ಭಾನುವಾರ, ಡಿಸೆಂಬರ್ 15, 2019
18 °C

ನಿರೀಕ್ಷೆಗೂ ಮೀರಿ ಯಶಸ್ಸು ಕೊಟ್ಟ ‘ಚಿಟ್ಟೆ’

ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

ನಿರೀಕ್ಷೆಗೂ ಮೀರಿ   ಯಶಸ್ಸು ಕೊಟ್ಟ ‘ಚಿಟ್ಟೆ’

‘ಟಗರು‘ ಚಿತ್ರದ ‘ಚಿಟ್ಟೆ’ ಪಾತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿದೆ?

ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಬಂದಿದೆ. ನನ್ನೊಬ್ಬನ ಪಾತ್ರಕ್ಕಷ್ಟೇ ಅಲ್ಲದೆ, ಉಳಿದ ಪಾತ್ರಗಳಿಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ನಿರ್ದೇಶಕ ಸೂರಿ ಅವರ ಕೈಚಳಕವೇ ಅಂತಹದ್ದು. ವಾಸ್ತವಕ್ಕೆ ಹತ್ತಿರವಾಗಿರುವಂತೆ ಅವರು ಹೆಣೆಯುವ ಪಾತ್ರ ಎಂತಹವರನ್ನು ಬೆರಗುಗೊಳಿಸುತ್ತದೆ. ‘ಚಿಟ್ಟೆ’ ಪಾತ್ರಕ್ಕೆ ಅಂತಹ ಶಕ್ತಿ ಇದೆ. ಚಿತ್ರಮಂದಿರಗಳಿಗೆ ಭೇಟಿ ನೀಡಿದಾಗ, ಅಭಿಮಾನಿಗಳು ‘ಚಿಟ್ಟೆ ವಸಿಷ್ಠ’ ಎಂದು ಕೂಗುತ್ತಾರೆ ಎಂದರೆ, ಆ ಪಾತ್ರ ಅವರಿಗೆ ಮನಸಿಗೆ ಎಷ್ಟರ ಮಟ್ಟಿಗೆ ನಾಟಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.

ನಿಮ್ಮ ಖಳ ಪಾತ್ರಗಳು ಬೇರೊಂದು ರೀತಿಯ ಟ್ರೆಂಡ್ ಸೃಷ್ಟಿಸುತ್ತಿವೆಯಲ್ಲ?

ಸಿನಿಮಾ ಗೆದ್ದರಷ್ಟೇ ಕಲಾವಿದರು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತಾರೆ. ಇಲ್ಲವಾದರೆ, ಯಾರೂ ನೆನಪಿನಲ್ಲಿ ಉಳಿಯುವುದಿಲ್ಲ. ’ರಾಜಾ ಹುಲಿ’ಗೂ ಮುಂಚೆ ಎರಡು ಚಿತ್ರಗಳನ್ನು ಮಾಡಿದ್ದರೂ, ನನ್ನ ಹೆಸರಿನ ಪರಿಚಯ ಮಾತ್ರ ಯಾರಿಗೂ ಇರಲಿಲ್ಲ. ಬಳಿಕ ಸಿಕ್ಕ ಪಾತ್ರಗಳು ಮೇಲ್ನೋಟಕ್ಕೆ ಚಿಕ್ಕದಾದರೂ, ಅವುಗಳಲ್ಲಿ ಗಟ್ಟಿತನವಿತ್ತು. ಆ ಪಾತ್ರಗಳು ನನಗೆ ‘ಆ್ಯಂಟಿ ಹೀರೊ’ ಎಂಬ ಹೆಸರು ತಂದುಕೊಟ್ಟವು. ರವಿಶಂಕರ್, ಪ್ರಕಾಶ್ ರೈ, ಸೋನು ಸೂದ್ ಸೇರಿದಂತೆ ಹಲವರು ಖಳ ಪಾತ್ರಗಳ ಮೂಲಕ ತಮ್ಮದೇ ಆದ ಟ್ರೆಂಡ್‌ ಸೃಷ್ಟಿಸಿದ್ದಾರೆ. ನನ್ನ ಪಾತ್ರಗಳೂ ಟ್ರೆಂಡ್‌ ಸೃಷ್ಟಿಸಿರಬಹುದು. ಪ್ರತಿ ಸಂದರ್ಭದಲ್ಲೂ ಒಂದೊಂದು ಟ್ರೆಂಡ್ ಇರುತ್ತದೆ. ಆದರೆ, ನಾನು ಯಾವುದೇ ಟ್ರೆಂಡ್‌ಗೆ ಅಂಟಿಕೊಂಡು ಕೂರಲು ಬಯಸುವುದಿಲ್ಲ. ಸದಾ ಹೊಸತನ್ನು ಬಯಸುತ್ತೇನೆ.

ನಿಮ್ಮ ‘ಬೇಸ್ ವಾಯ್ಸ್’ ಗುಟ್ಟೇನು?

ನನಗೇ ಅಚ್ಚರಿ ಮೂಡಿಸಿರುವ ದನಿ, ಬದುಕಿಗೂ ತಿರುವು ಕೊಟ್ಟಿದೆ. ಚಿಕ್ಕಂದಿನಲ್ಲಿ ನಾನು ಅತ್ಯಂತ ಕೀರಲು ದನಿ ಹೊಂದಿದ್ದೆ. ಮಾತನಾಡಿದರೆ, ಹೆಣ್ಣು ಮಕ್ಕಳು ಮಾತನಾಡಿದಂತೆ ಕೇಳಿಸುತ್ತಿತ್ತು. ಹಾಗಾಗಿ, ಶಾಲಾ ದಿನಗಳಲ್ಲಿ ಸ್ನೇಹಿತರು ನಾನು ಬಾಯ್ಬಿಟ್ಟಾಗಲೆಲ್ಲ ಅಣಕಿಸುತ್ತಿದ್ದರು. ಬಳಿಕ ದನಿ ಒಡೆದಾಗ, ಬೇಸ್ ವಾಯ್ಸ್ ಬಂತು. ಆದರೂ, ಯಾರೂ ಅದನ್ನು ಗ್ರಹಿಸಿರಲಿಲ್ಲ. ‘ರಾಜಾ ಹುಲಿ’ ಬಿಡುಗಡೆಯಾದಾಗ ನನ್ನ ದನಿಯ ಬಗ್ಗೆ ಒಳ್ಳೆಯ ಅಭಿಪ್ರಾಯ ಬಂದವು. ಆಗಲೇ ನನ್ನ ದನಿಯ ಮಹತ್ವ ಎಷ್ಟಿದೆ ಎಂಬುದು ಗೊತ್ತಾಗಿದ್ದು. ಮುಂದೆ ಈ ದನಿಯೇ ಚಿತ್ರರಂಗದಲ್ಲಿ ಐಡೆಂಟಿಟಿ ತಂದುಕೊಟ್ಟಿತು.

ನಟನೆಯ ಪಯಣ ಆಕಸ್ಮಿಕವೊ ಅಥವಾ ಆಯ್ಕೆಯೊ?

ನನ್ನ ಬದುಕಿನಲ್ಲಿ ಆಯ್ಕೆಗಿಂತ ಆಕಸ್ಮಿಕವಾಗಿ ಘಟಿಸಿದ್ದೇ ಹೆಚ್ಚು. ಬಿಬಿಎಂ ಓದಿರೊ ನನಗೆ, ಶಾಸ್ತ್ರೀಯವಾಗಿ ಸಂಗೀತ ಕಲಿಯದಿದ್ದರೂ ಹಾಡುವುದರಲ್ಲಿ ಆಸಕ್ತಿ ಹೆಚ್ಚು. ಕಾಲೇಜು ವೇದಿಕೆಯಲ್ಲಿ ಹಾಡುತ್ತಿದ್ದೆ. ಕಾಲೇಜಿನಲ್ಲಿ ಸ್ನೇಹಿತರ ಜತೆ ಚಾಲೆಂಜ್‌ ಮಾಡಿಕೊಂಡು ರಂಗಭೂಮಿಯಲ್ಲಿ ತೊಡಗಿಸಿಕೊಂಡೆ. ಒಂದೆರಡು ಚಿತ್ರಗಳಲ್ಲಿ ಸಣ್ಣ ಪಾತ್ರಗಳು ಸ್ನೇಹಿತರ ಮೂಲಕ ಸಿಕ್ಕವು. ಆದರೆ, ಐಡೆಂಟಿಟಿ ಮಾತ್ರ ಸಿಗಲಿಲ್ಲ. ಹಾಗಾಗಿ, ನಟನೆಯ ಬಗ್ಗೆ ಆಸಕ್ತಿ ಕುಂದಿತ್ತು. ಇದೇ ಸಂದರ್ಭದಲ್ಲಿ ’ರಾಜಾ ಹುಲಿ’ ಆಡಿಷನ್‌ಗೆ ಒಲ್ಲದ ಮನಸಿನಿಂದ ಹೋಗಿ ಆಯ್ಕೆಯಾದೆ. ನಿರ್ದೇಶಕ ಗುರು ದೇಶಪಾಂಡೆ ಅವರು, ನನ್ನ ದನಿಯಲ್ಲಿದ್ದ ವಿಶೇಷತೆ ಗುರುತಿಸಿ ಅವಕಾಶ ಕೊಟ್ಟರು. ಮೂರನೇ ಚಿತ್ರದಲ್ಲಿ ಸಿಕ್ಕ ಯಶಸ್ಸು, ನನ್ನನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿದೆ.

ಪಾತ್ರ ಆಯ್ಕೆಯ ಮಾನದಂಡ ಏನು?

ತೆರೆ ಮೇಲೆ ನನ್ನ ಪಾತ್ರ ಎಷ್ಟು ನಿಮಿಷ ಕಾಣಿಸಿಕೊಳ್ಳುತ್ತದೆ ಎಂಬುದಕ್ಕಿಂತ, ಅದರ ಪರಿಣಾಮ ಹೇಗಿರುತ್ತದೆ? ವಾಸ್ತವಕ್ಕೆ ಹತ್ತಿರವಾಗಿದೆಯೆ? ಪ್ರೇಕ್ಷಕನಿಗೆ ಯಾವ ರೀತಿ ಕನೆಕ್ಟ್ ಆಗುತ್ತದೆ? ಎಂಬುದಕ್ಕೆ ಆದ್ಯತೆ ಕೊಡುತ್ತೇನೆ. ದೊಡ್ಡ ಪಾತ್ರ ಅಥವಾ ಚಿಕ್ಕ ಪಾತ್ರ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ‘ಮಫ್ತಿ’ಯಲ್ಲಿ ನನ್ನದು ರಗಡ್ ಖಳನ ಪಾತ್ರವಾದರೂ, ದೇವರ ಬಂಟನೆಂಬ ಅನುಕಂಪದ ಲೇಪ ಪಾತ್ರಕ್ಕಿದೆ. ಅಂತೆಯೇ, ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದ ಪಾತ್ರ, ನಾಯಕ ನಟನ ಪಾತ್ರಕ್ಕೆ ಸಮನಾಗಿದೆ. ಉಳಿದ ಚಿತ್ರದ ಪಾತ್ರಗಳು ಕೂಡ ಇದಕ್ಕೆ ಹೊರತಾಗಿಲ್ಲ.

ಪರಭಾಷೆಗಳಲ್ಲಿ ಅವಕಾಶಗಳು ಬಂದಿಲ್ಲವೆ?

ಕನ್ನಡದಲ್ಲಿ ಬ್ಯುಸಿಯಾಗಿದ್ದಾಗಲೇ ತಮಿಳು ಮತ್ತು ತೆಲುಗಿನಲ್ಲಿ ಎರಡು ಮೂರು ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಈ ಪೈಕಿ, ದೊಡ್ಡ ಬ್ಯಾನರಿನಲ್ಲಿ ತಯಾರಾಗುತ್ತಿದ್ದ ದ್ವಿಭಾಷೆಯ (ಕನ್ನಡ ಮತ್ತು ತೆಲುಗು) ಚಿತ್ರವೂ ಒಂದಾಗಿತ್ತು. ಆದರೆ ಡೇಟ್ ಸಮಸ್ಯೆಯಿಂದಾಗಿ ಒಪ್ಪಿಕೊಳ್ಳಲಿಲ್ಲ.

ಗಾಯಕನಾಗಿಯೂ ಗಮನ ಸೆಳೆದಿದ್ದೀರಿ?

ಶಾಸ್ತ್ರೀಯವಾಗಿ ಸಂಗೀತ ಕಲಿಯದಿದ್ದರೂ ಹಾಡಬೇಕೆಂಬ ಚಪಲ ಮೊದಲಿನಿಂದಲೂ ಇತ್ತು. ಸಂಗೀತ ದಿಗ್ಗಜ ಹಂಸಲೇಖ ನನ್ನ ಮಾನಸ ಗುರು. ಇತ್ತೀಚೆಗೆ ತೆಲುಗಿನ ‘ಕಿರಿಕ್ ಪಾರ್ಟಿ’, ‘ಸಮಯದ ಹಿಂದೆ ಸವಾರಿ’, ‘ದಯವಿಟ್ಟು ಗಮನಿಸಿ’ ಸೇರಿ ಏಳು ಚಿತ್ರಗಳಲ್ಲಿ ಹಾಡಿದ್ದೇನೆ.

ಸದ್ಯ ಕೈಯಲ್ಲಿ ಎಷ್ಟು ಚಿತ್ರಗಳಿವೆ?

‘8 ಎಂಎಂ’ ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ನಾಯಕ ನಟನಿಗೆ ಸರಿಸಮಾನಾದ ಪಾತ್ರ ನನ್ನದು. ಉಳಿದಂತೆ ‘ಕೆಜಿಎಫ್‌’, ‘ಗೋಧ್ರಾ’, ‘ಕಾಲಚಕ್ರ’, ‘ಕವಚ’ ಹಾಗೂ ‘ಮಾಯಾ ಬಜಾರ್’ ಚಿತ್ರಗಳಲ್ಲಿ ಬ್ಯುಸಿಯಾಗಿದ್ದೇನೆ. ‘ಗೋಧ್ರಾ’ ಚಿತ್ರದಲ್ಲಿ ಲವ್ವರ್ ಬಾಯ್, ಕ್ರಾಂತಿಕಾರಿ ಯುವಕನ ಪಾತ್ರವಾದರೆ, ‘ಮಾಯಾ ಬಜಾರ್‌’ನ ಪಾತ್ರ ಹಾಸ್ಯಭರಿತವಾಗಿದೆ. ಈ ಚಿತ್ರದಲ್ಲಿ ವಸಿಷ್ಠನ ಮತ್ತೊಂದು ವರಸೆಯನ್ನು ನೋಡುವಿರಿ. ನಟನೆಯ ಎಲ್ಲಾ ಅಂಚುಗಳನ್ನು ಮುಟ್ಟಬೇಕು ಎಂಬುದು ನನ್ನ ಆಸೆ. ಒಂದೇ ಇಮೇಜಿಗೆ ಅಂಟಿಕೊಂಡು ಕೂರಲು ಇಷ್ಟವಿಲ್ಲ.

**

ಹಿಟ್ ಸಿನಿಮಾ ಬೆನ್ನಲ್ಲೇ ಅವಕಾಶಗಳು ಅರಸಿ ಬರುವುದು ಸಾಮಾನ್ಯ. ನಿಜ ಹೇಳಬೇಕೆಂದರೆ, ನನಗೆ ಟಗರು ಬಳಿಕ ಯಾವ ಚಿತ್ರವೂ ಬಂದಿಲ್ಲ. ಸಿನಿಮಾ ಹಿಟ್ ಆದ ಬಳಿಕ, ಕಲಾವಿದರು ತುಂಬಾ ಬ್ಯುಸಿಯಾಗಿರುತ್ತಾರೆ ಅಥವಾ ಹೆಚ್ಚು ಸಂಭಾವನೆ ಕೇಳುತ್ತಾರೆ ಎಂಬ ಮನಸ್ಥಿತಿ ನಮ್ಮಲ್ಲಿದೆ.

–ವಸಿಷ್ಠ ಸಿಂಹ, ಯುವ ನಟ, ಗಾಯಕ

ಪ್ರತಿಕ್ರಿಯಿಸಿ (+)