ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘...ಸುದ್ದಿ’ ಹೇಳುವ ಸಾಮಾಜಿಕ ಸಂದೇಶ

Last Updated 30 ಮಾರ್ಚ್ 2018, 14:21 IST
ಅಕ್ಷರ ಗಾತ್ರ

ಸಿನಿಮಾ: ಇದೀಗ ಬಂದ ಸುದ್ದಿ

ನಿರ್ದೇಶನ: ಎಸ್.ಆರ್. ಪಾಟೀಲ್

ನಿರ್ಮಾಣ: ಪಾಟೀಲ್ ಪ್ರೊಡಕ್ಷನ್ಸ್‌

ತಾರಾಗಣ: ಬಲರಾಮ್ ಕನ್ನಡಿಗ, ಮಾಧವ್, ಶಿವಕುಮಾರ್, ಕಾವ್ಯಾ

ನಾವು ಬದುಕುತ್ತಿರುವುದು ‘ಬ್ರೇಕಿಂಗ್ ನ್ಯೂಸ್‌’ಗಳ ಕಾಲದಲ್ಲಿ. ಕಾಲ ದೇವನ ಕಾರಿನ ಗಿಯರ್‌ ಲಿವರ್‌ಅನ್ನು ಹಿಂದಕ್ಕೆ ಎಳೆದು, ಕೆಲವು ವರ್ಷಗಳಷ್ಟು ಹಿಂದಕ್ಕೆ ಹೋದರೆ ‘ಇದೀಗ ಬಂದ ಸುದ್ದಿ’ ಎನ್ನುವ ಪದಗುಚ್ಛ ಕಿವಿಗೆ ಬೀಳುತ್ತದೆ. ಈ ಪದಗುಚ್ಛವನ್ನು ಶೀರ್ಷಿಕೆಯನ್ನಾಗಿ ಬಳಸಿಕೊಂಡು ಸಿನಿಮಾ ಮಾಡಿದ್ದಾರೆ ಎಸ್.ಆರ್. ಪಾಟೀಲ್. ಸಿನಿಮಾದ ಹೆಸರು ಕೇಳಿ, ‘ಇದು ಮಾಧ್ಯಮ ಲೋಕದ ಸಿನಿಮಾ’ ಎಂದು ಭಾವಿಸಬೇಕಿಲ್ಲ.

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು, ವಾಹನ ಅಪಘಾತಗಳಿಗೆ ಕಾರಣವಾಗುವುದು ಹೊಸದೇನೂ ಅಲ್ಲ. ‘ಕುಡಿದು ವಾಹನ ಚಾಲನೆ ಮಾಡಬೇಡಿ’ ಎಂಬ ಸಂದೇಶ ನೀಡಲಿಕ್ಕೆಂದೇ ಒಂದು ಸಿನಿಮಾ ಮಾಡಿರುವುದನ್ನು ಹಳೆಯ ಸಿದ್ಧ ಸೂತ್ರಗಳ ಪಾಲನೆ ಎಂದು ಹೇಳಲು ಖಂಡಿತ ಆಗದು. ಈ ಸಂದೇಶ ನೀಡಲು ಒಂದು ಸಾಕ್ಷ್ಯಚಿತ್ರವನ್ನೋ, ಕಿರುಚಿತ್ರವನ್ನೋ ಮಾಡಬಹುದಿತ್ತಲ್ಲವೇ ಎಂದು ಪ್ರಶ್ನಿಸಿಕೊಂಡರೆ, ‘ಹೌದು, ಹಾಗೆ ಮಾಡಬಹುದಿತ್ತು’ ಎಂಬ ಉತ್ತರ ಸಿಗಬಹುದು. ಆದರೆ ಪಾಟೀಲ್ ಅವರು ಈ ಸಂದೇಶ ರವಾನೆಗೆ ಆಯ್ಕೆ ಮಾಡಿಕೊಂಡಿದ್ದು ಚಲನಚಿತ್ರವನ್ನು.

ಕೆಳಮಧ್ಯಮ ವರ್ಗದ ನಾಲ್ಕೈದು ಕುಟುಂಬಗಳು, ಕಾನೂನು ಉಲ್ಲಂಘಿಸುವವರಿಂದ ಅಷ್ಟಿಷ್ಟು ಕಾಸು ಪಡೆದು ಅವರನ್ನು ಬಿಟ್ಟುಕಳುಹಿಸುವ ಭ್ರಷ್ಟ ಪೊಲೀಸ್‌ ಕಾನ್‌ಸ್ಟೆಬಲ್‌, ಪ್ರಾಮಾಣಿಕನಾಗಿರುವ ಹಂಬಲದ ಒಬ್ಬ ಪಿಎಸ್‌ಐ ಮತ್ತು ದುಡ್ಡಿರುವವರ ಮನೆಯ ಬೇಜವಾಬ್ದಾರಿ ಮಕ್ಕಳು ಈ ಸಿನಿಮಾದ ಪ್ರಮುಖ ಪಾತ್ರಗಳು. ಒಂದು ರಸ್ತೆ ಅಪಘಾತ, ಅಲ್ಲೊಂದಿಷ್ಟು ಜನರ ಸಾವು, ಅಪಘಾತ ಮತ್ತು ಸಾವಿಗೆ ಕಾರಣರಾದವರ ಬಂಧನ, ಅವರನ್ನು ಬಿಡುಗಡೆ ಮಾಡುವಂತೆ ಪೊಲೀಸರ ಮೇಲೆ ಒತ್ತಡ... ಇವು ಸಿನಿಮಾದ ಕೆಲವು ಪ್ರಮುಖ ಘಟ್ಟಗಳು.

ಸಿನಿಮಾದಲ್ಲಿ ನಡೆಯುವ ರಸ್ತೆ ಅಪಘಾತದಲ್ಲಿ ಸಾಯುವವರು, ನೋವುಣ್ಣುವವರು ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಜನ. ಅಪಘಾತ ಮಾಡುವವ ಶ್ರೀಮಂತ ಉದ್ಯಮಿಯ ಮಗ. ಅಪಘಾತ ತರುವ ಸಂಕಟಗಳನ್ನು ತೋರಿಸಬೇಕು ಎಂದಾದರೆ, ಸಾಯುವ–ನೋಯುವ ಕುಟುಂಬಗಳ ಸ್ಥಿತಿಯನ್ನು ತುಸು ವಿವರಿಸಬೇಕಾಗುತ್ತದೆ. ಹಾಗಾಗಿ, ನಿರ್ದೇಶಕರು ಸಿನಿಮಾದಲ್ಲಿ ಸಾಕಷ್ಟು ಸಮಯವನ್ನು ಈ ಕುಟುಂಬಗಳ ಕಷ್ಟ, ಸುಖ, ನೋವುಗಳನ್ನು ತಿಳಿಸಲು ಬಳಸಿಕೊಂಡಿದ್ದಾರೆ.

ಹೊಸದಾಗಿ ಕೆಲಸ ಗಿಟ್ಟಿಸಿಕೊಂಡ ಮಗನ ಮೇಲೆ ಅಮ್ಮ ತೋರಿಸುವ ಪ್ರೀತಿ, ಒಳ್ಳೆಯ ವರನನ್ನು ನೋಡಿ ಮಗಳ ಮದುವೆ ಮಾಡಬೇಕು ಎಂದು ಅಪ್ಪನಲ್ಲಿರುವ ಬಯಕೆ, ಪುಟ್ಟ ಮಗಳನ್ನು ಖುಷಿಯಾಗಿರಿಸಲು ಅಪ್ಪ–ಅಮ್ಮ ತೋರುವ ಕಾಳಜಿ, ತನ್ನ ಇನಿಯನನ್ನು ಕಾಣುವ ಹಂಬಲ ಹೊಂದಿರುವ ಹುಡುಗಿ... ಇವರೆಲ್ಲರ ವ್ಯಕ್ತಿತ್ವ ಕಟ್ಟಿಕೊಡುವ ಯತ್ನ ಸಿನಿಮಾದಲ್ಲಿದೆ. ಹೀಗೆ ಕಟ್ಟಿಕೊಟ್ಟಿರುವ ಉದ್ದೇಶ ಮುಂದೆ ಆ ಕುಟುಂಬದಲ್ಲಿ ಸಾವು ಸಂಭವಿಸಿದಾಗ ಇತರರು ಅನುಭವಿಸುವ ನೋವು ಏನು ಎಂಬುದನ್ನು ಅರ್ಥ ಮಾಡಿಸಲು ಎಂದು ಭಾಸವಾಗುತ್ತದೆ.

ಮಗನ ಬಂಧನ ಆಗಿದೆ ಎಂಬುದು ಗೊತ್ತಾದ ತಕ್ಷಣ ಅಪ್ಪ ತನ್ನ ಪ್ರಭಾವ ಬಳಸಿ ಪ್ರಕರಣವನ್ನು ದುರ್ಬಲಗೊಳಿಸಲು ಯತ್ನಿಸುತ್ತಾನೆ. ಪಿಎಸ್‌ಐ ಮೇಲೆ ಭಾವನಾತ್ಮಕ ಒತ್ತಡ ತರುವ ಯತ್ನವನ್ನೂ ಮಾಡುತ್ತಾನೆ. ಆಗ ಆ ಪಿಎಸ್‌ಐ, ಅಪಘಾತ ಮಾಡಿದವರನ್ನು ಮತ್ತು ತನ್ನ ಮೇಲೆ ಒತ್ತಡ ತರಲು ಬಂದವರನ್ನು ಕರೆದುಕೊಂಡು ಅಪಘಾತದಲ್ಲಿ ಮಡಿದವರ ಮನೆಗಳಿಗೆ ಕರೆದೊಯ್ಯುತ್ತಾನೆ. ಆ ಕುಟುಂಬಗಳಿಗೆ ಸೇರಿದವರ ಆಕ್ರಂದನ ಕಂಡು ಆರೋಪಿಗಳ ಮನಸ್ಸು ಕರಗುತ್ತದೆ. ಅಪಘಾತ ಮಾಡಿದ ವ್ಯಕ್ತಿ ಸಿನಿಮಾದ ಕೊನೆಯಲ್ಲಿ ತನ್ನನ್ನು ತಾನೇ ಶಿಕ್ಷಿಸಿಕೊಳ್ಳುತ್ತಾನೆ.

ಈ ಸಿನಿಮಾದಲ್ಲಿ ಆ್ಯಕ್ಷನ್‌ ಇಲ್ಲ, ಪಂಚಿಂಗ್‌ ಡೈಲಾಗ್‌ಗಳು ಇಲ್ಲ, ಹುಚ್ಚೆಬ್ಬಿಸುವ ಸಂಗೀತ, ಅತ್ಯದ್ಭುತ ಎನ್ನಬಹುದಾದ ಸ್ಥಳಗಳ ಚಿತ್ರೀಕರಣ, ಗ್ಲಾಮರ್‌... ಇವ್ಯಾವುವೂ ಇಲ್ಲ. ಆದರೆ, ವೀಕ್ಷಕರ ಮನಸ್ಸನ್ನು ತುಸು ಭಾವುಕಗೊಳಿಸಿ, ಒಂದು ಸರಳ ಸಾಮಾಜಿಕ ಸಂದೇಶ ರವಾನಿಸುವ ಯತ್ನ ಇದರಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT