ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಸ್ಥರು, ಪೊಲೀಸರ ಮಧ್ಯೆ ಘರ್ಷಣೆ

Last Updated 30 ಮಾರ್ಚ್ 2018, 19:49 IST
ಅಕ್ಷರ ಗಾತ್ರ

ಧರ್ಮಪುರ: ಸಮೀಪದ ಖಂಡೇನಹಳ್ಳಿಯಲ್ಲಿ ಗುರುವಾರ ರಾತ್ರಿ ಗ್ರಾಮಸ್ಥರ ಮತ್ತು ಪೊಲೀಸರ ಮಧ್ಯೆ ನಡೆದ ಮಾತಿನ ಚಕಮಕಿ ಘರ್ಷಣೆಗೆ ಕಾರಣವಾಗಿದೆ.

ಶನೇಶ್ವರ ಜಾತ್ರೆ ಸಂದರ್ಭದಲ್ಲಿ ನಾಟಕ ಪ್ರದರ್ಶನವಿತ್ತು. ನಾಟಕದ ಮಧ್ಯೆ ಸತೀಶ ಎಂಬ ವ್ಯಕ್ತಿ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ ಎನ್ನುವ ಕಾರಣಕ್ಕೆ ಗ್ರಾಮಸ್ಥರ ಮತ್ತು ಪೊಲೀಸರ ಮಧ್ಯೆ ಘರ್ಷಣೆ ಪ್ರಾರಂಭವಾಗಿ, ವಿಕೋಪಕ್ಕೆ ತಿರುಗಿತು.

ಘರ್ಷಣೆಯಲ್ಲಿ ಐವರು ಪೊಲೀಸರಿಗೆ ಗಂಭೀರ ಗಾಯಗಳಾಗಿವೆ. ಒಂದು ಗುಂಪು ಆಕ್ರೋಶಗೊಂಡು, ಪೊಲೀಸ್ ವಾಹನ ಮತ್ತು ಅಲ್ಲಿಯೇ ಇದ್ದ ಖಾಸಗಿ ಕಾರನ್ನು ಜಖಂಗೊಳಿಸಿತು. ಮತ್ತೊಂದು ಗುಂಪು ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿತು. ಇದರಿಂದ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಗಾಯಗೊಂಡ ಪೊಲೀಸರಿಗೆ ಧರ್ಮಪುರದ ಸಮುದಾಯ ಆರೋಗ್ಯ ಕೇಂದ್ರಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ಹಿರಿಯೂರಿಗೆ ಕರೆದೊಯ್ಯಲಾಯಿತು ಎಂದು ಸಿಪಿಐ ಗುರುರಾಜ್ ಹೇಳಿದರು.

ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ್ ಎಂ.ಜೋಷಿ ಶುಕ್ರವಾರ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

‘ಈ ಸಂಬಂಧ ಈಗಾಗಲೇ 21 ಜನರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಗ್ರಾಮದಲ್ಲಿ ಎರಡು ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ’ ಎಂದು ತಿಳಿಸಿದರು.

‘ಪೊಲೀಸರು ಮಹಿಳೆಯರ ಮೇಲೆ ಹಲ್ಲೆ ಮಾಡಿದ್ದಾರೆ. ಮನೆ ಮನೆಗೆ ಬಂದು ಪುರುಷರನ್ನು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ. ಜಾತ್ರೆಗೆ ಬಂದಿದ್ದ ನೆಂಟರಿಷ್ಟರನ್ನೂ ಕರೆದುಕೊಂಡು ಹೋಗಿದ್ದಾರೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಅಮಾಯಕರನ್ನು ಬಂಧಿಸಿರುವುದು ಸರಿಯಲ್ಲ. ತಕ್ಷಣವೇ ಅವರನ್ನು ಬಿಡುಗಡೆಗೊಳಿಸಬೇಕು’ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯೆ ಕಲ್ಪನಾ ಶಿವಣ್ಣ, ಎಕೆ ಕಾಲೊನಿಯ ಸುಜಾತಾ, ತ್ರಿವೇಣಿ ಅವರು ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.

21 ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಬಳ್ಳಾರಿ ಜೈಲಿಗೆ ಕಳುಹಿಸಲಾಗಿದೆ. ಡಿವೈಎಸ್ಪಿ ವೆಂಕಟಪ್ಪನಾಯಕ, ಸಿಪಿಐ ಗುರುರಾಜು, ಪಿಎಸ್ಐಗಳಾದ ಗುಡ್ಡಪ್ಪ, ವೆಂಕಟೇಶ್, ಡಿ.ಜಿ.ಶ್ರೀನಿವಾಸ್, ಲಿಂಗರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT