ವಿಶ್ವದಾಖಲೆ ಬರೆದ ಆಸ್ಟ್ರೇಲಿಯಾ

7

ವಿಶ್ವದಾಖಲೆ ಬರೆದ ಆಸ್ಟ್ರೇಲಿಯಾ

Published:
Updated:
ವಿಶ್ವದಾಖಲೆ ಬರೆದ ಆಸ್ಟ್ರೇಲಿಯಾ

ಮುಂಬೈ: ನಾಯಕಿ ಮೆಗ್‌ ಲ್ಯಾನಿಂಗ್‌ (ಔಟಾಗದೆ 88; 45ಎ, 16ಬೌಂ, 1ಸಿ) ಅವರ ಸ್ಫೋಟಕ ಅರ್ಧಶತಕ ಮತ್ತು ಮೇಗನ್‌ ಶೂಟ್ (14ಕ್ಕೆ3) ಮೊನಚಿನ ಬೌಲಿಂಗ್‌ ನೆರವಿನಿಂದ ಆಸ್ಟ್ರೇಲಿಯಾ ತಂಡ ತ್ರಿಕೋನ ಟ್ವೆಂಟಿ–20 ಕ್ರಿಕೆಟ್‌ ಸರಣಿಯಲ್ಲಿ ಪ್ರಶಸ್ತಿ ಜಯಿಸಿತು. ಫೈನಲ್‌ನಲ್ಲಿ ಲ್ಯಾನಿಂಗ್‌ ಪಡೆ 57ರನ್‌ಗಳಿಂದ ಸಾಂಪ್ರದಾಯಿಕ ಎದುರಾಳಿ ಇಂಗ್ಲೆಂಡ್‌ ತಂಡವನ್ನು ಸೋಲಿಸಿತು.

ಬ್ರೆಬೊರ್ನ್‌ ಕ್ರೀಡಾಂಗಣದಲ್ಲಿ ಶನಿವಾರ ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 209ರನ್‌ ಕಲೆಹಾಕಿ ವಿಶ್ವದಾಖಲೆ ಬರೆಯಿತು. ಮಹಿಳಾ ಟ್ವೆಂಟಿ–20 ‍ಮಾದರಿಯಲ್ಲಿ ತಂಡವೊಂದು ಗಳಿಸಿದ ಗರಿಷ್ಠ ಮೊತ್ತ ಇದಾಗಿದೆ.

2010ರಲ್ಲಿ ನಡೆದಿದ್ದ ನೆದರ್ಲೆಂಡ್ಸ್‌ ಎದುರಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮಹಿಳಾ ತಂಡ 1 ವಿಕೆಟ್‌ಗೆ 204ರನ್‌ ಪೇರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.

ಆರಂಭಿಕ ಸಂಕಷ್ಟ: ಬ್ಯಾಟಿಂಗ್‌ ಆರಂಭಿಸಿದ ಲ್ಯಾನಿಂಗ್‌ ಬಳಗ ತ್ಯಾಸ್‌ ಫರಾಂಟ್‌ ಬೌಲ್‌ ಮಾಡಿದ ಮೊದಲ ಓವರ್‌ನ ನಾಲ್ಕನೇ ಎಸೆತದಲ್ಲಿ ಬೆಥ್‌ ಮೂನಿ  ವಿಕೆಟ್‌ ಕಳೆದುಕೊಂಡಿತು.

ನಂತರ ವಿಕೆಟ್‌ ಕೀಪರ್‌ ಅಲಿಸಾ ಹೀಲಿ (33; 24ಎ, 5ಬೌಂ, 1ಸಿ) ಮತ್ತು ಆ್ಯಷ್ಲೆ ಗಾರ್ಡನರ್‌ (33; 20ಎ, 3ಬೌಂ, 3ಸಿ) ಮಿಂಚಿದರು. ಇವರು ಎರಡನೇ ವಿಕೆಟ್‌ಗೆ  61ರನ್‌ ಸೇರಿಸಿ ತಂಡದ ಮೇಲೆ ಆವರಿಸಿದ್ದ ಆತಂಕವನ್ನು ದೂರ ಮಾಡಿದರು.

ಎಂಟನೇ ಓವರ್‌ನಲ್ಲಿ ದಾಳಿಗಿಳಿದ ಜೆನ್ನಿ ಗನ್‌, ಮೊದಲ ಮತ್ತು ಮೂರನೇ ಎಸೆತಗಳಲ್ಲಿ ಕ್ರಮವಾಗಿ ಗಾರ್ಡನರ್‌ ಮತ್ತು ಹೀಲಿ ವಿಕೆಟ್‌ ಉರುಳಿಸಿ ಇಂಗ್ಲೆಂಡ್‌ ಆಟಗಾರ್ತಿಯರು ನಿಟ್ಟುಸಿರು ಬಿಡುವಂತೆ ಮಾಡಿದರು.

ಬಳಿಕ ಲ್ಯಾನಿಂಗ್ ಮತ್ತು ಎಲಿಸೆ ವಿಲಾನಿ (51; 30ಎ, 8ಬೌಂ) ಅಂಗಳದಲ್ಲಿ ಬೌಂಡರಿಗಳ ಚಿತ್ತಾರ ಬಿಡಿಸಿದರು. ಇವರು ನಾಲ್ಕನೇ ವಿಕೆಟ್‌ಗೆ 139ರನ್‌ ಸೇರಿಸಿದ್ದರಿಂದ ತಂಡದ ಮೊತ್ತ 200ರ ಗಡಿ ದಾಟಿತು.

ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ ಆರಂಭದಿಂದಲೇ ವಿಕೆಟ್‌ ಕಳೆದುಕೊಂಡಿತು. ಬ್ರ್ಯೋನಿ ಸ್ಮಿತ್‌ ಮತ್ತು ತಮ್ಸಿನ್‌ ಬೆಮಾಂಟ್‌ ಬಂದಷ್ಟೇ ವೇಗವಾಗಿ ಪೆವಿಲಿಯನ್‌ ಸೇರಿಕೊಂಡರು.

ನಂತರ ಡ್ಯಾನಿಯಲ್‌ ವೈಟ್‌ (34; 17ಎ, 7ಬೌಂ), ನಥಾಲಿ ಶೀವರ್‌ (50; 42ಎ, 5ಬೌಂ) ಮತ್ತು ಆ್ಯಮಿ ಎಲೆನ್‌ ಜೋನ್ಸ್‌ (30; 28ಎ, 2ಬೌಂ) ಛಲದಿಂದ ಹೋರಾಡಿದರು. ಕೆಳಕ್ರಮಾಂಕದ ಆಟಗಾರ್ತಿಯರು ಬೇಗನೆ ವಿಕೆಟ್‌ ನೀಡಿದ್ದರಿಂದ ತಂಡದ ಪ್ರಶಸ್ತಿಯ ಕನಸು ಭಗ್ನವಾಯಿತು.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯಾ, 20 ಓವರ್‌ಗಳಲ್ಲಿ 4 ವಿಕೆಟ್‌ಗೆ 209 (ಅಲಿಸೆ ಹೀಲಿ 33, ಆ್ಯಷ್ಲೆಗ್‌ ಗಾರ್ಡನರ್‌ 33, ಮೆಗ್‌ ಲ್ಯಾನಿಂಗ್‌ ಔಟಾಗದೆ 88, ಎಲಿಸೆ ವಿಲಾನಿ 51; ತ್ಯಾಸ್‌ ಫರಾಂಟ್‌ 44ಕ್ಕೆ1, ಜೆನ್ನಿ ಗನ್‌ 38ಕ್ಕೆ2).

ಇಂಗ್ಲೆಂಡ್‌: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 152 (ಡ್ಯಾನಿಯಲ್‌ ವೈಟ್‌ 34, ನಥಾಲಿ ಶೀವರ್‌ 50, ಆ್ಯಮಿ ಎಲೆನ್‌ ಜೋನ್ಸ್‌ 30, ಫ್ರಾನ್‌ ವಿಲ್ಸನ್‌ 14; ಎಲಿಸೆ ಪೆರಿ 35ಕ್ಕೆ1, ಮೇಗನ್‌ ಶುಟ್‌ 14ಕ್ಕೆ3, ಡೆಲಿಸ್ಸಾ ಕಿಮ್ಮಿನ್ಸ್‌ 35ಕ್ಕೆ2, ಆ್ಯಷ್ಲೆ ಗಾರ್ಡನರ್‌ 20ಕ್ಕೆ2).

ಫಲಿತಾಂಶ: ಆಸ್ಟ್ರೇಲಿಯಾಕ್ಕೆ 57ರನ್‌ ಗೆಲುವು ಹಾಗೂ ಪ್ರಶಸ್ತಿ.

ಪಂದ್ಯದ ಆಟಗಾರ್ತಿ: ಮೆಗ್‌ ಲ್ಯಾನಿಂಗ್‌.

ಸರಣಿಯ ಆಟಗಾರ್ತಿ: ಮೇಗನ್‌ ಶೂಟ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry