5
ಪ್ರವೀಣ್ ಖಾಂಡ್ಯ ಅಭಿಮಾನಿ ಬಳಗ ಆಗ್ರಹ

ಜೀವರಾಜ್‌ಗೆ ಟಿಕೆಟ್ ನೀಡಬಾರದು

Published:
Updated:

ಶೃಂಗೇರಿ: ಇಲ್ಲಿನ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಬಿಜೆಪಿಯಿಂದ ಡಿ.ಎನ್.ಜೀವರಾಜ್ ಅವರ ಸ್ಪರ್ಧೆಯನ್ನು ಪ್ರವೀಣ್ ಖಾಂಡ್ಯ ಅಭಿಮಾನಿ ಬಳಗ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದೆ.ಪಟ್ಟಣದ ಶಾರದಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಶುಕ್ರವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಬಳಗದ ಪ್ರಮುಖರು ಮಾತನಾಡಿ, ‘ಹಾಲಿ ಶಾಸಕ ಡಿ.ಎನ್.ಜೀವರಾಜ್ ಅವರನ್ನು ಮುಂದಿನ ಚುನಾವಣಾ ಅಭ್ಯರ್ಥಿಯಾಗಿ ಪರಿಗಣಿಸಬಾರದು ಎಂದು ಈಗಾಗಲೇ ಆಗ್ರಹಿಸಿದ್ದೇವೆ. ಬೇರೆ ಯಾರಿಗೆ ಕೊಟ್ಟರೂ ಅದನ್ನು ಸ್ವಾಗತಿಸುತ್ತೇವೆ’ ಎಂದಿದ್ದಾರೆ.

‘ಶಾಸಕರ ನಿರಂಕುಶ ಮನೋಭಾವ, ಸಂಘ ಪರಿವಾರದ ಮೂಲಕಾರ್ಯಕರ್ತರ ಅವಹೇಳನ, ವಲಸೆ ಬಂದ ಕಾರ್ಯಕರ್ತರಿಗೆ ಕೊಡುತ್ತಿರುವ ಹೆಚ್ಚಿನ ಮಾನ್ಯತೆ ಹಾಗೂ ಸಿದ್ಧಾಂತ ರಹಿತ ಆಡಳಿತ ಕ್ರಮವನ್ನು ವಿರೋಧಿಸಿ ಇದನ್ನು ಪರಿವಾರದ ಹಿರಿಯರ ಗಮನಕ್ಕೆ ಈಗಾಗಲೇ ತಂದು ಬದಲಾವಣೆಗೆ ಒತ್ತಾಯಿಸಿರುತ್ತೇವೆ’ ಎಂದು ಬಜರಂಗದಳದ ಗೋರಕ್ಷಾ ವಿಭಾಗದ ಕಾರ್ಯಕರ್ತ ಬಾಳೇಹೊನ್ನೂರಿನ ಶ್ರೀದೀಪ್ ಹೇಳಿದರು.

ಆನೆಗುಂದ ಕೃಷ್ಣದೀಕ್ಷಿತರು ಮಾತನಾಡಿ, ‘28 ವರ್ಷಗಳಿಂದ ಡಿ.ಎನ್. ಜೀವರಾಜ್ ಒಬ್ಬರೇ ಅಭ್ಯರ್ಥಿಯಾಗಿದ್ದು, ಹೊಸ ತಲೆಮಾರಿನವರಿಗೆ ಯಾವುದೇ ಅವಕಾಶ ಇಲ್ಲವಾಗಿದೆ. ಈ ಬಾರಿ ಅಭ್ಯರ್ಥಿ ಆಯ್ಕೆಯಲ್ಲಿ ಬದಲಾವಣೆ ಮಾಡಿ ನಮ್ಮ ನೆಚ್ಚಿನ ಹಿರಿಯ ಕಾರ್ಯಕರ್ತ ಪ್ರವೀಣ್ ಖಾಂಡ್ಯ ಅವರಿಗೆ ಟಿಕೆಟ್ ಕೊಡಬೇಕು’ ಎಂದು ಆಗ್ರಹಿಸಿದರು.

ಶೃಂಗೇರಿಯ ಆದರ್ಶ ಮಾತನಾಡಿ, ‘ಪ್ರವೀಣ್ ಖಾಂಡ್ಯ 20 ವರ್ಷಗಳಿಂದ ಸಮಾಜಕ್ಕಾಗಿ ಮತ್ತು ಪರಿವಾರಕ್ಕಾಗಿ ನಿಷ್ಠೆಯಿಂದ ದುಡಿಯುತ್ತಿದ್ದಾರೆ. ಈ ಬಾರಿ ಬಿಜೆಪಿಯು ಪ್ರವೀಣ್ ಖಾಂಡ್ಯ ಅವರಿಗೆ ಟಿಕೆಟ್ ಕೊಡಬೇಕು. ಇಲ್ಲದಿದ್ದರೆ ಖಾಂಡ್ಯ ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಇವರ ಗೆಲುವಿಗಾಗಿ ಪರಿವಾರದ ಎಲ್ಲಾ ಕಾರ್ಯಕರ್ತರು ಶ್ರಮಿಸಲಿದ್ದಾರೆ’ ಎಂದರು.

ಖಾಂಡ್ಯದ ಕುಂದೇಗೌಡ, ಕೊಪ್ಪದ ಸುಭಾಷ್, ಖಾಂಡ್ಯ ಪೂರ್ಣೇಶಗೌಡ ಹಾಗೂ ರಾಜೇಗೌಡರು ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry