ಬೋರಾಪುರದ ‘ಮಿಸೀನ್ ಇಂಪಾಸಿಬಲ್’!

7

ಬೋರಾಪುರದ ‘ಮಿಸೀನ್ ಇಂಪಾಸಿಬಲ್’!

Published:
Updated:
ಬೋರಾಪುರದ ‘ಮಿಸೀನ್ ಇಂಪಾಸಿಬಲ್’!

‘ಸಾಲ ಮಧುರ, ಬಡ್ಡಿ ಅಮರ’ ಎನ್ನುವ ವಿವರಣೆ ಹೊಂದಿರುವ ಸಿನಿಮಾ ‘ಡೇಯ್ಸ್ ಆಫ್ ಬೋರಾಪುರ’. ಈ ಸಿನಿಮಾ ಹಾಸ್ಯ ಪ್ರಧಾನ ಕಥಾವಸ್ತು ಹೊಂದಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಸಾಲ ಮತ್ತು ಬಡ್ಡಿಯ ಬಗ್ಗೆ ಕೂಡ ವಿವರ ಇರುವ ಕಾರಣ, ಸಾಲದ ಸುಳಿಗೆ ಬಿದ್ದವರ ಕಥೆ ಇದರಲ್ಲಿ ಇದೆ ಎಂದೂ ಅರ್ಥ ಮಾಡಿಕೊಳ್ಳಬಹುದು.

ಈ ಸಿನಿಮಾದ ಅಡಿ ಶೀರ್ಷಿಕೆಯಲ್ಲಿ ಒಂದು ತಮಾಷೆ ಇದೆ. ‘ಮಿಸೀನ್‌ ಇಂಪಾಸಿಬಲ್‌’ ಎನ್ನುವ ಅಡಿ ಶೀರ್ಷಿಕೆಯು ಹಲವರಿಗೆ ಹಲವು ಬಗೆಯ ಅರ್ಥಗಳನ್ನು ಕೊಡಬಲ್ಲದು! ಸಿನಿಮಾದ ಟ್ರೇಲರ್‌ ಬಿಡುಗಡೆ ಸಮಾರಂಭದಲ್ಲಿ ಈ ಅಡಿ ಶೀರ್ಷಿಕೆ ಚರ್ಚೆಗೆ ವಸ್ತುವಾಯಿತು.

ಟ್ರೇಲರ್‌ ಬಿಡುಗಡೆ ಕಾರ್ಯಕ್ರಮಕ್ಕೆ ನಟ ಕಿಶೋರ್‌ ಬಂದಿದ್ದರು. ‘ಈ ಸಿನಿಮಾ ಬಗ್ಗೆ ತಿಳಿದು ನನಗೆ ಖುಷಿ ಆಯಿತು. ಹಳ್ಳಿಯ ಬಗ್ಗೆ ಸಿನಿಮಾ ಮಾಡುವುದು ಕಷ್ಟ ಎಂಬ ಸ್ಥಿತಿ ಈಗ ಇದೆ. ಇಂತಹ ಪರಿಸ್ಥಿತಿ ಇರುವಾಗ ಹಳ್ಳಿಯನ್ನು ತೋರಿಸುವ ಸಿನಿಮಾ ತಾಜಾ ಅನಿಸುತ್ತದೆ’ ಎಂದರು ಕಿಶೋರ್‌. ಸಿನಿಮಾದಲ್ಲಿನ ಕೆಲವು ದ್ವಂದಾರ್ಥದ ಸಂಭಾಷಣೆಗಳ ಬಗ್ಗೆ ಉಲ್ಲೇಖಿಸಿದ ಕಿಶೋರ್‌, ‘ಈ ಸಿನಿಮಾದಲ್ಲಿ ಡಬಲ್‌ ಮೀನಿಂಗ್ ಸಂಭಾಷಣೆಗಳು ಇದ್ದಿರಬಹುದು. ಅಂಥವು ಇರಬೇಕು. ಅವು ಇದ್ದರೇನೇ ಚೆಂದ‌’ ಎಂದರು.

‘ಮಿಸೀನ್‌ ಇಂಪಾಸಿಬಲ್‌’ ಎನ್ನುವ ಅಡಿ ಶೀರ್ಷಿಕೆ ನೀಡಿ ತಲೆಗೆ ಹುಳ ಬಿಡುವ ಕೆಲಸ ಮಾಡಿದ್ದಾರೆ ಎಂದು ಕೆಲವರು ತುಂಟ ಧಾಟಿಯಲ್ಲಿ ಹೇಳಿದಾಗ ನಿರ್ಮಾಪಕ ಅಜಿತ್ ಕುಮಾರ್ ಅವರು, ‘ಸಿನಿಮಾ ನೋಡಿ. ಉತ್ತರ ಸಿಗುತ್ತದೆ’ ಎಂದರು.

ಈ ಸಿನಿಮಾದ ಟ್ರೇಲರ್‌ ವೀಕ್ಷಿಸಿದ ನಟ ಜಗ್ಗೇಶ್ ಅವರು ‘ಒಂದು ಮೊಟ್ಟೆಯ ಕಥೆ ಸಿನಿಮಾದ ಸಾಲಿನಲ್ಲಿ ಈ ಸಿನಿಮಾ ಕೂಡ ಸೇರುತ್ತದೆ ಅಂತ ನನಗೆ ಅನಿಸಿತು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಬೋರಾಪುರ ಎಂಬುದು ಒಂದು ಕುಗ್ರಾಮ. ಅಲ್ಲಿನ ಜನ ಮುಗ್ಧರಾದರೂ, ದಡ್ಡರಲ್ಲ. ಅವರು ಅಲ್ಲಿ ಪ್ರೀತಿ ಮಾಡುತ್ತಾ, ಜಗಳವಾಡುತ್ತಾ ಸುಖವಾಗಿ ಇದ್ದವರು. ಆದರೆ, ಅದೊಂದು ದಿನ ಆ ಊರಿಗೆ ಅದು ಬಂದು ಆತಂಕ, ಭಯ ಮೂಡುವಂತೆ ಮಾಡಿತು’ ಎಂದು ಸಿನಿತಂಡವು ಕಥೆಯ ಹಂದರದ ಬಗ್ಗೆ ಹೇಳಿದೆ. ಆದರೆ, ‘ಅದು’ ಅಂದರೆ ಏನು ಎಂಬುದನ್ನು ಹೇಳಿಲ್ಲ.

ಅಜಿತ್ ಕುಮಾರ್ ಗದ್ದಿ, ಮಧು ಬಸವರಾಜ್, ರಕ್ಷಾ ಗದ್ದಿ, ಶಾಂತಲಾ ಮಧು ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಎನ್. ಆದಿತ್ಯ ಕುಣಿಗಲ್ ಅವರು ಚಿತ್ರದ ನಿರ್ದೇಶನ ಮಾಡಿದ್ದಾರೆ. ವಿವೇಕ್‌ ಚಕ್ರವರ್ತಿ ಸಂಗೀತ, ಜಿ.ಎನ್. ಸರವಣನ್ ಛಾಯಾಗ್ರಹಣ ಚಿತ್ರಕ್ಕಿದೆ.

ಪ್ರಶಾಂತ್ ಸಿ.ಎಂ., ಸೂರ್ಯ ಸಿದ್ಧಾರ್ಥ್‌, ಅನಿತಾ ಭಟ್, ಅಮಿತಾ ರಂಗನಾಥ್, ಪ್ರಕೃತಿ, ದಿನೇಶ್ ಮಂಗಳೂರು ಸೇರಿದಂತೆ ಹಲವರು ತಾರಾಗಣದಲ್ಲಿ ಇದ್ದಾರೆ.

****

ಅದೃಷ್ಟಶಾಲಿಗೆ ‘ರಾಜರಥ’ದ ಸ್ಕೂಟರ್‌

‘ರಾಜರಥ’ ಚಿತ್ರದಲ್ಲಿ ರವಿಶಂಕರ್, ನಿರೂಪ್‌ ಭಂಡಾರಿ ಮತ್ತು ಆವಂತಿಕಾ ಶೆಟ್ಟಿ ಕುಳಿತು ವಿಹರಿಸಿರುವ ವಿಶಿಷ್ಟ ಸ್ಕೂಟರ್‌ ಪ್ರೇಕ್ಷಕರ ಮನಸೆಳೆದಿದೆ. ಈ ಸ್ಕೂಟರನ್ನು ಮಾರಾಟಕ್ಕಿಡುವಂತೆ ಕೆಲವರು ನಿರ್ಮಾಪಕರಿಗೆ ದುಂಬಾಲು ಬಿದ್ದಿದ್ದಾರಂತೆ. ಆದರೆ, ಅದೃಷ್ಟಶಾಲಿ ಪ್ರೇಕ್ಷಕರಿಗೆ ಇದನ್ನು ನೀಡಲು ಚಿತ್ರತಂಡ ನಿರ್ಧರಿಸಿದೆ.

ರಾಜ್ಯದಾದ್ಯಂತ 170 ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನವಾಗುತ್ತಿದೆ. ಮುಂದಿನ ವಾರದಿಂದ ಅಮೆರಿಕದ 215 ಪರದೆಗಳಲ್ಲಿ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸಿದೆ. ಈ ಕುರಿತು ಹೇಳಲು ಪತ್ರಿಕಾಗೋಷ್ಠಿ ಕರೆದಿತ್ತು. ‘ರಾಜ್ಯದಾದ್ಯಂತ ಚಿತ್ರಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಪ್ರೇಕ್ಷಕರಿಂದ ಒಳ್ಳೆಯ ಅಭಿಪ್ರಾಯ ಮೂಡಿಬರುತ್ತಿದೆ. ಉತ್ತರ ಕರ್ನಾಟಕದ ಭಾಗದಲ್ಲಿ ಚಿತ್ರದ ಪ್ರಚಾರಕ್ಕೆ ತೆರಳುತ್ತಿದ್ದೇವೆ’ ಎಂದರು ನಿರ್ದೇಶಕ ಅನೂಪ್‌ ಭಂಡಾರಿ.

‘ಚಿತ್ರದಲ್ಲಿ ಬಳಸಿರುವ ಸ್ಕೂಟರ್‌ ಮೌಲ್ಯ ₹1 ಲಕ್ಷ. ಇದನ್ನು ಮಾರಾಟ ಮಾಡಲು ನಮಗಿಷ್ಟವಿಲ್ಲ. ಸಿನಿಮಾ ನೋಡುವ ಪ್ರೇಕ್ಷಕರಿಗೆಯೇ ಇದು ಸೇರಬೇಕು ಎನ್ನುವುದು ನನ್ನಾಸೆ. ಚಿತ್ರಮಂದಿರಗಳಲ್ಲಿ ಒಂದು ಡಬ್ಬ ಇಡಲಾಗುತ್ತದೆ. ಪ್ರೇಕ್ಷಕರು ಟಿಕೆಟ್‌ನ ಹಿಂಬದಿ ಸ್ವಂತ ಮೊಬೈಲ್‌ ಸಂಖ್ಯೆ ಬರೆದು ಅದರೊಳಗೆ ಹಾಕಬೇಕು. ಜೊತೆಗೆ, ಅವರಿಗೆ ವಾಟ್ಸ್‌ಆ್ಯಪ್‌ ನಂಬರ್‌ ನೀಡುತ್ತೇವೆ. ಅದಕ್ಕೆ ಸಂದೇಶ ಕಳುಹಿಸಬೇಕು. ಲಾಟರಿ ಮೂಲಕ ಒಬ್ಬ ಅದೃಷ್ಟಶಾಲಿಗೆ ಸ್ಕೂಟರ್‌ ನೀಡಲಾಗುವುದು’ ಎಂದು ವಿವರಿಸಿದರು.

ನಿರ್ಮಾಪಕ ಸತೀಶ್‌ ಶಾಸ್ತ್ರಿ, ‘ವಿದೇಶದಲ್ಲಿ ಚಿತ್ರದ ಗಳಿಕೆ ಮೂರು ದಿನದಲ್ಲಿ 1 ಲಕ್ಷ ಡಾಲರ್‌ ಮೀರಿದೆ. ಯೂರೋಪ್‌ನಲ್ಲೂ ಬಿಡುಗಡೆಗೆ ನಿರ್ಧರಿಸಲಾಗಿದೆ’ ಎಂದರು.

ಕಾರ್ಯಕಾರಿ ನಿರ್ಮಾಪಕ ಸುಧಾಕರ್‌ ಭಂಡಾರಿ, ‘ಜನರ ಪ್ರತಿಕ್ರಿಯೆಗೆ ಖುಷಿಯಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪ್ರಚಾರಕ್ಕೆ ತೀರ್ಮಾನಿಸಿದ್ದೇವೆ’ ಎಂದರು.

ನಾಯಕ ನಟ ನಿರೂಪ್‌ ಭಂಡಾರಿ, ‘ರಂಗಿತರಂಗ’ದ ಬಳಿಕ ಭಿನ್ನವಾದ ಸಿನಿಮಾ ಮಾಡಿದ ಖುಷಿಯಿದೆ. ಜನರ ಪ್ರೋತ್ಸಾಹದಿಂದ ಉತ್ಸಾಹ ಇಮ್ಮಡಿಸಿದೆ’ ಎಂದಷ್ಟೇ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry