಹಿಯಲ್ಲಿ ಸುನಿಲ್‌ ಅವರದು ಗಂಭೀರ ಪಾತ್ರ. ಆದ್ರೆ ಅದು ಪಾತ್ರವಷ್ಟೇ. ಶೂಟಿಂಗ್‌ ಇಲ್ಲದ ವೇಳೆ ಸಹನಟರ ಜೊತೆ ಕಾಲ ಕಳೆಯುತ್ತೇನೆ. ಚಿತ್ರೀಕರಣದ ಸ್ಥಳದಲ್ಲೇ ಕೆಲ ಆಟಗಳನ್ನು ಆಡುತ್ತೇವೆ’ ಎಂದು ಹೇಳುತ್ತಾರೆ.

ಈ ಧಾರಾವಾಹಿಯ ಚಿತ್ರೀಕರಣ ನಡೆಯುತ್ತಿರುವುದು ಗುಜರಾತ್‌ನ ಉಬರ್‌ಗಾಂವ್‌ನಲ್ಲಿ. ಈ ಧಾರಾವಾಹಿಗಾಗಿ ಸುಮಾರು 20 ಎಕರೆಯಲ್ಲಿ ವಿಶೇಷ ಸೆಟ್ ಹಾಕಲಾಗಿದೆ. ಧಾರಾವಾಹಿಯಲ್ಲಿ ಎಷ್ಟು ಅದ್ದೂರಿಯಾಗಿ ಕಾಣುತ್ತಿದೆಯೋ ಅದೆಲ್ಲಾ ನಿಜ. ಗ್ರಾಫಿಕ್ಸ್ ಏನೂ ಬಳಸಿಲ್ಲ. ನಾವು ಹಾಕುವ ಆಭರಣಗಳೂ ಧಾರಾವಾಹಿಗಾಗಿ ವಿನ್ಯಾಸ ಮಾಡಲಾಗಿದೆ’ ಎಂದು ಸೆಟ್‌ನ ಚಿತ್ರಣ ನೀಡುತ್ತಾರೆ ಅವರು.

ನಾನು ನಟನೆಗಾಗಿ ಯಾವುದೇ ತರಬೇತಿ ಪಡೆದಿಲ್ಲ. ಧಾರಾವಾಹಿಗೆ ಆಯ್ಕೆಯಾದಾಗ ಅಭಿನಯ ಲೋಕದ ಅರಿವು ಇರಲಿಲ್ಲ. ಆದರೆ, ನಟಿಸಬಲ್ಲೇ ಎಂಬ ವಿಶ್ವಾಸ ಇತ್ತು. ಚೆನ್ನಾಗಿ ನಟಿಸಲು ಚಿತ್ರತಂಡದವರು ಪ್ರೋತ್ಸಾಹ ನೀಡುತ್ತಾರೆ. ನಿರ್ದೇಶಕ ರಾಘವೇಂದ್ರ ಹೆಗಡೆ ನಟನೆ ಬಗ್ಗೆ ಹೇಳಿಕೊಡುತ್ತಾರೆ. ಈ ಧಾರಾವಾಹಿ ಹಿಂದಿ ಭಾಷೆಯಲ್ಲೂ ಪ್ರಸಾರವಾಗುತ್ತಿದೆ. ಆದರೆ, ಅದನ್ನು ನಾನು ನೋಡಿಲ್ಲ. ಧಾರಾವಾಹಿಯನ್ನು ಕನ್ನಡ ಭಾಷೆಗೆ ತಕ್ಕ ಹಾಗೆ ಬದಲಿಸಿಕೊಳ್ಳಲಾಗಿದೆ. ಹೀಗಾಗಿ ನೈಜ ಅಭಿನಯ ಬೇಕಾಗುತ್ತದೆ’ ಎನ್ನುವುದು ಅವರ ಅಭಿಪ್ರಾಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry