ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣ ತುಂಬಾ ಸಿನಿಮಾ ಕನಸು

Last Updated 1 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ನಾಟಕಗಳಲ್ಲಿ ಅಭಿನಯಿಸಿ ತನ್ನ ಪ್ರತಿಭೆಯನ್ನು ಬಿಂಬಿಸಬೇಕು ಎನ್ನುವ ಆಸೆ ಹೊತ್ತಿದ್ದ ಹುಡುಗನಿಗೆ ಅಂತರ ಕಾಲೇಜು ನಾಟಕ ಸ್ಪರ್ಧೆಯಲ್ಲಿ ವೇದಿಕೆ ಹತ್ತುವ ಅವಕಾಶ ಸಿಕ್ಕಿತ್ತು. ಆದರೆ ಅದು ನಾಟಕದ ಪಾತ್ರವಾಗಿ ಅಲ್ಲ, ಅಂಕದ ಪರದೆ ಎಳೆಯುವ ಕೆಲಸ. ಪ್ರತಿ ದೃಶ್ಯ ಮುಗಿದ ಮೇಲೆ ಆತ ಪರದೆ ಎಳೆಯಬೇಕಿತ್ತು. ಅದಕ್ಕೂ ತನ್ನ ಪ್ರತಿಭೆಯ ಸ್ಪರ್ಶ ಕೊಟ್ಟ ಆತ, ಹಾವಭಾವ ಮತ್ತು ಅಭಿನಯಗಳಿಂದ ಜನರ ಗಮನ ಸೆಳೆಯುವಲ್ಲಿ ಸಫಲನಾದ. ನಾಟಕದ ಪಾತ್ರಗಳ ಜೊತೆಗೆ ಪರದೆ ಎಳೆಯುವ ಹುಡುಗನನ್ನೂ ಜನರು ನಿರೀಕ್ಷಿಸುತ್ತಿದ್ದರು. ಮುಂದೆ ನಡೆದ ನಾಟಕ ಸ್ಪರ್ಧೆಯಲ್ಲಿ ಹುಡುಗನಿಗೆ ಮುಖ್ಯಪಾತ್ರವೇ ಸಿಕ್ಕಿತು ಎನ್ನಿ.

ಇದೀಗ ತಮ್ಮ ಪರಿಶ್ರಮಕ್ಕೆ ತಕ್ಕ ಫಲಿತಾಂಶ ಸಿಗುವ ವಿಶ್ವಾಸದ ನಗು ಅವರ ಮೊಗದಲ್ಲಿ ಅರಳುತ್ತಿದೆ. ಬಾತುಕೋಳಿ ಸದ್ದಿನ ‘ಬಕ್‌ಬಕ್‌’ ನಗು, ಅಪ್ಪಟ ಮಂಡ್ಯ ಶೈಲಿಯ ಮಾತು, ಸ್ವಲ್ಪವೂ ಅತಿರೇಕ ಎನಿಸದ ತಿಳಿಹಾಸ್ಯ ಚಂದ್ರಪ್ರಭ ಅವರ ವೈಶಿಷ್ಟ್ಯ. ಇದೀಗ ಚಂದನವನ ಪ್ರವೇಶಿಸಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಯುವಕ ಚಂದ್ರಪ್ರಭ ಅವರ ಮನದ ಮಾತುಗಳು ಇಲ್ಲಿವೆ.

ನನ್ನದು ಶ್ರೀರಂಗಪಟ್ಟಣ ತಾಲ್ಲೂಕು ದೊಡ್ಡಕೊಪ್ಪಲು ಗ್ರಾಮ. ಇಂದಿಗೂ ನಾವು ಬಸ್ ಹತ್ತಬೇಕು ಎಂದರೆ 6 ಕಿ.ಮೀ. ದೂರದ ಶ್ರೀರಂಗಪಟ್ಟಣದವರೆಗೂ ನಡೆದು ಬರಬೇಕು. ನನಗೆ ಚಿಕ್ಕವಯಸ್ಸಿನಿಂದ ನಾಟಕಗಳ ಬಗ್ಗೆ ವಿಶೇಷ ಕುತೂಹಲ. ಆದರೆ ಅದರಲ್ಲಿರುವ ಅವಕಾಶಗಳ ಬಗ್ಗೆ ತಿಳಿದಿರಲಿಲ್ಲ.

ಮೈಸೂರಿನ ಕುಕ್ಕರಹಳ್ಳಿ ಕೆರೆ ಮೇಲೆ ಹೋಗುತ್ತಿದ್ದಾಗ ಯಾರೋ ಜೋರಾಗಿ ಕೂಗಿದಂತೆ ಕೇಳಿಸಿತ್ತು. ಅದರ ಜೊತೆಗೆ ಕೂತೂಹಲ, ಭಯವೂ ಮೂಡಿತು. ನಾನು ದನಿ ಹೊರಡುತ್ತಿದ್ದ ಸ್ಥಳಕ್ಕೆ ಹೋದೆ. ಅದು ಮೈಸೂರಿನ ರಂಗಾಯಣ. ಅಲ್ಲಿಂದ ನನ್ನ ಜೀವನದ ದಿಕ್ಕೇ ಬದಲಾಯಿತು. ಅಲ್ಲಿನ ನಾಟಕಗಳಿಂದ ಪ್ರೇರಣೆ ಪಡೆದು ನಾನು ಮೈಸೂರಿನ ರಂಗಾಯಣ ಸೇರಿಕೊಂಡೆ.

ಆರಂಭದ ದಿನಗಳಲ್ಲಿ ಹಳ್ಳಿಯಲ್ಲಿ ಬೈಸಿಕೊಳ್ಳುತ್ತಿದ್ದೆ. ‘ಇವನೇನೋ ನಾಟಕದ ಕೆಲಸ ಮಾಡ್ತಾನೆ’ ಎಂದು ಮನೆಯವರು ದೂರುತ್ತಿದ್ದರು. ಆದರೆ ಈಗ ಪ್ರೋತ್ಸಾಹ ನೀಡುತ್ತಿದ್ದಾರೆ.

2007ರಿಂದ 2011ರವರೆಗೂ ರಂಗಾಯಣದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೆ. ಜೀವಿತಾ ಕ್ರಿಯೇಶನ್ಸ್‌ನಲ್ಲಿ ಕೆಲ ಕಿರುಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದೆ. ಪ್ರಳಯರಾಜು ಅವರ ಜೊತೆಗೂಡಿ ಲೈಟಿಂಗ್ ಡಿಸೈನಿಂಗ್‍ ಕೆಲಸ ಕಲಿತೆ. ರಂಗಾಯಣದಲ್ಲಿ ಗೆಳೆಯರಾದ ಜಗದೀಶ ಕುಮಾರ್‌, ಜಗಪ್ಪ, ದಿನೇಶ್‌ ಚಮ್ಮಾಳಿಗೆ, ಜಿ.ಟಿ. ವಿಕ್ರಮ್‌, ರವಿ ಕಿರಣ್‌, ರವಿ ಶಂಕರ್ ಮತ್ತು ಸಂತೋಷ್‌ ಒಟ್ಟಿಗೆ ಇದ್ದೆವು. ‘ಮಜಾ ಭಾರತ’, ‘ಕಾಮಿಡಿ ಟಾಕೀಸ್‌’ ಕಾರ್ಯಕ್ರಮಗಳಲ್ಲಿಯೂ ನಾವು ಒಟ್ಟಿಗೆ ಕೆಲಸ ಮಾಡಿದೆವು.

‘ಮಜಾ ಭಾರತ’ದ ಆಡಿಷ್‍ನ್‍ಗೆ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 280 ಮಂದಿ ಬಂದಿದ್ದರು. ಈ ಪೈಕಿ 30 ಜನರನ್ನು ಆಯ್ಕೆ ಮಾಡಬೇಕು ಎನ್ನುವುದು ಆಯ್ಕೆ ಸಮಿತಿಯ ಲೆಕ್ಕಾಚಾರವಾಗಿತ್ತು.

ಸ್ಕ್ರಿಪ್ಟ್ ಮಾಡುವಾಗ ಹೆಚ್ಚುವರಿ ಪಾತ್ರಧಾರಿಯಾಗಿದ್ದ ನನಗೆ ಒಂದು ಸಣ್ಣ ಪಾತ್ರ ಕೊಟ್ಟರು ಆ ಸಣ್ಣ ಪಾತ್ರವನ್ನು ಚೆನ್ನಾಗಿ ಮಾಡಿದ್ದರಿಂದ ನಾನು ಆಯ್ಕೆಯಾದೆ. ನಂತರದ ದಿನಗಳಲ್ಲಿ ‘ಪರಸಂಗ’ ಮತ್ತು ‘ಪಾರವ್ವನ ಕನಸು’ ಚಿತ್ರಗಳಲ್ಲಿ ಅವಕಾಶ ಸಿಕ್ಕಿತು.

ನನ್ನನ್ನು ನಾನು ಕೇವಲ ನಾಟಕ, ಕಿರುತೆರೆ, ಸಿನಿಮಾ ಜಗತ್ತಿಗೆ ಸೀಮಿತಗೊಳಿಸಿಕೊಳ್ಳಲಾರೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದವವರಿಗಾಗಿ ನಾಟಕ ರೂಪಿಸಿದ್ದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋಡಂಬಿ ಮರಕ್ಕೆ ಬಳಸಿದ ಎಂಡೋಸಲ್ಫಾನ್‌ನಿಂದ ಉಂಟಾದ ಅಂಗವೈಕಲ್ಯದ ಬಗ್ಗೆ ದಾಖಲಾತಿ ಮಾಡಿದ್ದೇನೆ. ಈ ಪುಸ್ತಕಕ್ಕೆ ದೇವನೂರ ಮಹದೇವ ಮುನ್ನುಡಿ ಬರೆದುಕೊಟ್ಟರು. ಎಂದು ತಮ್ಮ ಪಯಣ ಬಿಚ್ಚಿಡುತ್ತಾರೆ ಚಂದ್ರಪ್ರಭ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT