ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌1ಬಿ ವೀಸಾ ಪ್ರಕ್ರಿಯೆ ಇಂದಿನಿಂದ ಶುರು

ತೀವ್ರ ಪರಿಶೀಲನೆಗೆ ಒಳಪಡಿಸಲಿರುವ ಟ್ರಂಪ್ ಆಡಳಿತ
Last Updated 1 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ : ಅಮೆರಿಕದಲ್ಲಿ ಕೆಲಸ ಮಾಡಲು ಅಗತ್ಯವೆನಿಸಿರುವ ‘ಎಚ್‌1ಬಿ ವೀಸಾ’ಗಾಗಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸೋಮವಾರದಿಂದ ಆರಂಭವಾಗಲಿದೆ. ಎಚ್1ಬಿ ಉದ್ಯೋಗ ವೀಸಾದಡಿ ನುರಿತ ವಿದೇಶಿ ತಂತ್ರಜ್ಞರನ್ನು ಅಮೆರಿಕದ ಕಂಪನಿಗಳು ನೇಮಿಸಿಕೊಳ್ಳುತ್ತವೆ. ಭಾರತೀಯ ಮಾಹಿತಿ ತಂತ್ರಜ್ಞಾನ ನಿಪುಣರಿಂದ ಈ ವೀಸಾಗೆ ಹೆಚ್ಚಿನ ಬೇಡಿಕೆ ಇದೆ.

ವೀಸಾ ಪ್ರಕ್ರಿಯೆಯ ಉಸ್ತುವಾರಿ ಹೊತ್ತಿರುವ ಅಮೆರಿಕದ ‘ಪೌರತ್ವ ಮತ್ತು ವಲಸೆ ಸೇವೆ’ ಇಲಾಖೆಯು ಈ ಬಾರಿ ಅರ್ಜಿಗಳನ್ನು ತೀವ್ರವಾಗಿ ಪರಿಶೀಲನೆಗೆ ಒಳಪಡಿಸಲಿದೆ ಎನ್ನಲಾಗುತ್ತಿದೆ. ಒಂದು ಸಣ್ಣ ದೋಷವನ್ನೂ ಸಹಿಸುವುದಿಲ್ಲ ಎಂಬ ಸುಳಿವು ನೀಡಿದೆ.

ಈ ಬಾರಿ ವಲಸೆ ವಿಭಾಗದ ಅಧಿಕಾರಿಗಳು ತಿರಸ್ಕರಿಸಲಿರುವ ಅರ್ಜಿಗಳ ಸಂಖ್ಯೆಯೇ ಹೆಚ್ಚಿರಲಿದೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

ಪ್ರತಿ ಹಣಕಾಸು ವರ್ಷದಲ್ಲಿ 65 ಸಾವಿರ ವೀಸಾಗಳನ್ನು ಅಮೆರಿಕ ವಿತರಿಸುತ್ತದೆ. ಮೊದಲ 20 ಸಾವಿರ ವೀಸಾ ಅರ್ಜಿಗಳು ಅಮೆರಿಕದಲ್ಲಿ ಪದವಿ ಶಿಕ್ಷಣ ಪಡೆದವರಿಗೆ ಮೀಸಲು.

ಅಕ್ಟೋಬರ್ 1ರಿಂದ ಆರಂಭವಾಗಲಿರುವ 2019ನೇ ಹಣಕಾಸು ವರ್ಷಕ್ಕಾಗಿ ವೀಸಾ ಅರ್ಜಿಗಳನ್ನು ಸಲ್ಲಿಸಬಹುದು. ಶೀಘ್ರದಲ್ಲಿ ವೀಸಾ ನೀಡುವಂತೆ ಕೋರಿರುವ ಅರ್ಜಿಗಳನ್ನು ಮಾನ್ಯ ಮಾಡುವುದಿಲ್ಲ. ನಕಲಿ ಅರ್ಜಿಗಳನ್ನು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಲಾಗುತ್ತದೆ ಎಂದು ಇಲಾಖೆ ಎಚ್ಚರಿಸಿದೆ.

ನಿರೀಕ್ಷೆಗಿಂತ ಹೆಚ್ಚು ಅರ್ಜಿಗಳು ಸಲ್ಲಿಕೆಯಾದಲ್ಲಿ, ಪರಿಶೀಲನೆಗೆ ಹೆಚ್ಚು ಸಮಯ ತಗಲುತ್ತದೆ. ಪ್ರತಿ ಬಾರಿ ಮಿತಿಗಿಂತ (65 ಸಾವಿರ) ಹೆಚ್ಚು ಅರ್ಜಿಗಳು ಸಲ್ಲಿಕೆಯಾಗುತ್ತಿದ್ದ ಕಾರಣ ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತಿತ್ತು. ಸದ್ಯದ ಮಾಹಿತಿ ಪ್ರಕಾರ ಇಲಾಖೆಯು ಲಾಟರಿ ವ್ಯವಸ್ಥೆ ಬಗ್ಗೆ ಆಲೋಚಿಸಿಲ್ಲ.

ಅಮೆರಿಕದ ನೌಕರರ ಹಿತ ಕಾಯುವುದು ಹಾಗೂ ಎಚ್‌1ಬಿ ವೀಸಾ ವಂಚನೆ ತಡೆಯುವುದು ಮುಖ್ಯ ಉದ್ದೇಶ ಎಂದು ವಲಸೆ ಇಲಾಖೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT