₹ 2.79 ಕೋಟಿ ವೆಚ್ಚದಲ್ಲಿ ದುಬಾರೆ ಅಭಿವೃದ್ಧಿ

7

₹ 2.79 ಕೋಟಿ ವೆಚ್ಚದಲ್ಲಿ ದುಬಾರೆ ಅಭಿವೃದ್ಧಿ

Published:
Updated:
₹ 2.79 ಕೋಟಿ ವೆಚ್ಚದಲ್ಲಿ ದುಬಾರೆ ಅಭಿವೃದ್ಧಿ

ಕುಶಾಲನಗರ: ಜಿಲ್ಲೆಯ ಪ್ರಮುಖ ಪ್ರವಾಸಿತಾಣ ದುಬಾರೆ ಸಾಕಾನೆ ಶಿಬಿರದ ಬಳಿ ₹ 2.79 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.ಜಿಲ್ಲಾ ಪ್ರವಾಸೋದ್ಯಮ ಇಲಾಖೆ ವತಿಯಿಂದ ಪ್ರವಾಸಿ ತಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ₹ 1.32 ಕೋಟಿ, ನದಿ ದಂಡೆಯಲ್ಲಿ ವಾಹನ ನಿಲುಗಡೆ ಕಾಂಕ್ರೀಟ್ ಕಾಮಗಾರಿಗೆ ₹ 1.02 ಕೋಟಿ ಹಾಗೂ ತಡೆಗೋಡೆ ಮತ್ತು ದೋಣಿ ನಿಲುಗಡೆಗೆ ₹ 45 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ನಂಜರಾಯಪಟ್ಟಣ ಮುಖ್ಯರಸ್ತೆಯಿಂದ ದುಬಾರೆ ಕ್ಯಾಂಪ್‌ವರೆಗಿನ 1.2 ಕಿ.ಮೀ. ದೂರ ಕೈಗೊಂಡಿರುವ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ.

ರಸ್ತೆ ಅಭಿವೃದ್ಧಿ ಕಾಮಗಾರಿಯ ಉಸ್ತುವಾರಿಯನ್ನು ಲೋಕೋಪಯೋಗಿ ಇಲಾಖೆ ನಿರ್ವಹಿಸುತ್ತಿದೆ. ಏಪ್ರಿಲ್ ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕೆಲಸವನ್ನು ಚುರುಕುಗೊಳಿಸಲಾಗಿದೆ. ಇದೀಗ ದುಬಾರೆಯಲ್ಲಿ ರ‍್ಯಾಫ್ಟಿಂಗ್ ನಿಷೇಧ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖಗೊಂಡಿದೆ.

‘ಪ್ರವಾಸಿಗರು ತಮ್ಮ ವಾಹನಗಳನ್ನು ಮುಖ್ಯರಸ್ತೆ ಬಳಿಯೇ ನಿಲುಗಡೆ ಮಾಡಿ ಒಂದು ಕಿ.ಮೀ. ದೂರ ಕ್ರಮಿಸಬೇಕಾಗಿದೆ. ಈ ನಿಟ್ಟಿನಲ್ಲಿ ಬೇಗ ರಸ್ತೆ ಕಾಮಗಾರಿಯನ್ನು ಮುಗಿಸಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಲಾಗಿದೆ’ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ರಘು ತಿಳಿಸಿದ್ದಾರೆ.

ರಸ್ತೆ ಕಾಮಗಾರಿಯ ಯೋಜನೆ ಪ್ರಕಾರ 1.2 ಕಿ.ಮೀ. ದೂರದ ಪೈಕಿ ಗದ್ದೆಗಳ ಮಧ್ಯೆ ಹಾದು ಹೋಗಿರುವ 500 ಮೀಟರ್ ರಸ್ತೆ ಶೀಥಪ್ರದೇಶದಿಂದ ಕೂಡಿರುವ ಕಾರಣ ಅರ್ಧ ಅಡಿಯಷ್ಟು ಸಿಮೆಂಟ್ ಮಿಕ್ಸಿಂಗ್ ಜೆಲ್ಲಿ ಅಳವಡಿಸಲಾಗಿದೆ. ಉಳಿದ ರಸ್ತೆಯಲ್ಲಿ ಡಾಂಬಂರೀಕರಣ ತೆರವುಗೊಳಿಸಿ ಗುಂಡಿ ಇರುವ ಕಡೆ ಸಿಮೆಂಟ್ ಮಿಕ್ಸಿಂಗ್ ಜೆಲ್ಲಿ ಹಾಕಿ, ಅದರ ಮೇಲೆ 8 ಇಂಚು ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗುತ್ತದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ದುಬಾರೆ ಹೋಟೆಲ್ ಇನ್ ಮಾಲೀಕ ಕೆ.ಎಸ್.ರತೀಶ್, ‘ಯೋಜನೆ ಪ್ರಕಾರ ರಸ್ತೆ ಕಾಮಗಾರಿ ನಡೆಯುತ್ತಿಲ್ಲ. ರಸ್ತೆ ಡಾಂಬರೀಕಣದ ಮೇಲೆಯೇ ಕಾಂಕ್ರೀಟ್ ಜೆಲ್ಲಿ ಹಾಕುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಒತ್ತು ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry