‘ಪ್ಯಾರಾ ಮೋಟರಿಂಗ್’ ಬಾನಂಗಳದಲ್ಲಿ ತೇಲಾಡಿದ್ದು ಹೇಗೆ ?

7
ಅಲ್ಟ್ರಾ ಲೈಟ್ ಏವಿಯೇಷನ್ ಮಾಹಿತಿ ಹಂಚಿಕೊಂಡ ಕ್ಯಾಪ್ಟನ್ ನಿತ್ಯಾನಂದ

‘ಪ್ಯಾರಾ ಮೋಟರಿಂಗ್’ ಬಾನಂಗಳದಲ್ಲಿ ತೇಲಾಡಿದ್ದು ಹೇಗೆ ?

Published:
Updated:
‘ಪ್ಯಾರಾ ಮೋಟರಿಂಗ್’ ಬಾನಂಗಳದಲ್ಲಿ ತೇಲಾಡಿದ್ದು ಹೇಗೆ ?

ಚಿತ್ರದುರ್ಗ: ‘ಹಕ್ಕಿಯಂತೆ ಬಾನಂಗಳದಲ್ಲಿ ಹಾರುವ ಆಸೆ ಇದ್ದರೆ, ‘ಪ್ಯಾರಾಮೋಟಾರ್ ಹಾರಾಟ’ ಕಲಿಯಿರಿ’ ಎನ್ನುತ್ತಾರೆ ಫ್ಲಮಿಂಗೊ ಅಲ್ಟ್ರಾಲೈಟ್ ಏವಿಯೇಷನ್ ಕಂಪನಿಯ ಇನ್ಸ್ಟ್ರಕ್ಟರ್ ಕ್ಯಾಪ್ಟನ್ ನಿತ್ಯಾನಂದ ನಾಯಕವಾಡಿ.

ಸಹದ್ಯೋಗಿ ರಾಹುಲ್ ಪವಾರ್ ಅವರೊಂದಿಗೆ ಗುರುವಾರ ಚಿತ್ರದುರ್ಗದಾದ್ಯಂತ ‘ಪ್ಯಾರಾಮೋಟಾರ್’ ಮೂಲಕ ಮತದಾನ ಜಾಗೃತಿ ಕರಪತ್ರಗಳನ್ನು ಹಂಚಿದ ನಂತರ, ಕ್ಯಾಪ್ಟನ್, ಪ್ಯಾರಾಮೋಟಾರ್ ಹಾರಾಟ ಮತ್ತು ಅದರ ಬಳಕೆಯ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅವರೊಂದಿಗೆ ನಡೆಸಿದ ಮಾತುಕತೆಯ ಆಯ್ದ ಭಾಗ ಇಲ್ಲಿದೆ.

****

* ‘ಪ್ಯಾರಾಮೋಟಾರ್’ ಎಂದರೇನು ?

ಪ್ಯಾರಾ ಗ್ಲೈಡರ್‌ ಬಗ್ಗೆ ಕೇಳಿದ್ದೀರಿ. ಬೆಟ್ಟದಿಂದ ಕೆಳಗೆ ಹಾರಾಟ ಮಾಡಲು ಅದನ್ನು ಬಳಸುತ್ತಾರೆ. ಗ್ಲೈಡರ್ ಹಾರಾಟಕ್ಕೆ ಎತ್ತರದ ಪ್ರದೇಶ ಬೇಕೇ ಬೇಕು. ಪ್ಯಾರಾ ಗ್ಲೈಡರ್‌ಗೆ ಮೋಟಾರ್ ಜೋಡಿಸಿದರೆ, ‘ಪ್ಯಾರಾಮೋಟಾರ್’ ಆಗುತ್ತದೆ. ಇದರೊಂದಿಗೆ ಹಾರಾಡಲು ಎತ್ತರದ ಜಾಗ ಅಗತ್ಯವಿಲ್ಲ. ಮೋಟಾರ್ ನೆರವಿನೊಂದಿಗೆ ಹಾರಾಟ ನಡೆಸುವುದರಿಂದ, ನೆಲದಿಂದಲೇ ಮೇಲಕ್ಕೆ ಹಾರಬಹುದು.

*ಮೋಟಾರ್ ಚಾಲನೆಗೆ ಇಂಧನ ಯಾವುದು ? ನಿಯಂತ್ರಣ ಹೇಗೆ ?

‘ಪ್ಯಾರಾಮೋಟಾರ್’ ಪೆಟ್ರೋಲ್ ನಿಂದ ಚಾಲನೆಯಾಗುತ್ತದೆ. ನಾನು ಈಗ ಬಳಸಿರುವ ಪ್ಯಾರಾಮೋಟಾರ್‌ಗೆ 12 ಲೀಟರ್ ಪೆಟ್ರೋಲ್ ಹಿಡಿಯುವ ಸಾಮರ್ಥ್ಯದ ಟ್ಯಾಂಕ್ ಇದೆ. ಸುಮಾರು 3 ಗಂಟೆ ಕಾಲ ಹಾರಾಟ ಮಾಡಬಹುದು.ನಿಯಂತ್ರಣಕ್ಕಾಗಿ ಎಡ ಮತ್ತು ಬಲಬಾಗದಲ್ಲಿ ಎರಡು ಬ್ರೇಕ್ ಗಳಿವೆ. ಇವು ನಿಯಂತ್ರಣದ ಜತೆಗೆ, ಗ್ಲೈಡರ್ ತಿರುಗಿಸಿಕೊಳ್ಳಲು ನೆರವಾಗುತ್ತದೆ. ಮೋಟಾರ್ ಸಹಾಯದಿಂದ ಚಾಲನೆಯಾಗುವುದರಿಂದ, ಗಾಳಿಯ ಅವಶ್ಯಕತೆ ಇರುವುದಿಲ್ಲ.ಇದು ವಿಮಾನದ ರೀತಿ ಗಾಳಿಯನ್ನು ಸೀಳಿಕೊಂಡು ಹಾರುತ್ತದೆ. ಹಾಗಾಗಿ ಹೆಚ್ಚು ಗಾಳಿ ಇದ್ದರೆ, ಪ್ಯಾರಾಮೋಟಾರ್ ಚಾಲನೆ ಮಾಡುವುದು ಕಷ್ಟ. ಗಾಳಿ ಕಡಿಮೆ ಇದ್ದಾಗ ಹಾರಾಟ ಸುಲಭ ಸುಲಲಿತ. ಇವತ್ತು ಗಾಳಿ ಹೆಚ್ಚಾಗಿದ್ದರಿಂದ, ಸ್ಟೇಡಿಯಂನಲ್ಲಿ ಹಾರಾಟ ಆರಂಭಿಸುವುದು ತುಸು ಕಷ್ಟವಾಯಿತು.

*ಎಷ್ಟು ಎತ್ತರದವರೆಗೆ ಏರಿ ಹಾರಾಟ ಮಾಡಬಹುದು ?

13,000 ಅಡಿ ಎತ್ತರದಲ್ಲಿ ಹಾರಿಸಿರುವುದು ವಿಶ್ವಮಟ್ಟದ ದಾಖಲೆ. ನಾನು 7,000 ಅಡಿ ಎತ್ತರದವರೆಗೆ ಹಾರಿಸಿದ್ದೇನೆ. ಈಗ ಚಿತ್ರದುರ್ಗದಲ್ಲಿ 1500 ಅಡಿವರೆಗೂ ಮೇಲೆ ಹಾರಾಟ ಮಾಡಿ, ಕರಪತ್ರಗಳನ್ನು ಉದುರಿಸುವಾಗ 500 ಅಡಿವರೆಗೆ ಕೆಳಗಿಳಿಸಿದ್ದೆ. ಎತ್ತರದಲ್ಲಿ ಕರಪತ್ರಗಳನ್ನು ಉದುರಿಸಿದರೆ, ಗಾಳಿಯಿಂದಾಗಿ, ಅವು ಸೇರುವ ಜಾಗಕ್ಕೆ ತಲುಪುವುದಿಲ್ಲ. ಹಾಗಾಗಿ, ಗ್ಲೈಡರ್ ಕೆಳಗೆ ಇಳಿಸಿಯೇ ಹಾಕಬೇಕು.

* ಹಾರಾಟದ ತರಬೇತಿ ಹೇಗೆ ಕಲಿತಿರಿ ? ಹೇಗೆ ಕಲಿಯಬಹುದು ?

ಪಿಯು (12ನೇ ತರಗತಿ) ನಂತರ ಪದವಿ ಮುಗಿಸಿ, ಅಲ್ಟ್ರಾಲೈಟ್ ಏವಿಯೇಷನ್ ಪೈಲಟ್ ಕೋರ್ಸ್‌ಗೆ ಸೇರಿಕೊಂಡೆ. ಏರ್‌ಫೋರ್ಸ್‌ನಲ್ಲಿ ಶೌರ್ಯಪದಕ ಪಡೆದ ಕ್ಯಾಪ್ಟನ್ ಡೇವಿಡ್ ಬಳಿ ಪ್ಯಾರಾಗ್ಲೈಡರ್ ತರಬೇತಿ ಪಡೆದೆ. ನಂತರ ಪ್ಯಾರಾಮೋಟರ್ ಹಾರಾಟ ಮಾಡುವುದನ್ನು ಕಲಿತೆ.ಇದೊಂದು ಸುಲಭವಾದ ಹಾರಾಟ. ಅಮೆರಿಕದಂತಹ ರಾಷ್ಟ್ರಗಳಲ್ಲಿ 70 ವರ್ಷದ ಹಿರಿಯರು ಪ್ಯಾರಾಮೋಟಾರ್ ನಲ್ಲಿ ಹಕ್ಕಿಯಂತೆ ಹಾರಾಡುತ್ತಾರೆ. ನಮ್ಮ ದೇಶದಲ್ಲೂ ಇಂಥ ಕಲಿಕೆಗೆ ಅವಕಾಶವಿದೆ. ಮುಂಬೈನಲ್ಲಿ ‘ಫ್ಲಮಿಂಗೊ ಅಲ್ಟ್ರಲೈಟ್ ಏವಿಯೇಷನ್’ ಸಂಸ್ಥೆ ಇದೆ. ಅದರಲ್ಲಿ ಪ್ಯಾರಾಗ್ಲೈಡಿಂಗ್, ಪ್ಯಾರಾಸೇಲಿಂಗ್, ಪ್ಯಾರಾಮೋಟಾರಿಂಗ್ ಬಗ್ಗೆ ತರಬೇತಿ ನೀಡಲಾಗುತ್ತದೆ. ನಾನು ಈ ಸಂಸ್ಥೆಯಲ್ಲಿ ಅಲ್ಟ್ರಾಲೈಟ್ ತರಬೇತುದಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.

* ಯಾವ ಯಾವ ಕ್ಷೇತ್ರಗಳಲ್ಲಿ ‘ಪ್ಯಾರಾಮೋಟಾರ್’ ಬಳಸಿದ್ದೀರಿ ?

ಉತ್ಸವಗಳ ಮೇಲೆ ಪುಷ್ಪವೃಷ್ಟಿಗಾಗಿ ಬಳಸುತ್ತೇವೆ. ಮಧ್ಯಪ್ರದೇಶದಲ್ಲಿ ನಡೆದ ‘ರನ್ ಉತ್ಸವ’ದಲ್ಲಿ ಪ್ಯಾರಾಮೋಟಾರ್ ಮೂಲಕ ಪುಷ್ಪವೃಷ್ಟಿ ಮಾಡಿದ್ದೇನೆ. ಗುಜರಾತ್‌ ರಾಜ್ಯದ ಕಚ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾತ್ರಿ ವೇಳೆ ಪ್ಯಾರಾಮೋಟಾರ್ ಹಾರಾಟ ನಡೆಸಿ, ಶೋ ನೀಡಿದ್ದೇನೆ. ಛತ್ತೀಸ್ ಗಡದಲ್ಲಿ ಅಲ್ಲಿನ ಮುಖ್ಯಮಂತ್ರಿ ರಮಣ್ ಸಿಂಗ್ ಅವರು 9 ಹೊಸ ಜಿಲ್ಲೆಗಳನ್ನು ಉದ್ಘಾಟಿಸಿದಾಗ, ಅಷ್ಟೂ ಕಾರ್ಯಕ್ರಮಗಳಲ್ಲಿ ಪ್ಯಾರಾಮೋಟರ್ ಮೂಲಕ ಪುಷ್ಪವೃಷ್ಟಿ ಮಾಡಲಾಯಿತು.

*ಎಷ್ಟು ವರ್ಷದಿಂದ ‘ಮತದಾನ ಜಾಗೃತಿ’ಯಲ್ಲಿ ಭಾಗವಹಿಸುತ್ತಿದ್ಧೀರಿ?

ಎರಡು ವರ್ಷಗಳ ಹಿಂದೆ ನಡೆದ ಗುಜರಾತ್ ಚುನಾವಣೆಗೆ ಪ್ಯಾರಾಮೋಟಾರ್ ಬಳಸಿದ್ದೆವು. ಅದೇ ಮೊದಲ ಅನುಭವ. ನಂತರ ಕಳೆದ ವರ್ಷ ಡಿಸೆಂಬರ್‌ ಚುನಾವಣೆಯಲ್ಲೂ ಉಪಯೋಗಿಸಿದ್ದೇವೆ. ರಾಜ್ಯದ ಚುನಾವಣಾ ಆಯುಕ್ತರ ಆಹ್ವಾನದ ಮೇರೆಗೆ ಕರ್ನಾಟಕ್ಕೆ ಬಂದಿದ್ದೇವೆ. ಈಗಾಗಲೇ ಉಡುಪಿ, ಕಾರ್ಕಳ, ಕುಂದಾಪುರ, ಕಾಪು, ಬೈಂದೂರಿನಲ್ಲಿ ಕರಪತ್ರ ಹಂಚಿದ್ದೇವೆ. ಇಲ್ಲಿನ ಜಿಲ್ಲಾಧಿಕಾರಿ ಆಹ್ವಾನದ ಮೇರೆಗೆ ಚಿತ್ರದುರ್ಗಕ್ಕೆ ಬಂದಿದ್ದೇನೆ. ಇನ್ನೂ ಮೂರು ದಿನ ತಾಲ್ಲೂಕುಗಳಲ್ಲೂ ಇದೇ ಜಾಗೃತಿ ಅಭಿಯಾನ ಕೈಗೊಳ್ಳಬೇಕಿದೆ. ನಂತರ ದಾವಣಗೆರೆ, ಧಾರವಾಡ, ಹುಬ್ಬಳ್ಳಿಗೆ ಹೋಗಬೇಕು. ಮುಂದಿನ ದಿನಾಂಕ ಇನ್ನೂ ನಿಗದಿಯಾಗಿಲ್ಲ.

ಮತದಾನ ಜಾಗೃತಿ’ಗೆ ಪ್ಯಾರಾಮೋಟಾರ್ ಬಳಕೆ ಹೇಗನ್ನಿಸುತ್ತದೆ ?

ಇದೊಂದು ವಿಶಿಷ್ಟ ಪ್ರಯತ್ನ ಎನ್ನಿಸುತ್ತಿದೆ. ಸಾವಿರಾರು ಕರಪತ್ರಗಳನ್ನು ಮೇಲಿನಿಂದ ತೂರಿಬಿಡುವುದರಿಂದ, ಜನರನ್ನು ಆಕರ್ಷಿಸಬಹುದಾಗಿದೆ. ಗುಜರಾತ್ ಚುನಾವಣೆಯಲ್ಲಿ ಈ ಅನುಭವವಾಯಿತು. ಒಂದೇ ಬಾರಿಗೆ ಸಾವಿರಾರು ಸಂಖ್ಯೆಯ ಕರಪತ್ರಗಳನ್ನು ವಿತರಿಸಬಹುದು.

ಉಡುಪಿಯಲ್ಲಿ 15ಸಾವಿರ ಕರಪತ್ರವನ್ನು ಹೀಗೆ ಹಂಚಿದ್ದೇವೆ. ಚಿತ್ರದುರ್ಗದಲ್ಲೂ 5 ಸಾವಿರ ಕರಪತ್ರ ಹಂಚಿದ್ದೇವೆ. ದುರ್ಗದಲ್ಲಿ ಏಳೆಂಟು ಕಿ.ಮೀ ಸುತ್ತ ಸಂಚಾರ ಮಾಡಿ, ಜನ ಇರುವ ಕಡೆ ಕರಪತ್ರಗಳನ್ನು ಹಂಚಿದ್ದೇವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry