ಎತ್ತಿನಹೊಳೆ ನೀರಾವರಿ ಯೋಜನೆ ಅನುಷ್ಠಾನ: ಕಾಂಗ್ರೆಸ್‌ ನಿರ್ಲಕ್ಷ್ಯ

7
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟಶಿವರೆಡ್ಡಿ ಆರೋಪ

ಎತ್ತಿನಹೊಳೆ ನೀರಾವರಿ ಯೋಜನೆ ಅನುಷ್ಠಾನ: ಕಾಂಗ್ರೆಸ್‌ ನಿರ್ಲಕ್ಷ್ಯ

Published:
Updated:

ಕೋಲಾರ: ನೀರಾವರಿ ಯೋಜನೆ ಅನುಷ್ಠಾನಗೊಳಿಸಲು ಬದ್ಧತೆಯಿಲ್ಲದ ಕಾಂಗ್ರೆಸ್‌ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಕೆ.ವೆಂಕಟಶಿವರೆಡ್ಡಿ ಆರೋಪಿಸಿದರು.ತಾಲ್ಲೂಕಿನ ಹೋಳೂರು ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರದಲ್ಲಿ ಮಾತನಾಡಿ, ‘ಐದು ವರ್ಷಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ ಸರ್ಕಾರದ ಸಾಧನೆ ಶೂನ್ಯ. ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ’ ಎಂದು ದೂರಿದರು.

ಸರ್ಕಾರಕ್ಕೆ ಬದ್ಧತೆಯಿಲ್ಲ: ಕೆಸಿ ವ್ಯಾಲಿ ಯೋಜನೆ ಕಾಮಗಾರಿಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ ಕೆರೆಗಳಿಗೆ ನೀರು ಹರಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್‌.ರಮೇಶ್‌ ಕುಮಾರ್ ಹೇಳಿಕೆ ನೀಡಿದ್ದರು. ಜನ ಕೇಳದಿದ್ದರು ಮಾ.15ರೊಳಗೆ ಯೋಜನೆ ಉದ್ಘಾಟಿಸುತ್ತೇವೆ ಎಂದು ಹೇಳಿಕೊಂಡು ರಾಜಕೀಯ ಮಾಡುತ್ತಿದ್ದರು. ಈಗ ಅವರ ಪ್ರಯತ್ನ ವಿಫಲವಾಗಿದ್ದು, ಜನಕ್ಕೆ ಇನ್ನೇನು ಉತ್ತರ ನೀಡುತ್ತಾರೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರಕ್ಕೆ ಬದ್ಧತೆಯಿದಿದ್ದರೆ ಎತ್ತಿನ ಹೊಳೆ ಯೋಜನೆ ಕಾಮಗಾರಿಯನ್ನು ಪೂರ್ಣಗೊಳಿಸುತ್ತಿತ್ತು. ಯೋಜನೆಗಳ ಮೂಲಕ ಕಮೀಷನ್ ಹೊಡೆಯುವ ಕೆಲಸದ ಕಡೆ ಸಚಿವರು ಗಮನ ಹರಿಸಿದ್ದರು. ನೀರಾವರಿ ಯೋಜನೆಗಳ ಅನುಷ್ಠಾನ ವಿಚಾರದಲ್ಲಿ ರಾಜಕೀಯ ಮಾಡಲು ಹೋದ ರಮೇಶ್‌ಕುಮಾರ್‌ ಅವರ ಪ್ರಯತ್ನ ವಿಫಲವಾಗಿದೆ. ಕಾಮಗಾರಿ ಯಾವ ಹಂತದಲ್ಲಿ ನಡೆಯುತ್ತಿದೆ ಎಂದು ಪರಿಶೀಲಿಸಿದ ಉದಾಹರಣೆಯೇ ಇಲ್ಲ ಎಂದು ವಿವರಿಸಿದರು.

ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರವನ್ನು ಗುಡಿಸಲು ಮುಕ್ತವನ್ನಾಗಿ ನಿರ್ಮಾಣ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. 18 ಸಾವಿರಕ್ಕೂ ಹೆಚ್ಚು ಮನೆಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಿದ್ದೇನೆ ಎಂದು ಹೇಳುತ್ತಿದ್ದಾರೆ. ಆದರೆ ಗಡಿ ಗ್ರಾಮಗಳಲ್ಲಿ ಜನರು ಇಂದಿಗೂ ಗುಡಿಸಲುಗಳಲ್ಲಿ ವಾಸವಿದ್ದಾರೆ. ಇದೇನ ರಮೇಶ್‌ಕುಮಾರ್‌ ಅವರು ಕ್ಷೇತ್ರವನ್ನು ಅಭಿವೃದ್ಧಿಪಡಿಸಿರುವುದು ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಸರ್ಕಾರ ನಡೆಸಿರುವ ವೈಫಲ್ಯಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದರ ಜತೆಗೆ ಜೆಡಿಎಸ್ ಅಭ್ಯರ್ಥಿಯ ಪರವಾಗಿ ಮತಯಾಚನೆ ಮಾಡಬೇಕು. ಕುಮಾರಸ್ವಾಮಿ ಅವರನ್ನು ರಾಜ್ಯ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ ಎಂದು ಸೂಚಿಸಿದರು. ಏ.15ರಂದು ಕೋಲಾರ ನಗರದಲ್ಲಿ ವಿಕಾಸ ಪರ್ವ ಸಮಾವೇಶ ಹಮ್ಮಿಕೊಂಡಿದ್ದು, ವಿವಿಧ ಘಟಕಗಳ ಪದಾಧಿಕಾರಿಗಳಿಗೆ ವಹಿಸಿರುವ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಲು ಈಗಿನಿಂದಲ್ಲೇ ಪ್ರಚಾರ ಕೈಗೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲೆಯ ಪ್ರತಿ ಕ್ಷೇತ್ರದಿಂದಲ್ಲೂ ಅಭ್ಯರ್ಥಿಗಳು ಶಕ್ತಿ ಪ್ರದರ್ಶಿಸಲು ಸಿದ್ದತೆ ಕೈಗೊಂಡಿದ್ದಾರೆ. ಅದೇ ರೀತಿ ಶ್ರೀನಿವಾಸಪುರ ಕ್ಷೇತ್ರದಿಂದ 1 ಲಕ್ಷಕ್ಕೂ ಹೆಚ್ಚು ಮಂದಿ ಸಮಾವೇಶದಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.

ತಾಲ್ಲೂಕು ಪಂಚಾಯಿತಿ ಸದಸ್ಯರಾದ ಮುರಳಿರೆಡ್ಡಿ, ಗೋಪಾಲಗೌಡ, ಜೆಡಿಎಸ್ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್‌ರೆಡ್ಡಿ, ತಾಲ್ಲೂಕು ಯುವ ಘಟಕ ಅಧ್ಯಕ್ಷ ವೇಣು, ತಾಲ್ಲೂಕು ಪ್ರಧಾನಕಾರ್ಯದರ್ಶಿ ಸಂತೋಷ್‌ರೆಡ್ಡಿ, ಮುಖಂಡ ಶ್ರೀನಿವಾಸ್, ರೆಡ್ಡಪ್ಪ ಹಾಜರಿದ್ದರು.

**

ಕಾಂಗ್ರೆಸ್ ಸರ್ಕಾರಕ್ಕೆ ಬದ್ಧತೆಯಿದಿದ್ದರೆ ಎತ್ತಿನ ಹೊಳೆ ಹಾಗೂ ಕೆಸಿ ವ್ಯಾಲಿ ನೀರಾವರಿ ಯೋಜನೆ ಕಾಮಗಾರಿಯನ್ನು ಪೂರ್ಣಗೊಳಿಸುತ್ತಿತ್ತು. ಯೋಜನೆಗಳ ಅನುಷ್ಠಾನ ವಿಚಾರದಲ್ಲಿ ರಾಜಕೀಯ ಮಾಡಲು ಹೋದ ರಮೇಶ್‌ಕುಮಾರ್‌ ಅವರ ಪ್ರಯತ್ನ ವಿಫಲವಾಗಿದೆ

–ಜಿ.ಕೆ.ವೆಂಕಟಶಿವರೆಡ್ಡಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷ.

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry