ಭಾನುವಾರ, ಡಿಸೆಂಬರ್ 15, 2019
19 °C

ವೈರಲ್‌ ಆಯ್ತು ‘ಲೌಡ್‌ ಸ್ಪೀಕರ್‌’ ಲುಕ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೈರಲ್‌ ಆಯ್ತು ‘ಲೌಡ್‌ ಸ್ಪೀಕರ್‌’ ಲುಕ್‌!

ವಿಶಿಷ್ಟ ಚಿತ್ರಶೀರ್ಷಿಕೆಯಿಂದಲೇ ಸುದ್ದಿ ಮಾಡುತ್ತಿರುವ ‘ಲೌಡ್ ಸ್ಪೀಕರ್’ ಸಿನಿಮಾದ ಪೋಸ್ಟರ್‌ಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ‘ಹವಾ’ ಎಬ್ಬಿಸಿವೆ. ಶ್ರವಣಬೆಳಗೊಳದಲ್ಲಿ ನಡೆದ ಗೊಮ್ಮಟೇಶ್ವರ ಮೂರ್ತಿಯ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಆಯೋಜಿಸಿದ್ದ ಗುರುಕಿರಣ್‌ ನೈಟ್ಸ್‌ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ‘ಲೌಡ್‌ ಸ್ಪೀಕರ್‌’ ಚಿತ್ರದ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಗಿತ್ತು. ಕಲಾಕಾರನ ಸೃಜನಾತ್ಮಕ ಪರಿಕಲ್ಪನೆಯಲ್ಲಿ ಮೂಡಿಬಂದ ಪೋಸ್ಟರ್‌ಗಳ ಲೋಕಾರ್ಪಣೆಗೆ ಅಲ್ಲಿ ಸೇರಿದ್ದ ಎರಡು ಲಕ್ಷ ಜನರು ಸಾಕ್ಷಿಯಾಗಿದ್ದರು.

‘ಲೌಡ್‌ ಸ್ಪೀಕರ್‌’ ಚಿತ್ರದ ಪೋಸ್ಟರ್‌ಗಳ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಈಗ ಸಾಕಷ್ಟು ಚರ್ಚೆ ಆಗುತ್ತಿದೆ. ನಮ್ಮ ಚಿತ್ರದ ಪೋಸ್ಟರ್‌ಗಳ ಸೃಜನಶೀಲತೆಗೆ ಕನ್ನಡಿಗರಷ್ಟೇ ಅಲ್ಲದೇ ಟಾಲಿವುಡ್‌ ಹಾಗೂ ಕಾಲಿವುಡ್‌ ಇಂಡಸ್ಟ್ರಿಯವರೂ ಕೂಡ ಫಿದಾ ಆಗಿದ್ದಾರೆ. ಇಂತಹ ವಿಶಿಷ್ಟ ಪೋಸ್ಟರ್‌ಗಳನ್ನು ವಿನ್ಯಾಸ ಮಾಡಿಕೊಟ್ಟಿದ್ದು ಮಣಿ ಅವರು. ಅದರಲ್ಲೂ ಅಸಂಖ್ಯ ಲೌಡ್‌ ಸ್ಪೀಕರ್‌ಗಳ ನಡುವೆ ಚಿತ್ರದ ನಾಯಕನಟರು ಮೈಮ್‌ ಅವತಾರದಲ್ಲಿ ಕಾಣಿಸಿಕೊಂಡಿರುವ ಚಿತ್ರದ ಫಸ್ಟ್‌ಲುಕ್‌ ಈಗ ವೈರಲ್‌ ಆಗಿದೆ. ಈ ಪೋಸ್ಟರ್‌ ನೋಡಿ ತಮಿಳು ಹಾಗೂ ತೆಲುಗು ಚಿತ್ರರಂಗದವರೂ ಮೆಚ್ಚಿಕೊಂಡಿದ್ದಾರೆ’ ಎನ್ನುತ್ತಾರೆ ಚಿತ್ರದ ನಾಯಕನಟಿ ಡಾ.ದಿಶಾ ದಿನಕರ್‌.

(‘ಲೌಡ್‌ ಸ್ಪೀಕರ್‌’ ಚಿತ್ರದ ನಾಯಕ–ನಾಯಕಿಯರು)

ಅಂದಹಾಗೆ, ‘ಲೌಡ್‌ ಸ್ಪೀಕರ್‌’ ಬಹುತಾರಾಗಣ ಇರುವ ಸಿನಿಮಾ. ‘ಮಳೆ’ ಮತ್ತು ‘ಧೈರ್ಯಂ’ ಸಿನಿಮಾಗಳಿಗೆ ಆ್ಯಕ್ಷನ್‌ಕಟ್‌ ಹೇಳಿದ್ದ ಶಿವ ತೇಜಸ್‌ ಈ ಚಿತ್ರದ ನಿರ್ದೇಶಕರು. ‘ಶ್ರೀಮಾನ್‌ ಶ್ರೀಮತಿ’ ಖ್ಯಾತಿಯ ಭಾಸ್ಕರ್‌, ಅಭಿಷೇಕ್‌ ಜೈನ್‌, ಸುಮನ್‌ ಭಟ್‌, ‘ರಂಗಿ ತರಂಗ’ ಚಿತ್ರದಲ್ಲಿ ಅಭಿನಯಿಸಿದ್ದ ಕಾರ್ತಿಕ್‌, ಮಾಲಿವುಡ್‌ ಹಾಗೂ ಸ್ಯಾಂಡಲ್‌ವುಡ್‌ ಎರಡು ಚಿತ್ರರಂಗದಲ್ಲೂ ಹೆಸರು ಮಾಡುತ್ತಿರುವ ದಿಶಾ ದಿನಕರ್‌, ಕಾವ್ಯಾ ಶಾ ಹಾಗೂ ಅನುಷಾ ರಾಡ್ರಿಗಸ್‌ ಅವರು ಚಿತ್ರದ ನಾಯಕ–ನಾಯಕಿಯರು.

‘ರಾಜ್‌ ಪ್ರೊಡಕ್ಷನ್‌ನಲ್ಲಿ ಮೂಡಿಬರುತ್ತಿರುವ ಎರಡನೇ ಸಿನಿಮಾ ‘ಲೌಡ್‌ ಸ್ಪೀಕರ್‌’. ವರ್ಲ್ಡ್ಸ್‌ ಮೋಸ್ಟ್‌ ಡೇಂಜರಸ್‌ ಗೇಮ್‌ ಎಂಬುದು ಚಿತ್ರದ ಟ್ಯಾಗ್‌ಲೈನ್‌. ಇದು ಪಕ್ಕಾ ಕಾಮಿಡಿ ಥ್ರಿಲ್ಲರ್‌ ಸಿನಿಮಾ. ಚಿತ್ರದ ಕಥೆ ಏಳು ಪಾತ್ರಗಳಸುತ್ತಲೇ ಸುತ್ತುತ್ತದೆ. ಹಿರಿಯ ಕಲಾವಿದ ದತ್ತಣ್ಣ ಮತ್ತು ರಂಗಾಯಣ ರಘು ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ‘ಲೌಡ್‌ ಸ್ಪೀಕರ್‌’ ಚಿತ್ರದ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ಸಿನಿಮಾದ ಟ್ರೇಲರ್‌ ಅನ್ನು ಬಿಡುಗಡೆ ಮಾಡಲಿದ್ದೇವೆ. ನಮ್ಮ ಸಿನಿಮಾ ಏಪ್ರಿಲ್‌ ಅಂತ್ಯದಲ್ಲಿ ತೆರೆ ಕಾಣಲಿದೆ. ಚಿತ್ರ ಬಿಡುಗಡೆಗೂ ಮುನ್ನವೇ ಹೆಚ್ಚು ಸದ್ದು ಮಾಡುತ್ತಿರುವುದು ಚಿತ್ರತಂಡದ ಖುಷಿ ಹೆಚ್ಚಿಸಿದೆ’ ಎನ್ನುತ್ತಾರೆ ‘ಹುತ್ತದ ಸುತ್ತ’ದ ಚೆಲುವೆ ದಿಶಾ ದಿನಕರ್.

ಪ್ರತಿಕ್ರಿಯಿಸಿ (+)